Skip to main content

ಸಾನಾಪೂರದ ಸಂಗೀತ ಶಿಲೆಗಳು- ಕತೆ ಭಾಗ ೧

Kannada stories

ಏ ಮೀನಾ ಎಲ್ಲಿದ್ದಿಯಾ? ನಿನ್ನೆಯಿಂದ ಫೋನ್ ಮಾಡಿದರೂ ಬರೀ ನಾಟ್ ರಿಚೇಬಲ್ ಬರ್ತಾಯಿದೆ ಎಂದಳು ವಾಣಿ. ಲೇ ಸ್ಸಾರಿ ಕಣೆ ಅದೇನಾಯ್ತೆಂದರೆ ನಿನ್ನೆ ಜರ್ನಿಯಲ್ಲಿದ್ದೆ ಹೀಗಾಗಿ ನೆಟವರ್ಕ ಸಿಕ್ಕಿಲ್ಲಾ ಎಂದಳು ಮೀನಾ. ಎಲ್ಲೇ ಹೋಗಿದ್ಯಾ? ಏನಿದು ಸರಪ್ರೈಸು? ಆಶ್ಚರ್ಯದಿಂದ ಕೇಳಿದಳು ವಾಣಿ. ಏನಿಲ್ಲಪ್ಪಾ ಅದೇ ಸ್ಟಡಿ ಟೂರಿಗಂತ ಸಾನಾಪುರಕೆ ಬಂದಿದ್ದೆ ಹೀಗಾಗಿ ಯಾರಿಗೂ ಹೇಳೋದಿಕ್ಕೆ ಆಗಲಿಲ್ಲ ಎಂದಳು ಮೀನಾ. ಹೀಗೆ ಗೆಳತಿಯರಿಬ್ಬರೂ ಮಾತನಾಡುತ್ತಾ ಇರಬೇಕಾದರೆ ದ್ರಾಕ್ಷಾಯಿಣಿ ಬಂದು ಊಟಕ್ಕ ಬಾ ಮೀನಾ ಎಂದು ಕರೆದು ಹೋದಳು. ನೀವೂ ಬಿಡುವಿದ್ರೆ ಬನ್ನಿ ಹಾಗೇ ಹಂಪಿ ಹೊಸಕೋಟೆ ಡ್ಯಾಮ್ ಎಲ್ಲಾ ನೋಡಿಕೊಂಡು ಹೋಗುವಂತ್ರಿ ಎಂದು ಮೀನಾ ಫೋನಿನಲ್ಲಿ ವಾಣಿಯ ಮೂಲಕ ತನ್ನ ಗೆಳತಿಯರಿಗೆ ಆಹ್ವಾನ ನೀಡಿ ಕರೆ ಕಟ್ ಮಾಡಿದಳು.
         ಸುಭಾಷ ಹಾಗೂ ನಿರ್ಮಲಾರವರ ಒಬ್ಬಳೇ ಮಗಳೇ ಮೀನಾ. ಸುಭಾಷರವರು ಬೆಳಗಾವಿಯ ಹೃದಯ ಭಾಗದಲ್ಲಿ ಐಷಾರಾಮಿ ಹೊಟೇಲ್ ಹೊಂದಿದ್ದು  ಶ್ರೀಮಂತಿಕೆಗೆ ಏನೂ ಕೊರತೆಯಿರಲಿಲ್ಲ. ಮೀನಾಳನ್ನು ಡಾಕ್ಟರ್ ಮಾಡಬೇಕೆಂದುಕೊಂಡವರು ಕೊನೆಗೆ ಮಗಳ ಬಲವಂತಕ್ಕೆ ಮಣಿದು ತಮ್ಮ ನಿರ್ಧಾರವನ್ನು ಕೈಬಿಡಬೇಕಾಗಿ ಬಂದು ಅವಳ ಇಷ್ಟದಂತೆ ಜೀಯೋಲಾಜಿಸ್ಟ್ ಆಗಲು ಅನುಮತಿಸಿದ್ದರು. ಅದಾವುದೋ ಪ್ರಾಜೆಕ್ಟ್ ಗೋಸ್ಕರ್ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನಲ್ಲಿರುವ ಸಾನಾಪುರಕೆ ಹೋಗಬೇಕಾಗಿ ಬಂದಾಗ ಸುಭಾಷರವರಿಗೆ ನೆನಪಾಗಿದ್ದು ಸಾನಾಪುರದಲ್ಲಿರುವ ತಮ್ಮ ಬಾಲ್ಯಸ್ನೇಹಿತ ವೆಂಕಟಾಚಲಯ್ಯ. ಆತನಿಗೆ ಫೋನ್ ಮಾಡಿ ಮಗಳು ಮೀನಾ ಸ್ಟಡಿ ಟೂರಿಗಾಗಿ ಸಾನಾಪುರಕೆ ಬರುವ ವಿಷಯವನ್ನೂ, ವಾರದಮಟ್ಟಿಗೆ ಅವಳ ಊಟ ಮತ್ತು ವಾಸ್ತವ್ಯಕ್ಕೆ ಹೊಟೇಲು-ಗಿಟೇಲಿನ ವ್ಯವಸ್ಥೆ ಮಾಡಬೇಕೆಂದೂ ಕೇಳಿಕೊಂಡಾಗ, ಬೇರೆ ಕಡೆ ಯಾಕೆ ಸುಬ್ಬು, ಅವಳು ನಮ್ಮನೆಯಲ್ಲಿಯೇ ಇರಲಿ ಎಂದು ಆಮಂತ್ರಿಸಿದ್ದರು. 
       ವೆಂಕಟಾಚಲಯ್ಯನವರದು ಉದಾರ ಮನೋಭಾವ, ಪರರ ಕಷ್ಟಗಳಿಗೆ ಮಿಡಿಯುವ ಸ್ವಭಾವ ಆದರೆ ಅವರ ಹೆಂಡತಿ ದ್ರಾಕ್ಷಾಯಿಣಿಯವರದ್ದು ತದ್ವಿರುದ್ಧ. ಗಂಡ ಹೆಂಡತಿಯ ನಡುವಿರುವ ಸಾಮರಸ್ಯದ ಕಂದಕವನ್ನು ಗುರುತಿಸಲು ಮೀನಾಳಿಗೆ ಬಹಳ ಸಮಯ ಹಿಡಿಯಲಿಲ್ಲ. ಅದಕ್ಕೆ ಕಾರಣವೂ ಇತ್ತು. ಪಾಪ! ದ್ರಾಕ್ಷಾಯಿಣಿಯವರಿಗೆ ಮಕ್ಕಳ ಭಾಗ್ಯವಿರಲಿಲ್ಲ. ಹೀಗಾಗಿ ಅದೊಂದು ಅಸಮಾಧಾನದ ಹೊಗೆ ಅವಳ ಮನದಲ್ಲಾಡುತ್ತಿತ್ತು. ಮನೆಯೊಳಗೊಂದು ಮಗುವಿನ ನಗುವಿರಲೆಂದು ವೆಂಕಟಾಚಲಯ್ಯನವರು ತಮ್ಮ ತಂಗಿ ಮಗನನ್ನು ತಮ್ಮ ಮನೆಯಲ್ಲಿಟ್ಟುಕೊಂಡೇ ಸಾಕಿ ಬೆಳೆಸಿದ್ದರು. ಆತನೇ ಸುಶಾಂತ. ಮೀನಾಳಿಗಿಂತ ಎರಡು ವರ್ಷಕ್ಕೆ ದೊಡ್ಡವನಿರಬಹುದಷ್ಟೆ. ಅವನನ್ನು ಅತಿ ಅಪರೂಪದಿಂದ ಬೆಳೆಸಿರುವುದಕ್ಕೆ ಸಾಕ್ಷಿಯಾಗಿ ಗುಣವಿರೂಪತೆಯು ಅವನ ನಡೆನುಡಿಯಲ್ಲಿ ಕಾಣುತ್ತಿತ್ತು. 
   ದ್ರಾಕ್ಷಾಯಿಣಿಯು ಮೀನಾಳಿಗೆ ಊಟಕ್ಕೆ ಬಡಿಸುತ್ತಾ..ಅದೇನದು ಸ್ಟಡಿ ಟೂರು? ಹಾಗಂದರೇನು? ಎಂದು ಕುತೂಹಲದಿಂದ ಪ್ರಶ್ನಿಸಿದಳು. ಆಂಟಿ..ಸ್ಟಡಿ ಟೂರು ಎಂದರೆ ಅಧ್ಯಯನಕ್ಕಾಗಿ ಮಾಡುವ ಪ್ರವಾಸ. ಮೋಜು ಮಸ್ತಿಗಾಗಿ ಮಾಡುವ ಪ್ರವಾಸವೇ ಬೇರೆ ಇದೇ ಬೇರೆ ಎಂದುತ್ತರಿಸಿದಳು. ಈ ಸಾನಾಪುರದಲ್ಲೇನಿದೆಯೆಂದು ಅಧ್ಯಯನ ಮಾಡುತ್ತಿಯಾ? ಇದೊಂದು ಕೆರೆಯಿದೆ, ಬಿಟ್ಟರೆ ಆ ಹಾಳು ಗುಡ್ಡ. ಇಲ್ಲೇನಿದೆ ಬಗರಿ ? ಮೂಗುಮುರಿಯುತ್ತಲೆ ಹೇಳಿದಳು ದ್ರಾಕ್ಷಾಯಿಣಿ. ತಾನು ಬಂದಿದ್ದು ಇವರಿಗೆ ಇಷ್ಟವಾಗಿಲ್ಲ ಎಂಬುವುದನ್ನು ಅವರ ಮಾತಿನ ಧಾಟಿಯಿಂದಲೆ ಮೀನಾ ಸುಲಭವಾಗಿ ಗ್ರಹಿಸಿದಳು. ಹಾಗೇಕಂತಿರಾ ಅಂಟಿ? ವಿಶ್ವಪ್ರಸಿದ್ಧ ಹಂಪೆಯ ಪಕ್ಕದಲ್ಲಿದ್ದುಕೊಂಡೂ ಹೀಗಂತಿರಲ್ಲಾ..ದೇಶ ವಿದೇಶದಿಂದ ಸಾವಿರಾರು ಜನ ಹಂಪೆಯನ್ನು ಅಧ್ಯಯನ ಮಾಡಲೆಂದೇ ಬರುವುದನ್ನು ನೀವು ಕಂಡಿಲ್ಲವೇ? ಎಂದು ಪ್ರಶ್ನಿಸಿದಳು ಮೀನಾ. ಹ್ಞೂಂ!..ಆ ಕೆಂಪಮೋತಿ ಜನರು ಅದೇನೋ ಪೆನ್ನು ಹಾಳೆ ತುಗೊಂಡು ಗುಡ್ಡ ನೊಡ್ಕೊಂತ ಕೋತಿಹಾಗೆ  ಕುಂತಿರೋದನ್ನ ಕಂಡಿದ್ದೇನೆ. ಆ ತುಂಡುಗಚ್ಛೆ ಹಾಕೊಂಡು ತಿರುಗುವ ಪರದೇಶಿಗಳನ್ನು ನೋಡಿ ನಮ್ಮ ದೇಶದವರೂ ಹಾಗೆ ಕುಣಿಯುತ್ತವೆ ಎನ್ನುತ್ತಾ ಎದ್ದೇ ಹೋದಳು ದ್ರಾಕ್ಷಾಯಿಣಿ. ಅವಳಾಡಿದ ಮಾತುಗಳು ನೇರವಾಗಿ ತನಗಲ್ಲದಿದ್ದರೂ ತನ್ನ ಚಿಕ್ಕ ಉಡುಪುಗಳನ್ನು ನೋಡಿಯೆ ಹಾಗೆ ಹೇಳಿದ್ದೆಂದು ಮೀನಾ ಅರ್ಥಮಾಡಿಕೊಳ್ಳದಿರಲಿಲ್ಲ. ನಾನೇನು ಅವರ ಮನೆಯಲ್ಲಿಯೇ ಪರ್ಮನೆಂಟಾಗಿ ಇರಲು ಸೊಸೆಯಾಗಿ ಬಂದಿದ್ದೇನಾ? ಇದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬಾರದು. ಹೇಗಾದರೂ ಮಾಡಿ ಒಂದು ವಾರದೊಳಗೆ ಪ್ರಾಜೆಕ್ಟ್‌ ಕೆಲಸ ಮುಗಿಸಿ ತೆರಳಬೇಕು ಎಂದು ನಿಶ್ಚಯಿಸಿಕೊಂಡಳು.
           ಊಟ ಮುಗಿಸಿ ಹೊರಬರಬೇಕಾದರೆ ಬಾಗಿಲಲ್ಲಿ ಸುಶಾಂತ ಭೇಟಿಯಾದನು. ಹಾಯ್! ಐಯಾಮ್ ಮೀನಾ ಎನ್ನುತ್ತಾ ಅವನೆಡೆಗೆ ಕೈ ಚಾಚಿದಳು.‌ಆತನಿಗೆ ಏನು ಹೇಳಬೇಕೆಂದು‌ ತಿಳಿಯದೆ ಬರಿ ಸುಶಾಂತ ಎಂದವನೆ ಅವಳ ಕೈ ಕುಲುಕಿದನು. ಮೆತ್ತನೆಯ ಹೂವನು ಸ್ಪರ್ಶಿಸಿದಂತಾ ಅನುಭವವಾಯಿತು. ತಿಳಿಶ್ವೇತ ಕಣಗಿಲದಂತಹ ಅವಳ ಮುಖಕಾಂತಿ, ಚಂದ್ರನ ಮೇಲಿಟ್ಟ ಕೆಂದಾವರೆ ಮೊಗ್ಗಿನ ತರಹದಿ ಹೊಳೆಯುವ ಅವಳ ಹೂದುಟಿಗಳು. ದುಂಡುಮಲ್ಲಿಗೆಯಂತಿರುವ ಅವಳುಬ್ಬು ಗಲ್ಲದಾ ಮೇಲೆ ಪರಾಗದಂತಹ ನಸುಗೆಂಪು ಬಣ್ಣದಾ ಲೇಪನ..ಎಂಥಹ ಚೆಲುವಿನೊಡತಿಯಿವಳು ಎನ್ನುತ್ತಲೇ ಮೈಮರೆತು ನೋಡುತ್ತ ನಿಂತುಬಿಟ್ಟ ಸುಶಾಂತ. ಮೀನಾ ಕೈಕೊಸರಿಕೊಂಡು ಹಿಂತೆಗೆದುಕೊಂಡು ಚೆನ್ನಾಗಿದ್ದೀರಾ? ಎಂದು ಕೇಳಿದಳು. ಆತ ಸುಮ್ಮನೆ ಗೋಣಾಡಿಸುತ್ತಾ ಸೀದಾ ಒಳಗೆ ನಡೆದು ಬಿಟ್ಟನು.
            ವೆಂಕಟಾಚಲಯ್ಯನವರು ಮೊದಲ ದಿನವೇ ಮೀನಾ ಏನೇ ಬೇಕಾದರೂ ಸಂಕೋಚವಿಲ್ಲದೇ ಕೇಳು. ನಾನೂ ನಿಮ್ಮ ತಂದೆ ತರಹವೇ ಎಂದುಕೊ. ಇದೋ ಈ ರೂಮಿನಲ್ಲಿ ನಿನಗಾಗಿ ಎಲ್ಲ ವ್ಯವಸ್ಥೆ ಮಾಡಿದ್ದೇನೆ. ಈತನ ಹೆಸರು ಚಂದ್ರು, ನಾವೆಲ್ಲರೂ ಚೆಂದು ಅಂತಲೆ ಕರೆಯೋದು. ತುಂಬಾ ಸೌಮ್ಯ ಸ್ವಭಾವದವ. ನೀನು ಎಲ್ಲೆ ಹೊರಹೋಗಬೇಕಾದರೂ ಈತನನ್ನು ಕರೆದುಕೊಂಡು ಹೋಗು.ಇವನ ಮನೆ ನಮ್ಮನೆಯ ಪಕ್ಕದಲ್ಲಿಯೇ ಇರುವುದೆಂದು ಪರಿಚಯಿಸಿ ತಾವು ಯಾವುದೋ ಕೆಲಸದ ಮೇಲೆ ಹೊರಹೋಗಿದ್ದರು. ಊಟ ಮಾಡಿ ಬಂದ ಮೀನಾಳಿಗೆ  ಅವರು ಪರಿಚಯಿಸಿದ ಚೆಂದುವಿನ ನೆನಪಾಯ್ತು. ಊರೆಲ್ಲಾ ಒಂದು ಸುತ್ತುಹಾಕಿ ಬರೋಣವೆಂದು ಆತನನ್ನು ಕರೆದೊಯ್ದಳು.
     ತುಂಗಭದ್ರೆಯ ತಟದೊಳಗೆ ಬೆಳೆದುನಿಂತಿಹ ಹಸಿರು ಪೈರು ವಸುಂಧರೆಗೆ ಹೊದಿಸಿದ ಹೊಸ ಹಚ್ಚಡದಂತೆ ಕಾಣುತಿತ್ತು. ನೆಟ್ಟ ಕೋಲಿನ ಮೇಲೆ ರೆಕ್ಕೆಬಿಚ್ಚಿ ನಿಂತಿಹ ನವಿಲಿನಂತೆ ಕಾಣುವ ತೆಂಗಿನಮರಗಳು, ಹರಿಯುವ ನದಿಯ ಜುಳುಜುಳು ನಿನಾದಕ್ಕೆ ತಲೆದೂಗುತ್ತಿದ್ದವು. ದೂರದಿಂದ ದೈತ್ಯರಕ್ಕಸನ ಉದುರಿಬಿದ್ದ ದವಡೆಯ ದಂತದಂತೆ ಕಾಣುವ ನಸುಬಿಳುಪಿನ ಬಂಡೆಗಲ್ಲುಗಳು ಬದುಕಿನ ನಶ್ವರತೆಯ ಪ್ರತೀಕದಂತೆ ಬೋಳಾಗಿ ಬಿದ್ದಿದ್ದವು. ಅವುಗಳ ನೆತ್ತಿಯನು ನೇಸರನ ಪ್ರಖರತೆಯಿಂದ ರಕ್ಷಿಪಗೋಸ್ಕರವೇ ಹಿಡಿದ ಹಸಿರು ಕೊಡೆಗಳಂತೆ ಮರಗಳು ಆ ಕಲ್ಲು ಕಿರುಸಂದಿಗಳಿಂದ ಮೈಕೊಡವಿ ಬೆಳೆದು ಅವುಗಳಿಗೆ ತಂಪಾದ ನೆರಳೊದಗಿಸಲು ಪ್ರಯತ್ನಿಸುತ್ತಿದ್ದವು. ಒಂದೊಂದು ಬಂಡೆಗಳೂ ಒಂದೊಂದು ಆಕಾರ, ಅಚಲತೆಯ ಪ್ರತೀಕವಾಗಿ ಮಲಗಿದ ಮದ್ದಾನೆಯಂತೆ ಒಂದು ಕಂಡರೆ..ಇನ್ನೊಂದು ದೈವಿಕತೆಯನ್ನು ಸೂಸುವ ಸಾಕ್ಷಾತ ಶಿವಲಿಂಗದಂತೆ ಕಾಣುವುದು. ನೋಡುಗರ ನೋಟಕ್ಕೆ ತಕ್ಕಂತೆ ಮೈಮಾಟ ಬದಲಿಸುವ ಸೌಂದರ್ಯದ ಖಣಿಗಳವು. ಯದ್ಭಾವಂ ತದ್ಭವತಿ ಅಂತಾರಲ್ಲ ಹಾಗೆ. ಈ ಕಲ್ಲುಗಳ ಮುಂದೆ ಕೂರಿಸಿ ಯಾವುದೇ ವ್ಯಕ್ತಿಯ ಮನಶಾಸ್ತ್ರೀಯ ವ್ಯಕ್ತಿತ್ವ ಪರೀಕ್ಷೆಯನ್ನೂ ಸರಳವಾಗಿ ಮಾಡಿಬಿಡಬಹುದು. ಇವುಗಳೆಲ್ಲಾ ಯಾವುದೋ ಕತೆಯನು ಹೇಳಲು ಶತಶತಮಾನದಿಂದಲೂ ತಮ್ಮ ಸರದಿಗಾಗಿಯೆ ಕಾಯುತ್ತಿಹೆವೋ ಏನೋ ಎಂದೆನಿಸದಿರಲಿಲ್ಲ. ಇಡೀ ತುಂಗಭದ್ರೆಯನ್ನು ಮಂಥಿಸಿದಾಗ ಹೊರಬಂದ ಬೆಣ್ಣೆಯುಂಡೆಗಳನು  ಈ ತೆರದಿ ದಡದಲಿ ತೆಗೆದಿಟ್ಟವರಾರು? ಬಹುಶಃ ರಾಮಾಯಣದ ರಾಮನಿರಬಹುದು ಇಲ್ಲವೊ ವಾಲಿ ಸುಗ್ರೀವರಿರಬಹುದು, ಮತ್ತೊಮ್ಮೆ ನೋಡಲು ಅಂಜನಾದ್ರಿಯ ಹನುಮನಿರಬಹುದೇ? ಇಲ್ಲವೇ ರಾಮನಿಗಾಗಿಯೇ ಕಾಯ್ದು ಕುಳಿತ ಶಬರಿಯಿರಬಹುದೇ? ಈ ಶಿಲೆಗಳಿಗೆ ಎಲ್ಲರೂ ಗೊತ್ತು. ಇದೇ ರೀತಿ ಮನಸ್ಸಿನಲ್ಲಿ ಇತಿಹಾಸದ ಸಂಚಲನವನ್ನು ಈ ಹಠಮಾರಿ ಶಿಲೆಗಳು ಮೂಡಿಸದೇ ಹಾಗೆ ಬಿಡವು. ಈ ದೃಶ್ಯವೈಭವ ಕಂಡು ಮೀನಾ ಮೂಕಹಕ್ಕಿಯಂತೆ ಚಲಿಸುತ್ತಿದ್ದರೆ ಚೆಂದೂ ಅದು ಇದು ಅಂತ ಏನನ್ನೋ ಬಡಬಡಿಸುತ್ತಲೇ ಹೆಜ್ಜೆಹಾಕುತ್ತಿದ್ದ. ಕಾಣದೆ ಕಲ್ಲೆಡವಿ ಮೀನಾ ಅಯ್ಯೋ!.. ಅಮ್ಮಾ!..ಎಂದು ಚೀರುತ್ತ ಕೆಳಗೆ ಬಿದ್ದಳು. ಚೆಂದೂ ಸುಮ್ಮನೇ ನೋಡ್ಕೊಂತ ನಿಂತಿದ್ದ. ಆಗ ಅವಳು 'ಏನೋ ಸಿನೆಮಾದಲ್ಲಿ ಒಳ್ಳೆ ರೇಪ್ ಮಾಡೋ ವಿಲನ್ ತರಹ ದುರುಗುಟ್ಟಿಕೊಂಡು ನೋಡ್ತಾ ನಿಂತಿರುವೆಯಲ್ಲಾ ಎಂದು ಧಬಾಯಿಸಿದಳು. ಆತ ರೇಪಾ? ಹಾಗಂದರೇನು? ಎಂದ. ಬಾ ಇಲ್ಲಿ ಹೇಳಿಕೊಡುವೆ ಎನ್ನುತ್ತಾ ತನ್ನ ಉಳುಕಿದ ಕಾಲು ತಿಕ್ಕಲು ಹೇಳಿದಳು. ಆತ ನಿಧಾನವಾಗಿ ಉಜ್ಜಿ ಉಳುಕು ತೆಗೆದು ನೀವು ಇದಕ್ಕೆ ರೇಪ ಅಂತಿರಾ ಎಂದ? ಸಾಕು ಮುಚ್ಗೊಂಡು ಬಾರಲೋ ಎಂದು ಮೀನಾ ಕಷ್ಟಪಟ್ಟು ಎದ್ದು ನಡೆಯತೊಡಗಿದಳು.

                                          - ಆನಂದ ಮಾಲಗಿತ್ತಿಮಠ

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ...