ರೀ...ಬದನೆಕಾಯಿ ನೋಡಿ ತಂದರೋ? ಏನ ಹಂಗ ತಂದರೋ?
ಹೆಂಡತಿ ನಾ ಮಾಡಿದ ಸಂತಿಯನ್ನು ಚೀಲದಿಂದ ಎತ್ತಿಡುತ್ತಾ ಕೇಳಿದಳು.
ನಾನು 'ನೋಡಿಯೇ ತಂದೇವ್ನಿ ಕಣೆ..ಎಷ್ಟು ಚೆಂದ ಇದ್ದಳು' ಅಂದೆ.
ಆ ಕಡೆಯಿಂದ ಏನ್ರೀ ನೋಡಿ ತಂದರಿ, ಬರಿ ಹುಳುಕೇ ಅದಾವಲ್ಲರಿ. ಅದು ಹೆಂಗ ನೋಡಿದ್ರಿ? ಅದೇನ ನೋಡಿದ್ರಿ?
ನಾನು ತಗ್ಗಿದ ಧ್ವನಿಯಲ್ಲಿಯೇ.. 'ಬದನೆಕಾಯಿ ಮಾರುವವಳನ್ನ...' ಅಂದೆ.
'ಐಯ್ಯ ನಿಮ್ಮ ಸೀತಾಳಿ ಸಿಡುಬಿನ ಕಲೆ ಮುಖಕ ನಾನು ಸಿಕ್ಕಿದ್ದೆ ಪುಣ್ಯ ಅನ್ಕೋರಿ..ಅದೂ ಮದುವ್ಯಾಗ ಆ ಲುಂಗಿ ಬುಡ್ಡಾನ ಕರಕೊಂಡು ಬಂದು ನಂದ ಆದ ಐತಿ, ನಂದ ಈದ ಐತಿ ಅಂತ ಸುಳ್ಳಾ ಸೊಟ್ಟ ಹೇಳಿ ನನ್ನ ಮಳ್ಳ ಮಾಡಿ ಮದುವಿ ಮಾಡ್ಕೊಂಡ್ರಿ. ಇಲ್ಲಿ ಬಂದ ನೋಡಿರ ಏನ ಐತಿ? ಬಸಪ್ಪನ ಬದನಿಕಾಯಿ ಎಂದು ಏಕೆ 47 ತುಗೊಂಡು ಗುಂಡ ಹಾರ್ಸೋರಂಗ ಒಂದ ಸಮನೆ ಬೈಯತೊಡಗಿದಳು. ಇನ್ನ ಇಲ್ಲಿರೋದು ಆರೋಗ್ಯಕ್ಕೆ ಹಾನಿಕಾರಕ ಎಂದು ಭಾವಿಸಿ ಹೊರಗ ಬಂದೆ.
ಛೆ! ಇವನೌನ ಈ ಹೆಂಡ್ತಿ ಅನ್ನೋ ಐಟಮ್ ಹಿಂಗ ಏನ? ಸ್ವಲ್ಪ ಖಾರ ಜಾಸ್ತಿನೇ. ಹೋದ ಜನಮದಾಗ ಕಪ್ಪೆ ಆದವರೆಲ್ಲಾ ಮುಂದಿನ ಜನ್ಮದಾಗ ಹೆಂಡ್ತಿ ಆಗಿ ವಟಗುಡಸ್ತಾರಂತ ಕಾಣ್ಸುತ್ತೆ. ಸಂಜಿತನಕ ದುಡ್ಯಾಕ ಹೋಗಿರ್ತೇವಿ. ಮನಿಗೆ ಬಂದು ಹಾಯಾಗಿ ಮಲಕೊಂಡು ಫೇಸಬುಕನಲ್ಲಿರೋ ಹಳೇ ಗರ್ಲ್ ಫ್ರೆಂಡ್ಸನೆಲ್ಲಾ ಸರ್ಚ ಮಾಡಿ ಹಾಯ್! ಎಂದು ಹೇಳಬೇಕು ಅನ್ನುವಷ್ಟರಲ್ಲಿಯೇ ಏನಾದರೊಂದು ಮ್ಯಾಟರು ತುಗೊಂಡು ಕೈಯಾಗ ಲತ್ತಿಗುಣಿ ಹಿಡ್ಕೊಂಡು ಥಾ... ತಕ.. ಧಿಮಿ.. ಥಾ ಎಂದು ಸಾಕ್ಷಾತ ಕಾಳಿ ಅವತಾರ ತಾಳುವಂತಹ ಹೆಂಡಂದಿರು, ಮನಿಯಿಂದ ಸೊಳ್ಳಿ ಓಡಿಸಿದಂಗ ಗಂಡಸರನ್ನ ಹೊರಗ ಹಾಕಿ ಬಿಡ್ತಾರ. ಒಂಥರಾ ಚಲೇಜಾವ ಚಳುವಳಿ ಅವರದು. ಅಲ್ಲಾ ಬ್ಯಾಂಕಿಗೆ ನಾಯಿ ಅಲೆದಂಗ ಅಲೆದು, ಸಾಲಾ ಮಾಡಿ ಮನಿಕಟ್ಟಿಸಿ ನೆಮ್ಮದಿಯಾಗಿ ಇರಬೇಕಂದ್ರ ಮನ್ಯಾಗ ಇರಾಕ ಕೊಡವಲ್ರು. ಎಪ್ಪಾ ಸಾಕರಿ ಈ ಗಂಡು ಜನುಮ ಎಂದುಕೊಂಡು ಸಂಗೊಳ್ಳಿ ರಾಯಣ್ಣಾ ಸರ್ಕಲದಾಗ ಹೊಂಟಿದ್ದೆ..ಪಾವಭಜ್ಜಿ ವಾಸನಿ ಗಮ್ಮ ಅಂತ ಮೂಗಿಗೆ ಬಡಿದು ಹೊಟ್ಟ್ಯಾಗ ಇಲಿ ಓಡಾಡಿದಂಗ ಆತು. ಕಿಸೆದಾಗ ಕೈ ಹಾಕ್ತೇನಿ..ಥತ್ತೇರಿಕೆ ಪಟಪಟಿ ಹಾಪ್ಯಾಂಟು. ನನ್ನಾಕಿ ಒದರೋ ಗದ್ದಲದಾಗ ಮನ್ಯಾಗ ಪಟಪಟಿ ಹಾಪ್ಯಾಂಟ ಹಾಕೊಂಡು ಕುಂತಾವ ಪ್ಯಾಂಟ್ ಹಾಕಿಕೊಳ್ಳೋದನ್ನ ಮರತ ಅಂಗಿ ಒಂದ ಹಾಕೊಂಡ ಬಂದೇನಿ. ಅದರಾಗ ಎಲ್ಲಿ ಕಿಸೆ? ಎಲ್ಲಿ ರೊಕ್ಕಾ? ಜೋತ ಮಾರಿ ಮಾಡ್ಕೊಂಡು ಸುಮ್ಮ ಹೊಂಟೆ.
ಎದುರಿಗೆ ಯಾವುದೋ ಕರ್ರನ ಆಕೃತಿ ಬಂದ ನಿಂತಂಗಾತು, ನೋಡಿದ್ರ ಭರಮ್ಯಾ. "ಏನೋ ಚಡ್ಡಿದೋಸ್ತ ಭಾಳ ದಿನಾ ಆತಲೋ ನಿನ್ನ ಮುಸುಡಿ ನೋಡಿ" ಅಂದ. ಅವಾಗ ಅವನು ಬರಿ ನನ್ನ ಮುಸುಡಿಯಷ್ಟ ನೋಡಿದ್ದ. ಮತ್ತ ಕೆಳಗ ನೋಡಿದಾಂವ "ಇದೇನೋ ಚಡ್ಡಿ ಮ್ಯಾಲ ಬಂದಿ ?" ಎಂದ. ಇನ್ನ ಹೆಂಗರ ಮಾಡಿ ಸುಧಾರಿಸಿ ಹೇಳಿ ಮಾನ ಕಾಪಾಡಿಕೊಳ್ಳಲೇ ಬೇಕಲ್ಲ.
ಏನಿಲ್ಲ ಮೊನ್ನಿ ಪ್ರಮೋಷನ್ ಆತು. ಮೊದಲು ಮೊಲದ ಬಾಲದಷ್ಟ ಇದ್ದ ಪಗಾರ ಈಗ ಆನಿ ಸೊಂಡಿ ಹಂಗ ಆಗೈತಿ. ಇನ್ನರ ಚೆನ್ನಾಗಿರೋಣು ಅಂತ ಚೆಡ್ಡಿ ಹಾಕೇನಿ ಅಂದೆ. ಅದಕ್ಕಾತ ಮೊದಲ ಪಗಾರ ಸಣ್ಣದು ಆಗ ಪ್ಯಾಂಟಿತ್ತು, ಈಗ ಪಗಾರ ಹೆಚ್ಚಾತು ಪ್ಯಾಂಟ ಕಿರದ ಆಗಿ ಚಡ್ಡಿಗೆ ಬಂತು..ನನಗೊಂದು ಡೌಟು ಅಂದ.
ಈ ಬಡ್ಡಿಮಗಾ ನನ್ನ ಚಡ್ಡಿ ಬಿಡೋ ಹಂಗ ಕಾಣೋದಿಲ್ಲ ಅಂದ್ಕೊಂಡು ಕೇಳಲೇ ಅಂದೆ. ಏನಿಲ್ಲಾ ಒಂದು ವೇಳೆ ನಿನ್ನ ಪಗಾರ ಇದಕ್ಕೂ ಹೆಚ್ಚಾತು ಅಂದರ ಅವಾಗ ನೀ ಏನ ಹಾಕಾಂವ? ಅಂದ. ಮಳ್ಳ ಹಳೆ ಮಳ್ಳ ಬಾಯಿ ಮ್ಯಾಗ ಕೊಡಲೇನ, ಇದು ಶ್ರೀಮಂತಿಕೆಯ ಟ್ರೆಂಡ ಕಣೋ. ನಿನಗೆಲ್ಲಿ ಅರ್ಥ ಆಗಬೇಕು ಅಂದೆ.
"ಹ್ಞಾಂ..ಶ್ರೀಮಂತಿಕೆ ಅನ್ನಗೋಕ ನೆನಪಾತ ನೋಡು; ಎರಡ ಅಂತಸ್ತಿನ ಮನಿ ಕಟ್ಟಿಸಿದಿ ಅಂತಲೋ ಓಪನಿಂಗಕ ನನ್ನೂ ಕರಿಬಾರ್ದಾ?" ಅಂತ ಕೇಳಿದ. ಹೌದಪಾ ಕಟ್ಟಿಸಿಕೊಟ್ಟೇನಿ ಅಂದೆ. ಕಟ್ಟಿಸಿಕೊಟ್ಟೇನಿ? ಯಾರಿಗೊ? ಅಂದ. ಇನ್ಯಾರಿಗೆ ನನ್ನ ಹೆಂಡ್ರು ಮಕ್ಕಳಿಗೆ ಅಂದೆ.
" ಅದೇನರ ಆಗಲಿ ಈಗ ಮನಿ ಕಟ್ಟಿಸಿದ್ದಕ ಪಾರ್ಟಿ ಕೊಡ ಬಾ" ಅಂತ ಗಂಟ ಬಿದ್ದ. ನನ್ನ ಕಿಸೆದಾಗರ ಒಂದ ರೂಪಾಯಿ ಇಲ್ಲ ಥೂ! ಸ್ಸಾರಿ ಕಿಸೇನ ಇಲ್ಲ. ಇಂವ ನೋಡಿರ ಪಾರ್ಟಿ ಕೊಡಸ ಬಾ ಅಂತ ಗಂಟ ಬಿದ್ದಾನು. ಹೆಂಗರ ಮಾಡಿ ಎಸ್ಕೇಪ್ ಆಗಬೇಕು ಅಂದವ್ನೆ..ಏ ಭರಮ್ಯಾ ಪಾರ್ಟಿ ಇನ್ನೊಂದ ದಿನಾ ಮಾಡೋಮು. ಒಂದ ನಿಮಿಷ ತಡಿ ನನ್ನ ಹೆಂಡತಿ ಯಾಕೋ ಫೋನ ಮಾಡ್ಯಾಳು ಅಂತ ಸುಳ್ಳ ಫೋನ ಹಿಡ್ಕೊಂಡು ಆ ಕಡೆ ಹೋದೆ. ಭರಮ್ಯಾ ನನ್ನ ನೆರಳಿನಂಗ ನನ್ನ ಹಿಂದ ನ ಬಂದ. ನಾನು ಫೋನಿನ್ಯಾಗ ಏನಾದರೊಂದು ಮಾತಾಡಲೇ ಬೇಕಾಯ್ತು _ 'ಹಲೋ ಡಾಲಿ ಏನು ಬದನೆಕಾಯಿ ಎಣಗಾಯಿ ಮಾಡಿದ್ಯಾ? ಬಿಸಿ ಬಿಸಿ ರೊಟ್ಟಿನೂ ಮಾಡಿದ್ಯಾ? ನನಗೋಸ್ಕರ ಕೊಬ್ಬರಿ ಚಟ್ನಿನೂ ಮಾಡಿದ್ಯಾ? ಊಟಕ್ಕೆ ಮನೆಗೇ ಬರಬೇಕಾ..ಆದರೆ ಒಂದ ಪಾರ್ಟಿಗೆ ಹೊಂಟಿದ್ನಲ್ಲಾ..ಏನು ಊಟಕ್ಕ ಬರದಿದ್ದರೆ ಹತ್ತಿಗೆ ಹೊಡಿಯೊ ಎಣ್ಣಿ ತುಗೊಂಡು ಸೂಸೈಡ್ ಮಾಡ್ಕೋತಿಯಾ? ಬೇಡ ಕಣೆ ಈಗಲೇ ಬರತೇನು' ಅಂತ ಸುಳ್ಳಾಡಿ ಕಟ್ ಮಾಡಿದಂಗ ನಾಟಕ ಮಾಡಿದೆ.
ಅಷ್ಟರೊಳಗ ಭರಮ್ಯಾ _ "ಹೋಗಲಿ ನೀ ಪಾರ್ಟಿ ಕೋಡ್ಸೋದು ಬ್ಯಾಡ ನಾನ ಕೊಡಸ್ತೇನಿ ಬರ್ತಿಯಾ? ಅಂದ. ಮೊದಲ ಹೊಟ್ಟಿ ಹಸದು ಹಾವ ಆಗಿತ್ತು. ಒಮ್ಮೆಗೆ ಹ್ಞೂಂ! ಅಂದರ ಮರ್ಯಾದಿ ಹೋಗತೈತಿ ಅನ್ಕೊಂಡು ಬ್ಯಾಡಪಾ ಮುನಿಗೇ ಹೊಕ್ಕೆನಿ; ನನ್ನ ಹೆಂಡ್ತಿ ಈಗರ ಫೋನ್ ಮಾಡಿದ್ಲು ನೀನೇ ಕೇಳಿಸಿಕೊಂಡೆಲ್ಲ ಎಂದೆ. "ಬಾರೋ ಮಾರಾಯಾ ಅವರು ಮಾಡಿದ್ದು ದಿನಾ ತಿನ್ನೋದಿದ್ದೆ ಇದೆ. ಭಾಳ ಅಪರೂಪಕ್ಕ ಭೇಟಿಯಾಗಿದಿ" ಎನ್ನತೊಡಗಿದ. ನಾನು _'ಏನೋ ನಿನ್ನ ಒತ್ತಾಯಕ ಬರ್ತಾ ಇದೇನ್ಯಾ ಮತ್ತ ನಡಿ' ಎಂದೆ.
ಯಾವುದೋ ಬಾರಿಗೆ ಕರೆದೊಯ್ದ. ಎಲ್ಲಾ ಕಡೆ ನೋಡಿದ್ರು ಜಿರೋ ಬಲ್ಬ ಬೆಳಕು..ಟೇಬಲ್ ಸುತ್ತಲೂ ಹಿರೋಗಳ ಥಳಕು. ಅಲ್ಲಾ ಈ ಬಾರಗೊಳಾಗ ಜಿರೋ ಬಲ್ಬ್ ಯಾಕ ಹಾಕಿರ್ತಾರು ಅನ್ನೋದು ನನಗ ಸಣ್ಣ ವಯಸ್ಸಿನಿಂದಲೂ ತಿಳಿಯದಂತಹ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ. ಜೀರೋನ ಕನ್ನಡೀಕರಿಸಿದಾಗ ಶೂನ್ಯ. ಈ ಬದುಕಿನ್ಯಾಗ ಇನ್ನೇನೂ ಉಳಿದಿಲ್ಲ. ಹೆಂಡತಿ ಶೂನ್ಯ, ಮಕ್ಕಳು ಶೂನ್ಯ, ಮನೆ ಶೂನ್ಯ, ನನ್ನವರೆಲ್ಲಾ ಶೂನ್ಯ ಒಟ್ಟಿನಲ್ಲಿ ಈ ಬದುಕೇ ಶೂನ್ಯವೆಂದು ಜರ್ಜರಿತವಾಗಿ ಹೋದ ನೊಂದ ಜೀವಗಳ ಸನ್ನಿಧಾನವೇ ಬಾರ್. ಇದನ್ನು ನೆನಪಿಸಲೋಸ್ಕರವೇ ಶೂನ್ಯ ಬಲ್ಬಗಳು. ಇದು ಬಾರ್ ನ ತತ್ವಬೋಧೆ ಇದ ತಿಳಿಯದಿದ್ದರೆ ನೀನು ಬದುಕಿದ್ದೂ ಸತ್ತುಹೋದೆ.
ಆ ಗಿಜಗುಡುವ ಬಾರಿನಲ್ಲಿ ನಾವೂ ಒಂದು ಟೇಬಲ್ ಹಿಡಿದು ಕುಳಿತೆವು. ವೇಟರ್ ಬರಲಿಕ್ಕೆ ಹದಿನೈದು ನಿಮಿಷ ತುಗೊಂಡ. ಆತ ನಮ್ಮಲ್ಲಿ ಬರೋದಕ್ಕಿಂತ ಮುಂಚೆ ಎದುರಿಗಿನ ಟೇಬಲ್ ಗೆ ಹೋಗಿದ್ದ. ನಾನು ಅದನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಅಲ್ಲಿ ಕುಂತಾವ ಪಕ್ಕಾ ಹುಂಬನಂಗ ಕಾಣ್ತಿದ್ದ. ಆತ ಅದು ಇದು ಅಂತ ಆರ್ಡರ್ ಮಾಡ್ತಿರಬೇಕಾದರೆ ವೇಟರು ಹಾಳೆಯಲ್ಲಿ ಅದನ್ನೆಲ್ಲಾ ಬರೆದುಕೊಳ್ಳುತ್ತಿದ್ದ. ಆರ್ಡರ್ ಮಾಡಿದವ ಓದು ಬರಹ ಗೊತ್ತಿಲ್ಲದ ಹೆಬ್ಬೆಟ್ಟು. ಆದರೆ ವೇಟರು ಸೂಟು ತೊಟ್ಟ ಸಾಕ್ಷರ. ಹೆಬ್ಬೆಟ್ಟು ಅಕ್ಷರಕ್ಕೆ ಆರ್ಡರ್ ಕೊಟ್ಟಂಗಿತ್ತು. ಜೊತೆಗೆ ಅಕ್ಷರ ಹೆಬ್ಬೆಟ್ಟು ಕೊಡುವ ಟಿಪ್ಸಗಾಗಿ ಕೈಚಾಚಿದ್ದೂ ಕಂಡಿತು. ಹೆಬ್ಬೆಟ್ಟೇ ನಿನ್ನ ಬಲಾಬಲಕೆ ನಮೋಸ್ತುತೆ ಎಂದೆ. ನಮ್ಮ ಹತ್ತಿರ ಬಂದ ವೇಟರ್ಗೆ ಭರಮ್ಯಾ ಅದೇನೇನೋ ಆರ್ಡರ್ ಕೊಟ್ಟ.
ಮೊದಲು ಎಣ್ಣೆ ಬಂತು. ನನಗಂತೂ ಹೊಟ್ಟೆ ಹಸಿದಿತ್ತು. ಊಟ? ಎಂದೆ. ವೇಟರು ಇನ್ನೂ ಲೇಟು ಅಂದ. ಭರಮ್ಯಾ ಪೆಗ್ ಮೇಲೆ ಪೆಗ್ ಏರಸ್ತಾ ಹೋದ. ಸುಮ್ಮನ ಕುಂತಾವ ಒಮ್ಮೆಲೆ ಹೆಣ್ಣಿನ ಮ್ಯಾಟರ್ ಗೆ ಕೈ ಹಾಕಿಬಿಟ್ಟ.
"ಅಲ್ಲಾ ಈ ಹೆಣ್ಣು ಅಂತಾರಲಾ ಅವಳು ಅಬಲೆನಾ? ಸಬಲೆನಾ?" ಎಂದು ಪ್ರಶ್ನಿಸಿದ.
ನಾನು ಬಿಟ್ಟ್ಹಾಕು ಗೆಳೆಯಾ ಅವಳು ಅಬಲೆಯಾದರೂ ಅಷ್ಟೇ ಸಬಲೆಯಾದರೂ ಅಷ್ಟೇ ಎರಡರಲ್ಲಿಯೂ ಬಲೆಯುಂಟಲ್ಲ. ಕೊನೆಗೆ ಅದರೊಳಗ ಬಿದ್ದು ಮೀನಿನಂಗ ವಿಲಿವಿಲಿ ಒದ್ದಾಡೋದು ಮಾತ್ರ ಗಂಡಸೇ ಕಣೊ ಅಂದೆ. ಆತ ತಲೆದೂಗಿದಂಗ ಕಾಣಿಸ್ತು. ಬಹುಶಃ ನಶೆಯೇರಿ ಅಲ್ಲಾಡಿರಬೇಕು ಅಂತ ಆಮೇಲೆ ಅನಿಸ್ತು.
ಏಯ್! ಭರಮ್ಯಾ ನಿಂಗ ನಶೆ ಭಾಳ ಆಗಾತೈತಿ ಸಾಕ ಮಾಡಲೇ ಅನ್ಕೊಂತ ವೇಟರ ಊಟಾ ತಂದಿಲ್ಲೋ ಅಂತ ನೋಡಿದೆ.
ಭರಮ್ಯಾ _ "ನಶೆ ಏರಾಕ ನಾ ಏಟ ಕುಡದ್ದನೋ? ಇಷ್ಟೊತ್ತು ಕುಡಿದಿದ್ದು ಬರೇ ಒಳಗಿನ ಕಳ್ಳ ಎಲ್ಲಾ ಸ್ಯಾನಿಟೈಸ್ ಮಾಡಿತು. ಇನ್ನ ಮ್ಯಾಲ ಅವುಗಳು ಭರ್ತಿಯಾಗತಾವು" ಅನ್ಕೊಂತ ಮತ್ತೊಂದು ಪೆಗ್ ಏರಿಸಿ ಪುನಃ ಮಾತಾಡತೊಡಗಿದ..."ಈ ಹೆಣ್ಣು ಅನ್ನೋ ನಸೆ ಮುಂದ ಇ ರಮ್ಮು ವಿಸ್ಕಿ ಎಲ್ಲಾ ಡಮ್ಮಿ ಕಣ್ಲಾ..ಅಲ್ಲಾ ಮದುವಿಗೆ ಹೆಣ್ಣ ಸಿಗಲಿಲ್ಲಂದ್ರೂ ಕುಡಿತಾರ, ಮದುವ್ಯಾಗಿ ಹೆಂಡತಿ ಸಿಕ್ಕಳೆಂದರೂ ಕುಡಿತಾರ..ಬಾಳಿನ ಖುಷಿಗವಳೇ ಜಡಿದಾ ಇಕ್ಕಳು ಎಂದು ತಿಳಿದರೂ ಕುಡಿತಾರು. ಅದಕ್ಕ ಹೆಂಡತಿಗೂ ಹೆಂಡಕ್ಕು ಬರಿ 'ತಿ' ಒಂದೇ ವ್ಯತ್ಯಾಸ. 'ತಿ' ಫಾರ್ ತಿಳುವಳಿಕೆ. ಯಾರ ಹತ್ರ 'ತಿ' ಇಲ್ಲವೋ ಅವರು ಹೆಂಡಕ್ಕ ಶರಣಾಗ್ತಾರು. ಯಾರ ಹತ್ರ 'ತಿ' ಉಂಟೋ ಅವರು ಹೆಂಡತಿಗೆ ಶರಣಾಗ್ತಾರು ಅಂತ ಉಪದೇಶ ಕುಟ್ಟತೊಡಗಿದ.
ಅಷ್ಟರಲ್ಲಿ ಊಟಾ ಬಂತು. ಮೊದಲ ಊಟಾ ಮಾಡಿಬಿಡಬೇಕು ಅನ್ಕೊಂಡು ಸುಮ್ಮನ ಊಟವೆಂಬ ದಾಸ್ತಾನನ್ನು ಒಳಗಿಳಿಸತೊಡಗಿದೆ. ಭರಮ್ಯಾನ ಉಪದೇಶ ಹಣ್ಣಿನ ಸುತ್ತ ನೊಣ ಹಾರಾಡಿದಂಗ, ಬರಿ ಹೆಣ್ಣಿನ ಸುತ್ತಲೇ ಗಿರಕಿ ಹೊಡೆಯುತ್ತಿತ್ತು. ಆತ ಎಣ್ಣಿ ಮುಗಿಸಿ ಎರಡ ತುತ್ತು ಉಂಡಿರಬೇಕು. ಅಂವ ಯಾವನೋ ಕೆಂಪಗ ಒಳ್ಳೆ ಸೊಂಡೀಲಿ ಹಂಗ ಮುಖ ಮಾಡ್ಕೊಂಡು 'ಅಲೇ ಭರಮ್ಯಾ ಏನೋ ಮಗನ ಇಲ್ಲಿ ಕುಂತಿ?' ಅಂತ ಇವನ ಮಾತಾಡಿಸಿದ.
ಹಲೋ..ಮ..ಮ..ಮಲ..ಮಲ ಅಂತ ಅವನ ಹೆಸರನ್ನು ಇಚ್ಛಾನುಸಾರ ಉಚ್ಚರಿಸಲು ಭರಮ್ಯಾ ತಿನುಕುತ್ತಿದ್ದ. ಆದರೆ ಎಷ್ಟೇ ತಿನುಕಿದರೂ ಬಾಯಿಲೆ ಮಲ ಮಾತ್ರ ಹೊರ ಬರುತ್ತಿತ್ತು. ಥೂ! ಉಣ್ಣೋ ಹೊತ್ತನ್ಯಾಗ ಅದೇನ ಮಾತಾಡ್ತಿಯೋ ಅಸಹ್ಯ ಅಂತ ಗದರಿಸಿದೆ. ಹಂಗಲ್ಲೋ ಇವನ ಹೆಸರು ಮಲ್ಲಿಕ ಅಂದ. ಆತನೋ ' ಬಾರೋ ಭರಮ ಇಲ್ಲೇ ಹೊರಗಿನ ಟೇಬಲ್ ಮ್ಯಾಲ ಕುಂತು ಕಷ್ಟಾ ಸುಖಾ ಮಾತಾಡ್ತಾ ಊಟ ಮಾಡೋನು' ಅಂತ ಕರೆದ.
ಎಚ್ಚುಜಮೀ ಅಂತ ನನ್ನ ಕಡೆ ನೋಡಿ "ದೋಸ್ತ ನಿನಗೇನ ಬೇಕೋ ತುಗೊ..ಹೊಟ್ಟಿ ತುಂಬ ಊಟಾ ಮಾಡು. ನನಗ ದೋಸ್ತಿ ಮುಖ್ಯ. ಫ್ರೆಂಡ್ ಈಸ ಎ ಸೆಕೆಂಡ್ ವೈಫ್ ಅಂತಾರಲ್ಲಾ ಹಂಗ" ಎನ್ನುತ್ತಾ ಭರಮ್ಯಾ ಆತನ ಜೊತೆ ಹೊರಗಿನ ಟೇಬಲ್ ಕ ಹೋಗಿ ಕುಂತ್ಗೊಂಡ.
ಇನ್ನಾದರೂ ನೆಮ್ಮದಿಯಿಂದ ಊಟ ಮಾಡಬಹುದೆಂದುಕೊಂಡು ಎಕ್ಸ್ಟ್ರಾ ಕುಲ್ಚಾ ತರಿಸಿಕೊಂಡೆ. ಒಳ್ಳೆ ಫುರಮಸಿ ಊಟ ಆತು. ವೇಟರು ಬಂದು ಫಿಂಗರ್ ಬೌಲ್ ತಂದಿಟ್ಟ. ಕೈತೊಳೆಯಲು ಅದ್ದಿದೆ ಫಿಂಗರ್ ಇನ್ನೇನು ಫಿಂಗರ್ ಚಿಪ್ಸ್ ಆಗುವಷ್ಟು ನೀರು ಬಿಸಿಯಿತ್ತು. ಸ್ವಲ್ಪ ತಣ್ಣೀರು ಬೆರೆಸಿ ಬೆರಕಿ ಮಾಡಿದೆ. ಪಕದಲ್ಲಿದ್ದಾಂವ ಭಾಳ ಬೆರಕಿ ಅದರಿ ನೀವು ಅಂತ ಅಂದು ಕಣ್ಮುಚ್ಚಿ ಅಲ್ಲಿಯೇ ಗೊರಕಿ ಹೊಡೆಯತೊಡಗಿದ. ಎಂತಹ ನೆಮ್ಮದಿ ಜೀವನಪಾ ಇವನದು ಅನ್ಕೊಂಡು ಮೇಲೆದ್ದು ಹೊರಗಡೆ ಬಂದು ನೋಡ್ತೇನಿ..ಭರಮ್ಯಾ...ಎಲ್ಲಿ ಹೋದ ಭರಮ್ಯಾ? ಎಲ್ಲಾ ಕಡೆ ಕಣ್ಣಾಯಿಸಿದರೂ ಕಾಣದಾದ.
ಹಾಳಾಗಿ ಹೋದ ಅನ್ಕೊಂಡು ಸುಮ್ಮನ ಹೊರಗ ಬರಾತಿದ್ದೆ. ಕೌಂಟರ್ ನ್ಯಾಗಿನ ಕ್ಯಾಷಿಯನರ್ ಟಣಟಣ ಅಂತ ಬೆಲ್ಲ ಹಾಕಿದ. ವೇಟರು ಓಡಿ ಬಂದು..ಏಯ್ ಪಟಿಪಟಿ ಚಡ್ಡೀ.. ಅಂತ ನನ್ನ ಕರೆಯಬೇಕೆ?
ಯಾಕಪಾ ಅಂದೆ. ಆಂ...ಯಾಕಪಾ? ನಾವೆಲ್ಲಾ ನಿನ್ನ ಕಣ್ಣಿಗೆ ಬೇಕೂಫಗಳಂಗ ಕಾಣಸ್ತೇವೇನ? ಅಂದ. ಬಾ ಕ್ಯಾಷಿಯರ್ ಕರ್ಯಾತಾನು ಅಂತ ಕ್ಯಾಷ್ ಕೌಂಟರತ್ತ ಕರೆದುಕೊಂಡು ಹೋಗಿ ನನ್ನ ನಿಲ್ಲಿಸಿದ. ಆತ ಬಿಲ್ ಪ್ರಿಂಟ್ ಹೊಡೆದ. ಪ್ರಿಂಟರು ಸ್ವಲ್ಪ ತಡಕೋ ಸ್ವಲ್ಪ ತಡಕೋ ಎಂದು ಸೌಂಡ್ ಮಾಡುತ್ತಾ ಹಾಳಿ ಉಗುಳಿತು. ಅದನ್ನ ಟರ್ರ ಅಂತ ಹರಿದು ನನ್ನ ಮುಂದಿಟ್ಟ.
ಅಲ್ಲಾ ನನ್ನ ದೋಸ್ತ ಭರಮ್ಯಾ ಬಿಲ್ ಕೊಟ್ಟ ಹೋಗಿಲ್ಲಾ? ಎಂದು ಕೇಳಿದೆ. ವೇಟರ್ ನಗಾಕತ್ತಿದ. ನನಗಂತೂ ಗಾಬರ್ಯಾಗಿ ಬೆವರತೊಡಗಿದೆ. ಕ್ಯಾಷಿಯರ್_"ಆ ಭರಮ್ಯಾ ತನ್ನ ಬಿಲ್ಲನ್ನೂ ಒಳಗ ಕುಂತಾಂವ ನನ್ನ ದೋಸ್ತ ಕೊಡ್ತಾನು ಅಂತ ನಿನ್ನ ತೋರಿಸಿ ಹೇಳಿ ಹೋಗ್ಯಾನು" ಅಂದ. ಬಿಲ್ ನೋಡಿದೆ ಎರಡ ಸಾವಿರಾಗಿತ್ತು. ಏ ಹಲಕಟ್ ಭರಮ್ಯಾ ಪಾರ್ಟಿ ಕೊಡ್ತೇನಿ ಅಂತ ಪೋಲೀಸ್ ಸ್ಟೇಷನ್ ದಾಗ ಪಾಟಿ ಹಿಡ್ಕೊಂಡು ನಿಲ್ಲೊವಂಗ ಮಾಡಿದ್ಯಲ್ಲೋ ಎಂದು ಮನಸ್ಸಿನಲ್ಲಿಯೇ ಬೈಯ್ದು ಕ್ಯಾಷಿಯರ್ ಗೆ 'ಅಣ್ಣಾ ನನ್ನ ಹತ್ರ ಈಗ ದುಡ್ಡಿಲ್ಲ. ನಾನೂ ಲೋಕಲ್ಲೇ. ನಾಳಿ ಮುಂಜಾನೆ ತಂದು ಕೊಡುವೆ ಎಂದೆ. ಅದಕ್ಕಾತ ಆಗೋದಿಲ್ಲ ಎಂದು ನಿರಾಕರಿಸಿ ಬಿಟ್ಟ.
ನಮ್ಮ ದೋಸ್ತಗ ಫೋನಾಯಿಸಿದೆ_'ಲೋ ಮಗಾ ಅರ್ಜಂಟ್ ಎರಡ ಸಾವಿರ ರೂಪಾಯಿ ಬೇಕಾಗ್ಯಾವೋ' ಅಂದೆ. ನೀ ಈಗ ಸದ್ಯ ಎಲ್ಲಿ ಅದಿ ಅಂತ ಕೇಳಿದ. ನಾನು ಅಡ್ರೆಸ್ ಕೊಟ್ಟೆ. ಹತ್ತ ನಿಮಿಷದಲ್ಲಿ ಬರ್ತೆನು ಅಂತ ಹೇಳಿ ಫೋನ ಕಟ್ ಮಾಡಿದ. ನನಗ ಅವನ ಮಾತ ಕೇಳಿ ಹೋದ ಜೀವಾ ಮತ್ತ ಬಂದಂಗಾತು. ಕ್ಯಾಷಿಯರ್ ಗೆ ಕಾಲರ್ ಎತ್ತಿ ನಮ್ಮ ದೋಸ್ತ ಬರ್ತಾನು ನಿನ್ನ ಬಿಲ್ ಬಿಸಾಕಿಯೇ ಮನೆಗೆ ಹೋಗುವೆ ಎಂದು ಧೈರ್ಯದಿಂದ ಹೇಳಿದೆ.
ಹತ್ತು ನಿಮಿಷಾತು, ಇಪ್ಪತ್ತ ನಿಮಿಷಾತು ಆತ ಬರಲೇ ಇಲ್ಲ. ಪುನಃ ಫೋನಾಯಿಸಿದರೆ ದ ನಂಬರ್ ಯು ಹ್ಯಾವ್ ಡಯಲ್ಡ ಈಸ ಕರೆಂಟ್ಲಿ ಸ್ವಿಚ್ಡ್ ಆಫ್ ಅಂತ ಬಂತು. ಕ್ಯಾಷಿಯರ್ ಗೆ ಪುನಃ ಅಣ್ಣಾ ಅಂದೆ. ಅದಕ್ಕಾತ ಏನೋ? ಎಂದು ಗದರಿದ. ಹಿಟ್ಟು ರುಬ್ತೇನಿ ಅಂದೆ. ಮಳ್ಳ ಹಿಟ್ಟ ರುಬ್ಬಾಕಂತ ನಾಲ್ಕ ಗ್ರ್ಯಾಂಡರ್ ಮಡಗೇನಿ ಅಂದ. ಮತ್ತ ಅಣ್ಣಾ ಎಂದೆ. ಏನು? ಅಂದ. ಮುಸುರೆ ತಿಕ್ತೇನಿ ಅಂದೆ. ಮಳ್ಳ ಮುಸುರೆ ತಿಕ್ಕಾಕಂತ ಡಿಶ್ ವಾಷರ್ ಅದಾವು ಅಂದ. ಮತ್ತೇನ ಮಾಡಲಿ ಎಂದೆ? ಅಷ್ಟರೊಳಗ ಬಿಳಿ ಶರ್ಟು, ಕರಿ ಪ್ಯಾಂಟು ಹಾಕೊಂಡಾಂವ ಎದುರಿಗೆ ನಕ್ಕೊಂತ ಬಂದ ನಿಂತಿದ್ದ. ಇವನನ್ನೆಲ್ಲೋ ನೋಡೆನಲ್ಲಾ ಅಂತ ಯೋಚನೆ ಮಾಡುದ್ರಾಗ ಇಂವ ಅಲ್ಲಾ ನಮಗ ಊಟಾ ತಂದ್ಕೊಟ್ಟ ವೇಟರು ಅಂತ ಗುರ್ತಿಸಿದೆ. ಆ ವೇಟರು ಇಷ್ಟೊತ್ತನ ತಾನು ತೊಟ್ಟ ವೇಟರ್ ಡ್ರೆಸ್ ಕಳಚಿ ಹೊಸ ಡ್ರೆಸ್ ಹಾಕೊಂಡ ಬಂದಿದ್ದ.
ಆ 'ವೇಟರ್ ಡ್ರೆಸ್'ನ್ನು ನನ್ನ ಕೈಗಿಡುತ್ತಾ ತುಗೋ ಸಪ್ಲಾಯ್ ಮಾಡು, ನಾನೂ ಭರಮ್ಯಾನ ದೋಸ್ತ ಅದನಿ, ನಿನ್ನೆ ನನ್ನ ಕರಕೊಂಡು ಬಂದು ಸಿಗಿಸಿದ್ದ, ಇವತ್ತ ನಿನ್ನ ಕರಕೊಂಡ ಬಂದ ಸಿಗಿಸ್ಯಾನು. ಮತ್ತ ನಾಳಿ ಯಾರನರ ಕರಕೊಂಡ ಬಂದ ಸಿಗಿಸುಮಟ ನಿನ್ನ ಡ್ಯೂಟಿ ಇಲ್ಲಿಯೇ ಎಂದ.
ನನಗಾಗ ಅರ್ಥ ಆತು ಅವಾಗಿನಿಂದ ಈತ ಯಾಕ ನಗಾತಿದ್ದ ಅಂತ. ಅವನಿಗೆ ನನ್ನಿಂದಾಗಿ ವೇಟರ್ ಕೆಲಸದಿಂದ ಮುಕ್ತಿ ದೊರಕಿತ್ತು. ನನಗ್ಯಾವಾಗ ಬಿಡುಗಡೆ ದೊರಕುತ್ತೋ? ಆ ಭರಮ್ಯಾಗ ಆದಷ್ಟು ಬೇಗ ನನ್ನಂತಹ ಇನ್ನೊಂದು ಬಕರಾ ಸಿಗಲೆಂದು ದೇವರಲ್ಲಿ ಬೇಡ್ಕೊಳ್ಳುತ್ತಾ ವೇಟರ್ ಡ್ರೆಸ್ ಹಾಕೊಂಡೆ..ಮಾರನೇ ದಿನ ಮತ್ತೊಂದು ಬಕರಾ ಬಂತು, ಭರಮ್ಯಾನ ಬಲೆಗೆ ಬಿದ್ದಿತ್ತು. ನನಗ ಬಿಡುಗಡೆ ಸಿಕ್ತು.
ಅಂದಿನಿಂದ ಬದನೆಯಕಾಯಿ ತೆಗೆದುಕೊಳ್ಳಲು ಮಾರ್ಕೇಟಿಗೆ ಹೋದಾಗ ಬರಿ ಬದನೆಯಕಾಯಿ ಅಷ್ಟೇ ನೋಡ್ತೇನಿ ಕಣ್ರಣ್ಣಾ ..ಬೇರೇನೂ ಇಲ್ಲಾ..ನಿಮ್ಮಾಣೆ.
ಇದೇ ಲೇಖಕರ ಮತ್ತೊಂದು ಕತೆ ಓದಲು ಕ್ಲಿಕ್ ಮಾಡಿ
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ