ಇಲ್ನೋಡೋ ರಾಮಣ್ಣಾ..ಕನಿಷ್ಟ ಜ್ಞಾನನೂ ಇಲ್ಲದೆ ಇರುವ ಸರ್ಕಾರಿ ಮೆಷ್ಟ್ರುಗಳು ಎಂಬ ಸುದ್ದಿ ಪ್ರಕಟವಾಗಿದೆ. ಓದಿದ್ಯಾ? ಎಂದು ಕಾಕಾ ಅಂಗಡಿಯಲ್ಲಿ ಟೀ ಕುಡಿಯುತ್ತ ಕುಳಿತಿದ್ದ ಶ್ರೀನಿವಾಸ ಅಂದಿನ ಸುದ್ದಿ ಪತ್ರಿಕೆ ಓದುತ್ತ ಪ್ರಶ್ನಿಸಿದ. ಆ ಸುದ್ಧಿಯೇ ರಕ್ತಬೀಜಾಸುರನಂತೆ ಮರುಹುಟ್ಟು ಪಡೆದು ಪಡೆದು ತಮ್ಮೂರಿನ ಮೇಷ್ಟ್ರಗಳು ಬಂಡವಾಳವನ್ನೇ ಕಂತು ಕಂತಾಗಿ ಕುಳಿತವರ ಬಾಯಿಯಿಂದ ಕಕ್ಕಿಸತೊಡಗಿತ್ತು. ಅದಕ್ಕೆ ಹೇಳೋದು ಸರ್ಕಾರಿ ಶಾಲೆಗೆ ಸೇರಿಸೋದು ಬ್ಯಾಡ ಅಂತ. ಇಂತಹವರ ಕೈಯಾಗ ಕಲತ ನಮ್ಮ ಹುಡುಗ್ರು ಹೇಗ ಉದ್ದಾರ ಆಗಬೇಕು? ಅಂತ ಒಬ್ಬ ಕೇಳಿದ. ಹೌದೌದು..ಇಷ್ಟೆಲ್ಲ ಖಾಸಗಿ ಶಾಲೆಗಳು, ಅವುಗಳಲ್ಲಿ ನೊಣಗಳಂತೆ ಬುಚಾಡಿಸುವ ಮಕ್ಕಳು ಅವರೆಲ್ಲಾ ಮೂರ್ಖರೇನು? ಸರ್ಕಾರಿ ಶಾಲೆಯಲ್ಲಿ ಇಂತಹ ಅಯೋಗ್ಯ ಮೇಷ್ಟ್ರುಗಳಿದ್ದಾರಂತೆಯೆ ಖಾಸಗಿ ಶಾಲೆಗಳ ಅಬ್ಬರ ಜೋರಾಗಿರುವುದು ಅಂತ ಮಗದೊಬ್ಬನ ಅನಿಸಿಕೆ. ಒಟ್ಟಿನಲ್ಲಿ ಸರ್ಕಾರಿ ಶಾಲೆಯ ಹಣೆಬರಹ ಗಲ್ಲಿಗಲ್ಲಿಯಲ್ಲಿಯೂ ನಿರ್ಧಾರವಾಗುವಂತೆ ಮಾಡಿತ್ತು ಅಂದು ಪ್ರಕಟವಾದ ಸುದ್ದಿ.
*****
ಹಿರಿಯೂರಿನ ಸರ್ಕಾರಿ ಶಾಲೆಗೆ ಯಾರೋ ಮೇಲಧಿಕಾರಿಗಳು ಇತ್ತೀಚಿಗೆ ಭೇಟಿ ನೀಡಿದ್ದರು. ಶಾಲಾ ತಪಾಸಣಾ ಕಾರ್ಯ ಕೈಗೊಂಡಾಗ ಮೇಷ್ಟ್ರುಗಳಿಗೆ ವಿಷಯ ಜ್ಞಾನದ ಕೊರತೆಯಿರುವುದನ್ನು ಕಂಡು ಹಿಗ್ಗಾಮುಗ್ಗಾ ಜಾಡಿಸಿದ್ದರು. ಮೇಷ್ಟ್ರೇ ನೀವು ಬರುವುದು ಶಾಲೆ ಕಲಿಸೋದಕ್ಕಾ ಅಥವಾ ದನ ಮೇಯಿಸೋದಕ್ಕಾ ? ಅಂತ ಖಾರವಾಗಿ ಪ್ರಶ್ನಿಸಿದ್ದರು. ಪಾಪ ಮೇಲಧಿಕಾರಗಳಲ್ವಾ? ಒಂದಿನ ಬಾಯ್ತುಂಬ ಬೈದು ಹೋಗುತ್ತಾರೆ..ಈ ಕಡೆ ಕಿವಿಯಿಂದ ಕೇಳಿ ಆ ಕಡೆ ಬಿಟ್ಟರಾಯಿತು ಎಂದುಕೊಂಡಿರಬೇಕು. ಎಲ್ಲರೂ ಸುಮ್ಮನೆ ತಲೆತಗ್ಗಿಸಿ ನಿಂತುಕೊಂಡಿದ್ದರು. ಅವರೆಲ್ಲರನ್ನೂ ಅಮಾನತ್ತಿನಲ್ಲಿಡುವಂತೆ ಷರಾ ಬರೆದು ಆ ಅಧಿಕಾರಿ ಅದೇನೋ ಸಾಧಿಸಿದ ಮಹಾನ್ ಸಾಧಕನಂತೆ ತಾನು ತೊಟ್ಟಿದ್ದ ಸೂಟು ಬೂಟು ಸರಿಮಾಡಿಕೊಂಡು ಜೀಪ್ ಏರಿ ಹೊರಟು ಹೋಗಿದ್ದನು.
ಇತ್ತ ಬಡಪಾಯಿ ಶಿಕ್ಷಕರು ಕಣ್ತುಂಬ ನೀರು ತಂದುಕೊಂಡು ತಮ್ಮ ಮುಂದಿನ ಜೀವನದ ಬಗ್ಗೆ ಆಲೋಚಿಸತೊಡಗಿದರು. ಯಾವುದೇ ಬೇರೆ ಇಲಾಖೆಯಲ್ಲಿ ಅಮಾನತ್ತಾದರೆ ಹಬ್ಬದ ರೀತಿ ಸಂಭ್ರಮಿಸುವುದನ್ನು ಕಂಡಿದ್ದೇವೆ. ಅಮಾನತ್ತಾದ ಅವಧಿಯಲ್ಲಿಯೇ ಟೂರು ಗೀರು ಅಂತ ಜಮ್ಮ ಅಂತ ಮಜಾ ಮಾಡುವವರನ್ನು ಕಂಡಿದ್ದೇವೆ. ಕಾರಣ ಅಂತವರಿಗೆ ತಿಂಗಳ ಪಗಾರದ ಅವಶ್ಯಕತೆಯೆ ಇರೋದಿಲ್ಲ. ಮತ್ತೇನು ಅಂತಿರೇನು? ಲಂಚಗಾಗಿ ಲಂಚವಿಲ್ಲವೆ? ಆದರೆ ನಾವು ಶಿಕ್ಷಕರು. ಮನೆಸಾಲವಿದೆ..ತಿಂಗಳ ಪಗಾರ ಸರಿಯಾದ ಸಮಯಕ್ಕಾಗದೇ ಅದೆಷ್ಟೋ ಬಾರಿ ದಂಡ ಕಟ್ಟಿದ್ದಿದೆ. ನನ್ನ ಮಗಳನ್ನು ಇಂಜಿನಿಯರ್ ಓದಸ್ತಾ ಇದೇನಿ. ಈಗ ಅಮಾನತ್ತಾದರೆ ಬರುವ ಅರ್ಧ ಸಂಬಳದಲ್ಲಿ ಖರ್ಚು ತೂಗಿಸುವುದೆಂತು? ನನ್ನ ತಂದೆಗೆ ಹಾರ್ಟ ಆಫರೇಶನ್ ಮಾಡಿಸಿದ್ದೇನೆ, ಔಷಧೋಪಚಾರಕ್ಕಾಗಿ ಹಣವೆಲ್ಲಿಂದ ತರುವುದು? ಈ ರೀತಿ ದಿಢೀರ್ ಅಂತ ಬಂದು ಹುಚ್ಚಾಪಟ್ಟೆ ಪ್ರಶ್ನೆಗಳ ಕೇಳಿ ಅಮಾನತ್ತು ಮಾಡಿ ಹೋದರೆ ನಮ್ಮ ಗತಿಯೇನು? ಎಂದು ಗೋಳಾಡುವಾಗ ಅಲ್ಲಿ ಅವರಿಗಾಗಿ ಯಾರೂ ಮರುಕಪಡುವವರಿರಲಿಲ್ಲ. ಎಲ್ಲರೂ ಒಂದೇ ದೋಣಿಯ ಪ್ರಯಾಣಿಕರು. ಅದೂ ಅಲ್ಲದೇ ಮಾನ ಮರ್ಯಾದೆ ಅನ್ನುವುದೊಂದಿದೆಯಲ್ಲಾ? ಸುದ್ದಿ ಪತ್ರಿಕೆಯಲ್ಲಿ ಪ್ರಕಟವಾಗಿ ಓಣಿಯೊಳಗ, ಊರೊಳಗ ಅಷ್ಟೇ ಅಲ್ಲ ತಾವು ಕಲಿಸುವ ಮಕ್ಕಳ ಮುಂದೆ ಬೆತ್ತಲಾಗಿ ನಿಂತಂತಹ ಅನುಭವ.
******
ಮನೆಗೆ ಬಂದರೆ ನನ್ನ ಹೆಂಡತಿ ಏನ್ರಿ.. ಯಾವನೋ ಅದೇನೋ ಪ್ರಶ್ನೆಗಳನ್ನು ಕೇಳಿದರೆ..ಉತ್ತರಿಸೋದಲ್ವಾ? ಇಂದು ನಮ್ಮ ಮಹಿಳಾ ಸಂಘದಲ್ಲೆಲ್ಲ ನಿಮ್ಮದೇ ವಿಚಾರ. ನನಗೆ ಎಷ್ಟೊಂದು ಅಸಹ್ಯವಾಯಿತೆಂದರೆ ಛೆ! ಎಂದು ಮೂಗು ಮುರಿದುಹೋದಳು. ನಾನು ಹಡೆದ ಮಕ್ಕಳೇ.. "ಅಪ್ಪಾಜಿ ನಿಮ್ಮಿಂದ ಇವತ್ತು ನಮ್ಮ ಮರ್ಯಾದೆನೂ ಮೂರು ಕಾಸಿಗೆ ಹರಾಜಾಯಿತು. ನಮ್ಮಪ್ಪ ಒಬ್ಬ ಮೇಷ್ಟ್ರು ಎಂಬ ಹೆಮ್ಮೆಯಿತ್ತು. ಆದರೆ ನೀವು? ಅದನ್ನು ಹಾಳುಮಾಡಿದಿರಿ" ಎಂದು ತಮ್ಮ ಖಾರವಾದ ಅಭಿಪ್ರಾಯವನ್ನು ನನ್ನ ಮಾರಿಗೆಸೆದು ರೂಮ್ ಸೇರಿಕೊಂಡರು.
ನಾನೇನು ಸರ್ಕಾರದ ಆಸ್ತಿ ಕೊಳ್ಳೆ ಹೊಡೆದಿರುವೆನಾ? ಏನಾದರೂ ಕಳ್ಳತನ ಮಾಡಿರುವೆನಾ? ಕೊಲೆ ಮಾಡಿರುವೆನಾ? ಈ ಸಮಾಜ ನನ್ನನ್ನೇಕೆ ಹೀಗೆ ನೋಡುತ್ತಿದೆ. ಇಂದು ನಾನು ಹಡೆದ ಮಕ್ಕಳೆ ನನ್ನ ನೋಡಿ ಅಸಹ್ಯಪಡುತ್ತಿವೆ ಎಂದರೆ ನಾನಿನ್ನು ಬದುಕಿರುವುದಕ್ಕೆ ಯಾವುದೇ ಅರ್ಥವಿಲ್ಲ. ಹೌದು ಎಲ್ಲರೂ ನಾನು ಮೋಸಗಾರನೆಂದು ನಿರ್ಧಾರ ಮಾಡಿಯಾಗಿದೆ. ಆದರೆ ನನ್ನ ಇಪ್ಪತ್ತು ವರ್ಷಗಳ ಸೇವಾ ಅವಧಿಯಲ್ಲಿ ನಾನೆಂದೂ ಯಾರಿಗೂ ಮೋಸ ಮಾಡಿಲ್ಲ. ಸಾವಿರಾರುಗಟ್ಟಲೆ ವಿದ್ಯಾರ್ಥಿಗಳಿಗೆ ಅಕ್ಷರಜ್ಞಾನ ನೀಡಿದ್ದೇನೆ. ಅದೆಷ್ಟೋ ಸಮಯ ಉಪವಾಸವಿದ್ದರೂ ಸರಿ ಸಮಯಪಾಲನೆ ಮಾಡಬೇಕೆಂದು ಓಡೋಡಿ ಶಾಲೆಗೆ ಹೋಗಿದ್ದಿದೆ. ಬಡವಿದ್ಯಾರ್ಥಿಗಳಿಗೆ ನಾನೇ ಕೈಯಾರೆ ನೋಟಪುಸ್ತಕ ಕೊಡಿಸಿ ಶಿಕ್ಷಣ ಕಲಿಯಲು ಪ್ರೇರೇಪಿಸಿದ್ದಿದೆ. ಎಲ್ಲವೂ ಈಗ ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯಿತು. ಹೌದು..ಇಂತಹ ಅವಮಾನವನ್ನು ಸಹಿಸಿಕೊಂಡು ಬದುಕಬಾರದೆಂದು ನಿರ್ಧರಿಸಿ ಮನೆಯಿಂದ ಹೊರಬಿದ್ದೆ.
*****
ನಾ ನಡೆಯುವ ದಾರಿಯೂ ಅಂಕುಡೊಂಕಾಗಿತ್ತು. ಗೋಧೂಳಿಯ ಸಮಯ. ಕಣ್ಣಿಗೆ ಮಣ್ಣು ಹುಡಿಹಾರಿ ಕಣ್ಣು ತಿಕ್ಕುತ್ತ ಮುಂದಡಿಯಿಡುತ್ತಿದ್ದೆ. ಗೆಳೆಯ ನವೀನ ಭೇಟಿಯಾದ. ಅಯ್ಯೋ! ಇವನ್ಯಾಕಯ್ಯ ಭೇಟಿಯಾದ? ಇವನಿಗೂ ಪೇಪರ್ ಸುದ್ದಿ ಗೊತ್ತಾಗಿರಬೇಕು. ಮೊದಲೇ ಎಲ್ಲರಿಗೂ ಉತ್ತರಿಸಿ ಉತ್ತರಿಸಿ ತತ್ತರಿಸಿ ಹೋಗಿರುವೆ. ಇವನ ಪ್ರಶ್ನೆಗಳಿಗೂ ಉತ್ತರಿಸಬೇಕಲ್ಲಾ ಎಂದು ಆಲೋಚಿಸುತ್ತಲೆ ಹುಸಿಮುಗುಳ್ನಕ್ಕು ನವೀನನ್ನು ಮಾತಾಡಿಸತೊಡಗಿದೆ. ಸುಮಾರು ಹೊತ್ತು ಮಾತನಾಡಿದ ನಂತರ ಆತನಿಗೆ ಏನೂ ಗೊತ್ತಿಲ್ಲವೆಂದು ನಿಶ್ಚಯವಾಯಿತು. ಕೆಂಡವನ್ನು ಬೇಕಾದರೂ ಮುಚ್ಚಿಡಬಹುದು ಆದರೆ ಮನದ ದುಗುಡವನ್ನಲ್ಲ...ಸಾಯಲು ಹೊರಟ ನನಗೊಂದು ಸಾಂತ್ವನ ಹೇಳುವ ಜೀವದ ಅವಶ್ಯಕತೆಯಿತ್ತು. ಆ ಜೀವ ನನ್ನ ಹೆಂಡತಿ ಮಕ್ಕಳಾಗದೆ ಹೋದಾಗ ನಾನು ಅಕ್ಷರಶಃ ಅನಾಥನಾಗಿದ್ದೆ. ಅದು ಹೇಗೋ ಅಣೆಕಟ್ಟೆಯಲ್ಲಿ ತಡೆಹಿಡಿದ ನೀರಿನಂತೆ ಮನದಣೆಕಟ್ಟೆಯಲ್ಲಿ ಅಲ್ಲಿಯವರೆಗೂ ತಡೆ ಹಿಡಿದುಕೊಂಡ ದುಃಖವುಮ್ಮಳಿಸಿ ಹೊರಹರಿದೇ ಬಿಟ್ಟಿತು. ಜೊತೆಗೆ ಕತ್ತಲೆಯೂ ಸಾಥ ನೀಡಿತ್ತು. ಗೆಳೆಯನ ಹೆಗಲು ತಾಯಿಯ ಮಡಿಲಂತೆ ಭಾಸವಾಯಿತು. ಪರಿಸ್ಥಿತಿಯ ಅರಿವು ಹೊಂದಿದ ಆತ ಮೊದಲೇ ಲಾಯರ್ ಆಗಿ ಕೆಲಸ ಮಾಡುತ್ತಿದ್ದವ, ನನಗೆ ಸೂಕ್ತ ನ್ಯಾಯ ಒದಗಿಸುವ ಭರವಸೆ ನೀಡಿದ.
*****
ಯುವರ್ ಆನರ್..ಇಲ್ಲಿ ನಿಂತಿರುವ ನನ್ನ ಕಕ್ಷಿದಾರ ಒಬ್ಬ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸಮಾಜವನ್ನು ತಿದ್ದುವ, ಇಡೀ ಸಮಾಜಕ್ಕೇ ಬೆಳಕು ನೀಡುವ ಕಾಯಕವನ್ನೇ ತನ್ನ ಉಸಿರಾಗಿಸಿಕೊಂಡವರು. ಇವರ ವೃತ್ತಿ ಜೀವನದಲ್ಲಿ ಇಲ್ಲಿಯವರೆಗೂ ಒಂದೇ ಒಂದು ಕಪ್ಪುಚುಕ್ಕೆಯಿಲ್ಲ..ಅಂತೆಯೆ ಇವರ ಚಾರಿತ್ರ್ಯದಲ್ಲೂ ಕೂಡ. ಆದರೆ ಇಂದು ಯಾವ ಸಮಾಜಕ್ಕೋಸ್ಕರ ಬದುಕಿದರೋ ಅದೇ ಸಮಾಜದ ಮುಂದೆ ನಗೆಪಾಟಲಿಗೀಡಾಗಿದ್ದಾರೆ. ಅಂತಹ ಪರಿಸ್ಥಿತಿಗೆ ಇವರನ್ನು ದೂಡಿದವರಾರು? ಯಾವ ಇಲಾಖೆ ಕೈಹಿಡಿಯಬೇಕಾಗಿತ್ತೋ ಅದುವೇ ಟಿಶ್ಯು ಪೇಪರ್ ಬಳಸಿದಂತೆ ಬಳಸಿಕೊಂಡು ಎಸೆದುಬಿಟ್ಟರೆ ಬಡಪಾಯಿ ಶಿಕ್ಷಕ ಎಲ್ಲಿಗೆ ಹೋಗಬೇಕು ಯುವರ್ ಆನರ್. ಶಿಕ್ಷಕರು ಇಡೀ ಟೆಕ್ಷ್ಟ್ ಬುಕ್ ನ್ನೇ ತಲೆಯಲ್ಲಿಟ್ಟುಕೊಂಡು ತಿರುಗಾಡುವ ವಿಶ್ವಕೋಶವಾಗಿರಬೇಕು ಎಂದು ಅದು ಹೇಗೆ ಬಯಸುತ್ತೀರಿ? ಆದ್ದರಿಂದ ನನ್ನ ಕಕ್ಷಿದಾರನ ಅಮಾನತ್ತನ್ನು ಕೂಡಲೇ ರದ್ದುಗೊಳಿಸಬೇಕು. ಜೊತೆಗೆ ಪತ್ರಿಕೆಯಲ್ಲಿ ಈ ಸುದ್ದಿಯನ್ನು ವಿಜೃಂಭಿಸಿ ಅವರ ಮಾನನಷ್ಟ ಮಾಡಿದ್ದಕ್ಕಾಗಿ ಪರಿಹಾರ ಒದಗಿಸಬೇಕು ಎಂದು ಭಿನ್ನವಿಸಿಕೊಳ್ಳುವೆ ಎನ್ನುತ್ತಾ ನವೀನ ಕೋರ್ಟನಲ್ಲಿ ತನ್ನ ವಾದ ಮಂಡಿಸಿದ.
ಇದು ಇಪ್ಪತ್ತೊಂದನೇ ಶತಮಾನ. ಮಕ್ಕಳಿಗೆ ಸದೃಢವಾದ ಭವಿಷ್ಯ ರೂಪಿಸಿಕೊಳ್ಳಲು ಅನುವು ಮಾಡಿಕೊಡುವುದೇ ಶಿಕ್ಷಣ. ಇದರಲ್ಲಿ ಶಿಕ್ಷಕನ ಪಾತ್ರ ಬಹುಮುಖ್ಯವಾದದ್ದು. ಅಂತಹುದರಲ್ಲಿ ಶಿಕ್ಷಕ ನಿರಂತರವಾಗಿ ತನ್ನ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತ ಹೋಗುವುದು ಆತನ ಪ್ರಮುಖ ಜವಾಬ್ದಾರಿ. ಇಲಾಖೆಯೂ ವೃತ್ತಿಪರ ತರಬೇತಿಗಳನ್ನು ಏರ್ಪಡಿಸಿ ಶಿಕ್ಷಕರ ಜ್ಞಾನಾಭಿವೃದ್ಧಿಗೆ ಪ್ರಯತ್ನಿಸಿದೆ. ಆದರೆ ಈ ಶಿಕ್ಷಕರು ಅಂತಹುದರಲ್ಲಿ ಬೇಜವಾಬ್ದಾರಿಯಿಂದ ವರ್ತಿಸಿರಬೇಕು. ತಾವೂ ಹಿಂದುಳಿಯುವುದರ ಜೊತೆಗೆ ತಮ್ಮ ಕೈಕೆಳಗಿನ ಮಕ್ಕಳಿಗೂ ಮೋಸ ಮಾಡಿದ್ದಾರೆ. ಆದ್ದರಿಂದ ಇವರಿಗೆ ವಿಧಿಸಿರುವ ಶಿಕ್ಷೆ ಸರಿಯಾಗಿಯೇ ಇದೆ ಎಂದು ಎದುರಾಳಿ ಸರ್ಕಾರಿ ವಕೀಲರು ತಮ್ಮ ವಾದವನ್ನಿಟ್ಟರು.
ಯುವರ್ ಆನರ್ ಈ ಸರ್ಟೀಫಿಕೇಟ್ ಗಳನ್ನು ಒಮ್ಮೆ ನೋಡಿ. ನಮ್ಮ ರಾಜ್ಯದಲ್ಲಿ ಕೆ.ಎ.ಎಸ್ ಪರೀಕ್ಷೆಗೆ ಸರಿಸಮವಾಗಿಯೇ ಶಿಕ್ಷಕರ ಆಯ್ಕೆಗಾಗಿ ಪರೀಕ್ಷೆ ನಡೆಸಲಾಗುತ್ತದೆ. ಅಂತಹ ಎಲ್ಲ ಮಾನದಂಡದಲ್ಲಿಯೂ ನನ್ನ ಕಕ್ಷಿದಾರ ಉನ್ನತ ದರ್ಜೆಯಲ್ಲಿಯೇ ತೇರ್ಗಡೆಯಾಗಿದ್ದಾನೆ ಎನ್ನುವುದಕ್ಕೆ ಇದೇ ಸರ್ಕಾರ ಪುರಸ್ಕರಿಸಿ ಕೊಟ್ಟ ಈ ಸರ್ಟಿಫಿಕೇಟಗಳೇ ಸಾಕ್ಷಿ. ಆಗ ಜ್ಞಾನದ ಭಂಡಾರವೇ ಆಗಿದ್ದ ಈ ಪ್ರಾಥಮಿಕ ಶಾಲಾ ಶಿಕ್ಷಕ ಈಗ ಜ್ಞಾನಹೀನನಾಗಿ ಮಾರ್ಪಡಲು ಕಾರಣವಾದರೂ ಏನು? ಆಲೋಚಿಸಬೇಕಾದ ಪ್ರಶ್ನೆ. ಈತ ಹಿರಿಯೂರು ಪ್ರಾಥಮಿಕ ಶಾಲೆಯಲ್ಲಿಯೇ ಇಪ್ಪತ್ತು ವರ್ಷದಿಂದ ಯುವರ್ ಆನರ್ ದಯವಿಟ್ಟು ಗಮನಿಸಬೇಕು ಬರೋಬ್ಬರಿ ಇಪ್ಪತ್ತು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಹಾಗೇ ಸೇವೆ ಸಲ್ಲಿಸುವಾಗಲೇ ಸೇವೆಯ ಜೊತೆಯೇ ಬಾಹ್ಯವಾಗಿ ಡಿಗ್ರಿ ಸ್ಟಡಿ ಮಾಡಿದ್ದಾರೆ. ಅಷ್ಟಕ್ಕೆ ಸುಮ್ಮನಾಗದೇ ಬಿ.ಇಡಿ. ಎಂ.ಎ.ಎಂ.ಇಡಿ ವ್ಯಾಸಂಗ ಮಾಡಿಕೊಂಡಿದ್ದಾರೆ, ತಮ್ಮ ಜ್ಞಾನವನ್ನು ವಿಸ್ತರಿಸಿಕೊಳ್ಳುವ ಆಲೋಚನೆಯಿಲ್ಲದಿದ್ದರೆ ಇದನ್ನೆಲ್ಲ ಅವರೇಕೆ ಮಾಡಿಕೊಳ್ಳುತ್ತಿದ್ದರು? ಇದರಿಂದನೇ ತಿಳಿಯುತ್ತೆ ಮೈ ಲಾರ್ಡ ಇವರೂ ತಮ್ಮ ಜ್ಞಾನವನ್ನು ವಿಸ್ತರಿಸಿಕೊಂಡು ಅದನ್ನು ಮಕ್ಕಳಿಗೆ ಉಣಬಡಿಸಲು ಪ್ರಯತ್ನಿಸಿದ್ದಾರೆ. ಆದರೆ ಅದಕ್ಕೆ ಮಹತ್ವ ನೀಡಲಾಗಿಲ್ಲ. ಇಲ್ಲಿ ಇನ್ನೊಂದು ವಿಷಯವನ್ನು ಪರಿಗಣಿಸಬೇಕು ಯುವರ್ ಆನರ್...ಇದು ಇವರ ಸರ್ವೀಸ್ ಡಿಟೇಲ್ಸ್..ಕಳೆದ ಹದಿನೈದು ವರ್ಷಗಳಿಂದ ಇವರಿಗೆ ಕಲಿಸಲು ಕೊಟ್ಟಿದ್ದು ಒಂದನೇ ಕ್ಲಾಸ್. ಹೌದು ಮೈಲಾರ್ಡ ಒಂದನೇ ಕ್ಲಾಸಿಗೆ ಬಹುಚೆನ್ನಾಗಿ ಕಲಿಸುತ್ತಾರೆಂದು ಇಲಾಖೆಯೇ ಇವರಿಗೆ ಬಹುಮಾನಿಸಿ ನೀಡಿದ ಪ್ರಮಾಣಪತ್ರವಿದು. ದಯವಿಟ್ಟು ಇದನ್ನು ಪರಿಗಣಿಸಬೇಕು. ಯಾವುದೇ ವ್ಯಕ್ತಿಯನ್ನು ಸತತವಾಗಿ ಹದಿನೈದು ವರ್ಷಗಳ ಕಾಲ ಒಂದೇ ಮಟ್ಟಕ್ಕೆ ಕಲಿಸಲು ಸೀಮಿತಗೊಳಿಸಿದ್ದು, ಈ ಮೂಲಕ ಪರೋಕ್ಷವಾಗಿ ಅವನ ಜ್ಞಾನ ಕುಂಠಿತವಾಗಲು ಕಾರಣವಾಗಿದ್ದು ಯಾರು? ಎಂಬುವುದನ್ನು ತಾವು ಪರಾಮರ್ಶಿಸಬೇಕು. ಒಬ್ಬ ತಾಯಿಯ ಮೊಲೆಹಾಲು ಎಳೆ ಕಂದನ ಹೊಟ್ಟೆತುಂಬಿಸಿದರೆ ಸಾಕಲ್ಲವೆ? ಮತ್ತೇನು ನಿರೀಕ್ಷಿಸುತ್ತೀರಿ?ಎಳೆ ಕಂದನ ಮುಂದೆ ಇಡೀ ಹಾಲಿನ ಡೇರಿಯನ್ನೇ ಇಟ್ಟುಕೊಂಡು ಏನು ಪ್ರಯೋಜನ? ಹಾಗೆಯೆ ನನ್ನ ಕಕ್ಷಿದಾರರು ತಾಯಿಯು ಹಾಲೂಡಿಸುವಂತೆ ಕಳೆದ ಹದಿನೈದು ವರ್ಷಗಳಿಂದಲೂ ಆ ಪುಟ್ಟಮಕ್ಕಳ ಪುಟಾಣಿ ಜ್ಞಾನದ ಹಸಿವನ್ನು ಪೂರಣ ಮಾಡಿದ್ದಾರೆ. ಹೀಗೆ ಮಾಡುವಾಗ ಅವರಿಗೆ ಸಹಜವಾಗಿಯೇ ಘಜ್ನಿಮಹ್ಮದನೋ..ತರೈನ್ ಯುದ್ದವೋ...ವೃತ್ತದ ವಿಸ್ತೀರ್ಣವೋ..ಪೈಥಾಗೋರಸ್ ಪ್ರಮೆಯವೋ ಯಾವುದರ ಅವಶ್ಯಕತೆಯೂ ಅಲ್ಲಿ ಬಿದ್ದಿಲ್ಲ. ಹದಿನೈದು ವರ್ಷಗಳಲ್ಲಿ ಒಮ್ಮೆಯೂ ನೋಡದಿರುವ ಸ್ವಂತ ಮಕ್ಕಳನ್ನೇ ದಿಢೀರೆಂದು ಮುಂದೆ ತಂದು ನಿಲ್ಲಿಸಿದಾಗ ಗುರ್ತಿಸಲಾಗುವುದಿಲ್ಲ. ಅಂತಹುದರಲ್ಲಿ ಮೇಲ್ಕಂಡ ವಿಷಯಗಳ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರ ಮರೆತಿರುವುದು ಸ್ವಾಭಾವಿಕವಾಗಿಯೇ ಇದೆ. ಹಾಗಂತ ಅವರೇನು ಮೋಸ ಮಾಡಿಲ್ಲ. ಕೊಟ್ಟ ಜವಾಬ್ಧಾರಿಗಳನ್ನು ಚೆನ್ನಾಗಿಯೇ ನಿಭಾಯಿಸಿಕೊಂಡು ಬಂದಿದ್ದಾರೆ. ಅವರನ್ನು ಯಾವ ರೀತಿ ಉಪಯೋಗಿಸಿಕೊಳ್ಳಬೇಕಾಗಿತ್ತೋ ಹಾಗೆ ಉಪಯೋಗಿಸಿಕೊಳ್ಳುವುದರಲ್ಲಿ ಇಲಾಖೆ ಸೋತಿರುವುದು ಇದರಿಂದ ಸ್ಪಷ್ಟವಾಗಿ ತಿಳಿಯುತ್ತದೆ. ಅದೂ ಅಲ್ಲದೆ ನೀವು ಬಂಗಾರವನ್ನು ಚಿಕ್ಕ ಮಕ್ಕಳ ಕೈಯೊಳಗೆ ಕೊಟ್ಟಿರಿ, ಮಕ್ಕಳು ಅದನ್ನು ಮಣ್ಣಲ್ಲಿ ಮುಳುಗೇಳಿಸಿ ಆಟ ಆಡಿದವು. ಬಂಗಾರಕೆ ಮಣ್ಣು ಮೆತ್ತಿಕೊಂಡಿದೆಯಾದರೂ ಅದು ಆ ಮಕ್ಕಳಿಗೆ ಭರಪೂರ ಮನರಂಜನೆಯನ್ನೇ ನೀಡಿದೆ ಎನ್ನಬಹುದು. ನೀವು ಅದೇ ಬಂಗಾರವನ್ನು ಅದು ಸಲ್ಲುವ ಸ್ಥಳದಲ್ಲಿಟ್ಟಿದ್ದರೆ ಕಿರೀಟಕ್ಕೆ ಉಪಯೋಗಿಸಲ್ಪಡುತ್ತಿತ್ತೇನೋ ? ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿ ನನ್ನ ಕಕ್ಷಿದಾರನಿಗೆ ನ್ಯಾಯ ಒದಗಿಸಿಕೊಡಬೇಕೆಂದು ಮತ್ತೊಮ್ಮೆ ಕಳಕಳಿಯಿಂದ ವಿನಂತಿಸಿಕೊಳ್ಳುತ್ತಿದ್ದೇನೆ ಎಂದನು ನವೀನ.
ನ್ಯಾಯಾಧೀಶರು ನನ್ನತ್ತ ತಿರುಗಿ ನೀವೇನಾದರೂ ಹೇಳುವುದಿದೆಯಾ? ಎಂದು ಪ್ರಶ್ನಿಸಿದಾಗ ಯಾಕೋ ನನ್ನ ಗಂಟಲೇ ಕಟ್ಟಿದಂತಾಗಿ ಮಾತೇ ಹೊರಡದಂತಾದವು. ಹೇಗೋ ಸಾವರಿಸಿಕೊಂಡು ಕೈ ಮುಗಿದು ಮಾನ್ಯ ನ್ಯಾಯಾಧೀಶರೇ ಇದುವರೆಗೂ ಶಿಕ್ಷಕವೃತ್ತಿಯನ್ನು ಪರಮಶ್ರೇಷ್ಟ ಪವಿತ್ರ ಸೇವೆಯೆಂದೇ ಮಾಡಿಕೊಂಡು ಬಂದಿದ್ದೇನೆ. ಎಲ್ಲಿಯೂ ಯಾವತ್ತೂ ಯಾರಿಗೂ ಮೋಸ ಮಾಡಿಲ್ಲ. ಹೌದು ನಾನು ಹಿಂದೆ ಕಲಿತಿರುವುದರಲ್ಲಿ ಕೆಲವೊಂದು ಅಂಶಗಳನ್ನು ಮರೆತಿದ್ದೇನೆ. ಹಾಗಂತ ನಾನು ಮಕ್ಕಳಿಗೆ ಕೈಲಾಗದ ಹೇಡಿಯಂತೆ ಕಲಿಸದೇ ಕುಳಿತುಕೊಂಡವನಲ್ಲ. ನನ್ನ ಸಂಪೂರ್ಣ ಜ್ಞಾನದ ಬಳಕೆ ಆಗಾಗ ಆಗಿದ್ದರೆ ಈ ರೀತಿ ಪರಿಸ್ಥಿತಿ ಬರುತ್ತಿರಲಿಲ್ಲವೆಂದು ಅನಿಸುತ್ತದೆ. ದೇವಸ್ಥಾನಗಳಲ್ಲಿ ತೀರ್ಥ ಕೊಡುತ್ತಾರಲ್ಲ, ಹಾಗೆ ಆ ತೀರ್ಥದ ಪ್ರಮಾಣದಷ್ಟೇ ನನ್ನ ಜ್ಞಾನದ ಬಳಕೆಯಾಯಿತೆನ್ನಬಹುದು. ಕೊಡಪಾನ ತುಂಬಿ ಸುರಿಯುವಂತಹ ಅವಕಾಶವೇ ಲಭ್ಯವಾಗಲಿಲ್ಲ. ಇದು ನನ್ನೊಬ್ಬನ ಅಳಲಲ್ಲ..ನನ್ನಂತೆಯೆ ಹಲವಾರು ಶಿಕ್ಷಕರ ಪರಿಸ್ಥಿತಿಯಾಗಿದೆ. ನಮ್ಮ ಜ್ಞಾನವು ನಮ್ಮೊಳಗೆಯೆ ಕೊಳೆತುಹೋಗುವ ಪರಿಸ್ಥಿತಿಯಿದೆ. ಇದು ಬದಲಾಗಬೇಕು. ಧರಿಸಿದ ಬೆಳ್ಳಿಯೂ ಕಪ್ಪಾಗುವಂತೆ, ಕಪ್ಪಾಗುತಿಹ ಶಿಕ್ಷಕರ ಮಾನಸಿಕ ಸ್ಥಿತಿಯನ್ನು ಮತ್ತೆ ಹೊಳಪುಗೊಳಿಸುವ ಪ್ರಯತ್ನವಾಗಬೇಕು. ಉಳಿದೆಲ್ಲ ವೃತ್ತಿಗಳಿಗಿಂತ ಶಿಕ್ಷಕವೃತ್ತಿಗಿರುವ ಭಿನ್ನತೆಯನ್ನು, ಅದರಲ್ಲಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಂಡು ಮಾರ್ಗದರ್ಶಿಸುವ ಸೂಕ್ಷ್ಮಗ್ರಾಹಿ ಮಾರ್ಗದರ್ಶಕರ ನೇಮಕವಾಗಬೇಕು. ಸೆಪ್ಟೆಂಬರ್ ಐದರಂದು ಶಿಕ್ಷಕರನ್ನು ಸಿಕ್ಕಾಪಟ್ಟೆ ಹೊಗಳಿ ಅದೇ ಶಿಕ್ಷಕರು ಪಿಂಚಣಿಗಾಗಿ ರಸ್ತೆಗಿಳಿದು ಹೋರಾಡುವಾಗ ಅವರನ್ನು ಬೋಳಿಮಕ್ಕಳಾ ಎಂದು ಸಂಬೋಧಿಸಿ ಅಪಮಾನ ಮಾಡಿದಂತಹ ಆಫೀಸರ್ ಗಳನ್ನು ಕಂಡಿದ್ದೇನೆ. ಶಿಕ್ಷಕರಿಗೆ ವಿಶೇಷ ಗೌರವ ಕೊಡಲಾಗದಿದ್ದರೆ ಪರವಾಗಿಲ್ಲ, ಅವರನ್ನೂ ಸಾಮಾನ್ಯರಂತೆ ಕಾಣಿ. ಸಾಮಾನ್ಯರಂತೆ ಕಾಣಲು ಸಾಧ್ಯವಿಲ್ಲವೋ ಹಾಗಾದರೆ ವಿಶೇಷವಾಗಿ ಕಾಣಿ. ಒಂದೇ ಬಾಯಲ್ಲಿ ಎರಡು ನಾಲಿಗೆ, ಈ ಇಬ್ಬಗೆಯ ಧೋರಣೆಯನ್ನು ಕೈಬಿಡಿ. ಇಂತಹ ಧೋರಣೆಯು ಶಿಕ್ಷಕರ ಮೇಲಿನ ಮಾನಸಿಕ ಅತ್ಯಾಚಾರಕೆ ಸಮವೆನಿಸಿಕೊಳ್ಳುತ್ತದೆ. ಆದ್ದರಿಂದ ದಯಮಾಡಿ ಎಲ್ಲರಲ್ಲೂ ವಿನಂತಿಸಿಕೊಳ್ಳುವುದೇನೆಂದರೆ ಒಮ್ಮೆ ನಿಮ್ಮ ನಿಮ್ಮ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಕಣ್ಮುಚ್ಚಿ ಸ್ಮರಿಸಿಕೊಳ್ಳಿ. ಅವರೇನಾದರೂ ಮೋಸಗಾರರಂತೆ ಕಂಡರೆ? ಮೋಸಗಾರರಾಗಿದ್ದರೆ ಈಗ ನೀವಿರುವ ಸ್ಥಾನದಲ್ಲಿ ನೀವಿರಲು ಸಾಧ್ಯವಾಗುತ್ತಿತ್ತಾ ಚಿಂತಿಸಿ. ನಾವು ಮಕ್ಕಳ ಮೊಗವನ್ನು ನೋಡಿ ನಮ್ಮ ನೋವು ನಲಿವನ್ನು ಮರೆಯುವಂತವರು. ಯಾರು ಏನೇ ಮಾಡಿದರೂ, ಯಾರು ಏನೇ ತೆಗಳಿದರೂ ಕಲಿಸುವುದನೆಂದೂ ಬಿಡೆವು. ಇಷ್ಟೇ ಸ್ವಾಮಿ ನನ್ನ ಅರಿಕೆ ಎಂದು ಮಾತುಮುಗಿಸಿದೆ. ಕೋರ್ಟ ಆವರಣವೆಲ್ಲವೂ ನಿಶ್ಯಬ್ಧ. ಎಲ್ಲರ ಕಣ್ಣುಗಳೂ ನ್ಯಾಯಾಧೀಶರು ಏನು ಹೇಳುವರೋ ಎಂದು ಅವರತ್ತಲೆ ನೆಟ್ಟಿದ್ದವು.
ಇದೊಂದು ಅಪರೂಪದ ಪ್ರಕರಣ. ಇಡೀ ವ್ಯವಸ್ಥೆಯ ಚಿತ್ರಣವನ್ನೇ ನಮ್ಮ ಮುಂದೆ ಬಿಚ್ಚಿಡಲು ಸಹಾಯ ಮಾಡಿದೆ. ಮೊದಲನೆಯದಾಗಿ ಈ ದೇಶದಲ್ಲಿ ಶಿಕ್ಷಕರಿಗೆ ಅತ್ಯುನ್ನತ ಸ್ಥಾನವನ್ನು ಕಲ್ಪಿಸಲಾಗಿದೆ. ಆದರೆ ಅಂತಹ ಸ್ಥಾನದ ಘನತೆ ಗೌರವಗಳಿಗೆ ಧಕ್ಕೆಯಾಗಿದ್ದು ದುರ್ಧೈವವೇ ಸರಿ.ಈ ವಿಷಯದಲ್ಲಿ ನ್ಯಾಯಾಲವು ಶಿಕ್ಷಕ ವರ್ಗದ ಕುರಿತು ಮರುಕ ವ್ಯಕ್ತಪಡಿಸುತ್ತದೆ. ಪ್ರಕರಣದಲ್ಲಿ ದೋಷಿಯಾಗಿ ನಿಂತಿರುವ ಶಿಕ್ಷಕರ ವಿರುದ್ಧ ಯಾವುದೇ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಸರ್ಕಾರ ಸೋತಿದೆ. ಕಾಲ ಕಾಲಕ್ಕೆ ಶಿಕ್ಷಕರ ಜ್ಞಾನವನ್ನು ಸದ್ಭಳಕೆ ಮಾಡಿಕೊಳ್ಳದೇ..ಎಡುವಿದೆ. ಒಂದು ಸಸಿಗೆ ನಿರಂತರವಾಗಿ ನೀರೆರೆದರೆ ತಾನೇ ಅದು ಚೈತನ್ಯಯುಕ್ತವಾಗಿರುವುದು. ಆದರೆ ಇಲ್ಲಿ ಹದಿನೈದು ವರ್ಷಗಳವರೆಗೂ ಸಸಿಯ ಮೇಲೆ ಬುಟ್ಟಿ ಮುಚ್ಚಿ...ಛೇ! ಈ ಸಸಿ ಬೆಳೆಯಲು ಲಾಯಕ್ಕಿಲ್ಲವೆಂದು ಕಿತ್ತೊಗೆದರೆ ಅಲ್ಲಿ ಸಸಿಯ ತಪ್ಪಾದರೂ ಏನು? ಅದೇ ಸಸಿಯನ್ನು ಮೈದಾನದಲ್ಲಿಟ್ಟಿದ್ದರೆ ಬೃಹತ ಮರವಾಗಿ ಬೆಳೆಯುತ್ತಿರಲಿಲ್ಲವೆ? ಹೀಗಾಗಿ ಕೂಡಲೇ ಶಿಕ್ಷಕರ ಅಮಾನತ್ತನು ರದ್ದುಪಡಿಸಿ, ಅವರ ಸೇವೆ ಮುಂದುವರೆಸುವಂತೆ ಶಿಫಾರಸ್ಸು ಮಾಡುತ್ತದೆ. ಅದೂ ಅಲ್ಲದೇ ಶಿಕ್ಷಕವೃತ್ತಿಯು ವಿಶಾಲವಾದ ಹರಿವನ್ನು ಹೊಂದಿದ್ದು, ಒಬ್ಬ ಶಿಕ್ಷಕರ ಕೈಯಲ್ಲಿ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿತವಾಗುತ್ತಿರುತ್ತದೆ. ಅದೆಷ್ಟೋ ಜನಮಾನಸದಲ್ಲಿ ಶಿಕ್ಷಕರು ದೇವರಂತೆಯೇ ನೆಲೆಸಿರುತ್ತಾರೆ. ಹೀಗೆ ಒಬ್ಬ ಶಿಕ್ಷಕನನ್ನು ಅಮಾನತ್ತುಗೊಳಿಸಿದರೆ ಆ ಇಡೀ ಸಮುದಾಯದ ನಂಬಿಕೆಯನ್ನೇ ಕೊಲೆಗೈದಂತೆ. ಇಂತಹ ಭಾವನಾತ್ಮಕ ವಿಷಯಗಳನ್ನು ಪೇಪರ್ ಮಿಡಿಯಾಗಳಲ್ಲಿ ಪ್ರಕಟಿಸಿ ತೇಜೋವಧೆ ಮಾಡಿದ್ದಕ್ಕಾಗಿ ಶಿಕ್ಷಕರಿಗೆ ಐದುಲಕ್ಷ ರೂಪಾಯಿಗಳನ್ನು ಪರಿಹಾರವಾಗಿ ನೀಡಬೇಕೆಂದು ಈ ಕೋರ್ಟ್ ಆಜ್ಞೆ ಮಾಡುತ್ತದೆ.
ನ್ಯಾಯಾಧೀಶರು ತೀರ್ಪು ಬರೆದು ಓದಿದಾಗ ನನ್ನ ಕಣ್ಣಲ್ಲಿ ಕಣ್ಣೀರಾಡಿದವು. ಮುಖದಲ್ಲಿ ನಗು. ಎಲ್ಲಕ್ಕಿಂತಲೂ ಮಿಗಿಲಾಗಿದ್ದು ಏನಾದರೂ ಇದ್ದರೆ ಅದು ನನ್ನ ಸತ್ಯತನದ ಸತ್ವಪರೀಕ್ಷೆಯ ವಿಜಯವಾಗಿತ್ತು. ಅದು ನನ್ನೊಬ್ಬನ ಗೆಲುವಾಗಿರಲಿಲ್ಲ. ಬದಲಾಗಿ ನನ್ನಂತೆ ಮಾನಸಿಕವಾಗಿ ಸದಾ ಕುಗ್ಗಿಹೋಗಿ ಬಂದವರೆಲ್ಲರಿಗೂ ಕೈಮುಗಿವ, ಅಂದದ್ದನ್ನು ಅನಿಸಿಕೊಂಡು ದುಃಖನುಂಗುವ ಗುಲಾಮತನದ ಮನಸ್ಥಿತಿಗೆ ದೂಡಲ್ಪಟ್ಟ ಅಸಂಖ್ಯಾತ ಶಿಕ್ಷಕರ ಗೆಲುವಾಗಿತ್ತು.
- ಆನಂದ ವಿ ಮಾಲಗಿತ್ತಿಮಠ
ಈ ಕತೆಯನ್ನೂ ಓದಿ
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ