ಹೆಸರು ರಾಮಾಪೂರ. ಒಂದಾನೊಂದು ಕಾಲದಲ್ಲಿ ರಾಮಾಪೂರದ ಬಸಸ್ಟ್ಯಾಂಡ ಇದೆಯಲ್ಲ ಅಲ್ಲೊಂದು ಪುಟಾಣಿ ಗುಡಿಸಲಿತ್ತು. ಪಕ್ಷಿಗಳು ಗೂಡು ಕಟ್ಟಿಕೊಳ್ಳುವುದನ್ನ ನೋಡಿದ್ದೀರಾ? ಅದೇ ತರಹ ಇಬ್ಬರು ಗಂಡಾ ಹೆಂಡತಿ ಬಲು ಕಷ್ಟಪಟ್ಟು ಆ ಗೂಡು ಕಟ್ಟಿಕೊಂಡಿದ್ದರು. ಅದರೊಳಗೆಯೆ ಅವರ ಸಂಸಾರ. ಆ ಬಡ ಸಂಸಾರದೊಳಗಿದ್ದ ಹೆಂಗಸಿನ ಹೊಂಗನಸುಗಳಿಗೇನೂ ಬರವಿರಲಿಲ್ಲ. ಗಂಡ ಹೆಂಡಿರಿಬ್ಬರೂ ದಿನವೂ ಕೂಲಿ ಹೋಗಬೇಕು, ದುಡಕೊಂಡ ಬರಬೇಕು, ಹೊಟ್ಟೆಗೆ ಹಿಟ್ಟ ಕಾಣಬೇಕು ಇಷ್ಟಾಗಿದ್ದರೆ ಚೆಂದಿತ್ತು ಅನಿಸುತ್ತದೆ. ಆದರೆ ಆಗಿದ್ದೇನು? ಗಂಡ ದುಡಕೊಂಡೇನೋ ಬರತಿದ್ದ. ಆದರೆ ದುಡಿದಿದ್ದೆಲ್ಲಾ ಕುಡಕೊಂಡು ಬರತಿದ್ದ. ಪಾಪ ಹೆಂಡತಿ ಎಷ್ಟಂತ ಸಹಿಸ್ಯಾಳು. ರೀ..ಯಾಕ್ರೀ ಹೀಗ ಮಾಡ್ತೀರಿ? ನೀವ ದುಡಿಯದಿದ್ದರೂ ಪರವಾಗಿಲ್ಲಾ; ಹಿಂಗ ದಿನಾ ಕುಡಕೊಂಡ ಬಂದ ನನ್ನ ಜೀವಕ ನಿಗ್ರಾ ಮಾಡಬ್ಯಾಡ್ರೀ; ಬೇಕಾದ್ರ ನಿಮ್ಮ ಕಾಲ ಬೀಳತೆನು ಅಂತ ಅಂಗಲಾಚಿ, ಕಣ್ಣೀರ ಹಾಕಾವ್ಳು. ಆದರ ಗಂಡನಿಗೆ ಹೆಂಡತಿ ಆಡೋ ಯಾವ ಮಾತೂ ನಾಟುತ್ತಿರಲಿಲ್ಲ. ಬದಲಾಗಿ ಏನು..ನೀ ದುಡದ ನನಗ ಹಾಕಾಕಿ? ಅಂದರ ನನಗ ದುಡದ ಹಾಕೋ ಯೋಗ್ಯತೆಯಿಲ್ಲ ಅಂತ ಸುತ್ತಿ ಬಳಸಿ ಹೇಳಾಕ ಬರತಿಯೇನ ಬೋಸುಡೆ ಅಂತ ಜಾಡಿ ಜಾಡಿಸಿ ಹೊಟ್ಟೆ, ಎದಿಯನ್ನದ ಒದ್ಯಾಂವ, ಕೈಗೆ ಏನ ಸಿಗತೈತಿ ಅದನ್ನ ತುಗೊಂಡು ಹೇರಾಂವ. ಒಟ್ಟಿನಲ್ಲಿ ಅವಳು ದಿನಾ ರಕ್ತ ಹಾಯಿಸಗೊಳ್ಳೊದು ತಪ್ಪುತ್ತಿರಲಿಲ್ಲ. ಇದು ಒಂದಿನದ ಸಾವಾಗಿರಲಿಲ್ಲ ದಿನಾ ಹಿಂಗ ನಡೆಯೋದು. ಜಗಳಕ್ಕ ಕಾರಣ ಬೇಕಾಗಿರಲಿಲ್ಲ, ಹಾವು ಮುಂಗುಸಿ ಆಡಿದಂಗ ಆಡೋವ್ರು. ಊರಾಗಿನ ಹಿರಿಯಾರು ಒಮ್ಮೆ ಹೇಳಿದ್ರು ಎರಡ ಬಾರಿ ಹೇಳಿದ್ರು, ಆದರೆ ದಿನಾ ಸಾಯೋರಿಗೆ ಅಳೋರಾರು? ಹಂಗಂತ ಸುಮ್ಮನಾಗಿಬಿಟ್ರು. ಬರ ಬರತ ಗಂಡಗ ತನ್ನ ಹೆಂಡತಿ ಶೀಲದ ಮ್ಯಾಲೆಯೆ ಸಂಶಯ ಬರಾಕ ಹತ್ತಿತ್ತು. ಅದಕ ಇಂಬ ಕೊಡುವ ಹಂಗ ಒಬ್ಬ ಮನುಷ್ಯಾನ ಜೊತೆ ಆಕಿ ಸಲುಗೆಯಿಂದ ಮಾತಾಡೋದನ್ನ ಗಂಡ ಎರಡ್ಮೂರ ಬಾರಿ ನೋಡಿಯೂ ನೋಡಿದ್ದ. ಈ ವಿಷಯಕನ ಸಂಜಿಮುಂದಷ್ಟ ಕುಡ್ಯಾಂವ ಹಗಲ ಹೊತ್ತೂ ಕುಡ್ಯಾಕ ಹತ್ತಿದ. ಗಂಡನ ಮನ್ಯಾಗ ಅದೆಷ್ಟೇ ಕಷ್ಟ ಬಂದರೂ ಹೆಂಡತಿ ತವರಿಗೆ ಒಂದ ಮಾತೂ ಹೇಳಲಿಲ್ಲ. ಎಂದ ಮದುವೆಯಾತೋ ಅಂದಿನಿಂದ ಅವಳು ಗಂಡನ ಕಟ್ಗೊಂಡಿರಲಿಲ್ಲ; ಬದಲಾಗಿ ಸೆರಗಿನ್ಯಾಗ ಕೆಂಡ ಕಟ್ಗೊಂಡಂಗ ಆಗಿತ್ತು. ಹೆಣ್ಣಿಗೆ ತವರಿನಾಶ್ರಯ ಇರಬೇಕೆನ್ನುವುದು ಸುಳ್ಳಲ್ಲ. ಒಂದ ವೇಳೆ ತವರಿಗೆ ಹೇಳಿ ಕಳುಹಿಸಿದರೂ ಅಲ್ಲೇರ ಯಾರಿದ್ರು? ರೋಗಿಷ್ಟ ಅವ್ವ. ಇದ್ದೊಬ್ಬ ಅಣ್ಣನೂ ಚಿಕ್ಕ ವಯಸನ್ಯಾಗ ಗೋವಾಕ ದುಡ್ಯಾಕಂತ ಹೋದಾಂವ ನಾಪತ್ತೆಯಾಗಿದ್ದ. ಹಿಂಗಾಗಿ ಅವಳಿಗೂ ಯಾವುದೇ ಆಸರ ಇಲ್ಲದಂಗ ಆಗಿ ಹೆಂಗರ ಇರವಾಲ್ಲ್ಯಾಕ ನನ್ನ ಗಂಡ; ನಾ ಇಲ್ಲೇ ಇರಬೇಕಂತ ಅನ್ನಾಕಿ. ದಿನಾ ದೇವರಿಗೆ ದೀಪಾ ಹಚ್ಚಿ ತನ್ನ ಸಂಸಾರ ಸರಿಯಾಗಲೆಪ್ಪಾ ಅಂತ ಬೇಡ್ಕೊಳ್ಳಾಕಿ. ಆದರೂ ಕಲ್ಲಾಗಿ ಕುಳಿತ ದೇವರಿಗೆ ಇವಳ ಧ್ವನಿ ಎಲ್ಲಿ ಕೇಳತೈತಿ? ಅವಳ ಕಣ್ಣೀರಂತೂ ನಿಲ್ಲಲೇ ಇಲ್ಲ.
ಅದೊಂದ ದಿನ ಸೂರ್ಯಾ ಬ್ಯಾಸೊತ್ತು ಮನಿಗೆ ಹೊಂಟಿರಬೇಕಾದರೆ ; ಕುಡದ ಅಮಲನ್ಯಾಗ ಬಂದಂತಹ ಗಂಡ ತನ್ನ ಗುಡಿಸಲಿನಿಂದ ಯಾವನೋ ಹೊರಹೋಗುವುದನ್ನ ಕಂಡು ಗಾಬರ್ಯಾದ. ಹೌದು ಹಿಂದೆ ನನ್ನ ಹೆಂಡತಿ ಜೊತೆ ಸಲುಗೆಯಿಂದ ಇದ್ದಾಂವ ಇವನೇ ಎಂದು ಗುರ್ತಿಸಿದ. ಹೆಂಡತಿ ಮ್ಯಾಲ ವಿಪರೀತ ಕೋಪಾನೂ ಬಂತು. ಒಂದ ಗಂಡಸು ಹೆಂಡತಿಯ ಯಾವುದೇ ತಪ್ಪನ್ನಾದರೂ ಕ್ಷಮಿಸಬಹುದು ಆದರೆ ಇಂತಹ ಹೇಸಿಗೆ ತಿನ್ನೋ ಕೆಲಸ ಮಾತ್ರ ಸಹಿಸಲಸಾಧ್ಯ ಎಂದೆನಿಸಿತೋ ಏನೋ..ಬಡಾ ಬಡಾ ಗುಡಸಲ ಹತ್ರ ಹೋದ. ಕಳ್ಳ ಬೆಕ್ಕಿನಂಗ ಒಳಗ ಹಣಿಕಿ ಹಾಕಿದ. ಹೆಂಡತಿ ಇನ್ನೂ ಮಂಚದ ಮ್ಯಾಲ ಮುಸುಕ ಹಾಕೊಂಡು ಮಲಗಿರೋದನ್ನ ನೋಡಿ; ಅಲಲಲ ಬಿದ್ದಾಳ ಹೆಂಗ ನೋಡ ಮಳ್ಳಿ. ನನ್ನ ಮನಿ ಹಿತ್ತಲದಾಗಿನ ಮರ ಇನ್ಯಾರದೋ ಮನಿಗೆ ನೆರಳ ಕೊಟ್ಟರ ಸಹಿಸೋದು ಹೆಂಗ? ಕಣ್ಣು ಕೆಂಪಾಗಿಸಿದ. ಅತ್ತ ಇತ್ತ ಏನೋ ಹುಡುಕಿದಾ ಸಿಕ್ಕಿತು. ಅಲ್ಲೆ ಬಾಟಲಿಯೊಳಗ ಚಿಮಣಿ ಎಣ್ಣೆ ಇತ್ತು. ಗುಡಸಲಿನ ಚಿಲಕಾ ಮೆಲ್ಲಗೆ ಗಟ್ಟ್ಯಾಗಿ ಹಾಕಿದ. ಚಿಮಣಿ ಎಣ್ಣಿ ಗೊಜ್ಜಿ ಕಿಸೆದಾಗಿನ ಕಡ್ಡಿಪೆಟ್ಟಿಗೆಯಿಂದ ಕಡ್ಡಿ ಗೀರಿ ಗುಡಸಲಕ ಬೆಂಕಿ ಹಚ್ಚಿಬಿಟ್ಟ. ಗುಡಸಲಾ ಧಗ ಧಗ ಉರಿಯೋದಕ್ಕ ಶುರು ಮಾಡಿತು. ನನ್ನ ಗಂಡಾ ಹೆಂಗರ ಇರವಾಲ್ಲ್ಯಾಕ ಅವನೇ ನನಗ ಶ್ರೀರಾಮಚಂದ್ರ..ಅವನ ನನ್ನ ಪಾಲಿನ ಇಂದ್ರ ಚಂದ್ರ ಎಂದುಕೊಂಡು ಬಾಳ್ವೆ ನಡೆಸುತ್ತಿದ್ದ ಬಡಪಾಯಿ ಜೀವ, ಬಾಳಿನಲ್ಲಿ ತಾನೂ ಇತರರಂತೆ ಚೆಂದಾಗಿರಬೇಕು, ಒಂದು ಒಳ್ಳೆ ಸೀರೆ ಉಡಬೇಕು, ನಾಕ ಮಂದ್ಯಾಗ ಕಿಮ್ಮತ್ತನ್ಯಾಗ ಬದುಕಬೇಕೆಂಬ ಸಣ್ಣ ಪುಟ್ಟ ಕನಸುಗಳೂ ಅವಳೊಂದಿಗೆಯೇ ಅಲ್ಲಿ ಸುಟ್ಟು ಭಸ್ಮವಾದವು.
ಧಗಾಧಗಾ ಧಗಿಸೋ ಗುಡಿಸಲದ ಬೆಂಕಿ ಕಂಡ ಊರ ಮಂದಿ ಲಬೋ ಲಬೋ ಅಂತ ಹೊಯ್ಕೊಂತ ಬರೋದು ಕಂಡು, ಹೆದರಿದ ಅವಳ ಗಂಡ ಅಲ್ಲಿಂದ ಜಾಗಾ ಖಾಲಿ ಮಾಡಿದ. ಅದಕ್ಕ ಹೇಳೋದು ತಮ್ಮಗೋಳಾ ಕುಡಿಬ್ಯಾಡ್ರಪ್ಪಾ ಕುಡಿಬ್ಯಾಡ್ರಿ. ಕುಡಿಯೋದ್ರಿಂದ ಸಂಸಾರ ಹಾಳ ಆಗ್ತಾವು ಅಂತ ಮಾತು ಮುಗಿಸಿದೆ.
ಎದುರಿಗೆ ಕುಂತ ಜನರೆಲ್ಲಾ ಮುಂದೇನಾಯ್ತು ಸಾಮಿ? ಆ ಗಂಡನಿಗೆ ಪೊಲೀಸ್ ಶಿಕ್ಷೆಯಾತ? ಊರವರೆಲ್ಲಾ ಅವನನ್ನ ಹಿಡಿದು ಅವನ್ಗೆ ಚೆನ್ನಾಗಿ ಬುದ್ದಿ ಕಲಿಸಬೇಕಾಗಿತ್ತು. ಈ ಗಂಡಸ ಜಾತೀನೆ ಹಂಗೆ, ತಾವ ಏನ ಮಾಡೀರೂ ನಡಿತೈತಿ ಅಂತ ತಮ್ಮ ತಮ್ಮ ಆಕ್ರೋಶವನ್ನ ಹೊರಹಾಕುತ್ತ ಕಥೆ ಮುಂದುವರೆಸುವಂತೆ ಕಣ್ಣಗಲಿಸಿ ನೋಡಹತ್ತಿದರು. ಮುಂದೇನಾಯ್ತು ಅಂತ ನನಗೂ ಗೊತ್ತಿಲ್ಲಾ ತಾಯಂದಿರೆ..ಯಾಕ ಅಂದ್ರ ಅಂದು ಬೆಂಕಿ ಹಚ್ಚಿ ಬಂದಾವ ಈಗ ಸುಮಾರು ಹತ್ತು ವರಷಾತು, ನಾ ತಿರುಗಿ ಹೋಗಲೇ ಇಲ್ಲ ಎಂದೆನು. ಎಲ್ಲರಿಗೂ ಸಿಡಲ ಬಡದಾಂಗ ಆತು. ಅಂದರ ನೀವು ಇಷ್ಟೊತ್ತು ಕಥೆ ಹೇಳಿದ್ದು? ಅಂತ ಅನ್ನುತ್ತಿರಬೇಕಾದರೆ 'ಹೌದಮ್ಮಾ ಆ ದುಷ್ಟ ಗಂಡ ಬೇರಾರೂ ಅಲ್ಲ ನಾನೇ..ಆ ನತದೃಷ್ಟ ಹೆಂಡತಿ ನನ್ನವಳೇ ಸುಬ್ಬಿ' ಅಂದೆ. ಬತ್ತಿ ಹೋದ ನನ್ನ ಕಣ್ಣೊಳಗೂ ನೀರಾಡಿತು. ಎಂದೂ ಇಲ್ಲದ ವೇದನೆಯಿಂದ ಯಾಕೋ ಎದೆ ಭಾರ ಅನ್ನಿಸತೊಡಗಿತು. ಅಂದಿನ ಪುರಾಣ ಕಾರ್ಯಕ್ರಮ ಅಲ್ಲಿಗೆ ಮುಗಿದು ಜನರೆಲ್ಲಾ ಗುಸುಗುಸು ಪಿಸುಪಿಸು ಅನ್ಕೊಂತ ಹೊರಬಿದ್ದರು.
ಏಯ್! ನೋಡೇ ಮಾಡೋದನ್ನೆಲ್ಲಾ ಮಾಡಿ ಈಗ ಬಿಳಿ ಅರಿವೆ ಹಾಕೊಂಡು ಪುರಾಣ ಹೇಳ್ಕೊಂತ ಕುಂತವ್ನೆ. ಈತನ ಬಾಯಲ್ಲಿ ಪುರಾಣ ಕೇಳೋದು ಒಂದೇ ಭೂತದ ಬಾಯಲಿ ಭಗವದ್ಗೀತೆ ಕೇಳೋದು ಒಂದೇ. ಆತ ನಮ್ಮನ್ನ ಒಂಥರಾ ನೋಡಾತ್ತಿದ್ನಲ್ಲಾ ಆಗಲೇ ನನಗನ್ನಿಸಿತ್ತು ಯಾಕೋ ಈ ಸಾಮಿ ಬರೊಬ್ಬರ ಇಲ್ಲಂತ. ನಾ ಅಂತೂ ನಾಳೆ ಬರೋದಿಲ್ಲ ಅಂತ ಕೆಲ ಹೆಂಗಸರು ಮಾತಾಡಿಕೊಂಡರೆ, ಉಳಿದವರು ಪಾಪ ಸ್ವಾಮೀಜಿ ಎಷ್ಟೊಂದು ನೊಂದವರೆ, ತಮ್ಮೊಳಗ ಇಂತಹ ನೋವಿದ್ದರೂ ಎಲ್ಲರಿಗೂ ಒಳಿತನ್ನೆ ಹೇಳುವುದಿದೆಯಲ್ಲ ಅದನ್ನು ಮೆಚ್ಚಿಕೊಳ್ಳಬೇಕು. ಅವನ ಹೆಂಡತಿಗೆ ಸರಿಯಾದ ಶಿಕ್ಷೇನೆ ಆಗಿದೆ. ಕಟ್ಟಗೊಂಡ ಗಂಡಗ ಮೋಸ ಮಾಡೋದು ಒಂದೇ, ದೇವರಿಗೆ ಮೋಸಾ ಮಾಡೋದು ಒಂದೇ ಎನ್ನುತ್ತಾ ಮನೆ ಸೇರಿಕೊಂಡರು.
ಮಾರನೇ ದಿನ ಆಕಾಶದೀಪ ಹೊತ್ತಿದ ಮೇಲೆ ಮಲಗಿರುವ ಊರು ಮಿಸುಕಾಡ ತೊಡಗಿತ್ತು. ಸಾವಿತ್ರಿ ಎಂದಿನಂತೆ ಮನೆಕೆಲಸ ಮಾಡಲೆಂದು ಲಕ್ಷ್ಮಮ್ಮನವರ ಮನೆಗೆ ಬಂದಿದ್ದಳು. ಅಮ್ಮಾವ್ರೆ ನಿನ್ನೆ ಸ್ವಾಮೀಜಿ ಪ್ರವಚನ ಎಷ್ಟ ಚೆಂದ ಹೇಳಿದರು ಅಂದ್ರೆ.. ತಮ್ಮ ಜೀವನದ ಕಥೆಯನ್ನೇ ಹೇಳಿ ಬಿಡೋದಾ. ನೀವೂ ಬರಬೇಕಿತ್ತು. ಅವರ ಮಾತ ಕೇಳಿದ್ರ ಏನೋ ಒಂದ ರೀತಿ ಮನಶ್ಯಾಂತಿಯಾಗುತ್ತೆ ಎಂದಳು. ಲಕ್ಷ್ಮಮ್ಮ ಹೌದು ಸಾವಿತ್ರಿ ನನಗೂ ಬರಬೇಕೆಂಬ ಆಸೆಯಿದೆ. ಇಂದು ನೀ ಹೋಗುವಾಗ ನನ್ನನ್ನೂ ಕರೆ ಎಂದಳು. ಆ ಮಾತಿನಂತೆ ಸಾವಿತ್ರಿ ಅಂದು ಸಂಜೆ ಸ್ವಾಮೀಜಿ ಪ್ರವಚನ ಕೇಳಲೆಂದು ಲಕ್ಷ್ಮಮ್ಮನವರನ್ನೂ ಕರೆದುಕೊಂಡು ಹೋದಳು.
ತಮ್ಮ ದಿನನಿತ್ಯದ ಧಿರೀಸಿನಲ್ಲಿ ಸಾಮೀಜಿಯವರು ಆಸೀನರಾಗಿದ್ದರು. ಎಂದಿಗಿಂತ ಅಂದು ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಹಳಬರು ತಪ್ಪಿಸಿಕೊಳ್ಳುವುದು ಹೊಸಬರು ಬರೋದು ಇದ್ದಿದ್ದೇ ಎಂದುಕೊಂಡು ಸ್ವಾಮೀಜಿಯವರು ಭಕ್ತರತ್ತ ಕಣ್ಣಾಡಿಸಿ ಪ್ರವಚನ ಶುರು ಮಾಡಿದರು. ಸುಮಾರು ಒಂದು ಗಂಟೆಯ ಪ್ರವಚನದಲ್ಲಿ ಸಾಮೀಜಿಯವರು ಲಕ್ಷ್ಮಮ್ಮನವರನ್ನು ನೂರಾರು ಬಾರಿ ನೋಡಿದ್ದರು. ಹೀಗಾಗಿ ಲಕ್ಷ್ಮಮ್ಮನವರಿಗೆ ಇರಸುಮುರುಸಾಗಿ 'ಲೇ ಸಾವಿತ್ರಿ ಇದೆಂಥ ಸ್ವಾಮೀಜಿ ಕಣೇ..ಹೆಣ್ಮಕ್ಕಳನ್ನ ಕಂಡೇ ಇಲ್ಲ ಎನ್ನುವಂತೆ ನನ್ನನ್ನೇ ಕೆಕ್ಕರಿಸಿ ನೋಡತೈತೆ' ಎಂದು ಕುಟುಕಿದಳು. 'ಅಮ್ಮಾವ್ರೇ ನೀವ ಧರಿಸಿರುವ ಆಭರಣಗಳು, ನಿಮ್ಮ ಈ ಜರತಾರಿ ಸೀರೆ ಎಂಥವರನ್ನೂ ತಿರುಗಿ ನೋಡೋ ಹಂಗೆ ಕಣ್ಸೆಳೆಯುತ್ತವೆ ತಲೆಕೆಡಿಸಿಕೊಳ್ಳಬೇಡಿ ಎಂದಳು ಸಾವಿತ್ರಿ. ಲಕ್ಷ್ಮಮ್ಮ ಮಾತ್ರ ಈ ಸಾವಿತ್ರಿ ಮಾತು ಕೇಳಿ ಸುಮ್ಮನೆ ಇಲ್ಲಿಗೆ ಬಂದು ತಗಲಾಕಿಕೊಂಡೆ ಎಂದು ಮನಸ್ಸಿನಲ್ಲಿಯೇ ಹಲುಬಿದಳು. ಇದೇ ಗೊಂದಲದಲ್ಲಿರಬೇಕಾದರೆ ಸ್ವಾಮೀಜಿಗಳ ಪ್ರವಚನ ಯಾವಾಗ ಮುಗಿಯಿತೊ ತಿಳಿಯಲೇ ಇಲ್ಲ. ಆಗಲೇ ಎಲ್ಲಾರೂ ಎದ್ದು ಸ್ವಾಮೀಜಿ ನೀಡುವ ರುದ್ರಾಕ್ಷಿ ಪ್ರಸಾದಕ್ಕೆ ಪಾಳೆ ಹಚ್ಚಿದ್ದರು. ಬೇಡವೆಂದರೂ ಕೇಳದೆ ಸಾವಿತ್ರಿಯ ಬಲವಂತಕ್ಕೆ ಲಕ್ಷ್ಮಮ್ಮನವರೂ ಪಾಳೆದಲ್ಲಿ ನಿಂತರು. ಇವರ ಸರದಿ ಬಂದಾಗ ಸ್ವಾಮೀಜಿಗಳು ಲಕ್ಷ್ಮಮ್ಮನವರತ್ತ ಬೊಟ್ಟು ಮಾಡಿ ; ಯಾರಿವರು? ಎಂದು ಸಾವಿತ್ರಿಯನ್ನು ಪ್ರಶ್ನಿಸಿದರು. ಇವರ ಹೆಸರು ಲಕ್ಷ್ಮಮ್ಮ ಇವರ ಮನೆಯಲ್ಲಿಯೇ ನಾ ಕೆಲಸಾ ಮಾಡೋದು ಎಂದಳು ಸಾವಿತ್ರಿ. ಸ್ವಾಮೀಜಿಯವರು ಹೌದಾ ನೀವು ಐದು ನಿಮಿಷ ಒಳಗಡೆ ಕುತ್ಗೊಂಡಿರಿ ಅಂತ ಹೇಳಿ ಉಳಿದವರಿಗೆ ಪ್ರಸಾದ ವಿತರಣೆ ಮುಂದುವರೆಸಿದರು.
ಸ್ವಾಮೀಜಿಯ ಮಾತಿನಂತೆ ಕೋಣೆಯ ಒಳಗಡೆ ಕುಂತ ಲಕ್ಷ್ಮಮ್ಮನವರ ಮನಸ್ಸು ಸಮುದ್ರದ ನೀರಿನಂತೆ ಚಂಚಲವಾಗಿತ್ತು. ಯಾವ ಪ್ರಸಾದನೂ ಬ್ಯಾಡ ಹೋಗೋಣು ಬಾರೆ ಅಂತ ದುಂಬಾಲು ಬಿದ್ದಳು. ಅಮ್ಮಾವ್ರೆ ಸಾಮೀಜಿಯವರು ಏನೋ ಹೇಳೋವ್ರಿದ್ದಾರೆ; ಬಹುಶಃ ಮೊನ್ನೆ ಮಕ್ಕಳ ಭಾಗ್ಯವಿಲ್ಲವೆಂದು ನನ್ನ ಸಮಸ್ಯೆ ಹೇಳಿಕೊಂಡಿದ್ದೆ, ಆ ವಿಷಯದ ಬಗ್ಗೆ ಏನಾದರೂ ಹೇಳುವರೋ ಏನೋ ಸ್ವಲ್ಪ ತಾಳಿ ಎಂದಳು ಸಾವಿತ್ರಿ. 'ಲೇ ಈತ ಯಾಕೋ ಕಳ್ಳ ಸಾಮೀ ಇದ್ದಂಗ ಕಾಣ್ತಾವ್ನೆ..ಏನೊಂದಕ್ಕೂ ಎಚ್ಚರಿಕೆಯಲ್ಲಿರಬೇಕು' ಎಂದಳು ಲಕ್ಷ್ಮಮ್ಮ. ಅಷ್ಟರಲ್ಲಿ ಸ್ವಾಮೀಜಿ ಕೆಮ್ಮುತ್ತಾ ಒಳಬಂದರು. ಲಕ್ಷ್ಮಮ್ಮ ವಾರೆಗಣ್ಣಿನಲ್ಲೇ ಆತನನ್ನು ದಿಟ್ಟಿಸಿದಳು. ಮುಖವೇ ಕಾಣದಂತೆ ಗಡ್ಡ ಮೀಸೆಗಳು, ನಾಟಕೀಯವೆಂಬಂತೆ ತೋರುವ ಹಣೆಯ ವಿಭೂತಿ ಉಹ್ಞೂಂ! ಈತನಲ್ಲಿ ಸ್ವಾಮೀಜಿಯ ಕಳೆಯೇ ಇಲ್ಲ. ಪಕ್ಕಾ ಮೋಸಗಾರ ಎಂದು ತೀರ್ಮಾನಿಸುತ್ತಿರಬೇಕಾದರೆ; ಸ್ವಾಮೀಜಿ ಸಾವಿತ್ರಮ್ಮನಿಗೆ- 'ಸಾವಿತ್ರಮ್ಮ ನಿಮ್ಮ ಲಕ್ಷ್ಮಮ್ಮನವರನ್ನು ನೋಡಿದರೆ ನನಗ ನನ್ನ ಹೆಂಡ್ತಿ ನೆನಪಾಗಾತಾಳು' ಎನ್ನಬೇಕೆ. ಮೊದಲೇ ಕಾದ ಕಾವಲಿಯಂತಾಗಿದ್ದ ಲಕ್ಷ್ಮಮ್ಮನ ಮನಸ್ಸಿನ ಮ್ಯಾಲ ಈ ಮಾತುಗಳು ಹಣಿ ನೀರ ಎರಚಿದಂತಾಯ್ತು. ಇನ್ನು ಚುರ್ರಗೂಡದೆ ಬಿಟ್ಟಿತ್ತೆ. ಒಂದ ಸವನೆ ಸ್ವಾಮೀಜಿನ ಬೈಯತೊಡಗಿದಳು. ಕಂಡ ಕಂಡವರಿಗೆಲ್ಲಾ ಹೆಂಡತಿ ಅಂತ ಕರೆಯೋದಕ್ಕೆ, ನಿನಗ್ಯಾರೂ ಅಕ್ಕ ತಂಗಿಯರಿಲ್ಲ್ವೆನೋ? ಕೇವಲ ಗಡ್ಡ ಬಿಟ್ಟರೆ ಸ್ವಾಮಿ ಆಗೋದಿಲ್ಲಾ ಮನಸ್ಸಿನೊಳಗಿನ ಕಾಮನೆಗಳನ್ನು ಬಿಡಬೇಕು ಅಂದಾಗ ಸ್ವಾಮೀಜಿಯಾಗಬಹುದು. ನಿನ್ನ ಮುಖಾ ನೋಡಿದ್ರೆ ಅಸಹ್ಯವಾಗುತ್ತೆ ಥೂ.. ನಿನ್ನ ಜನುಮಕ ಬೆಂಕಿ ಹಾಕಾ ಎಂದು ಬೈಯ್ದಳು.
ಅವಳ ಮಾತನ್ನು ಆಲಿಸಿದ ಸ್ವಾಮೀಜಿಗೆ ಒಳಗೊಳಗೆಯೇ ಸಂತೋಷವಾಯಿತು. ಬಾರಲೇ ಸಾವಿತ್ರಿ ಎಂದು ಸಿಡಿಮಿಡಿಗೊಂಡು ಹೋಗುತ್ತಿರುವ ಲಕ್ಷ್ಮಮ್ಮನವರನ್ನು ಸುಬ್ಬೂ ಎಂದು ಕೂಗಿದರು. ಆ ಹೆಸರು ಕೇಳಿದಾಕ್ಷಣವೇ ಗಕ್ಕನೆ ನಿಂತು ಬಿಟ್ಟಳು ಲಕ್ಷ್ಮಮ್ಮ.
*****
ಸ್ವಾಮೀಜಿಯವರನ್ನ ಲಕ್ಷ್ಮಮ್ಮ ತನ್ನ ಮನೆಗೆ ಕರೆದುಕೊಂಡು ಹೋದಳು. ಹತ್ತು ವರಷಗಳ ಹಿಂದೆ ಕಾಣೆಯಾಗಿದ್ದ ತನ್ನ ಕುಡುಕ ಗಂಡ ಬೇರಾರೂ ಅಲ್ಲ, ಈ ಸ್ವಾಮೀಜಿಯೇ ಎಂದು ತಿಳಿದು ತುಂಬಾ ಸಂತೋಷಗೊಂಡಿದ್ದಳು. ತನ್ನ ತಾಳಿ ಭಾಗ್ಯವನ್ನು ಮರಳಿಸಲು ಸಹಾಯ ಮಾಡಿದ ಸಾವಿತ್ರಿಗೆ ಸಾವಿರ ಬಾರಿ ಧನ್ಯವಾದಗಳನ್ನು ತಿಳಿಸಿದಳು. ಮುಖದ ತುಂಬ ಗಡ್ಡ ಮೀಸೆಗೂಡಿ ತನ್ನ ಗಂಡನನ್ನು ಗುರುತಿಸಲು ಅವಳಿಂದ ಸಾಧ್ಯವಾಗಿರಲಿಲ್ಲ, ಆದರೆ ಸ್ವಾಮೀಜಿ ಮಾತ್ರ ಒಂದೇ ನೋಟದಲ್ಲಿ ತನ್ನ ಹೆಂಡತಿಯನ್ನು ಗುರ್ತಿಸಿದ್ದನು. ಆದರೆ ಅದನ್ನು ನಂಬುವುದು ಅವನಿಗೆ ಸುಲಭವಾಗಿರಲಿಲ್ಲ. ಯಾವ ಹೆಂಡತಿಗೆ ಕೈಯಾರೆ ಬೆಂಕಿ ಇಟ್ಟಿದ್ದನೋ ಅವಳು ಜೀವಂತವಾಗಿರಲು ಹೇಗೆ ಸಾಧ್ಯವೆಂದು ಯೋಚಿಸುತ್ತಿರಬೇಕಾದರೆ ಅವಳು ಬೈದ ಬೈಗುಳಗಳಿಂದ ಇವಳೇ ತನ್ನ ಹೆಂಡತಿಯೆಂದು ನಿರ್ಧರಿಸಿ ಅವಳನ್ನು ಸುಬ್ಬೂ ಅಂತ ಕರೆದಿದ್ದ.
ರೀ..ಇಷ್ಟು ದಿನ ಎಲ್ಲಿದ್ರಿ? ನನ್ನನ್ನು ನಡು ನೀರಲ್ಲೇ ಹಾಗೇಕೆ ಬಿಟ್ಟು ಹೋದಿರಿ? ನಿಮ್ಮನ್ನ ಹುಡುಕದ ಒಂದ ಜಾಗೆನೂ ಉಳಿಯಲಿಲ್ಲ. ಊರವರೆಲ್ಲಾ ನಿನ್ನ ಗಂಡ ಕುಡದ ಕುಡದ ಎಲ್ಲೆರ ಬಿದ್ದ ಸತ್ತಿರಬೇಕು ಅಂತ ಹೇಳಾವ್ರು. ನಾನೂ ಕಾದು ಕಾದು ನೀವು ಬಹುಶಃ ಎಲ್ಲರೂ ಹೇಳುವಂತೆ ಅಯ್ಯೋ..ಎಂದು ತಲೆ ಚಚ್ಚಿಕೊಂಡಳು. ರೀ..ಅವತ್ತು ನಾನೂ ಸತ್ತೇ ಹೋಗುತ್ತಿದ್ದೆ. ಆದರೆ ದೇವರು ದೊಡ್ಡವನು ಕೂದಲೆಳೆಯಲ್ಲಿ ಬದುಕಿಸಿಬಿಟ್ಟ. ನೀವು ಮನೆ ಬಿಟ್ಟು ಹೋದ ದಿನ ಏನಾಯ್ತೆಂದರೆ- ನಾನು ಕೂಲಿ ಮುಗಿಸಿ ಮನೆಗೆ ಬಂದು ಬಾಂಡೆ ತೊಳೆಯುತ್ತಿದ್ದೆ. ಯಾರೋ ಅಪರಿಚಿತ ಹೆಣ್ಣ ಮಗಳು ಬಂದು ಎವ್ವಾ ಕುಡಿಯಲು ಸ್ವಲ್ಪ ನೀರು ಕೊಡವ್ವಾ ಅಂತ ಕೇಳಿದಳು. ಆಕೆ ತುಂಬಾ ಸುಸ್ತಾಗಿರುವಂತೆ ಕಂಡಳು. ಅವಳನ್ನ ಗುಡಸಿಲೊಳಗಿನ ಮಂಚದ ಮ್ಯಾಲ ಕುಂಡ್ರಿಸಿದೆ. ನೀರು ಕೊಟ್ಟೆ ಕುಡಿದಳು. ಪಾಪ ಚಹಾ ಮಾಡಿಕೊಟ್ಟರಾಯಿತೆಂದು ಒಳಗೆ ಹೋದರೆ ಚಹಾಪುಡಿ ತೀರಿತ್ತು. ಎವ್ವಾ ನೀವು ಇಲ್ಲೆ ಮಂಚದ ಮ್ಯಾಲ ಮಲಕೊಂಡು ಅರಾಮ ಮಾಡಿ ಎಂದು ಹೇಳಿ ಚಹಾಪುಡಿ ತರಲು ಹೊರಗೆ ಹೋಗಿದ್ದೆ ನೋಡಿ, ಬರುವಷ್ಟರಾಗ ಅದ್ಯಾರೋ ಪಾಪಿಗಳು ಗುಡಸಲಕ ಬೆಂಕಿ ಇಟ್ಟಿದ್ದರು. ನಮ್ಮ ಗುಡಸಲಾ ನನ್ನ ಕಣ್ಮುಂದೆಯೆ ಧಗಧಗಿಸಿ ಹೋಯ್ತು. ಪಾಪ ಆ ಹೆಣ್ಮಗಳು ದೇವರಂಗ ಬಂದು ನನ್ನ ಜೀವಾ ಉಳಿಸಿದಳು ಎಂದು ಕಣ್ಣೀರಾದಳು.
ಇದಕ್ಕೆಲ್ಲಾ ಕಾರಣ ನಾನೇ ಎಂದು ಹೇಳಲು ಹೊರಟಿದ್ದ ಸ್ವಾಮೀಜಿಯವರನ್ನು ಅರ್ಧದಲ್ಲಿಯೇ ತಡೆದ ಸಾವಿತ್ರಿ- 'ಸ್ವಾಮೀಜಿಗಳೇ ಸ್ವಲ್ಪ ಹೊರಗ ಬನ್ನಿ ಮಾತಾಡಬೇಕು' ಅಂತ ಕರೆದೊಯ್ದಳು.
ನೋಡ್ರಿ ನಾನಂತೂ ನಿಮ್ಮಷ್ಟು ತಿಳಿದವಳಲ್ಲ ಆದರೂ ಒಂದು ಹೆಣ್ಣಾಗಿ ಕೆಲವು ಮಾತ ಹೇಳತೇನಿ ಕೇಳಿ. ಈಗೇನಾದರೂ ಅಮ್ಮಾವ್ರಿಗೆ ಆ ಗುಡಿಸಲಿಗೆ ಬೆಂಕಿ ಹಚ್ಚಿದ್ದು ನೀವೇ ಅಂತ ತಿಳಿದರೆ ದೊಡ್ಡ ಅನಾಹುತವೇ ಆದೀತು? ಈ ಭೂಮಿ ಮ್ಯಾಗೆ ಮಳೆಯಾದ ಮ್ಯಾಲ ಬಿಸಲ, ಬಿಸಲಾದ ಮ್ಯಾಲ ಮತ್ತ ಮಳೆ ಬರಬಹುದು ಆದರ ಜೀವನದಾಗ ಕಳೆದುಕೊಂಡಿದ್ದು ಮತ್ತ ಸಿಗೋದಿಲ್ಲಾ. ಆದರ ಅದೀಗ ನಿಮಗ ಸಿಗಾತೈತಿ. ಸತ್ಯ ಹೇಳಿ ಮತ್ತ ಕಳ್ಕೋಬ್ಯಾಡ್ರಿ. ಯಾಕಂದ್ರ ಅಮ್ಮಾವ್ರು ಅಂದು ಸುಟ್ಟು ಹೋಗದೆ ಹೇಗೋ ಬಚಾವಾದರು. ಈಗೇನಾದರೂ ನೀವು ಅವರ ಶೀಲದ ಮ್ಯಾಲ ಶಂಕೆಪಟ್ಟಿದ್ರಿ ಅಂತ ತಿಳಿದರೆ ಅವರು ನಿಜವಾಗಿಯೂ ಸುಟ್ಟುಹೋಗುತ್ತಾರೆ. ಅದಕ್ಕೆ ದಯವಿಟ್ಟು ಆ ಸತ್ಯವನ್ನು ಮುಚ್ಚಿಟ್ಟುಬಿಡಿ ಎಂದು ವಿನಂತಿಸಿಕೊಂಡಳು. ಸ್ವಾಮೀಜಿಗೆ ಸಾವಿತ್ರಿಯ ಮಾತುಗಳು ಖರೆ ಎನಿಸಿದವು. ಅಲ್ಲಿಗೆ ಸತ್ಯದ ಸಮಾಧಿಯಾಯಿತು.
ಅಷ್ಟರಲ್ಲಿ ಯಾರೋ ಒಬ್ಬ ಲಕ್ಷ್ಮಮ್ಮನ ಮನೆಗೆ ಬಂದ. ಹೌದು ಈತನೇ ಅಲ್ಲವೇ ಹಿಂದೆ ನನ್ನ ಸುಬ್ಬಿಯೊಡನೆ ಸಲುಗೆಯಿಂದ ಇದ್ದವನು ಎಂದು ಸ್ವಾಮೀಜಿ ಗುರುತಿಸುವಷ್ಟರಲ್ಲಿಯೇ ಲಕ್ಷ್ಮಮ್ಮ ಅವನನ್ನು ತನ್ನ ಅಣ್ಣನೆಂದು ಗಂಡನಿಗೆ ಪರಿಚಯಿಸಿ ಕೊಟ್ಟಳು. 'ಅದೇ ರೀ ಚಿಕ್ಕ ವಯಸ್ಸನ್ಯಾಗ ಗೋವಾಕಂತ ದುಡ್ಯಾಕ ಹೋಗಿದ್ನಲ್ಲ ಅವನೇ ಈತ. ನೀವು ಊರಬಿಡೋ ಒಂದೆರಡ ದಿನದ ಹಿಂದೆಯೇ ಬಂದಿದ್ದ. ಆದರೆ ನಿಮಗ ಭೇಟಿ ಮಾಡಿಸಲು ಆಗಿರಲಿಲ್ಲ ಎಂದು ನಗುತ್ತಲೇ ಹೇಳಿದಳು. ಸ್ವಾಮೀಜಿಗೆ ತನ್ನ ತಪ್ಪಿನ ಅರಿವಾಯಿತು. 'ಛೇ! ನನಗೆ ಅಣ್ಣ ತಂಗಿಯ ಸಂಬಂಧಾನೂ ಗುರ್ತಿಸಲಾಗಲಿಲ್ಲವಲ್ಲಾ' ಎಂದು ತನ್ನ ಮೇಲೆ ತನಗೇ ಅಸಹ್ಯವಾಯಿತು. ದಯವಿಟ್ಟು ಕ್ಷಮಿಸಿಬಿಡು ಸುಬ್ಬಿ ನಿನಗೆ ಯಾರೂ ನೀಡಲಾರದಷ್ಟು ನೋವು ನೀಡಿರುವೆ. ನಿನ್ನ ಚಿಕ್ಕ ಆಸೆಯನ್ನೂ ಈಡೇರಿಸದ ಪಾಪಿ ನಾನು. ದಯವಿಟ್ಟು ಕ್ಷಮಿಸಿಬಿಡು ಎಂದು ಬೇಡಿಕೊಂಡ. ಪರವಾಗಿಲ್ಲ ಬಿಡ್ರಿ 'ನಾನು ದೇವರಿಗೆ ದಿನಾಲೂ ನನ್ನ ಗಂಡನ ಕುಡಿತವನ್ನು ಬಿಡಿಸು, ನನ್ನ ಸಂಸಾರವನ್ನು ಸರಿಪಡಿಸೆಂದು ಬೇಡಿಕೊಳ್ಳುತ್ತಿದ್ದೆ; ಆದರೆ ಅದನ್ನು ಈಡೇರಿಸಲು ಅವನಿಗೆ ಹತ್ತು ವರ್ಷ ಬೇಕಾಯಿತು' ಎನ್ನುತ್ತಾ ಸುಬ್ಬಲಕ್ಷ್ಮಮ್ಮ ದೇವರಿಗೆ ಧನ್ಯವಾದಗಳನ್ನು ಅರ್ಪಿಸಿದಳು.
- ಶ್ರೀ ಆನಂದ ಮಾಲಗಿತ್ತಿಮಠ
Super dost
ReplyDeleteStory super
ReplyDelete