Skip to main content

ಪುಣ್ಯವತಿಯ ಪವಾಡ

          
         ರೀ ವತ್ಸಲಾರವರೇ ಸರಿಯಾದ  ಸಮಯಕ್ಕೆ ಬಂದಬಿಡಿ..ಈ ಸರತಿ ಮೇಕಪ್ ಚೆನ್ನಾಗಿರಬೇಕು ನೋಡಿ. ಬಂದವರೆಲ್ಲಾ ನನ್ನೇ ನೋಡಬೇಕು. ಒಳ್ಳೆ ಸಿನಮಾ ಹಿರೋಯಿನ್ ತರಹ ಕಾಣಬೇಕು. ಮೊನ್ನೆ ಎಂಗೇಜಮೆಂಟ್ ಲ್ಲಿ ಆ ಶ್ಯಾಮಲಾರವರೆಗೆ ಮಾಡಿದ್ರಲ್ಲಾ ಅದೇ ರೀತಿ ಮಾಡಬೇಕು ಎಂದು ಮೇಕಪ್ ದವಳಿಗೆ ಫೋನ್ ಮಾಡಿ ತಿಳಿಸಿದಳು ದೀವ್. ಇದೆಂತಹ ಹೆಸರೆಂದುಕೊಳ್ಳಬೇಡಿ, ಅವಳ ಮೂಲ ಹೆಸರು ದ್ಯಾವಮ್ಮ. ಸಿಟಿಯೊಳಗೆ ಸ್ವೀಟಾಗಿರೊಲ್ಲ ಎಂದುಕೊಂಡು ದೀವ್ ಆಗಿದ್ದಳು. 
        ಮೇಕಪ್ ವತ್ಸಲಾರವರು ದೀವ್ ನ ಫೋನು ಬಂದ ನಂತರ ಕಕ್ಕಾಬಿಕ್ಕಿಯಾಗಿದ್ದರು. ಅಲ್ಲಾ ಕಾಗೆನ ಹೋಗಿ ಪಾರಿವಾಳ ಮಾಡು ಅಂದ್ರೆ ಹೇಗ ಮಾಡೋದು? ಈ ದೀವೊ ಮೇಕಪ್ ಚೆನ್ನಾಗಿಲ್ಲಾ ಚೆನ್ನಾಗಿಲ್ಲಾ ಅಂತ ನನ್ನೇ ಆಡಿಕೊಳ್ಳುತ್ತಾಳೆ. ನಾನೋ ಎಂತೆಂಥ ಫಿಲ್ಮ ಆ್ಯಕ್ಟರಗಳಿಗೆ ಮೇಕಪ್ ಮಾಡಿದ್ದೇನೆ. ಅದೂ ಅಲ್ಲದೇ ಮದುವೆನೆ ಆಗದೆ ಇರುವ ಅದೆಷ್ಟೋ ಕನ್ಯೆಗಳ ಕಪ್ಪುಮೋತಿಗಳಿಗೆ ರೋಡಿಗೆ ಟಾರ್ ಬಳಿಯುವ ರೀತಿ ದಪ್ಪ ದಪ್ಪಗ ಮೇಕಪ್ ಬಳಿದು ಕಂಕಣ ಭಾಗ್ಯ ಲಭಿಸುವಂತೆ ಮಾಡಿರುವೆ. ಆ ಪ್ರಶಾಂತ ಇದ್ದನಲ್ಲಾ ಆತ  ನಾನು ಮೇಕಪ್ ಮಾಡಿದ ಹುಡುಗಿಯನ್ನೇ ನೋಡಿ, ಅವಳಿಗೆ ನೀನೇ ದೇವಲೋಕದ ರಂಭೆ, ನೀನೇ ಊರ್ವಶಿ ಎಂದು ಮದುವೆಯಾಗಿದ್ದ, ಯಾವಾಗ ಅವನ ಹೆಂಡ್ತಿ ಮುಖದಿಂದ ಮೇಕಪ್ ಹೋಯಿತೋ ಅವಳ ನಿಜರೂಪ ಕಂಡು ಆತನಿಗೆ ಹಾರ್ಟ್ ಅಟ್ಯಾಕೇ ಆಗೋಯ್ತು. ಅಂತಹ ದಿವ್ಯಶಕ್ತಿಯಿರುವ ಈ ವತ್ಸಲಾನ ಮೇಕಪ್ ಗೇ ಹೆಸರಿಡಲು ಬರುತ್ತಾಳೆ ದೀವ್ ಎಂದು ಮನಸ್ಸಿನಲ್ಲಿಯೇ ಗೊಣಗಿಕೊಂಡಳು ವತ್ಸಲಾ. 
        ದೀವ್ ತುಂಬಾ ಗಡಿಬಿಡಿಯಿಂದ ಒಳ್ಳೆ ಹೊಟ್ಟೆ ಹಸಿದು ಓಡಾಡೊ ಸೊಂಡೀಲಿ ಟೈಪು ಮನೆತುಂಬ ಓಡ್ಯಾಡಾತ್ತಿದ್ದಳು. 
         ಅವರತ್ತೆ ಬೆಡ್ ಮೇಲೆ ಹುಷಾರಿಲ್ಲದೆ ಮಲಗಿಕೊಂಡು..ಲೇ ದ್ಯಾವಿ ಒಳ್ಳೆ ಹಾಳಿ ಹದ್ದು ಹಾರ್ಯಾಡಿದಂಗ ಆಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ಹಾರ್ಯಾಡಾತಿಯಲ್ಲ. ಏನ ನಡಿಸಿದಿಯೆ..? ಎಂದು ಹಲುಬಿತು. 
                ಈ ಓಲ್ಡ ಲೇಡಿಗೆ ಸಾವಿರ ಬಾರಿ ಹೇಳಿರುವೆ..ದ್ಯಾವಿ ಅನಬೇಡ ಅಂತ. ಸಾಯೋ ಟೈಮ್ ಬಂದರೂ ಸೊಸಿ ಮ್ಯಾಲ ದಬ್ಬಾಳಿಕೆ ನಿಲ್ಲಸವಾತು ಅಂದುಕೊಂಡು ಏಯ್ ಅತ್ತೆ ಸುಮ್ಮನೆ ಮಲಕೊಂಡಿರು. ಊರ ಉಸಾಬರಿ ನಿನಗ್ಯಾಕ ಬೇಕು ಅಂತ ಗದರಿದಳು.                      ಏನೋ ನೆನಪಾಗಿ ಮೊಬೈಲ ತೆಗೆದು ಫೋನ್ ಮಾಡಿ- ಹಲೋ ಟಿ.ವಿ.ಟ್ವೆಂಟಿ ನಾ? ಎಂದಳು. ಎಸ್ ಆಂಟಿ ಎಂದಿತು ಆಕಡೆ ಧ್ವನಿ. ಯಾವನ್ಲೇ ಅವನು ಬಾಡ್ಯಾ ಆಂಟಿ ಅನ್ನೋವ್ನು...ಇನ್ನೊಮ್ಮೆ ಹಾಗಂದರೆ ಸೊಂಟಾನೆ ಮುರಿತೇನಿ ಅಂತ ಗದರಿದಳು. ಆತ ಸ್ಸಾರಿ ಎಂದ. ಏನಿಲ್ಲಾ ಆ್ಯಕ್ಚುಲಿ ಬರೋ ಸಂಡೇ ನಮ್ಮನೇಲಿ ಪ್ರೆಸ್ ಕಾನ್ಫರೆನ್ಸ್ ಇಟ್ಕೊಂಡೇವಿ ದಯವಿಟ್ಟು ಬರಬೇಕು ಎಂದು ಹೇಳಿ ಫೋನಿಟ್ಟಳು. 
               ಮೊದಲೇ ಸುದ್ದಿಗಳಿಲ್ಲದೆ ಸೊಳ್ಳೆ ಹೊಡೀತಾ ಕುಂತಿರುವವನಿಗೆ ಈ ಸುದ್ದಿ ಕೇಳಿ ಅಬ್ಬಾ ಕೊನೆಗೂ ಒಂದು ಸುದ್ದಿ ಸಿಕ್ತಲ್ಲಾ ಎಂದು ಹಸಿದವನಿಗೆ ಹಬ್ಬದೂಟಾ ಸಿಕ್ಕಷ್ಟು ಖುಷಿ ಆತು. ಇದೇ ಸುದ್ದಿಯನ್ನೇ ಚ್ಯೂಯಿಂಗ್ ಗಮ್ ತರಹ ಎಳೆದೆಳೆದು ಕನಿಷ್ಠ ಒಂದು ವಾರವಾದರೂ ದುಡ್ಡು ಸಂಪಾದಿಸಬಹುದೆಂದು ಆಲೋಚಿಸಿದ. 
         ದೀವ್ ತನ್ನ ಮನೆ ಕೆಲಸದವರನ್ನ ಕರೆದು- ನೋಡಿ ಎಲ್ಲಾ ಕ್ಲೀನ್ ಆಗಬೇಕು. ದೊಡ್ಡ ದೊಡ್ಡ ಜನಾ ಬರ್ತಾರೆ. ಅವರ ಮುಂದೆ ಈ ರೀತಿ ಡರ್ಟಿ ಡರ್ಟಿಯಾಗಿದ್ದರೆ ನಮ್ಮನೆ ಮಾನ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತೆ. ಅದಕ್ಕೆ ಎಲ್ಲಾ ಕ್ಲೀನ್ ಆಗಬೇಕು ಎಂದು ಆದೇಶ‌ ಮಾಡಿದಳು.
             ಕೆಲಸದವರೋ ಥೂ! ಈ ಎಮ್ಮನ ಸಲುವಾಗಿ ಸಾಕಾಗಿ ಹೋಯ್ತು. ಕ್ಲೀನ್ ಕ್ಲೀನ್ ಅಂತ ಬಡ್ಕೋತೈತೆ. ಆ ಕೆಂಪು ಕಾರಿದೆಯಲ್ಲಾ..ಒರೆಸಿ ಒರೆಸಿ ಈಗ ಬೆಳ್ಳಗ ಆಗಿ ನಿಂತೈತಿ..ಈ ವರಾಂಡಾ ಪದೇ ಪದೇ ಕಸಾ ಹೊಡೆದೂ ಹೊಡೆದೂ ಹಿಂದೆ ಹೊಟೇಲಲ್ಲಿ ಕೊಡುವ ಉತ್ತಪ್ಪ ತರಹ ದಪ್ಪಗೆ ಇದ್ದ ಟೈಲ್ಸು ಈಗ ಒಳ್ಳೆ ನೀರ್ದೋಸೆ ತರಹ ತೆಳ್ಳಗಾಗಿವೆ ಎನ್ನುತ್ತಾ ಈ ಮನೆಯ ತಿಜೋರಿನೆ ಒಮ್ಮೆ ಕ್ಲೀನ್ ಮಾಡಬೇಕಾಗಿದೆ ಎಂದು ತಮ್ಮ ಆಕ್ರೋಶ ಹೊರಹಾಕಿದರು. 
            ಡೈರಿಯಲ್ಲಿ ಯಾರಿಗೆ ಹೇಳಬೇಕು, ಯಾರಿಗೆ ಹೇಳಬಾರದು ಅಂತ ಟಿಕ್ ಮಾಡುತ್ತಾ ಕುಳಿತಿದ್ದಳು ದೀವ್. ಸುಕನ್ಯಾ ಸಂಪಗಾಂವಿ ಇವಳಿಗೆ ಹೇಳಲೇ ಬೇಕು. ಮೊನ್ನೆ ಕಿಟ್ಟಿ ಪಾರ್ಟಿಲಿ ಒಳ್ಳೆ ಶ್ಯಾವಿಗಿ ಎಳಿ ತರಹದ ತೆಳ್ಳನ ನಕ್ಲೇಸು ಹಾಕೊಂಡು ನನ್ನ ಮುಂದೆ ಮೆರದಿದ್ದೇ ಮೆರದಿದ್ದು. ಇವಳನ್ನ ಕರೆಯಿಸಿ ನಾನೂ ಮೆರೆದು ಅವಳ ಹೊಟ್ಟೆ ಉರಸ್ಬೇಕು. ಮುಯ್ಯಿಗೆ ಮುಯ್ಯಿ ತೀರಿಸಿಕೊಳ್ಳಲು ಇದೇ ಸರಿಯಾದ ಸಮಯವೆಂದುಕೊಂಡಳು. 
            ವಿನಯಾ ಕಾರಮಜ್ಜಿಗಿ, ಇವಳಿಗೆ ಹೇಳೋದು ಸುಮ್ಮನೇ ವೇಸ್ಟು. ಕಾಗೆ ತರಹ ಫ್ಯಾಮಿಲಿನೆಲ್ಲಾ ಕರ್ಕೊಂಡು ಬಂದು ಕಾ ಕಾ  ಎನ್ನುತ್ತ ಸುಮ್ಮನೇ ತಿಂದು ತೇಗಿ ಹೋಗ್ತಾವೆ. ಹೀಗಾಗಿ ಸೆಲೆಕ್ಟೆಡ್ ಪೀಪಲಗಷ್ಟೇ ರೈಟ್ ಮಾರ್ಕ ಮಾಡಿಟ್ಟಳು. 
            ಹೂವಿನವರಿಗೆ ಹೇಳಬೇಕು..ಹೇಳಲ್ಯೋ ಬ್ಯಾಡೋ ಎಂದು ಅತಿಗಂಭೀರವಾಗಿ ಚಿಂತಿಸುತ್ತಾ ಕುಳಿತವಳು; ಒಂದು ತಾಸಿದ್ದು ಬಾಡೋ ಹೂವಿಗ್ಯಾಕೆ ಐವತ್ತು ರೂಪಾಯಿ ಖರ್ಚು ಮಾಡಬೇಕು? ಮುಂಜಾನೆ ಬೇಗನೆ ಎದ್ದು ಪಕ್ಕದ್ಮನೆ ಗಾರ್ಡನ್ನಿಂದ ಎಸ್ಕೇಪ್ ಮಾಡಿದರಾಯಿತು ಎಂದು ಹೂವಿನವರಿಗೆ ಹೇಳಲಿಲ್ಲ.                    ಇನ್ಯಾರ ಉಳಿದರು? ಓಹ್ ಶಿಟ್! ಮ್ಯೂಸಿಕ್ ದವರಿಗೆ ಹೇಳಲೇ ಇಲ್ಲ. ಸೋ ಇದನ್ನ ಮಾತ್ರ ವಿಲೇಜ್ ಪೀಪಲ್ ಗೆ ಹೇಳಬೇಕು ಎಂದುಕೊಳ್ಳುತ್ತಾ ತಮ್ಮೂರಿಗೆ ಫೋನಾಯಿಸಿ ಶ್ರೀ ಬೊಂಬಡೇಶ್ವರ ಭಜನಾ ಮಂಡಳಿಯವರನ್ನು ಗೊತ್ತು ಮಾಡಿದಳು. 
             ಮೆರವಣಿಗೆ‌‌ ಮಾಡೋ ಗಾಡಿಯವರಿಗೂ ಹೇಳಬೇಕಲ್ಲಾ? ಮೊನ್ನೆ ಸವಿತಾಳ ಮನೆಯವರು ಅದಾರಿಗೋ ಹೇಳಿದ್ದರು, ಅದರ ಡೆಕೋರೇಷನು ತುಂಬಾ ಚೆನ್ನಾಗಾಗಿತ್ತು . ನಾನೂ ಅವರಿಗೇ ಹೇಳಿದರಾಯಿತು. ಜೀವನದಾಗೊಮ್ಮೆ ನಡೆಯೋ ಕಾರ್ಯಕ್ರಮ ಒಟ್ಟಾರೆ ಚೆಂದಾಗಿ ಮುಗಿದರೆ ಸಾಕು ಎಂದು ಸವಿತಾಳಿಗೆ ಫೋನ್ ಮಾಡಿ ಲೇ ಸವಿತಾ ಆ ಮೆರವಣಿಗೆ ಗಾಡಿಯವರಿಗೆ ನೀನೇ ಹೇಳು ಎಂದಳು. 
               ಅದಕ್ಕೆ ಸವಿತಾ ಆಯ್ತು ದೀವ್ ಎಂದುಕೊಂಡು ಗಾಡಿಯವರಿಗೆ ಫೋನಾಯಿಸಿ..ನೋಡು ಬರೋ ರವಿವಾರ ನನ್ನ ಗೆಳತಿ ದೀವ್ ಇದ್ದಾಳಲ್ಲ ಅಲ್ಲಿಗೆ ಗಾಡಿ ತೆಗೆದುಕೊಂಡು ಬಂದ ಬಿಡಿ. ಇನ್ನೊಂದ ವಿಷಯ ಡೆಕೊರೆಷನು ತುಂಬಾ ಸಿಂಪಲ್ಲಾಗಿರಬೇಕು. ನಿಮ್ಮ ರೇಟು ನೀವು ತೆಗೆದುಕೊಂಡು ನನಗೆ ೪೦% ಕಮೀಷನ್ ಕೊಡಬೇಕು ತಿಳಿಯಿತು ತಾನೆ ಎಂದು ಅವರನ್ನು ಹೊಂದಿಸಿದಳು. ಈ ದೀವ್ ಭಾಳ ಮೇರಿತಿದ್ದಳು. ಅದಕ್ಕೆ ಡೆಕಾರೇಷನ್ ನಮಗಿಂತ ತುಂಬಾ ಕೇವಲವಾಗಿರಬೇಕು ಹಂಗ ಮಾಡಿದ್ದೇನೆ ಎಂದು ಗೊಣಗಿದಳು ಸವಿತಾ. 
               ಈ ರೀತಿ ಇಡೀ ಜೀವಮಾನದಲ್ಲಿಯೆ ತಮ್ಮ ಗಾಡಿ ವಾರದ ಮುಂಚೆಯೆ ಅಡ್ವಾನ್ಸ ಬುಕ್ಕಿಂಗ್ ಆಗಿದ್ದು ಕೇಳಿ ಮೆರವಣಿಗೆ ಗಾಡಿಯವನು ತಲೆ ತಿರುಗಿ ರಪ್ ಅಂತ ಬಿದ್ದನು.
             ಇನ್ನು ಮೆರವಣಿಗೆ ಹೊರಟರೆ ಪಟಾಕಿಗಳ ಶಬ್ಧ ಬೇಕಲ್ಲವೇ? ಹೌದು ಎಂತಹ ದೊಡ್ಡ ಫ್ಯಾಮಿಲಿ ನಮ್ಮದು ಕನಿಷ್ಟ ಪಕ್ಷ ಹತ್ತು ಸಾವಿರ ರೂಪಾಯಿಯ ಪಟಾಕಿಯಾದರೂ ಬೇಕೆ ಬೇಕು ಎಂದುಕೊಂಡಳು. ಆದರೆ ಮೊನ್ನೆ ಮಹಿಳಾ ಸಂಘದಲ್ಲಿ ಪರಿಸರ ಮಾಲಿನ್ಯ ಕುರಿತು ತಾನೇ ಎದ್ದೆದ್ದು ಉದ್ದುದ್ದ ಭಾಷಣ ಬಿಗಿದಿದ್ದು ನೆನಪಾಯಿತು. ಯಾರಾದರೂ ಏನಾದರೂ ಅಂದರೆ ಎಂಬ ಭಯವಾಯಿತು. ಏ ನುಡಿದಂತೆ ನಡೆ ಅದು ಶರಣರ ಕಾಲಿಗೇ ಕಡೆಯಾಯಿತು. ಈಗೇನಿದ್ದರೂ ನುಡಿಯೊಂದು ಕಡೆ, ನಡೆ ಇನ್ನೊಂದು ಕಡೆ ಎನ್ನುತ್ತಾ ಪಟಾಕಿಗೂ ವ್ಯವಸ್ಥೆ ಮಾಡಿಯೇ ಬಿಟ್ಟಳು.
            ಎಲ್ಲಾ ವ್ಯವಸ್ಥೆ ಮಾಡಿಟ್ಟು ಸೋಫಾ ಮೇಲೆ ಉಸ್ಸಪ್ಪಾ ಎಂದು ಕುಳಿತಿರಬೇಕಾದರೆ ಗಂಡ ಆಫೀಸಿನಿಂದ ಬಂದನು. ಏನೇ ದೀವ್ ಹೀಗ ಕುಂತಿರುವೆ? ಯಾಕೆ ಮೈಹುಷಾರಿಲ್ಲವಾ? ಎಂದನು. ಮುಂಜಾನೆಯಿಂದ ಸಾಯಂಕಾಲದವರೆಗೂ ಕೆಲಸಾ ಕೆಲಸಾ ವಿಪರೀತ ತಲೆನೋವು ಡಾರ್ಲಿಂಗ್ ಪ್ಲೀಸ್ ನನಗೊಂದು ಕಪ್ ಕಾಫಿ ಮಾಡಿಕೊಡು ಎಂದಳು. ಥತ್ತೇರಿಕೆ! ಈ ಗಂಡು ಜನುಮವೇ ಸಾಕಾಗಿ ಹೋಯಿತು. ಆಫೀಸಲ್ಲೂ ನಾನೇ ದುಡಿಯೋದು, ಮನೇಲಿಯೂ ನಾನೇ ದುಡಿಯೋದು ಎಂದುಕೊಂಡು, ಸ್ವೀಟಿ ಶುಗರ್ ಸ್ವಲ್ಪ ಬೇಕೋ ಜಾಸ್ತಿನೋ ಎಂದು ಕೇಳಿದ. ದಿನಾ ಕಾಫಿ ತಾನೇ ಮಾಡಿಕೊಡುತ್ತಾನೆ. ಆದರೂ ಕಾಫಿಗೆ ಶುಗರ್ ಎಷ್ಟು ಹಾಕಬೇಕಂತ ಗೊತ್ತಿಲ್ಲಾ, ಏನ ಕಲಿತರೆ ಏನ ಬಂತು. ಎಲ್ಲಾ ನಾವೇ ಮಾಡಬೇಕು ಎಂದು ಮನಸ್ಸಿನಲ್ಲಿ ಅಂದುಕೊಳ್ಳುತ್ತಲೆ ಶುಗರ್ ಲೈಟ್ ಡಿಯರ್ ಎಂದಳು. ತುಂಬಾ ಚೆನ್ನಾಗಿದೆ ಕಾಫಿ ಎನ್ನುತ್ತಾ ಸ್ವಾಹಾ ಮಾಡಿದಳು.                      ಏಯ್! ಮುಂಡೆಮಗನೆ ಹೆಂಡತಿ ಸೆರಗ ಹಿಡ್ಕೊಂಡು ಓಡಾಡ್ತಿಯಲ್ಲ ನಾಚಿಕೆಯಾಗಬೇಕು. ನನಗೊಂದು ಕಪ್ ಕಾಫಿ ತತಾರಲಾ ನಿನ್ನ ಹೆಣಾ ಎತ್ಲಿ ಎಂದಿತು ಮುದುಕಿ. ಛೆ! ಮನ್ಯಾಗ ನನಗ ಕಿಮ್ಮತ ಇಲ್ಲದಂಗ ಆಗೇತಿ, ಹೊರಗ ಕೊಟ್ಯಾಂತರ ರೂಪಾಯಿ ವ್ಯವಹಾರ ಮಾಡಿದರೂ ಮನೆಯಲ್ಲಿ ಮಾತ್ರ ನಾನು ಸಪ್ಲೈಯರ್ಂತೆ ಜೀವನಾ ಮಾಡಬೇಕು ಎಂದು ನೊಂದುಕೊಂಡು ಎವ್ವಾ ಕಾಫಿ ಎಂದು ತಂದುಕೊಟ್ಟಾ.. ದಿನವೂ ಇದೇ ಓಬಿರಾಯನ ಹಾಡು ಅವನ ಜೀವನದಲ್ಲಿ ಮೊಳಗ್ತಾಯಿತ್ತು. 
               ಬೆಳಕಾಯಿತು. ಎಲ್ಲಾ ಸಿದ್ದತೆಯಂತೂ ಆಗಿತ್ತೆನ್ನುವಷ್ಟರಲ್ಲಿಯೇ ಡ್ರಿಂಕ್ಸ ವ್ಯವಸ್ಥೆಯಾಗಬೇಕಲ್ಲಾ ಎಂಬ ನೆನಪಾಯಿತು. ಅಡುಗೆ ಮಾಡುವ ಮೂಕಜ್ಜನನ್ನು ಕರೆದು ಭಾನುವಾರ ಬ್ಲ್ಯಾಕ್ ಡ್ರಿಂಕ್ಸ ಪ್ರಿಪೇರ್ ಮಾಡಬೇಕೆಂದು ಆರ್ಡರ್ ಮಾಡಿದಳು. 
         ಮುಂದೆ ಕ್ರೈಯಿಂಗ್ ಪೀಪಲ್ಸ ಬೇಕಲ್ಲ? ಯಾರನ್ನ ಕೇಳೋದು? ಕೆಲಸದವನೊಬ್ಬನನ್ನು ಕರೆದು ಐ ನೀಡ್ ಫೋರ್ ಟು ಫಾಯ್ ಗುಡ್ ಕ್ರೈಯಿಂಗ್ ವುಮೆನ್ಸ ಎಂದಳು. ಆತನಿಗೆ ಅರ್ಥ ಆಗದೆ ಪರಪರ ತಲೆ ಕೆರಕೊಂಡ. ಆಕೆಯೆ ಅರ್ಥಮಾಡಿಸಲು..ನೋಡಿ ಚೆನ್ನಾಗಿ ಅಳುವ ನಾಲ್ಕೈದು ಹೆಂಗಸರು ಬೇಕೆಂದಳು. ಅಮ್ಮಾವ್ರೆ ನೀವೇ ಸಾಕಷ್ಟು ಜನರನ್ನು ಅಳಿಸಿರುವಿರಲ್ಲಾ..ಮತ್ತ್ಯಾಕ ಅಳುವವರು ಬೇಕು? ಎಂದ. ಹೇಳಿದಷ್ಟು ಮಾಡು ಎಂದು ದಬಾಯಿಸಿದಳು. 
 ‌‌           ಆಗ ಅವಳ ಅತ್ತೆ... ಲೇ ಕತ್ತೆ ದ್ಯಾವಿ ಏನೇ ನಿನ್ನ ದೊಂಬರಾಟ? ಎಂದಳು. ಯೂ ಶಟ್ ಅಪ್ ಯುವರ ಡರ್ಟಿ ಮೌಥ ಅಂತ ಅತ್ತೆಗೆ ಗದರಿಸಿದಳು. ಛೇ! ನನ್ನ ಸೊಸಿ ಹಿಂಗ ಶಟ್ ಫಟ್ ಅನ್ಕೊಂಡು ಎಲ್ಲಿ ಶಟದ ಹೊಕ್ಕೈತೋ ಅಂತ ಚಿಂತ್ಯಾಗೈತಿ ಎನ್ನುತ್ತಾ ಮುದುಕಿ ವಟಗುಡಿಸಿ ಸುಮ್ಮನಾದಳು.
               ದೀವ್ ತನ್ನ ಗೆಳತಿಯಿಂದ ಪಡೆದುಕೊಂಡ ಆ ಅಪರಿಚಿತ ನಂಬರಿಗೆ ಕಾಲ್ ಮಾಡಿದಳು..ದ ನಂಬರ್ ಯು ಕಾಲ್ಡ್ ಇಸ್ ಔಟ್ ಆಫ್ ಕವರೇಜ್ ಎಂದಿತು. ದೀವ್ ಗಾಬರಿಯಾದಳು, ಇದೇನಪಾ ಎಲ್ಲಾನೂ ಸಿದ್ಧತೆ ಮಾಡ್ಕೊಂಡು ಈಗ ಫೋನ್ ಹತ್ತಲಿಲ್ಲವೆಂದರೆ ಎಲ್ಲಾ ವೇಸ್ಟ್ ಆಗುತ್ತೆ ಎಂದು ಬೆವರಿದಳು. ಪುನಃ ಟ್ರೈ ಮಾಡಿದಳು..ಈ ಸರತಿ ರಿಂಗಾಯಿತು. ದೀವನ ಮುಖ ಎಮ್ಮಿ ಹಾಕಿದ ಸೆಗಣಿ ನೆಲಕ ಪತ್ತ ಅಂತ ಬಿದ್ದು ಅರಳುವಂಗ ಅಡ್ಡಾಗಲ ಆಯಿತು. 
          ಹಾಯ್ ದೀವ್ ಎಂದಿತು ಆ ಕಡೆಯಿಂದ ಧ್ವನಿ, ಮಿಸೆಸ್ ಪುಣ್ಯವತಿಯವರಲ್ವಾ? ದೀವ್ ಪ್ರಶ್ನಿಸಿದಳು. ಹೌದು ಎಂದು ಒಪ್ಪಿತು ಪುಣ್ಯ. ರೀ ನಾನ್ರಿ ದೀವ್ ಮಾತಾಡೋದು ಅದೇ ಸಂಡೇ ನಮ್ಮನೆಗೆ ದಯವಿಟ್ಟು ತಮ್ಮ ಪಾದವಿಡಬೇಕು ಎಂದಳು. ಓ.ಕೆ ಮಧ್ಯಾಹ್ನ ಮೂರು ಘಂಟೆಗೆ ನಿಮ್ಮನೆಯಲ್ಲಿರುತ್ತೇನೆ ಎಂದಳು ಪುಣ್ಯವತಿ. ಸ್ವಲ್ಪ ಬೇಗ ಬಂದರೆ ಮುಂದಿನ ಕಾರ್ಯಕ್ರಮಗಳಿಗೆ ಅನುಕೂಲವಾಗುತ್ತೆ ಎಂದು ರಾಗ ಎಳೆದಳು ದೀವ್. ನೋಡಿ ಸಂಡೆ ನಾನು ತುಂಬಾ ಮನೆಗಳಿಗೆ ಹೋಗಬೇಕಾಗಿದೆ..ಯು ನೋ ಐ ಯಾಮ್ ಹೆವಿ ಬ್ಯುಸಿ ಎಂದಳು ಪುಣ್ಯ. ಅಲ್ಲಾ ನೀವ ಬಂದ್ರೆ ಗ್ಯಾರಂಟಿ ನಮ್ಮತ್ತೆಯವರು ಪರಲೋಕ ಪಲಾಯನ ಮಾಡುತ್ತಾರಲ್ಲವಾ? ದೀವ್ ಅನುಮಾನದಿಂದಲೆ ಪ್ರಶ್ನಿಸಿದಳು. ಓಹೋ ದೀವ್ ಇದುವರೆಗೂ ನಾನು ನೂರಾಎಂಟು ಮನೆಗಳಿಗೆ ಕಾಲಿಟ್ಟಿದ್ದೇನೆ. ಅಷ್ಟು ಮನೆಯವರ ಅತ್ತೆಯಂದಿರು ನಾನ ಕಾಲಿಟ್ಟ ತಕ್ಷಣವೇ ಸ್ಪಾಟು ಔಟು. ಯು ನೋ ಮಾಯ್ ಕರಿಗಾಲ ಸ್ಟ್ರೈಕ್ ರೇಟ್? ಇಟ ಇಸ್ ೧೦೦% . ಯು ಡೊಂಟ್ ವರಿ ನಾ ಬಂದ್ರೆ ನಿಮ್ಮನೇಲಿ ಹೆಣಾ ಬಿತ್ತೆ..ಅದೂ ಗ್ಯಾರಂಟಿ ನಿಮ್ಮತ್ತೆದೆ ಎಂದಳು ಪುಣ್ಯವತಿ. ಅಷ್ಟ ಮಾಡಿಬಿಟ್ರೆ ಸಾಕು‌..ನನಗೂ ಚೂರು ಸ್ವಾತಂತ್ರ್ಯ ಸಿಕ್ಕಂಗಾಗುತ್ತೆ ಎಂದು ಫೋನಿಟ್ಟಳು ದೀವ್.
            ಲೇ ದ್ಯಾವಿ ಏನೇ ಅದು‌ ಸಾವು ಗೀವು ಅಂತ ಲೊಚಗುಡ್ತಾ ಇದಿಯಾ? ಎಂದು ಕೂಗಿದಳು ಅತ್ತೆ. ಹ್ಞೂಂ! ನಿನ್ನ ಪಾಲಿನ ಶನಿ ಬರ್ತಾವಳೆ ತಡಿ ಎಂದಳು ದೀವ್.                       ಬಹುಕುತೂಹಲದಿಂದ ಕಾದಿದ್ದ ಸಂಡೇ ಬಂದೇ ಬಿಟ್ಟಿತ್ತು. ಡೆಕೊರೆಷನ್ ಗಾಡಿ ಅಂದರೆ ಬಿದಿರು ಮೋಟಾರು ಬಂದು ನಿಂತಿತ್ತು. ಮ್ಯೂಸಿಕ್ ಅಂದರೆ ಭಜನಾ ಪದದವರು 'ಇಹದ ಋಣವೂ ತೀರಿದ ಮ್ಯಾಲ, ಹರಣ ಪಾದವೇ ನಮಗಿನ್ನು ಗತಿ' ಎಂದು ಹಾಡಿ ಬಾರಿಸಲು ಕಾದು ಕುಂತಿದ್ದರು. ಮೂಕಪ್ಪ ಕರೆ ಚಹಾ ಅಂದರೆ ಬ್ಕ್ಯಾಕ್ ಡ್ರಿಂಕ್ಸ್ ರೆಡಿಯಾಗಿಟ್ಟಿದ್ದ..ಕ್ರೈಯಿಂಗ್ ವುಮೆನ್ಸು ಬಂದು ಎಲ್ಲಿ ಕ್ರೈ ಮಾಡಬೇಕು? ಎಲ್ಲಿ ಕ್ರೈ ಮಾಡಬೇಕು? ಎಂದು ಪ್ರಶ್ನಿಸುತ್ತಿದ್ದರು.  ಟಿ.ವಿ ಟ್ವೈಂಟಿಯವನು ಕ್ಯಾಮೆರಾ ಎಲ್ಲಿಡಲಿ ಎಂದು ತಲೆ ತಿನ್ನತೊಡಗಿದ್ದರೂ ಪುಣ್ಯವತಿಯ ಸುಳಿವೇ ಇಲ್ಲ.
                 ಅತ್ತೆ ಮುಂಜಾನೆದ್ದು ತಾಟು ಸಜ್ಜಕ ಕುಡಿದು ಗಡದ್ದಾಗಿ ಮಲಕೊಂಡಿತ್ತು. ನೋಡು ನೋಡುತ್ತಲೇ ಬಂದೇ ಬಿಟ್ಟಳು ಪುಣ್ಯವತಿ. ಅವಳ ಬರುವನ್ನು ಕಂಡ ದೀವ್ ನ ಗೆಳತಿಯರು‌
ಯಾ ಕಾರ್ಕೋಟಕ ಕರಿಗಾಲ ಪಾದದೊಡತಿ ಕಾಗೇಶ್ವರಿಯೇ
ನೀ ಘಾತುಕಳು ಯಾ..ದೇವಿಶನಿರೂಪೆ..ಸರ್ವ ಸೊಸೆಯಂದಿರ ಭಾಗ್ಯದಾತಳೆ 
ಯಾ..ಮನೆಯಲಿರುವ ದಂಡಪಿಂಡಿತ ಅತ್ತೆಯೆಂಬ ಅರಿಯಸಂಹಾರಗೈಯುವವಳೆ..ನಮೋಸ್ತುಭ್ಯಂ ನಮೋಸ್ತುಭ್ಯಂ ನಮೋನಮಃ ಎಂದು ಪ್ರಾರ್ಥಿಸಿ ಸ್ವಾಗತಗೈದರು.
       ಪುಣ್ಯವತಿಯನು ಕಾಣುವ ಸಂತೋಷದಲಿ ದೀವ್ ಮೊದಲಂತಸ್ತಿನಿಂದ ಇಳಿದು ಬರುವಾಗ ಕಾಲುತೊಡರಿ ಅಕಸ್ಮಾತ ಧೊಪ್ಪೆಂದು ಕೆಳಗುರುಳಿದಳು. ಬಿದ್ದ ರಭಸಕ್ಕೆ ಅವಳ ಪ್ರಾಣ ಪಕ್ಷಿ ಆಗಲೇ ಹಾರಿಹೋಗಿತ್ತು. ಅವಳ ಮುಂದೆಯೇ ಬಾಡಿಗೆ ರೋಧನಕಾರರು ರೊಯ್ಯೆಂದು ರೋಧಿಸತೊಡಗಿದರು. ಈ ರೀತಿ ಪರರಿಗೆ ಕೇಡುಬಯಸಿದರೆ ನಮಗೇ ಕೇಡಾಗುವುದೆಂಬ ಲೋಕೋಜ್ಜನಿತ ಮಾತು ಸತ್ಯವಾಯಿತು. ಪುಣ್ಯವತಿಯ ಕರಿಕಾಲ್ಗುಣವು ಮತ್ತೊಮ್ಮೆ ಸತ್ಯವಾಗಿ ಅವಳು ಮತ್ತಷ್ಟು ಬೇಡಿಕೆಯನ್ನು ಹೆಚ್ಚಿಸಿಕೊಂಡಳು.
                                       - ಆನಂದ ಮಾಲಗಿತ್ತಿಮಠ


ಇದೇ ಲೇಖಕರ ಇನ್ನೊಂದು ಕತೆ ಓದಲು ಕ್ಲಿಕ್ ಮಾಡಿ

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ