ಹಲ್ಮಿಡಿ,ಬಾದಾಮಿ,ಐಹೊಳೆ ಹಾಗೂ ಅಲಹಾಬಾದ ಶಾಸನಗಳು
ಹಲ್ಮಿಡಿ ಶಾಸನ
ಕನ್ನಡದಲ್ಲಿ ಲಭ್ಯವಾದ ಶಾಸನಗಳಲ್ಲಿ ಪ್ರಾಚೀನವಾದ ಶಾಸನ ಹಲ್ಮಿಡಿ ಶಾಸನ. ಇದರ ಕಾಲ ಕ್ರಿ.ಶ.೪೫೦. ಇದು ಕದಂಬರ ಕಾಕುಸ್ಥವರ್ಮನಿಂದ ರಚಿಸಲ್ಪಟ್ಟಿದೆ.
ಈ ಶಾಸನದಿಂದ ತಿಳಿದು ಬರುವುದೇನೆಂದರೆ ಕನ್ನಡ ಮತ್ತು ಸಂಸ್ಕೃತ ಸಂಬಂಧವು ಕ್ರಿ.ಶ ೪೫೦ ಕ್ಕಿಂತ ಪೂರ್ವದಲ್ಲಿಯೇ ಆರಂಭವಾಗಿತ್ತು.
ಜನಬಳಕೆಯಲ್ಲಿ ಶುದ್ಧ ಕನ್ನಡ ಬಳಕೆಯಿದ್ದರೂ ಪಂಡಿತರು ಸಂಸ್ಕೃತವನ್ನು ಬಳಸುತ್ತಿದ್ದರು.
ಈ ಹೊತ್ತಿಗಾಗಲೇ ಕನ್ನಡವು ವ್ಯಾಕರಣವನ್ನು ಅಳವಡಿಸಿಕೊಂಡು ಚೆನ್ನಾಗಿ ಬಲಿತ ಭಾಷೆಯಾಗಿತ್ತು.
ಈ ಶಾಸನದ ಸಾರಾಂಶ
ಕದಂಬ ವಂಶಸ್ಥ ಅರಸು ಕಾಕುಸ್ಥವರ್ಮನ ಆಳ್ವಿಕೆಯಲ್ಲಿ ಎಲ್ಲ ಭಟಾರಿಯ ಮಗನಾದ ವಿಜ ಅರಸನಿಗೆ, ಅವನ ಸಮರ ಶೌರ್ಯದ ಪ್ರದರ್ಶನಕ್ಕಾಗಿ ಹಲ್ಮಿಡಿ ಮತ್ತು ಮೂಳವಳ್ಳಿಗಳನ್ನು ಬಾಳ್ಗಳ್ಚಗಾಗಿ ದಾನವಾಗಿ ನೀಡಲಾಗಿದೆ.
ಬದಾಮಿ ಶಾಸನ ( ಕ್ರಿ.ಶ.ಸು.೭೦೦)
ಕಪ್ಪೆ ಅರಭಟ್ಟನೆಂಬ ಮಾಂಡಲಿಕನ ಸ್ವಭಾವ ಚಿತ್ರಣವನ್ನು ಇದರಲ್ಲಿ ಬಿಂಬಿಸಲಾಗಿದೆ. ಕನ್ನಡ ಛಂದಸ್ಸಿನ ತಾಯಿ ಬೇರಾದ ತ್ರಿಪದಿಯ ಮೊಟ್ಟ ಮೊದಲನೇ ರೂಪವು ಅದರಲ್ಲಿದೆ.
ಸಾಧುಗೆ ಸಾಧು ಮಾಧೂರ್ಯ್ಯನ್ಗೆ ಮಾಧೂರ್ಯಂ
ಬಾಧಿಪ್ಪ ಕಲಿಗೆ ಕಲಿಯುಗವಿಪರೀತನ್
ಮಾಧವನೀತನ್ಪೆರನಲ್ಲ
ಇದರ ತಾತ್ಪರ್ಯ ಈ ರೀತಿಯಾಗಿದೆ ಕಪ್ಪೆ ಅರಭಟ್ಟನು ಶಾಂತಿಪ್ರಿಯರಿಗೆ ಶಾಂತಿದೂತನಾಗಿ ಸ್ನೇಹಕ್ಕೆ ಸ್ನೇಹಿತನಾಗಿ ಹಾಗೂ ವೈರಿಗಳಿಗೆ ಅರಿಭಯಂಕರನಾಗಿ ವರ್ತಿಸುವಂತಹವನು.
ಶ್ರವಣಬೆಳಗೊಳದಲ್ಲಿ ದೊರೆತ ಹಲವಾರು ಶಾಸನಗಳಲ್ಲಿ ಕನ್ನಡ ಭಾಷೆ ಮಾಧ್ಯಮವಾಗಿರುವುದಕ್ಕೆ ಹಲವಾರು ನಿದರ್ಶನಗಳಿವೆ.
ಅಲಹಾಬಾದ್ ಶಾಸನ
ಈ ಶಾಸನ ರಚಿಸಿದವನು ಹರಿಷೇನ. ಈತ ಸಮುದ್ರಗುಪ್ತನ ಆಸ್ಥಾನ ವಿದ್ವಾಂಸ. ಇದರಲ್ಲಿ ಸಮುದ್ರಗುಪ್ತನ ಸೈನಿಕ ಸಾಧನೆಯ ವಿವರಗಳಿವೆ. ಇದು ಪ್ರಾರಂಭದಲ್ಲಿ ಕೌಸಂಬಿಯ ಬಳಿಯಿತ್ತು ಹಾಗೂ ಅಶೋಕನ ಶಾಸನವಾಗಿತ್ತು. ಇದೇ ಶಾಸನದ ಮತ್ತೊಂದು ಬದಿಯಲ್ಲಿ ಸಮುದ್ರಗುಪ್ತನ ಶಾಸನವನ್ನು ರಚಿಸಲಾಯಿತು. ಇದು ಮೂವತ್ಮೂರು ಸಾಲುಗಲನ್ನೊಳಗೊಂಡ ಬೃಹತ್ ವಾಕ್ಯವಾಗಿದೆ. ಇದರಲ್ಲಿ ಸಮುದ್ರಗುಪ್ತನು ಉತ್ತರ ಭಾರತದಲ್ಲಿ ಜಯಿಸಿದ ದೊರೆಗಳ ಹೆಸರುಗಳನ್ನು ಹಾಗೂ ಅಡವಿ ರಾಜ್ಯಗಳನ್ನು ಮತ್ತು ದಕ್ಷಿಣ ಭಾರತದಲ್ಲಿ ಆತ ಜಯಿಸಿದ ಸುಮಾರು ಹನ್ನೆರಡು ದೊರೆಗಳ ಹೆಸರುಗಳು ಹಾಗೂ ಆ ದೊರೆಗಳು ಯಾವ ಯಾವ ರಾಜ್ಯಗಳನ್ನು ಆಳುತ್ತಿದ್ದರು ಎಂಬುವುದನ್ನು ಸ್ಪಷ್ಟವಾಗಿ ತಿಳಿಸುತ್ತದೆ.
ಉದಾ:- ಕಂಚಿಯ ವಿಷ್ಣುಗೋಪ,ಯಾರಂಡಪಳ್ಳಿಯ ದಮನ, ವೆಂಗಿಯ ಹಸ್ತಿವರ್ಮ ಮುಂತಾದ ದೊರೆಗಳ ಹಾಗೂ ರಾಜ್ಯಗಳ ವಿವರಣೆ ಇದೆ. ಅಲ್ಲದೇ ಗಣರಾಜ್ಯಗಳ ಹೆಸರುಗಳನ್ನು ತಿಳಿಸುತ್ತದೆ. ಇದರಲ್ಲಿ ಸಮುದ್ರಗುಪ್ತನನ್ನು ಕವಿರಾಜ ಎಂದು ಸಂಭೋಧಿಸಲಾಗಿದೆ. ಅವನ ಸಂಗೀತ ಪ್ರೌಢಿಮೆಯನ್ನು ತುಂಬು ನಾರದನಿಗೂ ಅವನ ಬುದ್ಧಿ ಕೌಶಲವನ್ನು ದೇವತೆಗಳ ದೇವನಾದ ಬ್ರಹಸ್ಪತಿಗೂ ಹೋಲಿಸಲಾಗಿದೆ. ಫಿರೋಜ ಷಾ ತುಗಲಕನ ಕಾಲದಲ್ಲಿ ಈ ಶಾಸನವನ್ನು ಕೌಸಂಬಿಯಿಂದ ಅಲಹಾಬಾದಿಗೆ ವರ್ಗಾಯಿಸಲಾಯಿತು.
ಐಹೊಳೆ ಶಾಸನ
ಈ ಶಾಸನವು ಇಮ್ಮಡಿ ಪುಲಿಕೇಶಿಯ ಕಾಲದ್ದು. ಬಾಗಲಕೋಟೆ ಜಿಲ್ಲೆಯ ಐಹೊಳೆಯ ಮೇಗುತಿ ಎಂಬ ದೇವಾಲಯದ ಭಿತ್ತಿಯಲ್ಲಿ ಇದರ ರಚನೆಯನ್ನು ಕಾಣಬಹುದು. ಇಮ್ಮಡಿ ಪುಲಕೇಶಿಯ ಆಸ್ಥಾನ ಕವಿಗಳಾದ ರವಿಕೀರ್ತಿಯು ಇದರ ರಚನೆಕಾರ. ಈ ಶಾಸನದಲ್ಲಿ ಐಹೊಳೆಯನ್ನು ಆರ್ಯಪುರವೆಂದು ಕರೆಯಲಾಗಿದೆ.
ನಿಮ್ಮ ಓದುವಿಕೆಯನ್ನು ಪರೀಕ್ಷಿಸಿ
1) ಕನ್ನಡದ ಪ್ರಾಚೀನ ಶಾಸನ ಯಾವುದು?
2) ಹಲ್ಮಿಡಿ ಶಾಸನವು ಯಾರಿಂದ ರಚಿಸಲ್ಪಟ್ಟಿದೆ?
3) ಹಲ್ಮಿಡಿ ಶಾಸನವು ಯಾವುದರ ಬಗ್ಗೆ ಉಲ್ಲೇಖಿಸುತ್ತದೆ?
4) ಕನ್ನಡ ಛಂದಸ್ಸಿನ ತಾಯಿ ಬೇರು ಯಾವುದು?
5) ಬದಾಮಿ ಶಾಸನ ಯಾವುದರ ಬಗ್ಗೆ ಉಲ್ಲೇಖಿಸುತ್ತದೆ?
6) ಸಾಧುಗೆ ಸಾಧು ಮಾಧೂರ್ಯ್ಯನ್ಗೆ ಮಾಧೂರ್ಯಂ ಈ ಸಾಲುಗಳು ಕಂಡು ಬರುವ ಶಾಸನ ಯಾವುದು?
7) ಅಲಹಾಬಾದ ಶಾಸನದ ಕತೃ ಯಾರು?
8) ಸಮುದ್ರಗುಪ್ತನನ್ನು ಕವಿರಾಜವೆಂದು ಸಂಭೊಧಿಸಿದ ಶಾಸನ ಯಾವುದು?
9) ಅಲಹಾಬಾದ ಶಾಸನದ ಇನ್ನೊಂದು ಬದಿಯಲ್ಲಿ ಯಾವ ಮೌರ್ಯ ಚಕ್ರವರ್ತಿಯ ಶಾಸನವಿದೆ?
10) ಐಹೊಳೆ ಶಾಸನದ ರಚನಾಕಾರರು ಯಾರು?
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ