ಭಾರತ ಪ್ರಾಚೀನ ಕಾಲದಿಂದಲೂ ಅಂದರೆ ಸಿಂಧೂ ನಾಗರೀಕತೆ ಅಂತ ಕರೆಯುತ್ತೇವಲ್ಲಾ, ಅಂದಿನಿಂದಲೂ ವಿದೇಶಗಳೊಂದಿಗೆ ವ್ಯಾಪಾರ ವಹಿವಾಟು ಹೊಂದಿರುವ ದೇಶವಾಗಿದೆ. ಅಪಾರ ಸಂಪತ್ತಿನಿಂದ ಕಂಗೊಳಿಸುತ್ತಿದ್ದ ನನ್ನ ರಾಷ್ಟ್ರದ ಮೇಲೆ ಹಲವು ಬಾರಿ ವಿದೇಶಿ ಆಕ್ರಮಣಗಳಾಗಿವೆ. ಆದರೆ ಅವೆಲ್ಲವೂ ಕಣ್ಣಿಗೆ ಕಾಣುವ ಯುದ್ಧಗಳಾಗಿದ್ದವು. ಇನ್ನು ಮುಂದೆ ನಡೆಯುವ ಮಹಾಯುದ್ಧವು ನೀರಿಗೋಸ್ಕರವೇ ಎಂದು ಹೇಗೆ ಅಂದಾಜಿಸಿದ್ದರೋ ಹಾಗೆಯೆ ಜೈವಿಕ ಯುದ್ಧವನ್ನೂ ಬಹುತೇಕರು ಅಂದಾಜಿಸಿದ್ದರು. ಈಗ ನಡೆಯುತ್ತಿರುವುದನ್ನು ನೋಡಿದರೆ ಆ ಊಹಾತ್ಮಕವಾದದ್ದೇ ಈಗ ಪ್ರತ್ಯಕ್ಷ ವಿದ್ಯಮಾನ ಎಂದೆನಿಸದೆ ಇರದು. ಹೌದು ಓದುಗರೆ ನನ್ನ ಭಾರತದ ಮೇಲೆ..ವೈರಿ ರಾಷ್ಟ್ರದ ವೈರಾಣು ದಾಳಿಯಾಗಿದೆ ಎಂದೆನಿಸುತ್ತಿದೆ. ಓಡುತ್ತಿರುವ ಎನ್ನ ದೇಶದ ಕಾಲು ಮುರಿಯುವ ಹುನ್ನಾರವಿದ್ದಂತೆ ತೋರುತ್ತಿದೆ. ಇದರಲ್ಲಿ ದುಷ್ಟರು ಸಫಲವಾದಂತೆಯೂ ತೋರುತ್ತಿದೆ. ನನ್ನ ರಾಷ್ಟದ ಹಲವು ಮನೆಗಳಿಗೆ ನುಗ್ಗಿ ಮನೆ ಬೆಳಗುವ ನಂದಾದೀಪಗಳನ್ನೇ ಆರಿಸಿಬಿಟ್ಟಿದೆ ಈ ದುರುಳ ವೈರಸ್. ಬೀದಿ ಬದಿಗಳಲಿ ಹುಳುಗಳಂತೆ ಒದ್ದಾಡಿ ಜೀವ ಬಿಡುವ ಜನರ ದೃಶ್ಯಗಳಂತೂ ಮನಕಲುಕುತ್ತಿವೆ. ಎಷ್ಟೋ ತಾಯಂದಿರು ತಮ್ಮ ಕುಂಕುಮಸೌಭಾಗ್ಯವನ್ನು ಕಳೆದುಕೊಂಡಿದ್ದಾರೆ, ಅದೆಷ್ಟೋ ಮಕ್ಕಳು ಅನಾಥರಾಗಿದ್ದಾರೆ. ಹಿರಿಯ ಜೀವಗಳ ಪಾಡಂತೂ ಹೇಳತೀರದಾಗಿದೆ. ಇಂತಹ ಪರೋಕ್ಷ ಯುದ್ಧದಲ್ಲಿ ಬಲಿಪಶುಗಳಾಗುತ್ತಿದ್ದಾರೆ ನನ್ನ ಜನ. ಈ ಬಲಿಷ್ಠ ವೈರಸ್ ಸಹಜವಾಗಿಯೇ ಸೃಷ್ಠಿಜನ್ಯವಾದದೆಂದು ಎನಿಸುತ್ತಿಲ್ಲ. ಒಟ್ಟಿನಲ್ಲಿ ಹೋರಾಡುತ್ತಿದ್ದಾರೆ. ಬದುಕಿಗಾಗಿ ಹೋರಾಡಲೇ ಬೇಕಾಗಿದೆ.
ಹೋರಾಟದ ರೂಪುರೇಷೆ ಯಾವುದು?
ಓ ನನ್ನ ದೇಶದ ಮುಗ್ಧ ಪ್ರಜೆಗಳೇ ಉಳಿವಿಗಾಗಿ ಹೋರಾಟ ನಡೆಸಬೇಕಾಗಿದೆ. ಒಮ್ಮೆ ನಮ್ಮ ಪೂರ್ವಿಕರ ಜೀವನಶೈಲಿಯನ್ನು ನೆನೆಯಿರಿ..ನಮ್ಮ ದೇಶದಲ್ಲಿ ಆಗಾಗ ವಕ್ಕರಿಸುತ್ತಿದ್ದ ಪ್ಲೇಗ್,ಕಾಲರಾದಂತಹ ಸಹಜರೋಗಗಳು ಬಂದಾಗ ಪೂರ್ವಿಕರು ಅನುಸರಿಸುತ್ತಿದ್ದ ಮಾರ್ಗಗಳಾವವು? ಸ್ಮರಿಸಿಕೊಳ್ಳಿರಿ ಬಾಂಧವರೆ..ಸ್ಮರಿಸಿಕೊಳ್ಳಿ. ಈ ಯುದ್ಧದಲ್ಲಿ ನಾನು ಉಳಿಯಬೇಕು, ನಮ್ಮವರು ಉಳಿಯಬೇಕೆಂದು ಬಯಸದೇ ನನ್ನ ದೇಶವುಳಿಯಬೇಕೆಂಬ ಭಾವನೆಯಿರಲಿ. ಖಡ್ಗ ಹಿಡಿದು ಮೈದಾನದಲ್ಲಿ ಶಕ್ತಿ ತೋರಿಸುವ ಯುದ್ಧವಲ್ಲವಿದು. ಇದು ಜ್ಞಾನದ ಯುದ್ದ, ಪಂಚತಂತ್ರ ಕಥೆ ಕೇಳಿ ಬೆಳೆದವರು ನಾವು..ಶಕ್ತಿಗಿಂತ ಯುಕ್ತಿ ಮೇಲೆನ್ನುವುದು ತಿಳಿದಿಲ್ಲವೇನು? ಅನಾವಶ್ಯಕವಾಗಿ ತಿರುಗಿ ವೈರಾಣು ಸೋಂಕಿಗೊಳಗಾಗಿ ಇತರರಿಗೂ ಹರಡಿ ನನ್ನವರನ್ನು ನಾನೇ ಕೊಲ್ಲಬೇಕೆ? ಸುಮ್ಮನಿರಿ..ತಾಯಿ ಭಾರತಾಂಬೆಯನ್ನು ಬಂಧನದಿಂದ ಮುಕ್ತಗೊಳಿಸ ಬಯಸುವಿರೆನ್ನುವವರಾದರೆ ಸುಮ್ಮನೆ ಮನೆಯಲ್ಲಿದ್ದು ಬಿಡಿ. ಮಾಸ್ಕ ಧರಿಸಿ, ಕೈಗಳ ಶುಚಿತ್ವವನ್ನು ಕಾಪಾಡಿಕೊಳ್ಳಿ.
ಹೋರಾಟ ವಿಫಲವಾಗುತ್ತಿರುವುದೇಕೆ?
ಕಣ್ಣಿಗೆ ಕಾಣದ ವೈರಾಣುವಿನೊಂದಿಗಿನ ಹೋರಾಟ ವಿಫಲವಾಗುತ್ತಿರುವುದೇಕೆ ಎಂದರೆ ಅಜ್ಞಾನ. ಹೌದು ಅದೆಷ್ಟೋ ಜನರು ಕೊರೋನಾ ರೋಗವೇ ಇಲ್ಲವೆಂದು ಹೇಳಿಕೊಂಡು ತಿರುಗುತ್ತಿದ್ದಾರೆ. ಇದೊಂದು ದುಡ್ಡುಗಳಿಸುವ ಸರ್ಕಾರದ ತಂತ್ರವೆಂದು ಉಡಾಫೆ ಮಾಡುತ್ತಿದ್ದಾರೆ. ಕಣ್ಣಿಗೆ ಕಾಣದ ದೇವರನ್ನು ನಂಬುವವರು ಆಸ್ತಿಕರಾದರೆ ನಂಬದವರು ನಾಸ್ತಿಕವೆಂಬಂತೆ ಈ ವೈರಸ ಇದೆ ಎಂದು ನಂಬುವವರನ್ನು ಕೊರಾಸ್ತಿಕವೆಂತಲೂ ನಂಬದವರನ್ನು ಕೊರೋನಾಸ್ತಿಕವೆಂತಲೂ ಕರೆಯಬಹುದೆನಿಸುತ್ತದೆ. ಓ ಅಣ್ಣ ತಮ್ಮಂದಿರಾ ಸಾವಿನ ಬೆಲೆ ತಿಳಿಯಬೇಕಾದರೆ ಸತ್ತವನ ಮನೆಗೆ ಹೋಗಿ ಕೇಳಿ. ಇಡೀ ಪ್ರಪಂಚವೇ ಮೂರ್ಖ, ನಾನೊಬ್ಬನೇ ಮಹಾಜಾಣನೆಂಬ ಅಹಂದಿಂದ ಹೊರಬನ್ನಿ.
ವ್ಯಾಪಾರಸ್ಥರೇ ನಿಮ್ಮ ದೋಚುವ ಬುದ್ಧಿಯನ್ನು ಬಿಟ್ಟುಬಿಡಿ. ಇದು ಸಂಧರ್ಭವಲ್ಲ. ದೇಶ ಕಟ್ಟಲು ಶ್ರಮಿಸಿದ, ಗಲ್ಲುಗಂಬಕ್ಕೆ ಶರಣಾದ ಹೋರಾಟಗಾರರನ್ನೊಮ್ಮೆ ನೆನಪಿಸಿಕೊಳ್ಳಿ. ನಿಮ್ಮೊಳಗೆ ಸತ್ತುಬಿದ್ದಿರುವ ಮನುಷ್ಯತ್ವವನ್ನು ಎಚ್ಚರಗೊಳಿಸಿ. ಎಲ್ಲರೂ ಬದುಕಬೇಕಾಗಿದೆ. ಉಳ್ಳವರೇ ಇಷ್ಟು ದಿನ ದೋಚಿ ಸುಲಿಗೆ ಮಾಡಿದ್ದು ಸಾಕು ಇನ್ನಾದರೂ ಸುಧಾರಿಸಿಕೊಳ್ಳಿ. ನಿಮ್ಮ ನಿಮ್ಮ ಪಾಪಗಳನ್ನು ತೊಳೆದುಕೊಳ್ಳಲು ಪ್ರಯತ್ನಿಸಿ.
ವೈದ್ಯರೇ, ದಾದಿಗಳೇ ಈ ಹೋರಾಟದಲ್ಲಿ ನೀವೆಲ್ಲರೂ ಪ್ರತ್ಯಕ್ಷವಾಗಿ ಪಾಲ್ಗೊಂಡ ವೀರಸೈನಿಕರು. ನಿಮ್ಮ ಈ ಶೌರ್ಯ ಸೇವಾ ಭಾವನೆಯನ್ನು ಜನ ಎಂದಿಗೂ ಮರೆಯುವುದಿಲ್ಲ.ಹಾಗೆಯೇ ಹಣದೋಚಲು ನಿಂತಿರುವವರನ್ನೂ ಮರೆಯುವುದಿಲ್ಲ ನೆನಪಿರಲಿ. ಆಕ್ಸಿಜನ್ ಮಾಫಿಯಾ, ಬೆಡ ಬ್ಲಾಕಿಂಗ್ ಮಾಫಿಯಾ, ರೆಮ್ಡಿಶಿವಿಯರ್ ಕಾಳ ಸಂತೆ, ಅಂಬುಲೆನ್ಸ್ ಚಾಲಕರಿಂದ ಸುಲಿಗೆ ಹೇಳುತ್ತಾ ಹೋದರೆ ಅಸಹ್ಯವಾಗುತ್ತೆ. ಇದಾವುದೂ ನನ್ನ ಹಳ್ಳಿಯ ಜನರಿಗೆ ಗೊತ್ತಾಗುವುದಿಲ್ಲ. ಯಾರದೋ ಹೆಣದ ಮೇಲೆ ಗಳಿಸಿದ ರಕ್ತಸಿಕ್ತವಾದ ಹಣದಿಂದ ನೀವು ಬಂಗಲೆ ಕಟ್ಟಿಸಬಹುದು. ಹುಷಾರ್ ಅದರ ತುಂಬ ಮುಂದೆ ಭೂತಗಳೇ ವಾಸಿಸಬಹುದು. ಬೀಳುವವನನ್ನು ಎದ್ದು ನಿಲ್ಲಿಸುವ ಕೈಗಳ ಅವಶ್ಯಕತೆಯಿದೆ. ಆದರೆ ಬೀಳುತ್ತಾನೆಂದರೆ ಅವನನ್ನು ತುಳಿದುಬಿಡುವ ಈಗಿನ ವ್ಯವಸ್ಥೆ ಬದಲಾಗಬೇಕಾಗಿದೆ.
ಹೋರಾಟದ ನಂತರ ಬದುಕುಳಿದರೆ
ನನ್ನ ಭಾರತದ ಪ್ರಜೆಗಳು ಮುಗ್ಧರು. ಮೂರನೇ ಅಲೆ, ನಾಲ್ಕನೇ ಅಲೇ ಇನ್ನೂ ಅದೆಷ್ಟೋ ಅಲೆಗಳಿವೆಯೋ ನಾ ಕಾಣೆ. ಈ ವೈರಸವ್ಯೂಹದಿಂದ ಬದುಕುಳಿದರೆ? ಬದುಕುಳಿದೆ ಉಳಿಯುತ್ತೆವೆಂಬ ಭರವಸೆಯಿರಲಿ. ಬದುಕುಳಿದರೆ ಅಲ್ಲಿಗೆ ಈ ಹೋರಾಟ ಅಂತ್ಯವಾಗುವುದಿಲ್ಲ ಸ್ನೇಹಿತರೆ. ಮುಂದೆ ಪ್ರಾರಂಭಿಸಬೇಕಾಗಿರುವುದು ಬಲವಾದ ಆಂದೋಲನ. ಹೌದು ಬಂಧನಕ್ಕೊಳಗಾಗಿ ದೇಶದ ಆರ್ಥಿಕತೆ ಕುಸಿದಿದೆ ಬಂಧುಗಳೇ..ಅದನ್ನು ಪುನಶ್ಚೇತನಗೊಳಿಸುವುದು ಜವಾಬ್ಧಾರಿಯಾಗಬೇಕು. ಇದು ನಮಗೆ ಸಂಬಂಧಿಸಿದಲ್ಲ, ಸರ್ಕಾರ ನೋಡುತ್ತದೆ ಬಿಡಿ ಅಂತ ಅಂತಿರೇನು? ಇಲ್ಲ ಸ್ಬೇಹಿತರೇ ವಿದೇಶಿ ವಸ್ತುಗಳ ಬಹಿಷ್ಕಾರ..ದೇಶಿ ವಸ್ತುಗಳ ಸ್ವೀಕಾರದ ಆಂದೋಲನ ನಡೆಯಬೇಕು. ಅದರಲ್ಲೂ ಚೀನಿ ವಸ್ತುಗಳನ್ನು ಪ್ರತಿಯೊಬ್ಬರೂ ಕನಸಿನಲ್ಲಿಯೂ ಕೊಳ್ಳಬಾರದು. ಸಾವು ನೋವುಗಳಿಗೆ ಕಾರಣವಾದ ಅವರ ತಿಜೋರಿ ತುಂಬಿಸುತ್ತಿರೇನು? ಅದೇ ಹಣದಿಂದ ಮತ್ತೊಂದು ಯುದ್ಧಹೂಡಿಯಾರು ಆ ಸೋಗಲಾಡಿಗಳು.ಹಾಗಾಗಿ ವ್ಯಾಪಾರಿಗಳು ಯಾವುದೇ ಕಾರಣಕ್ಕೂ ವಿದೇಶಿ ವಸ್ತುಗಳನ್ನು ಮಾರುವುದಿಲ್ಲವೆಂದೂ ಹಾಗೂ ಗ್ರಾಹಕರು ಪುಕ್ಕಟ್ಟೆಯಾಗಿ ಕೊಟ್ಟರೂ ನನಗೆ ವಿದೇಶಿ ವಸ್ತುಗಳು ಬೇಡವೆಂದು ಭೀಷ್ಮ ಪ್ರತಿಜ್ಞೆ ಮಾಡಬೇಕು.
ಕರೋನಾ ನಂತರದ ಸಮಸ್ಯೆಗಳು
ದುಡಿಯುವಂತಹ ಅಪಾರ ವರ್ಗ ಸಾವಿಗೀಡಾಗುತ್ತಿದೆ. ಇದರಿಂದ ಕುಟುಂಬಗಳ ಆದಾಯ ಕುಸಿತಗೊಂಡು ಬಡತನವು ಹೆಚ್ಚಾಗಬಹುದು. ಹೀಗೆ ದೇಶ ಆರ್ಥಿಕತೆಯಲ್ಲಿ ಸುಮಾರು ಮೂವತ್ತು ವರ್ಷದಷ್ಟು ಹಿಂದಕ್ಕೆ ಹೋಗಬಹುದು.
ದಿನಬಳಕೆಯ ವಸ್ತುಗಳು ಈಗಿನಷ್ಟು ಸುಲಭವಾಗಿ ಕೈಗೆಟುಕದಿರಬಹುದು.
ದೇಶದ ಶಿಕ್ಷಣ ವ್ಯವಸ್ಥೆಯ ಸಮತೋಲನ ತಪ್ಪಬಹುದು. ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆಯ ಕೊರತೆಯಿಂದ ಬಾಲಾಪರಾಧಿಗಳ ಸಂಖ್ಯೆ ಹೆಚ್ಚಬಹುದು.
ಈಗಾಗಲೇ ಸಾಕಷ್ಟು ಸರ್ಕಾರಿ ನೌಕರರು ಕೋವಿಡ್ ಗೆ ಬಲಿಯಾಗುತ್ತಿರುವುದರಿಂದ ಉಳಿದವರ ಮೇಲೆ ಕಾರ್ಯದೊತ್ತಡ ಜಾಸ್ತಿಯಾಗಿ ಸಕಾಲಕ್ಕೆ ಸೇವೆ ದೊರೆಯದೇ ಹೋಗಬಹುದು.
ಈಗ ತುರ್ತಾಗಿ ಮಾಡಬೇಕಾಗಿರುವುದೇನು?
ಜನರ ಹುಚ್ಚಾಟ ನಿಲ್ಲಬೇಕು. ಮುಗಿಬಿದ್ದು ತರಕಾರಿ ಹಾಗೂ ಇತರೆ ಅವಶ್ಯಕ ಸಾಮಗ್ರಿಗಳನ್ನು ಖರೀದಿಸುವುದನ್ನು ತಪ್ಪಿಸಬೇಕು. ಎಲ್ಲರೂ ಮನೆಯಲ್ಲಿದ್ದು, ಫೋನ್ ಮೂಲಕ ಆರ್ಡರ್ ಅಥವಾ ಸಂಚಾರಿ ಮಾರುಕಟ್ಟೆಗಳನ್ನು ಸ್ಥಾಪಿಸುವುದರ ಮೂಲಕ ಜನರಿಗೆ ಅವಶ್ಯಕ ಸಾಮಗ್ರಿಗಳನ್ನು ತಲುಪಿಸುವುದಾಗಬೇಕು.ಮನೆ ಮನೆಗೂ ಬಂದು ಅದೇ ಕಾಯಿಪಲ್ಲೆಯ ಕಸ ಎತ್ತಿಕೊಂಡು ಹೋಗುವ ಸರ್ಕಾರಕ್ಕೆ ಕಾಯಿಪಲ್ಯೆ ತಲುಪಿಸುವುದು ಖಂಡಿತ ಕಷ್ಟವಾಗಲಾರದು.
ಕೆಲವು ವ್ಯಾಪಾರಿಗಳು ಕಳ್ಳಮಾರ್ಗದಿಂದ ಮಾರಾಟ ಮಾಡಲು ಹೋಗಿ ಜನರನ್ನು ಗುಂಪಾಗಿಸಿ ಕರೋನಾ ಹಬ್ಬಲು ಕಾರಣೀಕರ್ತರಾಗುತ್ತಿದ್ದಾರೆ. ಅಂತಹ ಅಪಾಯಕಾರಿ ಮಾರ್ಗಗಳನ್ನು ಕೈಬಿಟ್ಟು ಜೀವ ಉಳಿಸಿಕೊಳ್ಳುವುದು ಎಲ್ಲರ ಮೊದಲ ಆದ್ಯತೆಯಾಗಬೇಕು.
ಮೂರನೇ ಅಲೆಯಲ್ಲಿ ಮುದ್ದು ಮಕ್ಕಳನ್ನು ಉಳಿಸಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ಊರಿಗೂರೆ ಸುಡುಗಾಡು ಮಾಡುವ ಪ್ರಸ್ತುತ ನಡುವಳಿಕೆಯನ್ನು ಬಿಟ್ಟು ಬಿಡೋಣಾ..ಒಂದಷ್ಟು ತ್ಯಾಗ ನಾವೂ ಮಾಡಲು ಕಲಿಯೋಣ. ನೀರಾಂಬಲಿ ಕುಡಿದಾದರೂ ಬದುಕೋಣ..ಮಕ್ಕಳನ್ನು ಬದುಕಿಸೋಣಾ ಎಂಬ ಗಟ್ಟಿ ನಿರ್ಧಾರ ಮಾಡಬೇಕಾಗಿದೆ.
ಪ್ರತಿಜ್ಞಾವಿಧಿ: ಭಾರತದ ಜವಾಬ್ದಾರಿಯುತ ಪ್ರಜೆಯಾದ ನಾನು ಈ ವಿಷಮ ಗಳಿಗೆಯಲ್ಲಿ ನನ್ನವರನ್ನು ಹಾಗೂ ನನ್ನ ದೇಶವನ್ನುಳಿಸಲು ಸ್ವಯಂ ಲಾಕಡೌನಗೆ ಒಳಗಾಗುತ್ತೇನೆ. ಬಡವರಿಗೆ ಕೈಲಾದ ಸಹಾಯ ಒದಗಿಸುವುದರೊಂದಿಗೆ ಬದುಕಿಗೆ ಭರವಸೆಯಾಗಿ ನಿಲ್ಲುತ್ತೇನೆ. ಇತರರಿಗೂ ಅರಿವು ಮೂಡಿಸಿ ಈ ಯುದ್ಧದಲ್ಲಿ ಗೆಲ್ಲಲು ಸ್ವಯಂ ಅರಿವಿನ ಸಿಪಾಯಿಯಾಗುತ್ತೇನೆಂದು ಭಾರತಾಂಬೆ/ ಭಗವದ್ಗೀತೆ/ಬೈಬಲ್/ಕುರಾನ/ ಹೆತ್ತ ತಾಯಿ ಸಾಕ್ಷಿಯಾಗಿ ಪ್ರಮಾಣ ಮಾಡುತ್ತೇನೆ.
ಎನ್ನ ಪ್ರೀತಿಯ ಬಾಂಧವರೆ..ಭಾರತವನ್ನು ಬೃಂದಾವನ ಮಾಡುವ ಮತ್ತು ಸ್ಮಶಾನವಾಗಿ ಮಾಡುವ ಆಯ್ಕೆ ನಿಮ್ಮ ಕೈಯಲ್ಲಿದೆ. ಧನ್ಯವಾದಗಳೊಂದಿಗೆ ಜನಜಾಗೃತಿಗಾಗಿ
ಶ್ರೀ ಆನಂದ ಮಾಲಗಿತ್ತಿಮಠ
ಸಾಹಿತಿಗಳು ಬೈಲಹೊಂಗಲ
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ