Skip to main content

Posts

Showing posts with the label Poetry

ಗೋಡೆ @ ಆನಂದ ಮಾಲಗಿತ್ತಿಮಠ ಕವಿತೆ

ಒಂದು ಸಹಾಯ ಮಾಡಿ ಬಡ ಗೋಡೆಯೆಂದು ಹೊರಡಬೇಡಿ ನಡು ಬಾಗಿದರೂ ತೊಲೆ ಹೊತ್ತು ನಿಂತಿರುವೆ ಮುದಿಯೆಂದು ತೆಗಳಬೇಡಿ ಮೈತುಂಬ ಮದರಂಗಿ ಕೆಂಪು ಗಾಯಗಳು ಸಮರದ ಗುಂಡು ತಾಗಿದುದಲ್ಲ ಕಲೆತವರ ಉಳಿಯೇಟಿನ ಕಲೆಗಳವು ಕಲೆಗಾರರು ಚಿತ್ರಿಪ ಸುಂದರ ಶಿಲ್ಪಗಳಲ್ಲ ಸಿಗರೇಟಿನ ಮೋತಿ ನೀಡಿದ ಮುತ್ತುಗಳು ಕನ್ಯೆಯ ಕೆನ್ನೆಗಿಟ್ಟ ದೃಷ್ಠಿ ಬೊಟ್ಟುಗಳಲ್ಲ ಸುಟ್ಟ ಮನದ ಸೋರು ಛಾವಣಿ ಹನಿಗಳು ಕರುಣೆ ಪಡೆಯಲು ಮಾಡಿದ ಪಟ್ಟುಗಳಲ್ಲ ತಾಂಬೂಲು ತಿಂದುಗಿದ ಚಿತ್ತಾರಗಳು ಪಾತಿರ್ವತೆಯ ಕೆಂಪು ಸಿಂಧೂರವಲ್ಲ ಸಾರಾಯಿ ಅಮಲಿನಲಿ ಕಕ್ಕಿದ ಅನ್ನದಗುಳು ಅಂಗಳದಲಿಟ್ಟ ಶುಭ ರಂಗೋಲಿಯಲ್ಲ ಒಂದು ಸಹಾಯ ಮಾಡಿ ನಾನು ಸರ್ಕಾರಿ ಶಾಲೆ ಗೋಡೆ ನಿಲ್ಲಿಸಿಬಿಡಿ ಇಂತಹ ಅತ್ಯಾಚಾರ

ನನ್ನವರು@ ಆನಂದ ಮಾಲಗಿತ್ತಿಮಠ 'ಗಜಲ್'

ಆ ಮುಳ್ಳು ಅಮಾಯಕತೆಯ ಪ್ರತೀಕ ಬಿಡಿ ಚುಚ್ಚಿದ್ದು ನನ್ನವರೆ. ಆ ಚಿನ್ನದ ಕತ್ತಿಯದೇನೂ ತಪ್ಪಿರಲಿಲ್ಲ ಬೆನ್ನಿಗಿರಿದಿದ್ದು ನನ್ನವರೆ. ನಂಬಿಕೆಯ ಅರಮನೆ ಸುಡುತಿರಲು ಕರಿ ಬೂದಿಯ ಕಲರವ ಕಣ್ಣೀರು ಸುರಸಿ ನಂದಿಸಲು ಬರಬೇಡಿ ಸುಟ್ಟಿದ್ದು ನನ್ನವರೆ. ಸ್ನೇಹದ ಪರಿಮಳದಲ್ಲಿ ಕೊಳೆತ ಶವದ ವಾಸನೆಯು ಬೆರೆತಿದೆ ಅದು ಮೋಸವೆಂದು ಚಿತ್ಕರಿಸಿ ಸಾರಬೇಡಿ ಮಾಡಿದ್ದು ನನ್ನವರೆ. ಗಾಜಿನ ಮನಸ್ಸಿಗೆ ಒಡೆವ ಕಲ್ಲಿನ ಮೇಲೆಯೆ ಮೋಹ ಜಾಸ್ತಿ ತಾಗಿದರೂ ಚುಂಬನವೆಂದು ತಿಳಿದುಬಿಡಿ ಎಸೆದದ್ದು ನನ್ನವರೆ. ಮೈಮರೆತು ಮಲಗಿದರೂ ಸಮಾಧಿಯೆಳೆದು ಶೋಕಿಸುತ್ತಾರಿಲ್ಲಿ  ಮುಖವಾಡಗಳನು ದೂರುತ್ತಿಲ್ಲ ಅಥರ್ವಾ ತೊಟ್ಟಿದ್ದು ನನ್ನವರೆ

ಗಝಲ್ @ ಆನಂದ ವೀ ಮಾಲಗಿತ್ತಿಮಠ

ಮಣ್ಣು ಹೊತ್ತ ಹೆಗಲಿಗಂದು ಸುರಿಸಿದ ಬೆವರು ಗೊತ್ತಿತ್ತು ಉರಿದ ಕಣ್ಣಿಗಂದು ಧೂಳುದುರಿ ಹರಿದ ‌ಕಣ್ಣೀರು ಗೊತ್ತಿತ್ತು ಇಟ್ಟಿಗೆಗಳ ಜೋಡಿಸುವಾತನು ಬರೀ  ಗೋಡೆಯನು ಕಟ್ಟಿದ ಮೂಢನಿಗಲ್ಲಿ ಮೂಡಿ ಬಂದ ಆಕಾರದ ಹೆಸರು ಗೊತ್ತಿತ್ತು ದಣಿದು ತಾ ಕುಣಿದು ಉಳಿಯು ಮೂಡಿಸಿದ್ದು ಶಿಲ್ಪಚಿತ್ತಾರ ಕಿಡಿಹಾರಲಲ್ಲೂ ಚಳಿಕಾಯಿಸುವ ಜನ ಮೂಳರು ಗೊತ್ತಿತ್ತು ಮಂದಿರವೋ ಮಸೀದಿಯೋ ಮತ್ತೊಂದೋ ಏನಿದೆಯೋ ಗೋಡೆಯ ಗೂನು ಬೆನ್ನಿಗಲ್ಲಿ ಹೊರುವ ತೊಡರು ಗೊತ್ತಿತ್ತು ಮತ್ತೆ ಮತ್ತೆ ಹಳೆಯ ಗೋಡೆಗಳ ಗೊಡವೆಯೇಕೆ 'ಅಥರ್ವಾ' ಗುಂಬಜಕ್ಕೂ ಅಂಬುಜಕ್ಕೂ ಭಾವವೊಂದೇ 'ದೇವರು' ಗೊತ್ತಿತ್ತು

ಗಝಲ್ @ ಆನಂದ ಮಾಲಗಿತ್ತಿಮಠ

ಆ ಮತ ಈ ಮತವೆಂಬ ಹಂಗೇತಕೋ ಬರಿ ಮತದಾರನಾಗು ಸಾಕು ಪಟವಾಗಿ ಬಾನೆತ್ತರ ನಾನೇರುವೆ ನೀನದಕೆ ಬರಿ ದಾರವಾಗು ಸಾಕು ಚಿಗುರಿ ಹಬ್ಬುತ ನಲಿದು ನನ್ನವರಿಗೆ ನೆರಳಾಗಿ ಅವರೂ ಚಿಗುರಬೇಕು ಬುಡದಲಿ ಬೆವರು ಸುರಿಸುವ ಬಡ ತೊಗಲಿನ ಕೂಲಿಯಾಗು ಸಾಕು ನಾನಾಳುವವನು ಅಳುವುದಿಲ್ಲ ಅತ್ತರದು ಬರಿ ಬಹಿರಂಗದ ನಾಟಕ ಮಹಿಯನೊಡೆಯನಾಗಲು ಮಾಡುವ ಪೂಜೆಗೆ ಬಲಿಯಾಗು ಸಾಕು ಮೈಯೊಣಗಿ ನಾರಿದರೇನು ಕುಶಲವಾಗಿರಲಿ ಕಡೆತನ ತೋರು ಬೆರಳು  ತೇರಿನಲಿ ಸಾಗುವವನು ನಾನು  ಭಾರ ಹೊರುವ ಗಾಲಿಯಾಗು ಸಾಕು ಅರ್ಧರಾತ್ರಿಯಲಿ ಅಥರ್ವನಿಗೆ ಎಚ್ಚರಾಗಿ ಬುದ್ದನಾದರೂ ಚಿಂತೆಯಿಲ್ಲ ಪ್ರಶ್ನಿಸಿ ಪ್ರಬುದ್ಧನಾಗದೇ ನನಗೇ ನೇತಾಡುವ ಬಾವಲಿಯಾಗು ಸಾಕು ಇದನ್ನೂ ಓದಿ ಗಝಲ್ ಯಾರಿಂದ್ಯಾರಿಗೆ ಎಲ್ಲಿಂದೆಲ್ಲಿಗೆ  

ಗಜಲ್ @ ಆನಂದ ಮಾಲಗಿತ್ತಿಮಠ

ಅವರಿಂದಿವರಿಗೆ ಇವರಿಂದವರಿಗೆ ನಡುವೆ ನಮಗೇನಿದೆ ಯಾರಿಂದ್ಯಾರಿಗೆ ಎಲ್ಲಿಂದೆಲ್ಲಿಗೆ ಸ್ವಾತಂತ್ರ್ಯವೇ ನಮಗೇನಿದೆ ಕೊಟ್ಟಿಹುದೇನೋ ಪಡೆದಿಹುದೇನೋ  ಮಾಯೆಯೊ ಹಳ್ಳಿಯಿಂದಿಲ್ಲಿಗೂ ನಾಯಕರಾದರೂ ಪ್ರಭುವೇ ನಮಗೇನಿದೆ ಬಾವುಟ ಹಿಡಿದಿಹ ಬಾಲವ ಬಡಿದಿಹ ಬಂಟರಿಗೇನೊ  ನೆಲದ ಒಡೆತನ ಬದಲಾದರೂ ಕರ್ಮವೇ ನಮಗೇನಿದೆ ಸೂಜಿಗೂ ತೆರಿಗೆಯಿತ್ತು ಸೂರಿಲ್ಲದೆ ತಿರುಗ್ಯಾರು ಉಳ್ಳವರೇ ಉತ್ಸವ ಮಾಡ್ಯಾರು ಶಂಭುವೇ ನಮಗೇನಿದೆ ಮತದಾರರಾದವರು ಅಥರ್ವನ ಕೇಳ್ಯಾರು ಸ್ವಾತಂತ್ರ್ಯದ ಸವಿಯಲಿ ಪಾಲು  ದೈವವೇ ನಮಗೇನಿದೆ  ಇದನ್ನೂ ಓದಿ ಸುಮ್ಮನಿರಲಾರದೇ ಬರಿ ಧರ್ಮವೆಂದೆ ಅಷ್ಟೇ

ಗಜಲ್@ ಆನಂದ ಮಾಲಗಿತ್ತಿಮಠ

ಸುಮ್ಮನಿರಲಾರದೆ ಬರಿ ಧರ್ಮವೆಂದೇ ಅಷ್ಟೇ ನಾನೇನೂ ಮಾಡಿರಲಿಲ್ಲ ಕೋಮುವಾದಿ ಎಂಬ ಬಿರುದು ಕೊಟ್ಟರಂದೇ ನಾನೇನೂ ಮಾಡಿರಲಿಲ್ಲ ತ್ರಾಸಿನಲಿ ಬರಿ ಪ್ರಾಸಗಳ ಜೋಡಿಸಿ, ಅಕ್ಷರಗಳ ಮಾಲೆ ಹೆಣೆದಿದ್ದೆ ಅಷ್ಟೇ ಕವಿಯೆಂದು ಕರೆದು ಪ್ರಶಸ್ತಿ ನೀಡಿಯೇ ಬಿಟ್ಟರಂದೇ ನಾನೇನೂ ಬರೆದಿರಲಿಲ್ಲ ಖಾದಿಯ ತೊಟ್ಟು ಓಣಿಯ ನಾಲ್ಕಾರು ಕದನಗಳನು ಬಗೆಹರಿಸಿದ್ದೆ ಅಷ್ಟೇ ರಾಜಕಾರಣಿಯೆಂದು ಜನ ಜೈಕಾರ ಹಾಕಿದರಂದೇ ನಾನೇನೂ ಮಾಡಿರಲಿಲ್ಲ ಪರದೆಯ ಮುಂದೆ ನಿಲ್ಲಿಸಿದಾಗ ಬರಿ ಬಾಯಿ ಬಡಿದೆ ಮೂಗನಂತೆ ಅಷ್ಟೇ ನಟಚಕ್ರವರ್ತಿಯೆಂದು ಪುತ್ಥಳಿಯನೇ ಮಾಡಿಟ್ಟರಂದೇ ನಾನೇನೂ ನಟಿಸಿರಲಿಲ್ಲ ಎದೆ ಎದೆ ಬಡಿದುಕೊಂಡು 'ಆನಂದ' ವಿರದೆ  ಹಸಿವು ಎಂದು ಕೂಗಿದೆ ಅಷ್ಟೇ ಅನ್ನದ ಬಟ್ಟಲ ಕಸಿದು  ಸಾಯಿ ಮಗನೇ ಅಂದರಂದೇ ನಾನೇನೂ ಬದುಕಲಿಲ್ಲ ಈ ಗಜಲ್ ನ್ನೂ ಓದಿ ನನಗೂ ದೇವರಿಗೂ ನಡುವೆ ಗೋಡೆ ಕಟ್ಟಿದಿರಿ, ಗುಡಿಯ ಹೆಸರಿನಲ್ಲಿ ಸಾಕಿ

ಗಜಲ್ @ ಆನಂದ ಮಾಲಗಿತ್ತಿಮಠ

ಸುಮ್ಮನೇ ಸಿಡುಕಬೇಡ ಮನದ ದಳಗಳು ಇನ್ನೂ ಮಿಡಿಯಾಗಿವೆ ತಪ್ಪುಗಳ ಎತ್ತಿ ತೋರಬೇಡ ಕೈ ಬೆರಳುಗಳು ಇನ್ನೂ ಮಿಡಿಯಾಗಿವೆ ಕಲ್ಪನೆಯ ಗುಹೆಯೊಳಗೆ ಕುಳಿತು ಬದುಕು ಬರಿಯ ಕತ್ತಲೆನಬೇಡ ಒಳಬಣ್ಣಗಳನು ಬೆತ್ತಲೆಗೊಳಿಸಲು ಕಿರಣಗಳು ಇನ್ನೂ ಮಿಡಿಯಾಗಿವೆ ದುರುಳರ ಕಾಮನೆಗಳ ಹಾಯಿದೋಣಿ ಮರುಳಾಗಿ ತೇಲುತಿರಲು ಅನ್ಯಾಯವೆನಬೇಡ ಮುಳುಗಿಸುವ ಅಲೆಗಳು ಇನ್ನೂ ಮಿಡಿಯಾಗಿವೆ ಮದಿರೆಯ ಅಮಲಿಗಿಂತ ಧರ್ಮದ ಅಮಲು ರುಚಿಯಾಗಿಹುದು ಸಾಕಿ ತಿಳಿಯದೆ ಇರಬೇಡ ನಿನಗೆ ತಿಳಿಸುವ ಜಿಹ್ವೆಗಳು ಇನ್ನೂ ಮಿಡಿಯಾಗಿವೆ. ಗಾಳಿಯ ಗೊಂಬೆಗಳ ಲೋಕದಲ್ಲಿ  ಚುಚ್ಚುವ ಸೂಜಿಗೇನು ಕಾಯಕ   ಮುರಿದೆಸೆದುಬಿಡು 'ಆನಂದ' ‌ಎಲ್ಲರ ಬಾಳುಗಳು ಇನ್ನೂ ಮಿಡಿಯಾಗಿವೆ ಈ ಗಜಲ್ ನ್ನೂ ಓದಿ ನನ್ನ ಮನೆಯ ಹಿತ್ತಲದ ಹೂವು ತತ್ತರಿಸಿ ಹೋಯಿತು

ಗಜಲ್ @ ಆನಂದ ಮಾಲಗಿತ್ತಿಮಠ

ನನಗೂ ದೇವರಿಗೂ ನಡುವೆ ಗೋಡೆ ಕಟ್ಟಿದಿರಿ ಗುಡಿಯ ಹೆಸರಿನಲಿ ಸಾಕಿ ಬಯಲಿನಲ್ಲಿಯೇ ಕೈಮುಗಿದು ಬಯಲಾಗಬಯಸಿದ್ದೆ ಕರ್ಪೂರದ ರೀತಿಯಲಿ ಸಾಕಿ ನನಗಿರುವ ಸ್ವಾತಂತ್ರ್ಯ ನನ್ನ ದೇವನಿಗೇಕಿಲ್ಲ ನರಳಬೇಕೇ‌ ಬಂಧನದಲಿ ಬಂದರೆ ಬರಲಿಬಿಡಿ ನನ್ನೊಂದಿಗೆ ಬಡವನ ಗುಡಿಸಲಿಗೂ ಚೆಂದದಲಿ ಸಾಕಿ ನನ್ನನೇಕೋ ಆಲಿಸನು ಮಂದಾದವೇ ಕರ್ಣಗಳು ಗಂಟೆಯ ಠೇಂಕಾರದಲಿ ಮಂದಾರ್ತಿಯ ಮಂದಾನಿಲಕೆ  ಮಾದೇವ ಸುಂದಾದನೆ  ಓಂಕಾರದಲಿ ಸಾಕಿ ಧನಕನಕಾದಿಗಳಿಗೆ ಗಾಳ ಹಾಕದ ಗರೀಬ್ ನನ್ನು ಗಾಳಿಯಾಗಿಸು ಕರುಣೆಯಲಿ ಎಲ್ಲ ಬಂಧನಗಳ ತೂರಿ ಆ ದೇವನ  ಸ್ಪರ್ಶಿಸಿ ಬರುವೆ ತುಡುಗಿನಲಿ ಸಾಕಿ ಇಂದಲ್ಲ ನಾಳೆ  ನನಗಾಗಿ ದೇವ ಹೊರಬಂದೇ ಬರುವನು ಜನಜಾತ್ರೆಯಲಿ ಗುಡಿಯಿಂದಾಗಲಿ, ಆನಂದನ‌ ದೇಹದಿಂದಾಗಲಿ ಬಲು ಸಂಭ್ರಮದಲಿ ಸಾಕಿ ಈ ಗಜಲ್ ನ್ನೂ ಓದಿ ನಿನ್ನ ಹೆರುವಾಗಲೂ ನನಗಿಷ್ಟು ನೋವಾಗಿರಲಿಲ್ಲ ಕಂದಾ

ಗಜಲ್ @ ಆನಂದ ಮಾಲಗಿತ್ತಿಮಠ

ಗಜಲ್ 2 ********* ನನ್ನ ಮನೆಯ ಹಿತ್ತಲದ ಹೂವು ತತ್ತರಿಸಿ ಹೋಯಿತು ದೊರೆ ಕತ್ತಲಲ್ಲಿ ಕರಾಮತ್ತು ನಡೆದು ಕತ್ತೆತ್ತಿ ತಿರುಗದಂತಾಯಿತು ದೊರೆ ಜೀವ ಬತ್ತಿದಾಗ ಮೇಣದ ಬತ್ತಿ ಹಿಡಿದು ಸಾಂತ್ವನವ ನುಡಿದು ಮಾರು ದೂರು ನಡೆದ ಸಮಾಜ ನಿದ್ದೆಹೋಯಿತು ದೊರೆ ಅಳುವವರ ಕಣ್ಣೀರು ಬತ್ತಿದರೂ‌ ಆಳುವವರು ಕಣ್ತೆರೆಯಲಿಲ್ಲ ಕಾಮದ ಮುಷ್ಠಿಯಲಿ ಕೌಮಾರ್ಯ ಕಮರಿ ಹೋಯಿತು ದೊರೆ ನಡು ಬಜಾರಿನಲ್ಲಿ ಬಡ ಹೆಣ್ಣು ಮಗಳ ಶೀಲ ಬಿಕರಿಯಾಯಿತಂದು ರೂಪಾಯಿಗೊಂದರಂತೆ ಅವಳ ಮಾನ ಖಾಲಿಯಾಯಿತು ದೊರೆ ಭಾವಚಿತ್ರ ಸೇರಿದ ಅವಳೆದುರಿಗೆ ದೀಪ ಇನ್ನೂ ತಣ್ಣಗುರಿಯುತಿದೆ ಬಡಬಾಗ್ನಿಯಾದರೆ ಈ ಜಗದ 'ಆನಂದ'ವೇ ನಂದಿ ಹೋದಿತು ದೊರೆ ಇವುಗಳನ್ನೂ ಓದಿ ಅದೃಷ್ಟವಂತ - ಕತೆ ಸಾನಾಪೂರದ ಸಂಗೀತ ಶಿಲೆಗಳು - ಪ್ರೇಮಕತೆ

ಗಜಲ್ @ ಆನಂದ ಮಾಲಗಿತ್ತಿಮಠ

ನಿನ್ನ ಹೆರುವಾಗಲೂ ನನಗಿಷ್ಟು ನೋವಾಗಿರಲಿಲ್ಲ ಕಂದಾ ಈ ಇಳಿವಯಸ್ಸಲ್ಲಿ ನನ್ನ ತೊರೆದು ದೂರಾದೆಯಲ್ಲ ಕಂದಾ ಮಮತೆಯ ಮುಂದೆ ಮೊಹಬ್ಬತ್ ವಿಜಯದ ನಗೆ ಬೀರಿ ಗಹಗಹಿಸಿ ನಗುತಿರಲು ನನ್ನಳುವಿಗೆ ಕೊರತೆಯಿಲ್ಲ ಕಂದಾ ಅಂದು ಪುಟಾಣಿ ಪಾದಗಳಿಂದ ಎದೆಗೊದೆದು ನಗುತ್ತಿದ್ದೆ ಮುಂದೆಯೂ ಹಾಗೆ ಮಾಡುವೆಯೆಂಬ ಕಲ್ಪನೆಯಿರಲಿಲ್ಲ ಕಂದಾ ನನ್ನೊಡಲ ಹಸಿವ ಕಡೆಗಣಿಸಿ ನಿನಗೆ ತುತ್ತನೀಯುತ್ತಿದ್ದೆ ಈ ಅಮ್ಮನ ಎದೆವಾಲಿನಲ್ಲಿ ಎಂದೂ ವಿಷವಿರಲಿಲ್ಲ ಕಂದಾ ನಾ ನೆಟ್ಟ ಮರ ನೆರಳಾಗಲಿಲ್ಲವೆಂಬ ಕೊರಗಿಹುದೆನೋ ನಿಜ ಸಾಂತ್ವನದ ತಂಪೆರೆಯಲು 'ಆನಂದ'ನ ಪದ್ಯಗಳಿವೆಯಲ್ಲ ಕಂದಾ ಇದೇ ಲೇಖಕರ ಕತೆ ಓದಲು ಕ್ಲಿಕ್ ಮಾಡಿ ಅಪಸ್ವರ ಕತೆ

ನೆನಪಿನ ಕಡಲು

ಮುಗಿದ ಸಂಜೆಯ ಮುಗಿಲಿನ ಹಳದಿಯಂಚಿನ.... ಕಡಲ ಕೂಡುವ ಕೊನೆಯ ತಳದಿ ಮುಳುಗುವ ರವಿಯ ನಾಭಿಯಲಿ... ತಳೆಯುತಿದೆ ಬಿಳಚು ಹಾದಿ...!! ಹಾದಿಗುಂಟ ತೇಲಿಬರುತಿದೆ.. ಹೆಪ್ಪುಗಟ್ಟಿದ ನಿನ್ನ ನೆನಪುಗಳ ಹೊತ್ತ ಹೆಣದಂಥ ದೋಣಿ... ಕಪ್ಪಡರಿದ ಸಂಜೆ ಬಿಕ್ಕಳಿಸುತಿದೆ ಮಗು ಬಯಸಿದ ಬಂಜೆಯಂತೆ! ಯಾವ ಕಿಡಿಯು ಸೋಕಿಹುದು ಬೆರೆತ ಈ ಹೃದಯಗಳ ಪುಟ್ಟ ಗುಡಿಸಲು..? ಒಲವ ಕೋಟೆಯು ಸಿಡಿದ ರಭಸಕೆ, ಉರಿಯನಾಲಿಗೆ ಚಾಚಿದೆ ಗಗನಕೆ..!! ಸುಟ್ಟಗಾಯದ ದಟ್ಟಕಲೆಗಳು ಮುಗಿಲ ಕೆನ್ನೆಯ ನೆಟ್ಟಿವೆ.. ಭಾವ ಕಣ್ಣೀರ ಬಿಸಿಯ ಬುಗ್ಗೆ ಬಾಯಿನುಗ್ಗಿ ಬಿಕ್ಕಳಿಸಿದೆ...!! ಬೆಚ್ಚನೆಯ ಕನಸುಗಳ ಹುಚ್ಚಿನಾಟವು, ಎದೆಗೆ ಬೆಂಕಿ ಇಡುತಿದೆ.. ಹುಗಿದ ಪ್ರೀತಿ, ಎದೆಯ ಬಿಗಿದು ಭಾವತಂತಿ ಮೀಟುತಿದೆ,ಶೋಕಗೀತೆ ಹಾಡುತಿದೆ..!! ಯಾವ ಸುಳಿಯು ನುಸುಳಿ ಹಣಿಯಿತೋ ಇಂದು ತಿಳಿಯದಾಗಿದೆ... ಬೆನ್ನುಬೆನ್ನಿಗೆ ಅಳುವ ಕೊಡವಿ ಉಕ್ಕಿ ಬಿಕ್ಕಿ ಬರುತಿವೆ ಕಡಲಿನಲೆಗಳು, ಹಕ್ಕಿಗಳು  ಹಾರಿಬಂದಿವೆ ದು:ಖ ಸಂತೈಸಲು...!! ✍🏽 ಸಿದ್ದು ನೇಸರಗಿ. (ಮೂಗಬಸವ) ಸಿ ಆರ್ ಪಿ ಆನಿಗೋಳ.🙏 ಮಿತ್ರರೇ ತಮ್ಮ  ಓದಿನ ಪ್ರೀತಿಗೆ...ಮತ್ತೂಂದು ಕವಿತೆ🙏💐💐

ಊರ ಮುಂದಿನ ಹೊಲ

ಊರ ಮುಂದಿನ ಹೊಲಕ ನಾ ಕುಂಟೀಯ ಹೂಡಿದರ ಬಳದಾಯ್ತು ಭಾಳ.. ಕಡದಾಯ್ತು ಕಿರುಗುಳ..ಅಂದೋರೇ ಬಹಳ. ಸಾಗಿದಂಗ ಹೊಡೀ..ಅಂದವರು ವಿರಳ....!! ಅಂದವರು ಅನ್ನಲಿ.. ಚಂದ...ನ... ನನ್ನಹೊಲ..ಈ ಸೀಮೆಯೊಳಗ ಇಲ್ಲಾ ನನ್ನಂಥ ಒಕ್ಕಲಾ..ಕರಿಮಣ್ಣಹೊಲಾ... ಮೇಳಿಯ ಹಿಡಿದು ಗಳೇಯನು ಹೊಡೆದರ ಮಣ್ಣೀನ ಹದ.. ಮನಸೀಗೆ ಮುದ....!! ಒಡ್ಡಿಲ್ಲ..ಒಡಬಲಿಲ್ಲ ಸಮ ತಟ್ಟಿನ ಹೊಲ.. ಮಳೆರಾಯ ಸುರಿದರ ನೀರ ಗಂಗಾಳಕ ಹಾಲು ಸುರಿದಂಗ.. ಇಂಗಿದ ಉಳಿನೀರು ಸಾಗಲು ತಿಳಿ ನೀರು ಕಲಬಚ್ಚಲ ಕಾವಲು ಕೋಟೆ ನನ್ನ ಹೊಲಕ.. ತುಂಬಿದ ನೀರಿಗೆ ತಂಬಿಟ್ಟಿನಂಗ ಹದಸಿರೀ ಮಣ್ಣ...!! ಎತ್ತೆರಡು ನತ್ತಿನಂಗ ರಾಮಣ್ಣ ಭೀಮಣ್ಣ... ಬಿತ್ತಾ ಕ ಬಂಟರು  ಹೊತ್ತುಇಳಿಯುವ ಮುನ್ನ.. ಭೂತಾಯಿ ಮಕ್ಕಳ ಜೀವದ ಕಣ್ಣ... ಆಸರಿಲ್ಲ ಬ್ಯಾಸರಿಲ್ಲ ನಮ್ಮ ಬಸವಣ್ಣ...!! ನೆಟ್ಟ ಹೆಜ್ಜೀಯ ಗುಂಟಾ ಕೂರಿಗೆ ಸಾಲ.. ದಿಟ್ಟನಡಿಗಿ ನೋಟಕ ಊರಿಗೆಲ್ಲ ದಿಗಿಲಾ.. ಸುಗ್ಗೀಯ ಕಾಲಕ  ಹಗ್ಗೆಲ್ಲಾ ಮುಗಿಲಾ.. ಕಾಳಿನ ನಿಟ್ಟು ದ್ಯಾಬ್ಯಾಗ ಮ್ಯಾಗರಮ್ಯಾಲ..!! ತಲಿಮ್ಯಾರಿ ಮ್ಯಾಲ ಬೇವಿನಮರದ ನೆಳ್ಳ... ಕಾಲದೇಸೀ ಹರದೈತಿ ಜುಳು ಜುಳು ಹಳ್ಳ... ಕುಡಸಾಲ ಕೂಡ್ಯಾವ ಹೀರಿ ಅವರೀಯ ಬಳ್ಳ.. ಹಳಹಳೀ ಬಿಡಿಸೈತೀ ನನ್ನ ಹಳ್ಳೀ.. ಊರ ಮುಂದಿನ ಹೊಲ..!! ✍🏽 ಸಿದ್ದು ನೇಸರಗಿ (ಮೂಗಬಸವ ) ಸಿ ಆರ್ ಪಿ ಆನಿಗೋಳ..🙏ಹಳ್ಳಿಯ ಹಾಡು ಆಸ್ವಾದಿಸಿ ಅಭಿಪ್ರಯಿಸಿ ಮಿತ್ರರೇ..🙏💐💐

ಅರುಣನಾಗಮನದಿ( ಉದಯನ ಹೃದಯ)

ಹೊಳೆಹೊಳೆವ ರವಿಯು ಪಳಪಳನೆ ಬೆಳಗಿಹನು ಧರೆಯ ಹಸಿರಸಿರ ತರುಲತೆಯು ನಳನಳಸಿ ನಗುವಂತೆ ಹೂಮೊಗ್ಗು ಬಿರಿದಿವೆ ದುಂಬಿಗಿಂಬಿ ಝೇಂಕರಿಸಿವೆ ಖಗಮೃಗಗಳು ಸಂತೋಷದಿ ಹಾಡಿಪಾಡಿ ಸಂಭ್ರಮಿಸಿವೆ ರಾಗತಾಳ ಸಮ್ಮಿಲನ ಸಂಗೀತ ಅರುಣ ಕಿರಣ ಇಳೆಗೆ ತಂದ ಸಂಭ್ರಮ ಮಾವುಬೇವು ತೋರಣ ಕಟ್ಟಿ ಹಬ್ಬಹರಿದಿನ ಆಚರಿಸಿದ ಕೃಷಿಕ ದಿನದಿನದ ನಿನ್ನ ಆಗಮನ ಜೀವಜಂತುಗಳಿಗೆ ಸಂಭ್ರಮ ಉದಯ ಹೃದಯ ವಿಶಾಲ ಉಸಿರುಸಿರಲಿ ಬೆರೆತಿಹನು ಜಗವ          ವಿಷ್ಣುಪ್ರಿಯ       (ಪಿ ಎಮ್ ನಿಕ್ಕಮ್ಮನವರ)

ಮಣ್ಣ ಕಣಕಣದಲಿದೆ ಮದ್ದು

ಹಿತ್ತಲ ಗಿಡ ಮದ್ದಲ್ಲ ಎಂದು ಪರಿಭಾವಿಸಿ ಪಾಶ್ಚ್ಯತ್ಯ ಔಷಧಿಗಳ ದಾಸನಾಗಿ ಬೆಳ್ಳಗಿರವುದೆಲ್ಲ ಹಾಲೆಂದು ನಂಬಿ ಮೋಸಹೋಗಿಹೆ ನಿನ್ನ ಅಂತಃಸತ್ವವನು ಮರೆತು ಆರ್ಷಧರ್ಮದ ಋಷಿಮುನಿಗಳನು  ಮೂಢರೆಂದು  ಬಗೆದು ನಿನಗೆ ನೀನೆ ಮೋಸಮಾಡಿಕೊಂಡಿರುವೆ ಆಯುರ್ವೇದದ ಮೂಲ ನಮ್ಮ ಈ ಭರತ ನೆಲ ಮಣ್ಣ ಕಣಕಣದಲಿ ಇದೆ ಮದ್ದು ಎದೆಗುಂದದೆ ನಿಲ್ಲು ಎದ್ದು ದಾಳಿ ನೂರಾದರೂ ಬಾಳಿ ಬದುಕುತಿಹೆವು ನಾವು ವೈರಿಯಿರಲಿ ವೈರಾಣುವಿರಲಿ ಆತ್ಮಸ್ಥೈರ್ಯ ಜೊತೆಗಿರಲಿ ಆಯುರ್ವೇದವ ಅಪ್ಪಿಕೋ ಆರ್ಷಧರ್ಮವ ಆಶ್ರಯಿಸಿಕೋ ಆಯುಷ್ಯವ ವೃದ್ಧಿಸಿಕೋ ಆತ್ಮ ವಿಶ್ವಾಸವ ನೆಚ್ಚಿಕೋ         ವಿಷ್ಣುಪ್ರಿಯ     (ಪಿ ಎಮ್ ನಿಕ್ಕಮ್ಮನವರ)

ಮರಳಿ ಬಾರದಿ ಸಮಯ

ನಗುವುದಾದರೆ ನಕ್ಕುಬಿಡು ಅಳುವುದಾದರೆ ಅತ್ತುಬಿಡು ಸುಃಖ ದುಃಖವಾ ಹಂಚಿಕೋ ಮರೆಯದಿರು ಮರಳಿ ಬಾರದಿ ಸಮಯ|| || ಹಂಚಿಬಿಡು ನಿನ್ನ ನಿಸ್ವಾರ್ಥ ಪ್ರೀತಿಯಾ ವ್ಯಕ್ತಪಡಿಸು ಮನದಾಳದ ಭಾವನೆಗಳನ್ನ ತೋರಿಸು ಭಕ್ತಿಯ ಪರಾಕಾಷ್ಠೆಯನ್ನು ಮರೆಯದಿರು ಮರಳಿ ಬಾರದಿ ಸಮಯ|| || ದೀರ್ಘಕಾಲದ ದ್ವೇಷವಾ ಮರೆತುಬಿಡು ಸುದೀರ್ಘಕಾಲದಿ ಪ್ರೇಮದ ಬೀಜವಾ ಬಿತ್ತಿಬಿಡು ನೋವು ನಲಿವಿನ ಪಯಣ ಸಾಗಲಿ ನಿರಂತರ ಮರೆಯದಿರು ಮರಳಿ ಬಾರದಿ ಸಮಯ|| || ತಂದೆ ತಾಯಿಯ ಸೇವೆಯ ಮರೆಯದಿರು ಗುರು ಹಿರಿಯರ ಆಶೀರ್ವಾದ ಸ್ವಿಕರಿಸು ಸದಾ ಬಂಧು ಬಳಗ ಗೆಳೆಯರಾದಿಯಾಗಿ ಸಂಬಂಧವಾ ಉಳಿಸಿ ಬೆಳೆಸು ಮರೆಯದಿರು ಮರಳಿ ಬಾರದಿ ಸಮಯ|| || ಸಿರಿ ಬಂದಾಗ ಹತ್ತು ಜನರಿಗೆ ಹಂಚಿತಿನ್ನು ಸುಗ್ಗಿಯ ಕಾಲದಿ ಭೂತಾಯಿಯ ನೆನೆದು ಧನ್ಯನಾಗು ಹೂವು ಮುಳ್ಳಿನಾ ಬದುಕಿನಲಿ ತನು-ಮನ-ಧನ ಸಮರ್ಪಿಸು  ಮರೆಯದಿರು ಮರಳಿ ಬಾರದಿ ಸಮಯ|| ||                                                                                      - ಸಂದೀಪ ಕುಲಕರ್ಣಿ

ಬಸವ ಸಂಪದ

ಭವದ ಬಂಧನವ ಹರಿದೊಗೆದು ದಿವಕೆ ಕುಂದಣನಾಗಿ ಹೊಳೆಯುತಿಹ ಬಸವ.. ಅನುಭಾವದ ಆನಂದದಿ ಜಗ ನಂದನವನ ಮಾಡಿದ ಬಸವ ಬಸವನೆಂದರೆ ಬಸವನಲ್ಲ ಸುಜ್ಞಾನದ ಪ್ರಸವ!! ಸರ್ವಶಕ್ತನು ಬಸವ, ಗರ್ವ ಮುಕ್ತನು ಬಸವ, ಭಕ್ತಿ ವರ್ಷವ ಸುರಿದು ಮುಕ್ತಿ ಸ್ಪರ್ಶವ ನೀಡಿದ ಬಸವ, ಯುಗಪುರುಷನು ಬಸವ ಜೀವಪರುಷನು ಬಸವ ಜ್ಞಾನಸಂಗಮನಾದವ ಬಸವ. ಬಸವನೆಂದರೆ  ಬಸವನಲ್ಲ ದೇವಾಂಶ ಸಂಭವ.!! ಸರ್ವಾಂಗವನೇ ಲಿಂಗಮಯ  ಮಾಡಿ, ಇಷ್ಟಲಿಂಗದ ಜಂಗಮನು ಬಸವ, ಗುರು-ಲಿಂಗ-ಜಂಗಮ ಸಂಗಮನಾಗಿ ವಚನ ಸಾಹಿತ್ಯ ಲಾಂಛನ ಬಸವ, ಬಸವನೆಂದರೆ ಬಸವ ನಲ್ಲ ಆತ್ಮದೊಳಗಣ ಶಿವ!! ಕಾಯಕ ಧರ್ಮದ ನಾಯಕ ಬಸವ, ನ್ಯಾಯನೀತಿಗೆ ಪ್ರಭು ಬಸವ, ಕರಣ ಶುದ್ದಿಯ ಸಿದ್ಧ ಸಂಸಾರಿ.. ಧರ್ಮ ಕಾರಣದ ಬ್ರಹ್ಮ ಬಸವ. ಬಸವನೆಂದರೆ ಬಸವ ನಲ್ಲ ನಿತ್ಯ ಕರ್ಮಕ್ಕೆ ವಾಸ್ತವ ಪ್ರಣವ...!! ಶರಣ ಚರಣದ ತರುಣನು ಬಸವ, ಅರುಣ ಕಿರಣದ ತೇಜಪುಂಜ ಬಸವ, ನಿತ್ಯಸತ್ಯದ ಮಾರ್ಗವ ತೋರಿ, ಚಿದಾನಂದ ದ ಮುದ್ದುನಗೆಯ ಮೌನಿ ಬಸವ. ಬಸವನೆಂದರೆ ಬಸವ ನಲ್ಲ ಯುಗದ ಮಹಾನುಭಾವ!! ತಾನು ಹಿರಿಯನಲ್ಲ ಶಿವಭಕ್ತರಿಗಿಂತ ಹಿರಿಯರಿಲ್ಲ ಶರಣಪರಮಾನ್ನ ಬಡಿಸಿದ ಅಣ್ಣ ಬಸವ, ವಿಚಾರಕ್ಕೆ ವೀರ ಆಚಾರಕ್ಕೆ ಅರಸ, ಬಲ ಬಸವ ಹಂಬಲ ಬಸವ, ಬಸವನೆಂದರೆ ಬಸವ ನಲ್ಲ ನಮ್ಮ ಯಶ, ಹಿಂದಿನ ಕಸುವ..!!    - ಸಿದ್ದು ನೇಸರಗಿ ಮೂಗಬಸವ. ಸಿಆರ್ಪಿ ಆನಿಗೋಳ.. 

ವಿಶ್ವಗುರು ಬಸವ

ಬಸವನೆಂಬ ಜಗಜ್ಯೋತಿಯು ವೀರಶೈವನೋ ಪಂಚಮಸಾಲಿಯವನೋ ಮಾನವತೆಯ ತಿರುಳ ಸಾರಲು ಭೂವಿಗವತರಿಸಿದ ಮಹಾಮಾನವನೋ ಜಾತಿಬೇಧವ ಮಿರಿ ನಿಂತ ಮಾನವತಾವದಿಯವನು ಅವನಿಗು ಜಾತಿಯ ಪಟ್ಟ ಕಟ್ಟಿ ಬಂಧನದಲಿರಸ ಹೊರಟ  ಮಹಾಮುರ್ಖರಲ್ಲವೆ ನಾವು ಜಾತಿಧರ್ಮವ ಮೀರಿ ನಿಂತ ಮಹಾಮಹಿಮ ನೀನು ನಿನ್ನ ಹೆಸರಿನಲ್ಲಿ ಜಾತಿಧರ್ಮ ಮೇಲುಕೀಳು ಮಾಡುತಿರುವರು ನಾವು ವಿಶ್ವ ವಂದಿತ ಮನಕುಲದುದ್ದಾರಕ ಸಮಾನತೆಯ ಹರಿಕಾರ ವಚನದಲಿಟ್ಟ ಸಮಾಜದ ಸಾರ ಜಗದ ಜ್ಯೋತಿ ಬಸವನೆಂಬ ಶೂರ           ವಿಷ್ಣುಪ್ರಿಯ       ( ಪಿ ಎಮ್ ನಿಕ್ಕಮ್ಮನವರ)

ಆಸ್ತಿಕತೆಯ ಕಡೆಗೆ

ನೊಂದು ಬೆಂದು ಬೆಂಡಾಗಿಹ ಮನವಿಂದು ಕಾಣದ ಕೈಯ್ಯಾಸರೆ ಬಯಸಿದೆ ನಾಸ್ತಿಕತೆಯ ಕೈ ಚಾಚಿ ತಬ್ಬಿದ ಕರಗಳಿಂದು ಸೋತು ಆಸ್ತಿಕತೆಯ ಬೇರು ಹುಡುಕುತಿದೆ ದೈವಹೀನನಾಗಿ ಬದುಕಿ ಬಾಳಿದ ಪಾಪಕೂಪದಲಿ ಮಿಂದೆದ್ದ ನರನಿಗೆ ಪರಮಗುರಿ ಮೋಕ್ಷವೆಂದು ಮನವರಿಕೆಯಾಗುತಿದೆ ನಂಬಿ ಕರೆದ ನಿನ್ನ ಕೂಗಿಗೆ ದೈವದೊಡಲು ಮರಗದೆ ಶ್ರದ್ದೆ ಭಕ್ತಿಯ ಮೆಚ್ಚದಿರದೇ? ಕರ ಪಿಡಿದು ನಿನ್ನನೆತ್ತದೆ? ಹಮ್ಮುಬಿಮ್ಮಗಳ ತೊರೆದು ಧರ್ಮ ಮಾರ್ಗದಿ ನಡೆದು ನಾಸ್ತಿಕ ಭಾವ ಮರೆದು ಆಸ್ತಕತೆಯು ಮೆರೆಯಲಿ ಆರ್ಯ ಸಂಸ್ಕೃತಿಯ ಅಡಿಯಲಿ ಮನುಕುಲವ ಬಾಳಲಿ              ವಿಷ್ಣುಪ್ರಿಯ (ಪಿ ಎಮ್ ನಿಕ್ಕಮ್ಮನವರ)

ಕನಸ ಹಕ್ಕಿಯ ಬೆನ್ನು ಹತ್ತಿ

ಏಕಾಂಗಿಯಿಗಿಹೆನು ಏಕಿಂದು ನಾನಿಲ್ಲಿ..ನೂಕಿ ನರಳಿಸಿದೆ ಮನೆ ತಾ ಶೂನ್ಯದಲಿ...ಏಕಿನಿತೋ ಕಾಣೆ...ಕಾಣದ ಈ ಬೇನೆ... ಕರುಣಿಸೋ ಪರಮಾತ್ಮಾ..ಕರುಣೆ ಶರಣಾಗಿಹೆನು. ನಿನ್ನ ಚರಣಕೆ...!! ಕಾಣದಾ ಹಣೆಬರಹದ ನೆರಿಗೆಯ ನಂಬಿ ಸುರಿದಿದೆ ಬೆವರು ಸುರಗೀ... ತಿರುತಿರುಗಿದಂತೆ ತಂದು ನಿಲ್ಲಿಸುತಿದೆ..ತಾ ಹೊರಟ ಸ್ಥಳಕೆ..ಭ್ರಮೆಯ ಗಿರಕಿಯಂತೆ.. ನಂಬಿಹೆನು ನಿನ್ನನು ನಿಜ ದಾರಿ ತೋರು ಆದರೇನಂತೆ....!! ಆಸೆಯೆಂಬ ಸಾಕುನಾಯಿ ಓಡುತಿದೆ...ಓಡುತಿದೆ.. ನಾಲಿಗೆ ಹರಿಬಿಟ್ಟು ದಾರಿಯಲಿ.. ಬಿಸಿಲಗುದುರೆಯ ತೊಗಲು ನೆಕ್ಕುವ ತೆವಲು ತೀಟೆಯಲಿ...ಸೋತು ತೇಕುತಿದೆ...!! ಬಯಕೆ ಬಣವಿಗೆ ಬೆಂಕಿ ಬಿದ್ದಿದೆ ಬವಣೆ ಬಾಯಿತೆರೆದು ಬೊಬ್ಬಿಡುತಿದೆ..ಭಯದ ನಾಲಿಗೆ ಬೆಂಕಿ ಜ್ವಾಲೆ ಆಸೆ ಲಂಕೆಯ ದಹಿಸಿದೆ...ದಹಿಸಿ ಸಹಿಸಿ ದುರಾಸೆ ಈಗ ಬೂದಿಯಾಗಿದೆ..!! ದೂರದಲ್ಲಿ ಗಿಡುಗನೊಂದು ಬೇಟೆಗಾಗಿ ದುರುಗುಟ್ಟಿದೆ.. ಕಣ್ಣಸನ್ನೆಯ ಕನಸಹಕ್ಕಿ ಕರೆದು, ಮುಗಿಲಮರೆಗೆ ಮಾಯವಾಗಿದೆ...ಗುರುತು ಸಿಗದ  ನೋವ ನವೆಯು ಗಾಯವಾಗಿದೆ...!! ಮನದ ಕ್ಲೇಶ ಹಗಲುವೇಷ ತೊಡೆವ ಮಾರ್ಗ ಹೇಳಿಕೊಡು ಪ್ರಭುವೇ..ಮಾಯಕವಚ ಮೋಹಪಾಶ ಹರಿದು ಬಿಡು ಪ್ರಭುವೇ..ನನ್ನ ನಾನು ಅರಿವ ದಾರಿ ತೋರಿ ಬಿಡು ಗುರುವೇ..!!                - ಸಿದ್ದು ನೇಸರಗಿ ಮೂಗಬಸವ .ಸಿ ಆರ್ ಪಿ