Skip to main content

ಸಾನಾಪೂರದ ಸಂಗೀತ ಶಿಲೆಗಳು- ಕತೆ ಭಾಗ ೨


ಭಾಗ ೧ ಓದಲು ಇಲ್ಲಿ ಕ್ಲಿಕ್ಕಿಸಿ

ಭಾಗ ೨


   ಸಾಯಂಕಾಲ ಟೀ ಕುಡಿಯುತ್ತಿರಬೇಕಾದರೆ ಸುಶಾಂತ ಅದಾರೋ ಗೆಳೆಯನ ಜೊತೆಗೂಡಿ ಕಾರ್ಡ್ಸ ಆಡುತ್ತಿದ್ದ. ಅದೇನೋ ಅವಸರದಲ್ಲಿದ್ದ ಅವನ ಗೆಳೆಯ ಅರ್ಧಕ್ಕೆ ಆಟ ನಿಲ್ಲಿಸಿ ಎದ್ದು ಹೋದಾಗ ಸುಶಾಂತ ಬಲುಬೇಜಾರು ಮಾಡಿಕೊಂಡಂತೆ ಅನಿಸಿತು. ನಾನು ಆಡಬಹುದಾ? ಎಂದು ಅವನ ಮುಂದೆ ಮೀನಾ ಕುಳಿತಾಗ ಆಶ್ಚರ್ಯದ ಜೊತೆಗೆ ಸಂತಸವುದಿಸಿ ಕಾರ್ಡ್ಸ ನಿಮಗೂ ಬರುತ್ತಾ?  ಅಂತ ಪ್ರಶ್ನಿಸಿದ. ಗೆಳತಿಯರೊಂದಿಗೆ ಹಾಸ್ಟೆಲ್ ನಲ್ಲಿ ಒಂದೆರಡು ಬಾರಿ ಆಡಿದ್ದೆ ಎಂದಳು.ಆಟ ಆಡುತ್ತಾ ಆಡುತ್ತಾ ಆತ್ಮೀಯತೆ ಬೆಳೆಯಿತು. ನಿಮ್ಮ ಸ್ಟಡಿ ಎಲ್ಲಿಗೆ ಬಂತು? ಎಂದ. ಈಗಷ್ಟೇ ಪ್ರಾರಂಭ ಮಾಡಬೇಕು ಎಂದಳು. ಏನ ಸ್ಟಡಿ ಮಾಡ್ತೀರಾ? ಎಂದ. ಹಂಪೆಯ ಪ್ರತಿ ಶಿಲೆಯಲ್ಲಿಯೂ ಒಂದೊಂದು ವಿಶೇಷತೆಯಿದೆಯಲ್ಲ..ನಿನಗೆ ವಿಜಯ ವಿಠ್ಠಲ ದೇವಸ್ಥಾನ ಗೊತ್ತಾ? ಎಂದಳು. ಆತ ನಕ್ಕು ನಾನು ಆಡಿ ಬೆಳೆದಿರುವುದೇ ಹಂಪೆಯಲ್ಲಿ ಎಂದ. ಅಲ್ಲಿ ಸಂಗೀತ ಶಿಲಾಕಂಬಗಳಿವೆಯಲ್ಲಾ..ಅಂತಹ ಶಿಲೆಗಳ ಹುಡುಕಾಟದಲ್ಲಿಯೇ ಬಂದಿರುವೆ ಎಂದಳು. ಅಷ್ಟೇ ತಾನೇ ನಾಳೆಯೇ ಹೋಗಿ ಆ ಸಂಗೀತ ಶಿಲಾಕಂಬಗಳನ್ನೇ ಕಿತ್ತು ತರುವೆ ಎಂದ ಸುಶಾಂತ. ಅವಳಿಗೆ ಗಾಬರಿಯಾಯಿತು. ಮೊದಲೇ ಉಡಾಳ.ಹಾಗೇನಾದರೂ ಮಾಡಿದರೆ ಜೈಲು ಗ್ಯಾರಂಟಿ ಎಂದುಕೊಂಡು; ಸುಶಾಂತ ಪ್ಲೀಸ್ ಅಂತಹ ಸಾಹಸಕ್ಕೇನೂ ಹೋಗಬೇಡಾ..ಈ ಬಂಡೆಗಲ್ಲಿನಲ್ಲಿಯೇ ಹುಡುಕುವೆ ಎಂದಳು. ಈ ಕಲ್ಲುಗಳಲ್ಲಿ ಸಂಗೀತ ಶಿಲೆಗಳನ್ನು ಪತ್ತೆ ಹಚ್ಚುವುದೂ ಒಂದೇ ಆಕಾಶದಿಂದ ನಕ್ಷತ್ರಗಳನ್ನು ತರುವುದೂ ಒಂದೇ ಎರಡೂ ಅಸಾಧ್ಯ ಎಂದ. ನೀನು ಚೂರು ಸಹಾಯ ಮಾಡಿದರೆ ಅದೇನು ಅಸಾಧ್ಯವಲ್ಲ ಎಂದಳು. ಆತ ಅವಳ ಕಣ್ಣಲ್ಲಿ ಕಣ್ಣಿಟ್ಟು ಖಂಡಿತ ಮಾಡುವೆ ಎಂದು ಭರವಸೆ ನೀಡಿದ. ಆಟ ಹಾಗೂ ಮಾತುಕತೆಯಲ್ಲಿ ನಿರತರಾದ ಅವರಿಗೆ ಉಷೆ ತಿರುಗಿ ನಶೆಯಾಗಿ ಸುತ್ತ ಕತ್ತಲು ಸುರಿದಿರುವುದು ಗೊತ್ತಾಗಲೇ ಇಲ್ಲ. ದ್ರಾಕ್ಷಾಯಿಣಿ ಅಂಟಿ ಬಂದು ಊಟಕ್ಕೆಂದು ಎಬ್ಬಿಸಿದಾಗಲೆ ಹೊತ್ತಿನ ಪರಿವೆಯಾಗಿದ್ದು.
        ಮಾರನೇ ದಿನ ಸುಶಾಂತನ ಬೈಕೇರಿ ಬೆಟ್ಟದ ಬಳಿ ತೆರಳಿದಳು. ಚಿಕ್ಕವಯಸ್ಸಿನಲ್ಲಿ ಲಗೋರಿಯಾಡಲು ಪೇರಿಸಿಡುವ ಪುಟಾಣಿ ಬಿಲ್ಲೆಗಳಂತೆಯೆ ಈ ಬಂಡೆಗಲ್ಲುಗಳನ್ನೂ ಅದ್ಯಾರೋ ಪೇರಿಸಿಟ್ಟಿರುವಂತೆ ಅನಿಸಿತು. ರಾಮಾಯಣದಲ್ಲಿ ಈ ಹಂಪೆಯ ಇಡೀ ಪ್ರದೇಶ ಕಿಷ್ಕಿಂದೆಯೆಂದು ಹೆಸರಾಗಿ, ಇದು ವಾನರ ಸೇನೆಯ ಪ್ರಮುಖ ಆವಾಸ ತಾಣವಾಗಿತ್ತು. ಆ ವಾನರ ಸೇನೆಯ ಆಟಿಕೆಗಳೇ ಈ ಬಂಡೆಗಲ್ಲುಗಳಾಗಿದ್ದಿರಬಹುದು ಎಂದುಕೊಂಡಳು. ಅವಳು ಪ್ರತಿ ಬಂಡೆಗಲ್ಲನ್ನು ತಟ್ಟಿ ತಟ್ಟಿ ಸಂಗೀತ ಹೊಮ್ಮಿತೆ? ಎಂದು ಪರೀಕ್ಷಿಸುವುದನ್ನು ಕಂಡ ಸುಶಾಂತ 'ಏನು ಮೀನಾ ಮಲಗಿದ ಬೆಟ್ಟವನ್ನೆಲ್ಲಾ ಬಡಿದು ಎಚ್ಚರಿಸುತ್ತಿರುವೆ ಏನು? ಎಂದು ಗೇಲಿ ಮಾಡಿದ'. ಪ್ರತಿ ನಿತ್ಯವೂ ಅವರಿಬ್ಬರದೂ ಇದೇ ಕಾಯಕವಾಯಿತು. ಹೀಗಾಗಿ ಸಲುಗೆಯೂ ಬೆಳೆಯಿತು. ಒಂದು ದಿನ 'ಮೀನಾ ನಿನಗೊಂದು ಅದ್ಬುತ ತೋರಿಸುತ್ತೇನೆ ನಾಳೆ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ತಯಾರಾಗು' ಎಂದು ಸುಶಾಂತ ಹೇಳಿ ಹೋದ.
       ಅಂತೆಯೆ ನಾನು ನಾಲ್ಕು ಗಂಟೆಗೆ ಎದ್ದು‌ ತಯಾರಾಗಿ ಕುಳಿತಿದ್ದೆ. ಸುಶಾಂತ ಬಂದು ಬಾ ಮೀನಾ ಬೇಗ ಬಾ ಅಂದ. ನಾನು ಓಡಿ ಹೋಗಿ ಆತನ ಬೈಕ್ ಏರಿದೆ. ಮಾತಂಗ ಪರ್ವತದತ್ತ ಸಾಗಿತ್ತು ನಮ್ಮ ಪಯಣ. ಇನ್ನೂ ಕತ್ತಲೆಯಿತ್ತು ಜೊತೆಗೆ ತುಂಗಭದ್ರೆಯ ತಣ್ಣನೆಯ ಮೇಲ್ಮೈಯಿಂದ ಬೀಸುತಿಹ ಕುಳಿರ್ಗಾಳಿಯು ಮೈಕೊರೆಯುವಂತಹ ಚಳಿಯನ್ನು ಬಳುವಳಿಯಾಗಿ ಹೊತ್ತು ತರುತ್ತಿತ್ತು. ಚಳಿಯ ಪ್ರಖರತೆಯೆಷ್ಟಿತ್ತೆಂದರೆ ಮೈರೋಮಗಳೆಲ್ಲವು ಸೆಟೆದು ನಿಂತು, ಹಲ್ಲು ಕಟಗುಡಿಸುತ್ತಿದ್ದವು. ನಾನು ನಡುಗುತ್ತಾ ಚಳಿಯಾಗುತ್ತಿದೆ ಕಣೋ ಸುಶಾಂತಾ ಎಂದೆ. ಆತ ಬಿಗಿಯಾಗಿ ಹಿಡ್ಕೊಂಡು ಕುಳಿತುಕೋ ಎಂದ. ನಾನು ಆತನನ್ನು ಅಪ್ಪಿ ಕುಳಿತೆ.
        ಮಾತಂಗ ಪರ್ವತವನ್ನೇರಲು ನಮ್ಮಂತೆಯೇ ಕೆಲವರು ಆಗಲೇ ಸಿದ್ದವಾಗಿ ಬಂದಿದ್ದರು. ಸುಶಾಂತ ನನ್ನ ಕೈ ಹಿಡಿದು ನಿಧಾನವಾಗಿ ಒಂದೊಂದೇ ಬಂಡೆಯನ್ನು ಹತ್ತಿಸುತ್ತಿದ್ದ. ಬಹಳ ಪ್ರಯಾಸಪಟ್ಟಾಗ ಕೊನೆಗೂ ನಮ್ಮ ಹಠದ ಮುಂದೆ ಪರ್ವತವೇ ಮಣಿದು ಅದರ ಶಿರೋಭಾಗದಲ್ಲಿ ನಮ್ಮನ್ನು ಕುಳ್ಳಿರಿಸಿಕೊಂಡಿತು. ಚಳಿಯೆಲ್ಲಾ ಆರಿ ಹೋಗಿ ದೇಹವೆಲ್ಲಾ ದಣಿದು ಬೆವರಾಡಿತು. ಉಶ್ಯಪ್ಪಾ! ಅಂತ ತೇಕುತ್ತಿರಬೇಕಾದರೆ ಉಷೆಯ ಗುಚ್ಚವೊಂದು ಪೂರ್ವ ದಿಗಂತವನ್ನು ಸೀಳಿಕೊಂಡು ಸೂರ್ಯನನ್ನು ಸಾವಕಾಶವಾಗಿ ಮೇಲೆತ್ತತೊಡಗಿತು. ವಾವ್!  ಎಂತಹ ಅಮೋಘವಾದ  ದೃಶ್ಯಕಾವ್ಯ. ಇಂತಹ ಮನೋಹರವಾದ ಸನ್ ರೈಸ್ ನಾನೆಂದೂ ನೋಡೇ ಇಲ್ಲಾ ಎಂದು ಕುಣಿದಾಡಿದೆ. ತುಂಬಾ ಥ್ಯಾಂಕ್ಸ್ ಕಣೋ ಎಂದು ಸುಶಾಂತನೆಡೆಗೆ ನೋಡಿದೆ..ಆತನೂ ನನ್ನನ್ನೇ ನೋಡುತ್ತಿದ್ದ. ಇಡೀ ಹಂಪೆಯೇ ಇಲ್ಲಿಂದ ಕಾಣುತ್ತಿದೆ ಅಲ್ಲಿ ನೋಡು ವಿರೂಪಾಕ್ಷ ಮಂದಿರ, ಇಲ್ಲಿ ನೋಡು ಕಡಲೆಕಾಳು ಗಣಪ, ಅದೇ ನೋಡು ಮುತ್ತುರತ್ನದಾ ಬಜಾರ್ ಎಂದು ಎಲ್ಲವನ್ನೂ ಕೈ ಮಾಡಿ ಮಾಡಿ ಸುಶಾಂತ ತೋರಿಸುತ್ತಿದ್ದ. ನಾನು ಆ ನಯನಮನೋಹರವಾದ ದೃಶ್ಯವನ್ನು ಆನಂದಿಸುತ್ತಾ ಎಲ್ಲವೂ  ಎಷ್ಟೊಂದು ಸುಂದರವಾಗಿವೆ ಅಲ್ವಾ? ಎಂದು ಪ್ರಶ್ನಿಸಿದೆ. ಆತ ನಿನ್ನಷ್ಟು ಸುಂದರವಲ್ಲ ಬಿಡು ಎಂದ. ನಾನು ಏನು ಲವ್ವಾ? ಎಂದೆ. ಆತ ನನ್ನಿಂದ ಆ ಮಾತು ನಿರೀಕ್ಷಿಸಿರಲಿಲ್ಲ. ತುಸು ತಡಬಡಾಯಿಸಿದ. ಲವ್ವ ಗಿವ್ವ ಮಾಡಿಬಿಟ್ಟಿಯಪ್ಪಾ..ನನಗೆ ಅದಕ್ಕೆಲ್ಲಾ ಸಮಯವಿಲ್ಲ ಎಂದು ಹೇಳಿ‌‌ ಕೆಳಗೆ ಹೋಗೋಣವೆಂದು ಕರೆದೆ. ಅದುವರೆಗೂ ವಿಪರೀತವಾಗಿ ಮಾತಾಡುತ್ತಿದ್ದಂವ ಯಾಕೋ ತುಂಬಾ ಸೈಲೆಂಟ್ ಆಗಿಬಿಟ್ಟ. ಮುಂದೆ ಎಲ್ಲಿಗೆ ಹೋಗೋದು ಎಂದೆ. ಆತ ನಿನಗೆ ಮೂರುಸಾವಿರ ವರ್ಷದ ಹಳೆಯ ಪೇಂಟಿಂಗ್ ತೋರಿಸುವೆ ಎಂದು ಮತ್ತೆ ಅದಾವುದೋ ಬೆಟ್ಟ ಏರತೊಡಗಿದ. ನಾನು ಸುಮ್ಮನೆ ಹಿಂಬಾಲಿಸಿದೆ. ಬಹುದೊಡ್ಡ ಬಂಡೆಗಳು ಕಾಮೋನ್ಮತ್ತವಾಗಿ ಒಂದಕ್ಕೊಂದು ಮುತ್ತಿಡುವ ತೆರಹದಿ ಪರಸ್ಪರ ಅಂಟಿಕೊಂಡು ನಿಂತಿದ್ದವು. ಅವುಗಳ ಟೊಳ್ಳು ಗರ್ಭದೊಳಗೆಯೆ ಗವಿ ಸೃಷ್ಟಿ. ಅಲ್ಲಿಯೇ ಹಳೆಯ ಪೇಟಿಂಗ್. ಸುಂಯ್ಯೆಂದು ಬೀಸುವ ತಂಗಾಳಿಯನ್ನು ಬಿಟ್ಟರೆ ಅಲ್ಲಿರುವುದು ನಾವಿಬ್ಬರೇ. ನಾನು ಮೊಬೈಲ್ ನಲ್ಲಿ ಆ ಅಪರೂಪದಲಿ ಅಪರೂಪವೆನಿಸಿದ  ಕಲಾಕೃತಿಯ ಕೆಲವೊಂದು ಫೋಟೋ ತೆಗೆದುಕೊಂಡೆ. ಸುಶಾಂತ ಅದರ ಇತಿಹಾಸ ಹೇಳುತ್ತಿದ್ದಾ..ನಾನು ನನ್ನದೇ ಕಲ್ಪನಾ ಲೋಕದಲ್ಲಿದ್ದೆ. ದೂರದಲ್ಲೇನೋ ಧಡಧಡ ಎಂದು ಬಂಡೆಗಲ್ಲು ಉರುಳುತ್ತಿರುವ ಶಬ್ದವಾಯಿತು. ನಾನು ಸುಶಾಂತನನ್ನೇ ಗಾಬರಿಯಿಂದ ದಿಟ್ಟಿಸಿದೆ. ಆತನೂ ನನ್ನೇ ನೋಡುತ್ತಾ..ಇದೆಲ್ಲಾ ಇಲ್ಲಿ ಮಾಮೂಲೆಂದ. ಮೀನಾ ನಿನ್ನ ಬಾಯಿಗೇನೋ ಹತ್ತಿದೆ ಎಂದು ಹೇಳಿದ. ನಾನು ಒರೆಸಿಕೊಂಡು ಹೋಯ್ತಾ? ಎಂದು ಕೇಳಿದೆ. ಆತ ಇಲ್ಲಾ ಎಂದು ನನ್ನ ತುಟಿಗಳನ್ನು ಮುಟ್ಟಿ ಒರೆಸಿದಂತೆ ಮಾಡಿದ. ಏನು ಕಿಸ್ಸಾ? ಎಂದೆ. ಚಾಕಲೇಟ್ ಗಾಗಿ ಆಸೆಪಟ್ಟು ಕೇಳುವ ಚಿಕ್ಕ ಮಗುವಿನಂತೆಯೆ ಮುಖ ಮಾಡಿ ಹ್ಞೂಂ!..ಬೇಕೆಂದು ಕಣ್ಸನ್ನೆಯಿಂದಲೇ ಕೇಳಿದ. ಥೂ! ದರಿದ್ರ, ನಿಮ್ಮಂಥಹ ಹುಡುಗರ ಪ್ರಾಬ್ಲಮ್ಮೇ ಇದು. ಯಾವುದಾದರೂ ಸುಂದರವಾದ ಹುಡುಗಿ ಕಂಡರೆ ಸಾಕು ಶುರುವಾಗಿಬಿಡುತ್ತೆ ಲವ್ವು-ಗಿವ್ವು ಎಂದು ವಿಪರೀತ ಬೈಯ್ದೆ. ಆತ ತಪ್ಪು ಮಾಡಿದವನಂತೆ ತಲೆತಗ್ಗಿಸಿ ನಿಂತ. ನಾನು ಸುಶಾಂತ ಏಯ್! ಸುಶಾಂತ ಏನಾಯ್ತು? ಎಂದೆ. ಆತ ತಲೆ ಮೇಲೆತ್ತಲಿಲ್ಲ. ನಾನು ಬೇಗ ಕೊಡು ಯಾರಾದರೂ ಬರುತ್ತಾರೆ ಎಂದೆ. ಅಷ್ಟೇ ಸಾಕಿತ್ತು ಅವನಿಗೆ ತುಟಿಗೆ ತುಟಿಯೊತ್ತಿಬಿಟ್ಟ. ನಾನು ಒದ್ದಾಡಿದೆ, ಆತ ಮುದ್ದಾಡಿದ. ಹೇಗೋ  ಕೊಸರಿಕೊಂಡು ನಡಿಯಪ್ಪಾ ಮಾರಾಯಾ ಪೇಂಟಿಂಗ್ ತೋರಿಸಿದ್ದು ಮುಗಿತಲ್ಲ ಎಂದೆ. ಆತ ಖುಷಿಯಾಗಿ ಬಾ ಬಾ ಎಂದು ಮುಂದೆ ಹೋದ. ಇಷ್ಟಕ್ಕೆ ತೃಪ್ತನಾಗು ಮತ್ತೇನಾದರೂ ಕೇಳಿದ್ಯೋ ಪರಿಸ್ಥಿತಿ ನೆಟ್ಟಗಿರೋಲ್ಲಾ ಎಂದು ಅವಾಜ್ ಹಾಕಿದೆ. ಅಂದು ಮನೆಗೆ ತಂದು ಬಿಟ್ಟವ ನಾಚಿಕೆಯಿಂದ ಆತ ನನಗೆ ಭೇಟಿಯಾಗಲೆ ಇಲ್ಲ. ರಿಯಲಿ ಸಚ್ ಅ ವಂಡರಫುಲ್ ಎಕ್ಸಪೀರಿಯನ್ಸ್. ಐ ಲವ್ ಯೂ..ಸುಶಾಂತ.
ಎಂದು ತನ್ನ ಡೈರಿಯಲ್ಲಿ ಬರೆದಿಟ್ಟಳು ಮೀನಾ.

ಭಾಗ ೩ ಓದಲು ಇಲ್ಲಿ ಕ್ಲಿಕ್ ಮಾಡಿ
                                      
                                    - ಆನಂದ ಮಾಲಗಿತ್ತಿಮಠ

Comments

Post a Comment

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ...