Skip to main content

ಅದೃಷ್ಟವಂತ @ ಆನಂದ ಮಾಲಗಿತ್ತಿಮಠ ಕತೆ

      

        ಶ್ರೀರಂಗಪುರದ ರಂಗೇಗೌಡರೆಂದರೆ ಊರವರಿಗೆಲ್ಲ ಅದೇನೋ ಭಯ ಮತ್ತು ಭಕ್ತಿ. ಊರು ಪ್ರಾರಂಭವಾಗುವುದೇ ಗೌಡರ ಮನೆಯಿಂದ. ತುಂಬ ಹಳೆ ಕಾಲದ ಮನೆಯದು. ಹೊರಗಡೆ ನಿಂತು ನೋಡಿದರೆ ಅರಮನೆಯೆನೋ ಎಂದನಿಸುವಷ್ಟು ವಿಶಾಲತೆ. ಒಳಗಡೆ ಒಳ್ಳೆ ಗಟ್ಟಿ ಸಾಗವಾನಿಯ ಗಜಗಾತ್ರದ ಕಂಬಗಳು, ಅವುಗಳ ಮೈಮೇಲೆ‌ ಅಂದವಾದ ಎಳೆಬಳ್ಳಿಯ, ನಗೆನವಿಲುಗಳ, ಪುಷ್ಪಗುಚ್ಛದ ಕುಸುರಿ ಕೆತ್ತನೆ ಕಣ್ಮನ ಸೆಳೆಯುವಂತಿತ್ತು. ಗೋಡೆಗೆ ನೇತುಹಾಕಿದ ಬಂದೂಕುಗಳು ಗೌಡರ ಗತ್ತಿಗೆ ಸಾಕ್ಷಿಯಾಗಿದ್ದವು. ಮನೆಯ ಸುತ್ತಲೂ ತೆಂಗಿನ ಮರಗಳು ಫಲಬಿಟ್ಟು ತೂಗಾಡುತ್ತಿದ್ದವು. ಎಡಭಾಗದಲ್ಲಿ ಗೌಡ್ತಿಯು ಅಕ್ಕರೆಯಿಂದ ಬೆಳೆಸಿದ ಹೂದೋಟದ ತುಂಬ ಬಣ್ಣ ಬಣ್ಣದ ಚಿಟ್ಟೆಗಳು ಹಾರಾಡುತ್ತ ಸ್ವರ್ಗಸೌಂದರ್ಯವನ್ನು ಧರೆಗಿಳಿಸಿದ್ದವು. ಹಂಚಿನ ಮಾಳಿಗೆಯ ಅಡಿಯಲ್ಲಿ ಪಾರಿವಾಳಗಳು, ಹಸಿರು ಗಿಣಿಗಳು, ಹತ್ತಾರು ಗುಬ್ಬಚ್ಚಿಗಳು ತಮ್ಮ ತಮ್ಮ ಪುಟಾಣಿ ಸಂಸಾರವನ್ನು ಹೂಡಿಕೊಂಡು ನೆಮ್ಮದಿಯಾಗಿದ್ದವು. ಮನೆಯ ಬಲ ಭಾಗದಲ್ಲಿ ರಾಮ ಮತ್ತು ಲಕ್ಷ್ಮಣರದು ಒಂದು ಜೋಡಿ ಅವುಗಳ ಪಕ್ಕದಲ್ಲಿಯೇ ಭೀಮ ಮತ್ತು ಅರ್ಜುನರೆಂಬ ಬಲಿಷ್ಟವಾದ ಅಷ್ಟೇ ಸುಂದರವಾದ ನಾಲ್ಕೆತ್ತುಗಳಿಗಾಗಿ ನಿರ್ಮಿಸಿದ ಶೆಡ್ಡು,‌ ಗೌರಿ, ಕಾವೇರಿ, ಲಕ್ಷ್ಮೀಯೆಂಬ ಹಸುಗಳನ್ನು ಕಟ್ಟುವ ಕೊಟ್ಟಿಗೆ, ಎಲ್ಲರ ದಾಹ ತಣಿಸಲೆಂದೇ ಗೌಡರ ತಂದೆಯವರು ಕೊರೆಸಿದ ಬಾವಿ, ಅದರ ಪಕ್ಕದಲ್ಲಿಯೇ ಬೃಹತ್ತಾಗಿ ಮೈತುಂಬಿಕೊಂಡು ಬೆಳೆದು ನಿಂತಿಹ ಬೇವಿನ ಮರ.ಅದು ಬಾವಿ ದಂಡೆ ಮೇಲೆ ಕುಳಿತು ಪಾತ್ರೆಪಗಡೆ ತೊಳೆಯುವವರಿಗೆ ಹಾಗೂ ರಾಸುಗಳಿಗೆ ನೆರಳು ನೀಡುತ್ತಿತ್ತು.
    ಅಂದೇಕೋ ಗೌಡರ ಮನೆತುಂಬ ವಿಪರೀತ ಜನಜಂಗುಳಿಯಿತ್ತು. ಅರೆ ಹಬ್ಬ ಅಂದರೆ ಸುಮ್ಮನೇನಾ? ಅದೂ ಎಲ್ಲ ಕಾರ್ಯಗಳಲ್ಲಿಯೂ ಪ್ರಥಮಪೂಜಿತ,ವಿಘ್ನವಿನಾಶಕ ವಿನಾಯಕನ ಹಬ್ಬ. ಹೀಗಾಗಿ ಬೆಳ್ಳಂಬೆಳಗ್ಗೆಯೆ ಆಳುಗಳೆಲ್ಲ ಅಂಗಳವನ್ನು ಸಾರಿಸಿ ಮಡಿಮಾಡಿದ್ದರು. ಗೌಡರಿಗೆ ತಮ್ಮನೊಬ್ಬನಿದ್ದ. ಅವನ ಹೆಸರು ರಾಜೇಗೌಡ ಅಂತ. ಅವನ ಹೆಂಡತಿ ಮಹಾದೇವಿ ರಂಗವಲ್ಲಿ ಹಾಕುವುದರಲ್ಲಿ ನಿಸ್ಸೀಮಳು. ಅವಳು ಹಬ್ಬಹರಿದಿನಗಳಲ್ಲಿ ಬಿಡಿಸುತ್ತಿದ್ದ ರಂಗೋಲಿ ಚಿತ್ತಾರವನ್ನು ನೋಡುವುದೇ ಒಂದು ಸಂತೋಷ. ರಂಗೇಗೌಡರ ಪತ್ನಿ ಶ್ರೀದೇವಿಯೋ ಪಾಕಪ್ರವೀಣೆ. ಅವಳು ಅಡುಗೆಗೆ ಬಳಸುತ್ತಿದ್ದ ಮಸಾಲೆಗಳನ್ನೇ ಬಳಸಿ ಅದೇ ರೀತಿ ಬೇರೆಯವರು ಅಡುಗೆ ಮಾಡಿದರೂ, ಅವಳು ಮಾಡಿದಂತಹ ರುಚಿ ಅದಕ್ಕೆ ದಕ್ಕುತ್ತಿರಲಿಲ್ಲ. ಹಬ್ಬದ ಅಡುಗೆಯ ಜವಾಬ್ದಾರಿಯನ್ನು ಬೇಡವೆಂದರೂ ಅವಳೇ ವಹಿಸಿಕೊಂಡಿದ್ದಳು. 
      ಬಡಿಗೇರ ಬಸು ದೂರದೂರಿನಿಂದ  ಅರಳು ತಂದು ಹದಗೊಳಿಸಿ ಗೌಡರ ಮನೆಗಂದೇ ವಿಶೇಷ ವಿನ್ಯಾಸದ ವಿಘ್ನೇಶ್ವರನ ಮೂರ್ತಿಯನ್ನು  ತನ್ನ ಕೈಯಾರೆ ತಯಾರಿಸಿಡುತ್ತಿದ್ದ. ಪ್ರತಿವರ್ಷವೂ ಒಂದೊಂದು ವಿನ್ಯಾಸ. ಗೌಡರು ಬಡಿಗೇರ ಮನೆಗೆ ಭಜನಾ ವಾದ್ಯಗಳ ಸಮೇತ, ಹುಡುಗರನೆಲ್ಲ ಕರೆದುಕೊಂಡು ಹಾಡು ಕುಣಿತದೊಂದಿಗೆ ಉತ್ಸಾಹದಿಂದ ಹೋಗಬೇಕು,ಹೋಗಿ ಗಣಪತಿ ಬಪ್ಪಾ ಮೋರಯೋ ಎಂದು ಮೂರ್ತಿಯನ್ನು ಮೆರವಣಿಗೆಯೊಂದಿಗೆ ಮನೆಗೆ ತೆಗೆದುಕೊಂಡು ಬಂದ ನಂತರವೇ ಊರಿನ ಉಳಿದವರ ಮನೆಯ ಗಣಪತಿಗಳು ಹೋಗುವುದು ಮೊದಲಿನಿಂದಲೂ ಪಾಲಿಸಿಕೊಂಡು ಬಂದ ವಾಡಿಕೆ. ಗೌಡರ ಗಣಪ್ಪ ಅಂತಲೆ ಎಲ್ಲರ ಬಾಯಲ್ಲಿಯೂ ಅದು ಪ್ರಸಿದ್ದಿಯಾಗಿಬಿಟ್ಟಿತ್ತು. ಗಣಪತಿ ಇರುವಷ್ಟು ದಿನ ಪಟಾಕಿಗಳ ಸಿಡಿತ, ರಾತ್ರಿಯಾಕಾಶದಲ್ಲಿ ಬಾಣಬಿರುಸುಗಳ ಮೊರೆತ, ಅವುಗಳಿಂದ ಹೊಮ್ಮುವ ಆಕರ್ಷಕ ಬಣ್ಣಬಣ್ಣದ ಬೆಳಕಿನ ಚಿತ್ತಾರಕ್ಕೆ ಮನಸೋಲದವರಿರಲಿಲ್ಲ. ಹಬ್ಬ ಮುಗಿಯುವರೆಗೂ ಆಳುಗಳಿಗೆಲ್ಲಾ ಗೌಡರ ಮನೆಯಲ್ಲಿಯೇ ನಿತ್ಯವೂ ಊಟದ ಸಮಾರಾಧನೆ.
                ರಾಜೇಗೌಡನಿಗೆ ಅಣ್ಣನನ್ನು ಕಂಡರೆ ಮೊದಲಿನಿಂದಲೂ ಅಷ್ಟಕಷ್ಟೆ. ಮನೆಯ ಪಕ್ಕದಲ್ಲಿ ಹಿರೇಗೌಡರು ಅಂದರೆ ರಂಗೇಗೌಡರ ತಂದೆಯವರು ಕೊರೆಯಿಸಿದ ಬಾವಿ ಇತ್ತಲ್ಲ, ಅವರ ಕಾಲದಲ್ಲಿ ಒಮ್ಮೆ ವಿಪರೀತ ಬರಗಾಲ ಬಿದ್ದಿತಂತೆ. ಮೊದಲೇ ಒಕ್ಕಲುತನ ಮನೆ..ಅದರಾಗೂ ಹತ್ತಿಪ್ಪತ್ತು ದನಕರುಗಳು. ಅವುಗಳ ದಾಹವನ್ನು ನೀಗಿಸುವುದೇ ದೊಡ್ಡ ಸವಾಲಾಗಿತ್ತಂತೆ. ಎಲ್ಲರ ಬಾಯಲ್ಲಿಯೂ ಒಂದೇ ಮಂತ್ರ..ಸ್ವಾಮಿ ನೀರಿದಿಯಾ? ಅಂತಹ ಕಠಿಣ ಪರಿಸ್ಥಿತಿಯಲ್ಲಿ ಹಿರೇಗೌಡರು ಮುಂದೆ ನಿಂತು ಬಾವಿ ಕೊರೆಸಿದರೆ..ಯಾವ ದರಿದ್ರ ಶಾಪಾನೋ ಗೊತ್ತಿಲ್ಲ, ಅದರಲ್ಲಿ ಹನಿ ನೀರೂ ಜಿನುಗಲಿಲ್ಲವಂತೆ. ಎಲ್ಲರೂ ತಲೆ ಮೇಲೆ ಕೈ ಹೊತ್ತು ಕುಳಿತಿರಬೇಕಾದರೆ..ನಮ್ಮ ರಂಗೇಗೌಡರು ಆಗಿನ್ನೂ ಐದಾರು ವರ್ಷದ ಪುಟಾಣಿ ಬಾಲಕ. ತಮ್ಮ ತಂದೆ ಹೀಗೆ ಚಿಂತಿಸುತ್ತಾ ಕುಳಿತಿರುವುದ ಕಂಡು "ಅಪ್ಪಾ ಯಾಕಪ್ಪಾ ಹೀಗೆ ಬೇಜಾರ ಮಾಡ್ಕೊಂಡು ಕುಂತಿರುವೆ?" ಎಂದಾಗ ಹಿರೇಗೌಡರು "ತಿಂಗಳಾನುಗಟ್ಟಲೆ ಶ್ರಮಪಟ್ಟು ಬಾವಿ ತೋಡಿಸಿದರೆ..ಗಂಗವ್ವ ತಾಯಿ ಹನಿ ನೀರೂ ಕೊಡಲಿಲ್ಲ ಕಂದಾ" ಎಂದು ಪುಟ್ಟನನ್ನು ತಬ್ಬಿದರಂತೆ, ಆಗ ಪುಟಾಣಿ ರಂಗೇಗೌಡರು ಬುರ್ರ ಅಂತ ಮನೆಗೆ ಓಡಿ ಹೋಗಿ ನೀರಿಗಾಗಿ ಹುಡುಕಾಡಿದರೆ ಎಲ್ಲಿಯೂ ನೀರಿಲ್ಲದಿರುವುದ ಕಂಡು ಕೊನೆಗೆ ದೇವರ ಜಗುಲಿ ಮ್ಯಾಲಿದ್ದ ಕಳಸಗಿಂಡಿಯನ್ನು ತಂದು ಅದರೊಳಗಿನ ನೀರನ್ನು ಬಾವಿಯಲ್ಲಿ ಸುರಿಯುತ್ತಾ ಅಪ್ಪಾ ನೀರಿಲ್ಲ ಎಂದು ಬೇಜಾರಾಗಬೇಡಾ ಇದೋ ಬಾವಿಯಲ್ಲಿ ನೀರು ಹಾಕುತ್ತಿರುವೆ ಎಂದನಂತೆ. ಎಲ್ಲರೂ ಹುಚ್ಚು ಹುಡುಗನೆಂದು ಅಸಡ್ಡೆ ಮಾಡಿದರಂತೆ. ಆದರೆ ಹಾಳುಬಾವಿಯಲ್ಲಿ ಮರುಕ್ಷಣವೇ ನೀರು ಜಿನುಗುವ ಶಬ್ದ ಕೇಳಿ ಇಣುಕಿದಾಗ ಬಾವಿಯಲ್ಲಿ ಗಂಗಾಮಾಯಿ ಪ್ರತ್ಯಕ್ಷಳಾಗಿದ್ದಳಂತೆ. ಎಲ್ಲರೂ ರಂಗೇಗೌಡನನ್ನು ಹೆಗಲ ಮೇಲೆ ಹೊತ್ತು ಕುಣಿದಾಡಿದರಂತೆ. ಹಿರೇಗೌಡರಂತೂ ಎಂತಹ ಅದೃಷ್ಟದ ಕೈಗಳಪ್ಪಾ ..ಬರದ ನಾಡಿಗೆ ಭಗೀರಥನಾಗಿಬಿಟ್ಟೆ ಎಂದು ಹೊಗಳಿ ಮುದ್ದಾಡಿದರಂತೆ. ಅಂದಿನಿಂದ ಹಿರೇಗೌಡರಿಗೆ ರಂಗೇಗೌಡರೆಂದರೆ ಪಂಚಪ್ರಾಣವಾಗಿ ಹೋದ. ಮನೆಯ ಪ್ರತಿ ಶುಭಕಾರ್ಯಕೂ ಅದೃಷ್ಟವಂತ ರಂಗೇಗೌಡ ಇರಲೇಬೇಕಿತ್ತು. ಇದು ರಂಗೇಗೌಡನ ತಮ್ಮ ರಾಜೇಗೌಡ ಹುಟ್ಟಿದ ನಂತರವೂ ಮುಂದುವರೆಯಿತು. ತನ್ನ ಅಣ್ಣನಿಗೆ ತಂದೆಯು ತೋರುತ್ತಿದ್ದ ಇಂತಹ ವಿಶೇಷ ಪ್ರೀತಿಯು ಅವನಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿತ್ತು. ಅಲ್ಲಿಂದ ಶುರುವಾದ ಮನೋಘರ್ಷಣೆ ಮುಂದೆ ದೊಡ್ಡವರಾದ ಮೇಲಂತೂ ತಾರಕಕ್ಕೇರಿತ್ತು.
            ಅಣ್ಣ ರಂಗೇಗೌಡ ಏನಾದರೂ ಹೇಳಿದರೆ ಸಾಕು ರಾಜೇಗೌಡ ಹೆಡೆ ತುಳಿದ ಹಾವಿನಂತೆ ಬುಸುಗುಡುತ್ತಿದ್ದ. ಮನೆಯ ಎಲ್ಲ ಹಿರೇತನವನ್ನು ಅಣ್ಣನೇ ಮಾಡುತ್ತಾನೆ, ನನಗೆ ಈ ಮನೇಲಿ ಕಿಮ್ಮತ್ತೆ ಇಲ್ಲವೆಂದು ಭಾವಿಸಿಕೊಳ್ಳುತ್ತಿದ್ದ. ಆದರೂ ಅವನ ಹೆಂಡತಿ "ರೀ ಯಾಕ್ರೀ ನೊಂದುಕೊಳ್ಳುತ್ತಿರಾ..ಮುಂದೆ ನಿಮ್ಮಣ್ಣನ ಆಸ್ತಿಯೆಲ್ಲಾ ನಮಗೇ ತಾನೆ..ಅಕ್ಕನ ಹೊಟ್ಟೇಲಿ ಒಂದು ಹುಳಾ ಕೂಡ ಹುಟ್ಟಲಿಲ್ಲ. ಇನ್ನಂತೂ ಹುಟ್ಟುವ ಅವಕಾಶವೂ ಇದ್ದಂಗ ಇಲ್ಲ. ಎಲ್ಲಾ ಆಸ್ತಿನೂ ನಮಗೇ ಕಾಲ ಪಕ್ವವಾಗುವರೆಗೂ ಕಾಯೋಣ" ಎಂದು ಸಮಾಧಾನಿಸುತ್ತಿದ್ದಳು. ಹೀಗೆಲ್ಲಾ ಹೇಳಿದಾಗ ರಾಜೇಗೌಡ ನಿಂತಲ್ಲಿಯೇ ಹಗಲುಗನಸು ಕಾಣಾಕ ಶುರುಹಚ್ಚಿಕೊಳ್ಳುತ್ತಿದ್ದ.
      ಒಮ್ಮೆ ಗೌಡರ ಮನೆಗೆ ಚಮ್ಮಾರ ಕರೆಪ್ಪ ಬಂದಿದ್ದ. ಬಗಲಾಗೊಂದು ಗಂಟಿತ್ತು. ಹಲ್ಕಿಸಿದು ತಲೆಕೆರಕೋತ ಗೌಡ್ರ ಅಂತ ಒದರಿದ..ಯಾರು ಓ..ನಮ್ಮ ಕರೆಪ್ಪ ಏನ? ಬಾರಪಾ..ನೆನೆದವರ ಮನದಾಗ ಅಂತರಲಾ ಹಂಗ ಬಂದಿಯಲೊ ಎನ್ನುತ್ತಾ ಗೌಡ್ರು ಮಾತಿಗಿಳಿದರು. ಬುದ್ದಿ ನಿಮಗಾಗಿ ಹೊಸಾ ನಮೂನಿ ಮೆತ್ತನು ಜೋಡ ಹೊಲದ ತಂದೇನ್ರಿ ಎಂದು ತಾನು ತಂದ ಜೋಡುಗಳನ್ನು ಗೌಡರ ಕಾಲಿನ ಹತ್ತಿರ ಇಟ್ಟು ಹಿಂದೆ ಸರಿದು ಕೈಕಟ್ಟಿ ನಿಂತ. ಫುರಮಾಸಿ ಅದಾವಲ್ಲೋ..ಎನ್ನುತ್ತ ಗೌಡರು ತುಂಬಾ ಮೆಚ್ಚುಗೆ ವ್ಯಕ್ತಪಡಿಸುತ್ತ..ಕರೆಪ್ಪ ನನ್ನ ಹಳೆ ಜೋಡಿನ ಉಂಗುಟ ನಿನ್ನೆರ ಕಿತ್ತು ತೊಂದರೆಯಾಗಿತ್ತು. ಸರಿಯಾದ ಸಮಯಕ್ಕೆ ತಂದುಕೊಟ್ಟೆ ನೋಡು ಎಂದರು. ಹೌದ್ರಿ ಬುದ್ದಿ ನಿನ್ನೆ ನೀವು ಕಾಲು ಎಳಕೊಂಡು ಹೋಗ್ತಾಯಿರೋದನ್ನ ನೋಡಿದೆ.. ನಾನೇ ಅರ್ಥ ಮಾಡ್ಕೊಂಡು ಹೊಸ ಜೋಡು ಹೊಲೆದುಕೊಂಡು ಬಂದೆ ಎಂದನು. ಗೌಡರು ತಮ್ಮ ಆಳು ಮನುಷ್ಯನ ಕರೆದು ಕರೆಪ್ಪನಿಗೆ ಹತ್ತತ್ತ ಸೇರು ಜೋಳ, ಕಡಲೆ,ಹೆಸರು,ತೊಗರಿ ಎಲ್ಲ ಕಾಳುಗಳನ್ನು ಕೊಡಲು ಹೇಳಿದನು. ಈ ದೃಶ್ಯವನ್ನೇ ನೋಡುತ್ತಿದ್ದ ರಾಜೇಗೌಡ "ಅಣ್ಣಾ ಈ ರೀತಿ ಕಂಡಕಂಡವರಿಗೆಲ್ಲ ಬೊಗಸೆ ತುಂಬಿ ಕೊಟ್ಟರ ನಾವೇನು ತಿನ್ನೋದು?" ಎಂದು ಪ್ರಶ್ನಿಸಿದ. "ನೋಡು ತಮ್ಮ ಅವರೆಲ್ಲ ಚುಲೋ ಇದ್ದರನ ನಾವು ಗೌಡಕಿ ಮಾಡಾಕ ಆಗೋದು. ಅವರು ನಮ್ಮ ಕಷ್ಟ ಅರ್ಥಮಾಡಿಕೊಂಡು ನಮಗ ಸಹಾಯ ಮಾಡ್ತಾರ..ಹಂಗ ನಾವೂ ಅವರ ಕಷ್ಟ ಅರ್ಥಮಾಡಿಕೊಂಡು ಅವರಿಗೆ ಸಹಾಯ ಮಾಡಬೇಕು. ಇಲ್ಲಾಂದ್ರ ಅವರಿಗಿಂತಲೂ ನಾವು ಚಿಕ್ಕವರಾಗಿಬಿಡ್ತೆವು. ಬದುಕಿನ ಈ ಪಾಠಾ ನೀನಿನ್ನೂ ಕಲಿಯೋದು ಬಾಕಿಯಿದೆ" ಎನ್ನುತ್ತ ರಂಗೇಗೌಡ ಹೊರಹೋದನು. ರಾಜೇಗೌಡನಿಗೆ ಎಂದಿನಂತೆ ಅಣ್ಣನ ಮಾತುಗಳು ರುಚಿಸಲಿಲ್ಲ.
         ರಾಜೇಗೌಡನ ಪುಟಾಣಿ ಮಗ ಆಗ ತಾನೆ ತಪ್ಪುಹೆಜ್ಜೆ ಹಾಕಿ ನಡೆಯಲು ಕಲಿಯುತ್ತಿದ್ದ. ಅದನ್ನು ನೋಡಿದ ಬಡಿಗೇರ ಬಸು ಕಾಡಿಗೆ ಹೋಗಿ ಒಳ್ಳೆ ಮೆತ್ತನೆಯ ಗಟ್ಟಿಮುಟ್ಟಾದ ಕಟ್ಟಿಗೆಯನು ತಂದು ಉರುಳುಗಾಡಿ ಮಾಡಿ_" ಬುದ್ದಿ ಇದು ಚಿಕ್ಕಧಣ್ಯಾರಿಗಂತ ಮಾಡಿ ತಂದವ್ನಿ ದಯಮಾಡಿ ಒಪ್ಪಿಸಿಕೊಳ್ಳಬೇಕು" ಎಂದು ಪ್ರೀತಿಯಿಂದ ಭಿನ್ನವಿಸಿಕೊಂಡ. ಭೇಷ! ಆತ ನೋಡು ಬಸು, ಈಗ ಈ ಗಾಡಿ ಹಿಡ್ಕೊಂಡು ನನ್ನ ಮಗಾ ಅಗದಿ ಸಲೀಸಾಗಿ ನಡೆಯಬಹುದೆಂದು ಹುರುಪುಗೊಂಡು ಆಳ ಮನುಷ್ಯಾನ ಕರೆದು ಕಾಳು ಕೊಡಲು ತಿಳಿಸಿದನು. ಆಗ ಬಡಿಗೇರ ಬಸು _ ಬುದ್ದಿ ಕಾಳುಗೀಳು ಏನು ಬ್ಯಾಡ್ರಿ ಕೊಡೋದಾದರೆ ಭತ್ತದಕ್ಕಿ ಕೊಡಿ, ಮಕ್ಕಳೆಲ್ಲಾ ಅನ್ನ ಉಂಡು ಅದೆಸೋ ತಿಂಗಾಳಾತು ಎಂದ ಆಸೆಯಿಂದ. ಹಾಗೋ.. ಹಾಗಾದರೆ ಅಕ್ಕಿನೇ ಕೊಟ್ಟರಾತು ಬಿಡು ಎಂದು ಆಳು ಮನುಷ್ಯಾನಿಗೆ ಹೇಳಿ ಹತ್ತು ಸೇರು ಅಕ್ಕಿ ಹೊರೆಸಿ ಕಳುಹಿಸಿದ. ಇದನ್ನು ಗಮನಿಸಿದ ರಂಗೇಗೌಡರು ತಮ್ಮಾ ಇದೇನ ಮಾಡ್ತಿದಿಯಾ? ಅಕ್ಕಿ ಏಕೆ ಕೊಟ್ಟೆ? ಎಂದು ಪ್ರಶ್ನಿಸಿದಾಗ ರಾಜೇಗೌಡನಿಗೆ ಉರಿದೋಯ್ತು.
      ನೀನು ಯಾರಿಗಾದರೂ ಏನಾದರೂ ಕೊಟ್ಟರೆ ನಾನೇನಾದರೂ ಕೇಳುತ್ತೇನೇನು? ಆತ ನನ್ನ ಮಗನಿಗಾಗಿ ಚೆಂದದ ಗಾಡಿ ಮಾಡ್ಕೊಂಡು ಬಂದಿದ್ದಾನೆ. ಅದರ ಪ್ರತಿಫಲವಾಗಿ ನಾವೂ ಏನಾದರೂ ಕೊಡಬೇಕಲ್ಲವೇ? ಎಂದನು.
       ಕೊಡಬೇಕು ಆದರೆ ನಮ್ಮದೇ ಹೊಲದಲ್ಲಿ ಬೆಳೆದ ಕಾಳುಕಡಿ ಕೊಡಬೇಕಿಲ್ಲೋ..ಅದರ ಬದಲಾಗಿ ನಾವೇ ಯಾರದೋ ಹತ್ತಿರ ತಂದ ಅಕ್ಕಿಯನ್ನು ಯಾರಾದರೂ ದಾನವಾಗಿ ನೀಡ್ತಾರಾ? ರಂಗೇಗೌಡ ಪ್ರಶ್ನಿಸಿದನು. 
   ಅವನು ಅಕ್ಕಿಯನ್ನೇ ಬಾಯ್ಬಿಟ್ಟು ಕೇಳಿದಾಗ ನಾವು ಹಿಕ್ಕಿ ಕೊಡಲಾದೀತೆ? ಒಂದು ವೇಳೆ ಅಕ್ಕಿ ಕೊಡುವುದಿಲ್ಲವೆಂದರೆ ನಮ್ಮ ಮರ್ಯಾದೆ ಉಳಿತಿತ್ತೇನು? ಇದು ನೀನೇ ಹೇಳಿಕೊಟ್ಟ ಪಾಠವಲ್ಲವೇ ಎಂದು ರಂಗೇಗೌಡನ ಮುಖನೋಡುತ್ತ ವ್ಯಂಗ್ಯವಾಗಿ ನಕ್ಕನು. 
       ಇವನ ಜೊತೆ ಗುದ್ದಾಡುವುದೂ ಒಂದೇ ಗೋಡೆ ಜೊತೆಗೆ ಗುದ್ದಾಡುವುದೂ ಒಂದೇ, ಎರಡೂ ನಿಷ್ಪ್ರಯೋಜಕವಾದದ್ದು ಎಂದರಿತ ರಂಗೇಗೌಡ ಅಲ್ಲಿಂದ ಸುಮ್ಮನೆ ತೆರಳಿದ.
      ರಾಜೇಗೌಡನ ಆಟೋಟೋಪ ಮತ್ತೆ ಮುಂದುವರೆಯಿತು. ದೇಹಿ ಅಂತ ಬಂದವರಿಗೆ ಮೊದಮೊದಲು ಸೇರಿನ ರೂಪದಲ್ಲಿದ್ದ ಅವನ ದಾನ ಚೀಲಕ್ಕೆ ಬಂದು ತಲುಪಿತ್ತು. 
         ಒಂದು ದಿನ ಮಡಿವಾಳ ಮಲ್ಲಪ್ಪ ರಸ್ತೆಯಲ್ಲಿ ಬಿದ್ದು ನರಳಾಡುತ್ತಿರುವುದನ್ನು ಗಮನಿಸಿದ ರಂಗೇಗೌಡರು ಯಾಕಪ್ಪಾ ಏನಾಯ್ತೆಂದು ವಿಚಾರಿಸಿದಾಗ 'ಸಾಮಿ ಮೂರು ದಿನವಾಯ್ತು ಹೊಟ್ಟೆ ತುಂಬ ಊಟ ಮಾಡಿ' ಎಂದು ಕಣ್ಣೀರಿಟ್ಟನು. ಅಲ್ಲವೋ ಹೋದ ವಾರ ನೀನೇ ಅಲ್ಲವೇ ನನ್ನ ತಮ್ಮನಿಂದ ಒಂದು ಚೀಲ ಜೋಳವನ್ನು ಪಡೆದುಕೊಂಡು ಹೋದವನು? ಎಂದು ಗೌಡರು ಮರುಪ್ರಶ್ನಿಸಿದರು. 'ಸಾಮಿ ಏನಂತ ಹೇಳೋದು, ಬಡವನ ಬಾಯಲ್ಲಿ ದೊಡ್ಡಮಾತೇಕೆ ಅದನ್ನು ಅಲ್ಲಿಯೇ ಬುಟ್ಟಬುಡಿ' ಎಂದನು ಮಲ್ಲಪ್ಪ. 
        ಅಲೆ ಇವನ ಹಿಂಗ್ಯಾಕ ಅಂತಾನೋ ಇವ ಎಂಬ ಕುತೂಹಲ ರಂಗೇಗೌಡಗ ಹೆಚ್ಚಾಗಿ _ನೋಡೋ  ನೀ ಏನೂ ಹೆದರಬೇಡಾ ಅದೇನ ಸಮಾಚಾರವೋ ನಿರ್ಭೀತಿಯಿಂದ ಹೇಳೆಂದರು. 
    ಸಾಮಿ ನೀವು ತುಂಬಿದ ಕೊಡ, ನೀವೆಂದರೆ ಇಡೀ ಊರೆ ಕೈ ಎತ್ತಿ ಮುಗಿತೈತಿ ಆದರೆ..ಎಂದು ಸುಮ್ಮನಾದ ಮಲ್ಲಪ್ಪನನ್ನು ಗೌಡರು ಆದರೇನು ಹೇಳು ಎಂದು ಒತ್ತಾಯಿಸಿದಾಗ ಮಲ್ಲಪ್ಪ ತಲೆತಗ್ಗಿಸಿ_ ಆದರೆ ನಿಮ್ಮ ತಮ್ಮನವರು ದಾನದ ರೂಪದಲ್ಲಿ ಕೊಟ್ಟ ಚೀಲವನ್ನು ಮತ್ತೆ ಮನೆಗೆ ಬಂದು ಇಸಿದುಕೊಂಡು ಪೇಟೆಗೆ ತೆಗೆದುಕೊಂಡು ಹೋಗಿ ತುಡುಗಿಲೆ ಮಾರ್ಕೋತಾರೆ..ಇದು ನನ್ನೊಬ್ಬನ ಕತೆಯಲ್ಲ ಸಾಮಿ. ಅವರು ಎಲ್ಲರಿಗೂ ಹೀಗೆ ಮಾಡಿದ್ದಾರೆ. ದೊಡ್ಮನೆ ವಿಚಾರ ನಮಗೇಕೆ ಬೇಕು, ಅವರು ಕೊಟ್ಟಿದ್ದು ಅವರೇ ತೆಗೆದುಕೊಂಡು ಹೋದರೆಂದು ನಮ್ಮಂತಹ ಬಡವರು ಸುಮ್ಮನಾಗಿ ಬಿಡ್ತಾರೆ ಎಂದು ಒಂದೇ ಉಸಿರಿನಲ್ಲಿ ಹೇಳಿಬಿಟ್ಟನು. ಈ ವಿಷಯ ಕೇಳಿ ರಂಗೇಗೌಡರಿಗೆ ಸಿಡಿಲಾಘಾತವಾಯಿತು.ಛೇ ! ಒಡಹುಟ್ಟಿದವನಲ್ಲಿಯೇ ಎಂತಹ ಒಡಕು ಭಾವನೆ ಎಂದುಕೊಳ್ಳುತ್ತಾ ಮೇಲೆದ್ದು ಮಲ್ಲಪ್ಪನನ್ನು ಮನೆಗೆ ಕರೆದು ಹೊಟ್ಟೆತುಂಬ ಊಟ ಹಾಕಿ ಒಂದಷ್ಟು ಧವಸ ಧಾನ್ಯಗಳನ್ನು ಕೊಟ್ಟು ಕಳುಹಿಸಿದನು. 
        ಮನೆಯ ಹಿಂದೆ ಪಕ್ಷಿಗಳು ವಿಪರೀತವಾಗಿ ಕಿಚಪಿಚವೆನ್ನುವ ಸದ್ದು ಕೇಳಿ ಗೌಡರು ಏನೆಂದು ನೋಡಿದರೆ ಒಂದೇ ಗೂಡಿನ ಹಕ್ಕಿಗಳೆಲ್ಲವೂ ಕೂಡಿಕೊಂಡು ತಮ್ಮದೇ ಬಳಗದ ಇನ್ನೊಂದು ಹಕ್ಕಿಯನ್ನು ಕುಕ್ಕುತ್ತಿದ್ದವು. ಯಾಕೋ ಗೌಡರಿಗೆ ಈ ಹಕ್ಕಿಗಳು ತನ್ನನ್ನೇ ಅಣುಕಿಸುತ್ತಿವೆಯೋ ಎಂಬಂತೆ ಭಾಸವಾಯಿತು. ಇನ್ನು ಒಟ್ಟಾಗಿರುವುದು ಅಸಾಧ್ಯ. ಬೇರೆಯಾಗಿ ಬಿಡಬೇಕು ಎಂದುಕೊಂಡವನಿಗೆ ಒಂದು ವೇಳೆ ಬೇರೆಯಾದರೆ ಊರಿನ ಬಾಯಿಗೆಲ್ಲಾ ದೊಡ್ಮನೆ ಮರ್ಯಾದೆ ಆಹಾರವಾಗಿಬಿಡುವುದೆಂಬ ಭಯವೂ ಕಾಡಿತು. ಬೆಳೆಯ ನಡುವಿನ ಕಳೆಯನು ಎಷ್ಟು ಶಿಘ್ರವೋ ಅಷ್ಟು ಬೇರ್ಪಡಿಸಿದರೆ ಒಳಿತಲ್ಲವೇ? ಎಂದು ತನ್ನ ತಾನೇ ಪ್ರಶ್ನಿಸಿಕೊಂಡು ಮನೆ ತಲುಪಿದಾಗ ಸೂಲಗಿತ್ತಿ ಶಾಂತಮ್ಮ ಮನೆಯಿಂದ ಹೊರಹೋಗುವುದನ್ನು ಕಂಡು ಇನ್ನೇನು ಮಾತನಾಡಿಸಬೇಕು ಎನ್ನುವುದರೊಳಗಾಗಿ ಹೋಗಿಯೇ ಬಿಟ್ಟಳು. ಬಹುಶಃ ತಮ್ಮನ ಹೆಂಡತಿ ಮತ್ತೆ ಗರ್ಭವತಿಯಾಗಿರಬಹುದು ಅದಕ್ಕಾಗಿಯೇ ಬಂದಿರುತ್ತಾಳೆ ಎಂದುಕೊಂಡವನಿಗೆ; ಒಂದು ವೇಳೆ ಹಾಗೇನಾದರೂ ಇದ್ದರೆ ಗರ್ಭಿಣಿ ತಮ್ಮನ ಹೆಂಡತಿಯನ್ನು ಮತ್ತು ತಮ್ಮನನ್ನು ಗೌಡರು ಹೊರಹಾಕಿದರೆಂದು ಊರು ಮಾತನಾಡದೇ ಇರುತ್ತಾ? ಅಂತಹ ಅಪವಾದ ನನಗೇಕೆ? ನನಗೇನು ಮಕ್ಕಳೇ ಮರಿಗಳೇ? ನಾನೇ ನನ್ನ ಹೆಂಡತಿಯನ್ನು ಕರೆದುಕೊಂಡು ಹೊರಬಂದರಾಯ್ತು ಎಂದು ನಿರ್ಧಾರ ಬದಲಿಸಿಕೊಂಡು ತೂಗುಮಂಚದ ಮೇಲೆ ಕುಳಿತುಕೊಂಡಿದ್ದನು. 
        ಶ್ರೀದೇವಿ ಬಂದು  ಗೌಡ್ರೇ..ಗೌಡ್ರೇ ಎಂದು ಕೂಗಿದರೂ ಮಿಸುಕಾಡದೆ ಹೋದಾಗ ಕೊನೆಗೆ ಗೌಡ್ತಿಯೇ ಮೈದಡವಿ ಎಚ್ಚರಗೊಳಿಸಿದಳು. ಏನಾಯ್ತು ಶ್ರೀ ಎಂದು ಕೇಳಿದ ಗೌಡರಿಗೆ, ನಿಮಗೊಂದು ಸಂತೋಷದ ವಿಷಯ ಹೇಳಬೇಕು ಎಂದಳು. ಸಂತೋಷದ ವಿಷಯ? ನೀನು ಏನ ಹೇಳ್ತಿಯೋ ಅದನ್ನು ನಾನಾಗಲೇ ಬಲ್ಲೆ ಎಂದರು ಗೌಡರು. ನಿಮಗಾರು ಹೇಳಿದರು? ಗೌಡ್ತಿ ಕಣ್ಣಗಲಿಸಿ ಕೇಳಿದಳು. ಅದೇ ತಾನೇ ತಮ್ಮನ ಹೆಂಡತಿ ಮಹಾದೇವಿ ಮತ್ತೆ ಗರ್ಭವತಿಯಾಗಿದ್ದು, ನೀನೊಬ್ಬಳು ಹುಚ್ಚಿ ಕಣೆ.. ಯಾರದೋ ಗಿಡದಲ್ಲಿ ಫಲಬಿಟ್ಟರೆ, ನಮ್ಮ ಗಿಡದಲ್ಲಿಯೇ ಫಲ ಬಿಟ್ಟಷ್ಟು ಖುಷಿಪಡ್ತಿಯಾ ಎಂದು ಎದ್ದು ಹೋಗುವವರನ್ನು ಕೈಹಿಡಿದು ತಡೆದವಳು ಈ ಬಾರಿ ಯಾರದ್ದೋ ಗಿಡದಲ್ಲಿ ಅಲ್ಲಾರಿ ನಮ್ಮದೇ ಗಿಡ ಎಂದಳು ನಾಚುತ್ತಾ. ಗೌಡರಿಗೆ ಆಶ್ಚರ್ಯದೊಂದಿಗೆ ಆನಂದಭಾಷ್ಪ ಉಕ್ಕಿ ಹರಿಯಿತು. ಮಗುವಿನಾಸೆಯನ್ನೆ ಬಿಟ್ಟು ಕೈತೊಳೆದುಕೊಂಡವರಿಗೆ ದೇವರು ಈಗ ವರ ನೀಡಿದ್ದ. ಹೂವೇ ಬಿಡದ ಗಿಡದಲಿ ಹೂವರಳಿದಂತೆ, ಕಣ್ಣೇ ಕಾಣದ ಕುರುಡನಿಗೆ ಒಮ್ಮೆಲೆ ಕಣ್ಣು ಕಾಣಿಸತೊಡಗಿದಾಗ ಆಗುವ ಭಯಮಿಶ್ರಿತ ಸಂತೋಷದಂತೆ ಗೌಡರಲ್ಲಿ ಭಯವೂ ಸಂತೋಷವೂ ಸಮ್ಮೀಳಿಸಿ ಕಂಡಿತು. ಮನದ ಬೇಜಾರೆಂಬ ಕೊಳೆಯನ್ನು ಈ ಒಂದು ಸವಿಸುದ್ದಿ ಒಂದೇ ಏಟಿಗೆ ಮರೆಯಿಸಿಬಿಟ್ಟಿತು. ಶ್ರೀ ನೀನಾಡುತ್ತಿರುವ ಮಾತುಗಳು ಸತ್ಯವೇನು? ಅವಳ ಎರಡೂ ಭುಜಗಳನ್ನು ಕೈಯಿಂದ ಹಿಡಿದು ತಡವಿ ಕೇಳಿದರು ಗೌಡರು. ಅವಳು ಸುಮ್ಮನೆ ತಲೆಯಾಡಿಸಿದಳು.ಶಹಬ್ಬಾಸ್! ಗೌಡ್ತಿ ಕೊನೆಗೂ ನನಗೆ ತಂದೆಯೆಂಬ ಕಿರೀಟ ತೊಡಿಸಿಬಿಟ್ಟೆ ಎನ್ನುತ್ತಾ ಮೀಸೆ ಮೇಲೆ ಕೈಯಾಡಿಸಿದರು. ಇಂತಹ ಸುದ್ದಿಯನ್ನು ನೀಡಿದ ನಿನಗೆ ಕೋಟಿ ವಂದನೆಗಳೆಂದು ಹೆಂಡತಿಗೆ ಧನ್ಯವಾದ ಹೇಳಿ..ಆಳುಗಳನ್ನು ಕರೆದು ತಾನು ತಂದೆಯಾಗುತ್ತಿರುವ ಖುಷಿಯನ್ನು ಉತ್ಸವವನ್ನಾಗಿ ಆಚರಿಸಲು ಸಿದ್ಧತೆಯಾಗಲೆಂದು ತಿಳಿಸಿದನು.
    ಭೂಮಿಗೆ ಬರುವುದಕ್ಕಿಂತ ಮುಂಚೆಯೆ ತನ್ನ  ಮನೆ ಎರಡಾಗುವುದನ್ನು ತಪ್ಪಿಸಿದ ತನ್ನ ಕಂದನು ನಿಜಕ್ಕೂ ಅದೃಷ್ಟವಂತ ಎಂದುಕೊಂಡನು. ನೀವು ಶ್ರೀರಂಗಪುರಕ್ಕೆ ಹೋದರೆ ಎಂದೋ ಬೇರೆಯಾಗಿ ಹೋಗಬೇಕಾಗಿದ್ದ ಈ ಅಣ್ಣತಮ್ಮರ ಸಂಸಾರ ಇಂದಿಗೂ ಕೂಡಿಯೇ ವಾಸಿಸುತ್ತಿರುವುದನ್ನು ಕಾಣಬಹುದು. ನಿಜಕ್ಕೂ ಕೂಡಿಬಾಳುವವರೆ ಅದೃಷ್ಟವಂತರಲ್ಲವೇ?

                                  - ಆನಂದ ಮಾಲಗಿತ್ತಿಮಠ

ಈ ಕತೆಯನ್ನೂ ಓದಿ

ಶಿಕ್ಷಕನ ಸತ್ವ ಪರೀಕ್ಷೆ

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ...