Skip to main content

ಗಂಡಾಬಾಂಡ್ ಹಾಸ್ಯಕತೆ


 ಒಳ್ಳೆ ಕೆಂಪ ಮಣ್ಣಾಗಿಂದ ಕಿತ್ತ ಮೂಲಂಗಿ ಹಂಗ ಮುಖಾ ಮಾಡ್ಕೊಂಡು ಹಿಂಗ್ಯಾಕ ಕುಂತಿಯೋ ಬಾಳೇಶ ಅಂತ ಕೇಳಿದೆ. ಆತ ಬಾರೋಪಾ ನಿನಗೇನ ಮದುವಿ ಮಕ್ಕಳಾ ಎಲ್ಲಾ ಆತು. ನನಗ ಮದುವಿದ ಚಿಂತಿ ಆಗೈತಿ ಅಂದ. ಮಗನ ಮಂಗ್ಯಾನಂಗ ಜಿಗದಾಡಿಕೊಂತ ಅರಾಮ ಇರು, ಮದುವಿ ತುಗೊಂಡ ಏನ ಮಾಡತಿ? ಅಲ್ಲವೊ ಮದುವಿ ಅಂದರ ಏನರ ಗೊತ್ತೈತಿ ನಿನಗ? ಪ್ರಶ್ನಿಸಿದೆ. ಆತ ಇಲ್ಲಾ ಅಂತ ಗೋಣ ಅಲ್ಲಾಡಿಸಿದ. ನೋಡಪಾ ಮದುವಿ ಅಂದರ ನಾವೇ ನಮ್ಮ ಕೈಯಾರೆ ಗಿಡ ಹಚ್ಚಿ ಅದಕ್ಕ ಕಷ್ಟಾಪಟ್ಟು ಬೆವರ ಸುರಿಸಿ ನೀರ ಹಾಕಿ ಬೆಳೆಸಿ, ಮುಂದೆ ರೆಂಬೆಕೊಂಬೆಗಳು ಬಲಿತ ನಂತರ ಚುಲೋ ಹಗ್ಗಾ ತುಗೊಂಡು ಉರಲ ಹಾಕೊಂಡಂಗ ಅಂದೆ. ಆತ ಅಂಯ್ಯ ಅಂದ.
        ಆದರೂ ಮಂದಿ ಮದುವಿ ಎಂದೋ? ಮದುವಿ ಎಂದೋ? ಅಂತ ಒಂದ್ಸವನ ನನ್ನ ಜೀವಾ ತಿನ್ನಾತಾರು ಅಂದ. ಹೊಟ್ಟೆಕಿಚ್ಚು ಬಡ್ಡಿಮಕ್ಕಳಿಗೆ ನಿನ್ನ ಖುಷಿ ಕಂಡರ ಅವರಿಗೆ ಹೊಟ್ಟೆಕಿಚ್ಚು ಅಂದೆ. ಲೋ ಅದೇನರ ಆಗುವಲ್ದು ಒಂದ ಮದುವಿ ಮಾಡಸೋ ಅಂತ ದುಂಬಾಲ ಬಿದ್ದ. ಏ ಮಳ್ಳ ಮದುವಿ ಅಂದರ ಸಾಮಾನ್ಯ ಅಂತ ತಿಳದಿ? ಈಗಂತೂ ಹುಡುಗ್ಯಾರ ಸಿಕ್ಕಾಪಟ್ಟೆ ಡಿಮ್ಯಾಂಡ ಮಾಡಾತಾರು. ಮದುವಿಯಾಗಬೇಕಾದ್ರೆ ಹುಡುಗನಿಗೆ ಗವರ್ನಮೆಂಟ್ ಜಾಬ್ ಇರಬೇಕು. ಆಸ್ತಿ ಪಾಸ್ತಿ ಇರಬೇಕು, ಅತ್ತಿ ಮಾವ ಇರಬಾರದು ಎಟ್ಟಸೆಟ್ರಾ ಎಟಸೆಟ್ರಾ ಅಂದೆ. ಆತ ಈ ಮ್ಯಾಲಿನ ಯಾವೂ ನನ್ನ ಹತ್ರ ಇಲ್ಲಾ..ಆದರ ಕೊನೆಗೆ ಹೇಳಿದ್ಯಲ್ಲ ಅದು ಐತಿ ಅನ್ಕೊಂತನ ಅಂಗಿ ಬಿಚ್ಚತೊಡಗಿದ. ನಾನು ಛಿ! ಅಸಹ್ಯ ಏನ ಮಾಡಾತಿ ಅಂದೆ. ಆತ ನೋಡಿಲ್ಲಿ ಸ್ವೇಟರ್ ಅಂದ. ಏ ಮಬ್ಬ ಸ್ವೇಟರ ಯಾಕ ತೋರಸಾತಿ? ಅಂದೆ. ಅದಕ್ಕಾತ ನೀನೇ ಎರಡ ಸ್ವೇಟ್ರಾ ಎರಡ ಸ್ವೇಟ್ರಾ ಅಂದೆಲ್ಲಾ ಅಂದ. ಈ ಮಗಂದು ಇನ್ನೂವರೆಗೂ ಮದುವಿ ಯಾಕ ಆಗಿಲ್ಲಾ ಅಂತ ನನಗೀಗ ಪಕ್ಕಾ ಗೊತ್ತಾತು. ಲೋ ಹೆಂಗಾರ ಮಾಡಿ ಒಂದ ಮದುವಿ ಮಾಡ್ಸು..ಅಂತ ಗಂಟ ಬಿದ್ದ. ನನಗೂ ಪಾಪ ಮೊಬೈಲ್ ಇದ್ದರ ಚಾರ್ಜರ್ ಇರಬೇಕು, ಚಾರ್ಜರ್ ಇದ್ದರ ಮೊಬೈಲ್ ಇರಬೇಕು. ಎರಡೂ ಜೊತೆಯಾಗಿದ್ದರಷ್ಟ ಬೆಲೆ ಬರತೈತಿ, ಹಂಗ ಗಂಡ ಹೆಣ್ಣಾ ಜೋಡಿಯಾಗಿದ್ದರನ ಬೆಲೆ ಅನ್ಕೊಂಡು, ನೋಡು ಬಾಳೇಶ ಈಗೆಲ್ಲಾ ಆನಲೈನ್ ಯುಗ. ಇಲ್ಲಿಂದೀಗಲೇ ಫೋನ್ ಮಾಡಿ ಕೇಳೆ ಬಿಡೋಣಾ ಎಂದೆ. ಇಷ್ಟ ಹೇಳಿದ್ದ ತಡ, ಬಾಳ್ಯಾನ ಮುಖ ಬಾಳಿ ಎಲಿಯಷ್ಟ ಅಗಲ ಆತು. ಮ್ಯಾಟ್ರಿಮೋನಿ ನಂಬರಗೆ ಡಯಲ್ ಮಾಡಿದೆ..ಆ ಕಡೆಯಿಂದ ಡುಂ ಟಕ್ ಡುಂ ಮ್ಯಾಟ್ರಿಮೊನಿಗೆ ಸ್ವಾಗತ ಸುಸ್ವಾಗತ ಅಂದಿತು ಹೆಣ್ಣಿನ ಧ್ವನಿ. ಲೌಡಸ್ಪೀಕರ್ ಆನ್ ಮಾಡಿದೆ. ನಿಮಗೆ ಮೊದಲ ಸಂಬಂಧದ ಮದುವೆ ಬೇಕಾದರೆ ಒಂದು, ಎರಡನೇ ಸಂಬಂಧದ ಮದುವೆಗಾಗಿ ಎರಡು ಒತ್ತಿ ಎಂದರು. ಬಾಳ್ಯಾ ಒಂದ ಒತ್ತು ಎರಡಮೂರು ತುಗೊಂಡ ಏನ ಮಾಡ್ಲಿ ? ಎಂದ. ಭಪ್ಪರೆ ಮಗನೇ ಎಂದು ಒಂದು ಒತ್ತಿದೆ. ಹಿಂದೂ ಕನ್ಯೆಗಾಗಿ ಒಂದು,ಮುಸ್ಲಿಂ ಕನ್ಯೆಗಾಗಿ ಎರಡು, ಕ್ರಿಶ್ಚಿಯನ್ ಕನ್ಯೆಗಾಗಿ ಮೂರು ಒತ್ತಿ ಎಂದರು. ಬಾಳ್ಯಾನ ಮುಖ ನೋಡಿದೆ..ಆತ ಹಿಂದೂ ಮುಂದೂ ನೋಡದ, ಹಿಂದೂ ಹಿಂದೂ ಅಂತ ನಾಲಿಗೆ ಹೊರಗ ಚಾಚಿ ಹೇಳಬೇಕಾದರ ಸಾಕ್ಷಾತ ತೇಕ ಹತ್ತಿದ ನಾಯಿ ಹಂಗ ಕಂಡ. ನಾನು ಒಂದು ಒತ್ತಿದೆ. ನಿಮಗೆ ಬ್ರಾಹ್ಮ ವಿವಾಹಕ್ಕೆ ಒಂದು,ದೈವ ವಿವಾಹಕ್ಕೆ ಎರಡು,ಆರ್ಷ ವಿವಾಹಕ್ಕೆ ಮೂರು,ಪ್ರಜಾಪತ್ಯ ವಿವಾಹಕ್ಕೆ ನಾಲ್ಕು, ಅಸುರ ವಿವಾಹಕ್ಕೆ ಐದು,ಗಂಧರ್ವ ವಿವಾಹಕ್ಕೆ ಆರು, ರಾಕ್ಷಸ ವಿವಾಹಕ್ಕೆ  ಏಳು ಹಾಗೂ ಪಿಶಾಚ ವಿವಾಹಕ್ಕೆ ಎಂಟು ಒತ್ತಿ ಎಂದರು. ನಾನು ಬಾಳ್ಯಾ... ಅಂದೆ ಆತ ತಲೆಕೆರೆದುಕೊಳ್ಳುತ್ತ ಏನ ಒತ್ತಬೇಕೋ ಅಂತ ಚಿಂತೆಯಲ್ಲಿದ್ದ. ನನಗೊಂದ ಐಡಿಯಾ ಬಂತು. ಅಲ್ಲೊಂದು ಲಮಾಣಿ ಅಜ್ಜಿ ಬಾರಿ ಹಣ್ಣ ಮಾರಾತಿತ್ತು. ಬಾಳ್ಯಾ ಹೋಗಿ ಆ ಲಮಾಣಿಯ ದಾವಣಿಗಿರೋ ಕವಡೆ ಕಿತ್ತಗೊಂಡ ಬಾ ಅಂದೆ. ಒಂದ ಮಾತಿಗೆ ಎದ್ದ ನಿಂತು ಹೊರಟಬಿಟ್ಟ..ಎಪ್ಪಾ ಭಗವಂತ ಈ ಮದುವಿಯೊಳಗ ಅಂಥಾದೇನಿಟ್ಟಿದ್ದಿಯೋ? ಎಂದೆ. ಕವಡೆಗಳನ್ನು ತಂದು ಎಸೆದ. ಐದ ಬಿತ್ತು. ಒತ್ತಿದೆ. ನೀವು ಅಸುರ ವಿವಾಹವನ್ನು ಆಯ್ಕೆ ಮಾಡಿಕೊಂಡಿದ್ದೀರಿ..ಇದರ ಪ್ರಕಾರ ನೀವು ವಧುವಿನ ತಂದೆತಾಯಿಗೆ ವಧುದಕ್ಷಿಣೆ ನೀಡಿ ಮದುವೆಯಾಗಬೇಕಾಗುತ್ತದೆ. ನೀವು ವಧುವಿನ ತಂದೆಗೆ ಐದು ಲಕ್ಷ ಕೊಡುವಿರಾದರೆ ಒಂದು, ಹತ್ತು ಲಕ್ಷ ಕೊಡುವಿರೆಂದರೆ ಎರಡು, ಹಿಂದಿನ ಮೆನುವಿಗೆ ಮತ್ತೆ ಹೋಗಲು ಮೂರು ಒತ್ತಿ ಅಂದರು. ಬಾಳ್ಯಾ ಹರಕ ಕಿಸೆದಾಗ ಕೈ ಹಾಕೊಂಡು ಹಗಲ ಕನಸ ಕಾಣಾತಿದ್ದ. ನಾನು ಮೂರ ಒತ್ತಿದೆ. ಕವಡೆ ಹಾಕಲೇ ಬಾಳ್ಯಾ ಎಂದೆ. ಆತ ಗುಡ್ಡದ ಯಲ್ಲವ್ವನ ನೆನಸಿ ಕವಡಿ ಎಸೆದ. ಮೂರು ಬಿತ್ತು ಒತ್ತಿದೆ. ನಮಸ್ಕಾರ ನೀವು ಆರ್ಷ ವಿವಾಹವನ್ನು ಆಯ್ಕೆ ಮಾಡಿಕೊಂಡಿದ್ದೀರಿ..ಇದರ ಪ್ರಕಾರ ನೀವು ಎಲ್ಲವನ್ನೂ ತೊರೆದ ಸಾಧುವಾಗಿರಬೇಕು. ಅಂದಾಗ ಮಾತ್ರ ಕನ್ಯೆಯನ್ನು ಕೊಡಲಾಗುತ್ತದೆ. ಒಪ್ಪಿಗೆ ಇದ್ದರೆ ಒಂದು ಇಲ್ಲವಾದರೆ ಎರಡು, ನಮ್ಮ ಕಸ್ಟಮರ್ ಜೊತೆ ಮಾತನಾಡಲು ಮೂರು ಒತ್ತಿ ಎಂದರು. ಬಾಳ್ಯಾ ತಲೆಕೆರೆದುಕೊಳ್ಳುತ್ತಾ ಇವೇನು ಬ್ಯಾಡಾ ಕಸ್ಟಾಮಾಡೋವ್ರ ಜೊತೆಗೇ ನೇರವಾಗಿ ಮಾತಾಡು ಅಂದ. ನಾನು ಒಮ್ಮೆ ಅವನನ್ನೇ ದುರುಗುಟ್ಟಿ  ಕಸ್ಟಾಮಾಡೊವ್ರಾ? ಅನ್ಕೊಂತನ ಮೂರು ಒತ್ತಿದೆ. ಆ ಕಡೆಯಿಂದ ಹೆಣ್ಣು ಧ್ವನಿ ಮಾತಾಡತೊಡಗಿತು. ಎಲ್ಲಾ ಮಾತಾಡಿದ ಮೇಲೆ ನಿಮಗಾಗಿ ಲೆಟೆಸ್ಟ್ ಆಫರ್ ಇದೆ ಅಂದಳು. ನಾನು ಏನೆಂದೆ ? ಗಂಡಾಬಾಂಡ್ ಎಂದಳು. ಹಾಗಂದ್ರೇನು ಅಂತ ವಿಚಾರಸಿ, ಡಿಟೇಲ್ಸ ತುಗೊಂಡು ಫೋನ್ ಕಟ್ ಮಾಡಿದೆ. ಬಾಳ್ಯಾ ಮಗನ ನಿನ್ನ ನಸೀಬ ಚುಲೋ ಐತಿ, ಕಲಿಗಾಲದ ಹೊಸಾ ಪದ್ಧತಿ ಬಂದೈತಂತ, ಅದರಾಗ ಮದುವಿ ಆಗಾಕ ಹುಡುಗ್ಯಾರು ಕ್ಯೂ ಹಚ್ಚಿದಾರಂತ, ಅದರ ಹೆಸರೇ ಗಂಡಾಬಾಂಡ್ ಎಂದೆ. ಆತ ಅಂಯ್ಯ ಇದನ್ನ ಕೇಳೆ ಇಲ್ವಲ್ಲಾ ಅಂದ. ನಾನು ರಪ್ಪ ಅಂತ ಅವನ ಕಪಾಳಿಗೊಂದು ಬಿಟ್ಟೆ..ಮಬ್ಬ ನನ್ನ ಮಗನ ಹೊಸಾದ ಅಂತ ಹೇಳಾತನಿಲ್ಲೊ ಅಂದೆ. ಅದಕ್ಕಾತ ಎಂತಾದರ ಆಗವಲ್ತು ಮದುವಿಯಾದರ ಸಾಕು. ನಾನೂ ಮದುವಿ ಮಾಡ್ಕೊಂಡು ನಾಕ ಜನರಿಗೆ ಗಂಡಸ ಅಂತ ತೋರಸ್ಬೇಕಂತ ಮಾಡೇನಿ ಅಂದ. ಲೇ..ಮಳ್ಳ ನಾನೊಬ್ಬ ಶ್ರೇಷ್ಠ ಈಜುಗಾರ ಅಂತ ತೋರ್ಸಾಕ ನಮ್ಮದ ಸ್ವಂತ ಬಾವಿ ಇರಲೇಬೇಕಂತ ರೂಲ್ಸ ಇಲ್ಲಲೆ ಅಂದೆ. ಆತನಿಗೆ ತಿಳಿಲಿಲ್ಲ. ಮುಂದಿನ ವಾರ ಹೆಣ್ಣ ನೋಡೋ ಶಾಸ್ತ್ರ ಆಯ್ತು. ಎರಡೂ ಕಡೆ ಒಪ್ಪಿಗ್ಯಾಗಿ ಮದುವಿನೂ ಮುಗದ ಬಿಟ್ಟಿತು. ಡುಂ ಟಕ ಡುಂ.
       ಬಾಳ್ಯಾನ ಸಂಸಾರದ ಬಂಡಿ ಬಳಕುತ,ತುಳುಕುತ ಸಾಗಹತ್ತಿತು. ಕೆಲವು ದಿನಗಳಾದ ನಂತರ ಹೆಂಡತಿ ಬಾಳ್ಯಾಗ ಬಾಂಡೆ ತಿಕ್ಕು,ಒಗ್ಯಾನ ಒಗಿ ಅಂತ ಶುರುಮಾಡ್ಕೊಂಡ ಬಿಟ್ಟಳು. ಪ್ರಾರಂಭದಲ್ಲಿ ಪ್ರೀತಿ ಹೆಚ್ಚಾಗಿ ಎಲ್ಲಾನೂ ಮಾಡಿದ. ನಶೆದಾಗ ಗಟರದಾಗ ಬಿದ್ದ ಕುಡುಕಂಗ ಅದೇ ಕುರ್ಲಾನ ಬೆಡ್, ನಶೆ ಇಳಿದ ಮ್ಯಾಲ ಅದು ಕೊಳಚಿ ಅನಿಸುವಂಗ ಇವನಿಗೂ ಪ್ರೀತಿಯ ನಶೆ ಇಳಿದ ನಂತರ ಛೆ! ಇದೆಂಥ ಭಂಡ ಬಾಳು ಅಂತ ಅನಿಸತೊಡಗಿತು. ಈತ ನನಗ ಆಗೋದಿಲ್ಲ ಅಂತ ವಿರೋಧಿಸಿದ. ಆಕೆ ಬಾಂಡ್ ತೋರಿಸಿದಳು. ಬಾಳ್ಯಾ ಇಲ್ನೋಡ ಬಾಂಡ್. ಮದುವಿಗೆ ಮುಂಚೆ ಬಾಂಡ್ ಮ್ಯಾಲ ಸಹಿ ಮಾಡಿ ಕೊಟ್ಟಿ ಅಂತ ತೋರಿಸಾಕಿ. 
     ಬಾಳ್ಯಾ ಮದುವಿಯಾಗದ ಮೊದಲ ಖಬರಗೆಟ್ಟ ಕುಂತಿದ್ದ. ಹೆಣ್ಣ ಯಾಕ ಹೆಣ್ಣಾಯಿ ಸಿಕ್ಕರೂ ಮದುವಿಯಾಗೋ ಹಂಗ ಬರಗೆಟ್ಟೆದ್ದ. ಎಲ್ಲಾ ಪ್ರಯತ್ನಿಸಿದ ಮ್ಯಾಲನ ಈ ಗಂಡಾಬಾಂಡ್ ನಲ್ಲಿ ತಗಲಹಾಕೊಂಡ. ಬಾಂಡ ಪ್ರಕಾರ ಒಂದೊಂದ ವಾರ ಗಂಡಾ ಹೆಂಡತಿ ಮನಿ ಕೆಲಸಾ ಮಾಡೋದಿತ್ತು. ಅದೂ ಅಲ್ಲದ ಯಾವಾಗ ಯಾವಾಗ ಹೆಂಡತಿಗೆ ಮೈಹುಷಾರ ಇರೋದಿಲ್ಲೋ ಆಗೆಲ್ಲಾ ಗಂಡನೇ ಕೆಲಸಾ ಮಾಡ್ಬೇಕಿತ್ತು. ಹೀಗಾಗಿ ವರ್ಷದ ಮುನ್ನೂರಾ ಅರವತ್ತೈದು ದಿನವೂ ಹೆಂಡತಿ ನನಗ ಅರಾಮಿಲ್ಲಾ ಅಂತನ ಅನ್ನೋಕಿ. ಏನಾಗೈತಿ ಅಂತ‌ ಕೇಳಿದರ, ಗುಳಿಗಿ ಚೀಟಿ ಸಾಕ್ಷಿ ಇಡಾಕಿ. ಆಕಿ ಪರ್ಸನ್ಯಾಗ ಡೇಟ್ ಇಲ್ಲದ್ದ ಗುಳಿಗಿ ಚೀಟಿದು ಒಂದ ದೊಡ್ಡ ಬುಕ್ ಇದ್ದಂಗ ಅನಿಸುತ್ತಿತ್ತು. ಕೋರ್ಟನ್ಯಾಗ ಸಾಕ್ಷಿ ನಡಿತೈತಿ, ನನ್ನ ಹತ್ರ ಗುಳಿಗಿ ಚೀಟಿ ಸಾಕ್ಷಿ ಐತಿ ಅನ್ನಾಕಿ. ಬಾಳ್ಯಾಗ ನಾ ಏನ ಬಾಳೆ ಮಾಡಾತೆನೋ ಇಲ್ಲಾ ಯಾವುದರ ಕೇಸನ್ಯಾಗ ಲಾಯರ್ ಕೈಯಾಗ ಸಿಕ್ಕ ಮುದ್ದಿ ಆಗೆನೋ? ಅನ್ನೋದು ಕನಫ್ಯೂಸ್ ಆಗಿತ್ತು. ಹಂಗೂ ಹಿಂಗೂ ಬಾಳ್ಯಾನ ಹಂಗಿನ ಬಾಂಡ್ ಸಂಸಾರ ಮುಂದುವರೆದು ಮಿನಿಸ್ಟಾಂಪ ಹೊರಬಂತು. ಮಿನಿಸ್ಟಾಂಪ ಅಂದರ ಮಿನಿಬಾಳ್ಯಾ ಜನಿಸಿದ. 
           ಸಂಸಾರ ಖುಷಿಯಿಂದ ಓಡಾಕತ್ತಿತ್ತು. ಗಾಲಿ ತಿರುಗುವಾಗ ಚೂರು ಚೂಂಯ್ಕ ಚೂಂಯ್ಕ ಅಂತ ಶಬ್ದ ಬರೋದನ. ಬಾಳ್ಯಾಗ ಹೆಣ್ಣ ಮಗು ಅಂದರ ತುಂಬಾ ಪ್ರೀತಿ. ಹಿಂಗಾಗಿ ಇನ್ನೊಂದು ಮಗು ಬೇಕೆಂದ. ಹೆಂಡತಿ ಬಾಂಡ್ ತೋರಿಸಿದ್ಲು. ಅದರಾಗ ಒಂದೇ ಮಗು ಅಂತ ಬರೆದಿತ್ತು. ಪಾಪ! ಬಾಳ್ಯಾ ಚಿಂತಿ ಮಾಡಿ ಮಾಡಿ ಬಾಳಿಹಣ್ಣ ಆದಂಗ ಮೆತ್ತಗ ಆದ. ಒಂದ ದಿನಾ ಬಾಳ್ಯಾನ ಹೆಂಡತಿ ಬಾಳ್ಯಾನ ಮೂಲಿಗೆ ಹಾಕಿ ಜಾಡಸಿದ್ಲು. ಯಾಕೆ ಅಂತ ಪ್ರಶ್ನಿಸಿದ. ಬಾಂಡ ತೋರಿಸಿದ್ಲು. ಬಾಂಡನ್ಯಾಗ ವರ್ಷಕ ಎರಡ ತೊಲಿ ಬಂಗಾರ ಕೊಡಸಬೇಕಂತ ಬರೆದಿತ್ತು. ಬಾಳ್ಯಾ ತನ್ನ ಕೊಳ್ಳಾಗಿನ ಚೈನ್ ಉಂಗುರ ಮುರಿಸಿ ಬಂಗಾರ ತುಗೊಂಡ ಹೋಗಿ ಹೆಂಡತಿಗೆ ಕೊಟ್ಟ. ನಾಲ್ಕ ದಿನಾ ಸಂಸಾರ ಸುಖದ ತೂಗುಯ್ಯಾಲೆಯಲ್ಲಿ ತೇಲಾಡಿತು. ಐದನೇ ದಿನಕ ಬಾಳ್ಯಾನ ಹೆಂಡತಿ ಮತ್ತ ಚಾಮುಂಡಿ ಅವತಾರ ತಾಳಿ ನಿಂತಿದ್ಲು. ಯಾಕೆ? ಅಂದ. ಬಾಂಡ್ ಕೊಟ್ಟಳು. ಅದರಾಗ ಎರಡ ವರ್ಷಕ್ಕೊಮ್ಮೆ ಪ್ರವಾಸ ಅಂತಿತ್ತು. ಬ್ಯಾಗ ಪ್ಯಾಕ ಮಾಡ್ಕೊಂಡು ಧರ್ಮಸ್ಥಳ, ಊಟಿ, ಕನ್ಯಾಕುಮಾರಿ ಅಂತ ಪ್ರವಾಸ ಮಾಡಿಸ್ಕೊಂಡು ಬಂದ. ಇದಕ್ಕಾಗಿ ಊರ ತುಂಬ ಸಾಲಾ ಮಾಡಿದ. ಸಾಲಗಾರರು ಕಂಡಲೆಲ್ಲಾ ತದುಕಲು ಶುರು ಮಾಡಿದ್ದರು.ಮನೀಗ ಹೋದರ ಹೆಂಡತಿ ಕಾಟ, ಬೀದಿಗೆ ಬಂದರ ಸಾಲಗಾರರ ಕಾಟ. ಒಟ್ಟಿನಲ್ಲಿ ಬಾಳ್ಯಾನ ಪಾಡ ಚಹಾ ಕಪ್ಪದಾಗ ಬಿದ್ದ ಇರುವಿ ಹಂಗ ಆಗಿತ್ತು. ಹೊರಗಿನ ಇರುವಿಗಳಿಗೆಲ್ಲಾ ಚಹಾ ಕುಡಿಯುವಂಗ ಕಂಡರ. ಚಹಾದಾಗ ಬಿದ್ದ ಇರುವಿಗೆ ಗೊತ್ತು ಚಹಾದ ಬಿಸಿ ಏನು ಅಂತ, ಹಂಗ ಆಗಿತ್ತು. ಕಮ್ಮಗ ಹಕ್ಕಿಹಂಗ ಹಾರಿಕೊಂತ ಅರಾಮ ಇದ್ದೆ. ಮದುವಿ ಯಾಕರ ಮಾಡಿಕೊಂಡ್ನ್ಯೊ ಮಾರಾಯಾ ಅಂತ ಚಿಂತಿ ಮಾಡ್ಕೊಂತ ಬೀದ್ಯಾಗ ಹೊರಟಿದ್ದ. ಅಲ್ಲೆ ದಾರಿಯೊಳಗ ಸಂತೋಷ ಕುಂತಿದ್ದ. ಸುಮಾರು ನಲವತ್ತೈದ ವರ್ಷ ವಯಸ್ಸಿರಬೇಕು. ಬಾಳ್ಯಾಗ ಪರಿಚಯಸ್ಥ. ಯಾಕಪಾ ಸಂತೋಷ ಹಿಂಗ್ಯಾಕ ಕುಂತಿಯೋ ಒಳ್ಳೆ ಕೆಂಪ ಮಣ್ಣಾಗಿಂದ ಕಿತ್ತ ಮೂಲಂಗಿ ಹಂಗ ಮುಖಾ ಮಾಡ್ಕೊಂಡು ಅಂದ. ಬಾರಪಾ ಬಾಳಣ್ಣಾ ನಿನಗೇನು ಮದುವಿ ಮಕ್ಕಳಾ ಎಲ್ಲಾ ಆತು. ನನಗ  ಮದುವಿದ ಚಿಂತಿ ಆಗೈತಿ ಅಂದ ಸಂತೋಷ. ಮಗನ ಮಂಗ್ಯಾನಂಗ ಜಿಗದಾಡಿಕೊಂತ ಅರಾಮ ಇರು, ಮದುವಿ ತುಗೊಂಡ ಏನ ಮಾಡತಿ? ಅಲ್ಲವೊ ಮದುವಿ ಅಂದರ ಏನರ ಗೊತ್ತೈತಿ ನಿನಗ? ಬಾಳಣ್ಣ ಪ್ರಶ್ನಿಸಿದ. 
ಆತ ಇಲ್ಲಾ ಅಂತ ಗೋಣ ಅಲ್ಲಾಡಿಸಿದ.
      ನೋಡಪಾ ಮದುವಿ ಅಂದರ ಒಂದು ಕಲ್ಲಿನಲ್ಲಿ ಸುಂದರವಾದ ಶಿಲಾಬಾಲಿಕೆಯನ್ನು ವರ್ಷಾನುಗಟ್ಟಲೆ ಬೆವರ ಸುರಿಸಿ ನಾವೇ ಕೆತ್ತಿ, ಅದನ್ನೇ ದುಬ್ಬಕ ಕಟಗೊಂಡು ಕೊನೆಗೆ ಹೊಳ್ಯಾಗ ಹಾರಿದಂಗ ಅಂತ ಹೇಳಿದ. ಬಾಳಣ್ಣನ ಮಾತುಗಳು ಸಂತೋಷನಿಗೆ ಹಿಡಿಸಲಿಲ್ಲ. ಅಣ್ಣಾ ದಯವಿಟ್ಟು ಒಂದ ಒಂದ ಮದುವಿ ಮಾಡಿಸಿಬಿಡಣ್ಣಾ..ಅದೇನೋ ಅಂತಾರಲ್ಲಾ ಗಂಡಾಬಾಂಡ್ ಅದಕ್ಕೂ ಸೈ ಅಂದ ಸಂತೋಷ. ಲೋ ಭಗವಂತ ಈ ಮದುವಿ ಅನ್ನೋದ್ರಾಗ ಅದೇನ ಮಾಯೆಯಿಟ್ಟಿಯೋ..ಎಲ್ಲಾ ಯುವಕರು ಡುಬುಕ ಡುಬುಕ ಅಂತ ಇದರೊಳಗೇ ಬಿದ್ದು ಒದ್ದಾಡುತ್ತವಲ್ಲಾ ಅಂತ ಬಾಳ್ಯಾ ಆಕಾಶ ನೋಡಿದ. ಆಕಾಶದಾಗ ಪರಮೇಶ್ವರ ಕಾಪಾಡಿ ಕಾಪಾಡಿ ಅಂತ ಓಡ್ಯಾಡಾತಿದ್ದ. ಹಿಂದೆ ನೋಡಿದ್ರ ದೇವಿ ಪಾರ್ವತಿ ತ್ರಿಶೂಲ್ ತುಗೊಂಡು ಬೆನ್ನ ಹತ್ತಿದ್ಲು. ಬಾಳಣ್ಣಾ ನಕ್ಕೊಂತ ; ಪರಮೇಶ್ವರಾ ನೀನೂ ಗಂಡಾಬಾಂಡಾ? ಎಂದ.
                               -   ಆನಂದ ಮಾಲಗಿತ್ತಿಮಠ

ಈ ಕತೆಯನ್ನೂ ಓದಿ

Comments

Post a Comment

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ...