Skip to main content

ವ್ಯೂಹ

ಮಹೇಶ ಹಾಗೂ ಮಹತಿ ಆ ಮನೆಯಲ್ಲಿ ವಾಸಿಸಲು ಪ್ರಾರಂಭಿಸಿ ಇಂದಿಗೆ ಸರಿಸುಮಾರು ಐದು ವರ್ಷವಾಗಿರಬೇಕು. ಅಂದು ಉಟ್ಟ ಬಟ್ಟೆಯಲ್ಲಿಯೇ ಜೀವನದಲಿ ಮುಂದೇನು? ಎಂದು ಚಿಂತಿಸುತ್ತ ಬಂದವರಿಗೆ ಬೈಲಹೊಂಗಲದ ಗಣೇಶ ಗಲ್ಲಿಯ ಮನೆಯು ಆಶ್ರಯ ನೀಡಿತ್ತು. ಪ್ರಾರಂಭದಲ್ಲಿ ಮನೆಯ ಓನರ್ ಇವರಿಗೆ ಬಾಡಿಗೆ ಕೊಡಲು ಹಿಂದೆ ಮುಂದೆ ನೋಡಿದಾಗ ಮಹತಿಯ ಕೊರಳಲ್ಲಿಯ ಮಾಂಗಲ್ಯ ಸರವನ್ನು ಕಂಡು ಒಪ್ಪಿಕೊಂಡಿದ್ದ. ಮೊದಲೇ ಜೋರಾಗಿ ಸುರಿಯುತ್ತಿರುವ ಮಳೆಯಲ್ಲಿ ಇಬ್ರೂ ತೊಯ್ದು ತೊಪ್ಪೆಯಾಗಿ ಬಂದಿದ್ದರು. ಅವರ ಬದುಕಿನ ತಿಳಿನೀಲದಲಿ ಕಾರ್ಮೋಡಗಳಾಗಮಿಸಿ ಕಷ್ಟಗಳ ಸೋನೆಯೇ ಸುರಿದು ತೊಯ್ಯಿಸಿಕೊಂಡವರಿಗೆ ಈ ನೀರ ಮಳೆ ಯಾವ ಲೆಕ್ಕ ಎಂದೆನಿಸದೇ ಇರಲಿಲ್ಲ. 
        ಗಲ್ಲಿಗೆ ಬಂದ ಹೊಸದರಲ್ಲಿ ಎಲ್ಲರೂ ಅಪರಿಚಿತರೇ. ಕೆಲವರು ಮಹತಿಯನ್ನು ತಾನಾಗಿಯೇ ಮೇಲ್ಬಿದ್ದು ಮಾತನಾಡಿಸಿ, ಇವರೇನು ಶಾಸ್ತ್ರೋಕ್ತವಾಗಿ ಮದುವೆಯಾದವರೋ ಅಥವಾ ಓಡಿ ಬಂದವರೋ ಎಂಬುವುದನ್ನು ತಿಳಿಯಲು ಹವಣಿಸಿದವರೇ ಹೆಚ್ಚು. ಕಂಡವರ ವಿಷಯವೆಂದರೆ ಕೆಲವರಿಗೆ ಉಪ್ಪಿನಕಾಯಿ ಚಪ್ಪರಿಸಿದಂತೆ,ಅದಿಲ್ಲದೆ ಊಟವಾದರೂ ಹೇಗೆ ರುಚಿಸಿತು? ಮಹತಿಯು ಕೆಲವೇ ದಿನಗಳಲ್ಲಿ ತನ್ನ ಸಹಜ ಸ್ನೇಹಪರ ನಡುವಳಿಕೆಯಿಂದ ನೆರೆಹೊರೆಯವರಿಗೆ ಆಪ್ತಳಾಗಿ ಬಿಟ್ಟಳು. ತುಟಿಯಂಚಿನಲಿ ಬಾಡಿಹೋದ ನಗುವೆಂಬ ಕುಸುಮ ಮತ್ತೆ ಅರಳಿ, ಕುಚೇಲನ ಜೀವನವಾದರೂ ಸೈ, ಅಲ್ಲಿ ತುಸು ನೆಮ್ಮದಿ  ಆಗ ತಾನೆ ಉದಯಿಸುತ್ತಿತ್ತು. 
      ಋತುಗಳೊಂದಿಗೆ ಮನುಷ್ಯರ ಗುರುತುಗಳೂ ಬದಲಾಗುತ್ತವೆ. ಆದರೆ ಅಂದು ತನ್ನ ಮನೆಗೆ ಬಂದ ಅಪರಿಚಿತನ ಮುಖಾರವಿಂದವು ಅವಳ ಹೃದಯದಲ್ಲಿ ಎಂದೋ ಹಾಕಲಾದ ಹಾಳು ಗೆರೆಗಳ ಹಚ್ಚೆಯೊಳಗೆ ಸರಿಯಾಗಿ ಹೊಂದಿಕೆಯಾದಂತೆನಿಸಿತು. ಹೌದು ಆತನೇ ಈತ, ತನ್ನ ಬದುಕಿನ ಕಳೆದು ಹೋದ ಅಧ್ಯಾಯ; ವಿರಾಜ ಎಂದು ಗುರುತಿಸಿದಳು. ಪ್ರಶಾಂತವಾದ ಶರಧಿಯೆದೆಯು ಬಿರುಗಾಳಿಯಿಂದ ತಲ್ಲಣಿಸುವಂತೆ ಅವಳ ಮನಸ್ಸು ಅನಿರೀಕ್ಷಿತವಾಗಿ ಆತನನ್ನು ಕಂಡು ತಲ್ಲಣಿಸಿತು.
     ವಿಹಾರದೊಳಗೆ ಮಗ್ನವಾದ ಹರಿಣಿಯ ಮುಂದೆ ಹುಲಿಯಂತೆ ಆತ ಗಕ್ಕನೆ ಬಂದು ನಿಂತಿದ್ದ. ಅವಳ  ಕಣ್ಣ ಮುಂದೆ ಅವಳದೇ ಬದುಕಿನ ಕಪ್ಪುಬಿಳುಪು ಚಿತ್ರಗಳು ಆಧುನೀಕತೆಯ ಭರಾಟೆಯಲ್ಲಿ ಕಳೆದುಹೋದ ಗರ್ದಿಗಮ್ಮತ್ತಿನ  ಪೆಟ್ಟಿಗೆಯೊಳಗೆ ಸರಿದುಹೋಗುವ ಚಿತ್ರಗಳಂತೆ ಸರಿಯತೊಡಗಿದವು. ಹೌದು ಅದೇ ನೀಚ ಮುಂಡೆದು, ಸಕಲ ಗಂಡಸು ಕುಲಕೇ ಅಲ್ಲಲ್ಲಾ ಇಡೀ ಮಾನವಕುಲಕೆ ಸಲ್ಲದ ಕೊಳಕು ಪಿಂಡವಿದು. ಇದರ ನೆರಳು ಸೋಕಿದರೆ ಸಾಕು ಅರಳಿದ ಪುಷ್ಪಗಳು ಸುಟ್ಟು ಕರಕಲಾದಾವು. ಇದೇಕೆ ಬಂದಿತೆಂದು ಚಿಂತೆಯಲ್ಲಿರುವಾಕೆಯನ್ನು, ಮುಟ್ಟಿ ಮಹತೀ ಎಂದನು ಆ ಅಲೆಮಾರಿ ಆಗಂತುಕ. ಯಾವ ಮಹತಿ? ಯಾರು ನೀವು? ತುಸು ಗಡಸಿನಿಂದಲೇ ಪ್ರಶ್ನಿಸಿದಳು. ಎಲಾ ಸೊಕ್ಕಿನ ಹೆಣ್ಣೆ, ನನ್ನಾಸೆ ಪೂರೈಸಿದ ನಿನ್ನ ಬೆತ್ತಲೆ ಮೈಯನು ಕೇಳು ಈ ಮನ್ಮಥ ಯಾರೆಂದು ಹೇಳಿಯಾತು ಎನ್ನುತ್ತ ಅಸಹ್ಯವಾಗಿ ನಕ್ಕನು. ಹೆಣ್ಣೆಂದರೆ ಕ್ಷಮಯಾಧರಿತ್ರಿ, ಅಂತಹ ಧರಿತ್ರಿಯ ಒಡಲೊಳಗೂ ಕುದಿವ ಲಾವಾರಸವಿಲ್ಲವೇ? ಸಮಯ ಬಂದಾಗ ಬೆಟ್ಟವನೆ ಸೀಳಿ ಅದು ಹೊರಬರದೇ ಇರಲಾದೀತೆ? ಆತನ ಅಸಹ್ಯಕರ ನಗುವಿನಿಂದ ಕೋಪೋದ್ರಿಕ್ತಳಾದ ಅವಳ ಕಂಗಳು ರಕ್ತರಂಜಿತವಾದವು. 'ಎಲವೋ ನಾಯಿ ನನ ಮಗನೇ' ಎಂದು ಅವನ ಕೆನ್ನೆಗೊಂದೇಟು ಹಾಕಲು ನೆರೆಹೊರೆಯವರೆಲ್ಲಾ ಸಿಹಿಗೆ ಇರುವೆ ಮುತ್ತುವಂತೆ ಮುತ್ತಿದರು. ಬಂದವನನ್ನೇನೋ ಬೆದರಿಸಿ ಕಳುಹಿಸಿದರು ಆದರೆ ಮಹತಿಯ ಬದುಕನ್ನೇ ತಮ್ಮ ಎಲುಬಿಲ್ಲದ ನಾಲಿಗೆಯಿಂದ ಎಳೆದಾಡಿಬಿಟ್ಟರು. ಅಯ್ಯ! ನೋಡಿದೇನ ಸಡಗರಾ..ಮನ್ಯಾಗ ಮನ್ಮಥನಂತಹ ಗಂಡ ಇದ್ದರೂ ಮೂದೇವಿ ಆ ಕಡೆ ಈ ಕಡೆ ಮೇಯತೈತಿ ಅಂತ ಚುಚ್ಚಿ ಅನ್ನೋರು. ಬಂದಾತ ಅವಳ ಕಾಲೇಜು ಲವ್ವರ್ ಅಂತೆ, ಅವಳು ಹಾಗಂತೆ, ಅವಳು ಹೀಗಂತೆ, ಹೀಗೆ ಅಂತೆ ಕಂತೆಗಳ ಕತೆಗಳು ಗಲ್ಲಿಯ ತುಂಬ ಎರಡು ಕಾಲಿನ ಹಲ್ಲಿಗಳಿಂದ ಲೊಚಗುಡಲ್ಪಟ್ಟಿತು. ಮಹೇಶನಿಗೆ ನಡೆದ ಸಂಗತಿಯನ್ನೆಲ್ಲಾ ಕಣ್ಣೀರ ಕತೆಯಾಗಿಸಿ ಹೇಳಿದ ಮಹತಿ, ಇನ್ನ್ಮುಂದೆ ಇಲ್ಲಿರೋದು ಬೇಡಾ ಮಹೇಶ, ಬೇರೆ ಕಡೆ ಹೋಗೋಣವೆಂದಳು. ಮಹತಿ ಎಲ್ಲಿಗಂತ ಹೋಗೋದು? ಬರಿ ಜೀವನಪೂರ್ತಿ ಓಡುವುದೇ ಆಯ್ತು. ಎಲ್ಲಿಯೇ ಹೋದರು ಇಂತಹ ಜನರಿದ್ದೆ ಇರುವರು. ಅವರಾಡಿದ ಮಾತುಗಳು ಮೈಮೇಲೆ ಮೂಡುತ್ತವೆ ಏನು? ಮೈಗಂಟಿದ ರಾಡಿಯನು ತೊಳೆದುಕೊಳ್ಳುವಂತೆ ತೊಳೆದುಬಿಡು ಮಹತಿ ಎಂದು ಮಹೇಶ ಬುದ್ದಿವಾದ ಹೇಳಿದನು. ನೀವು ಗಂಡಸರು, ನಿಮಗೇನು ಗೊತ್ತು ಹೆಣ್ಣಿನ ಕಷ್ಟ, ಮೊದಲೇ ನಮ್ಮ ಮನಸ್ಸುಗಳು ಸೂಕ್ಷ್ಮವಾಗಿರುತ್ತವೆ ಎನ್ನುತ್ತ ಕಣ್ಣಿನಿಂದ ಮತ್ತಷ್ಟು ಒಡಲಾಳದ ದುಃಖವನ್ನು ಆಕೆ ಅಳತೆಯ ಅರಿವಿಲ್ಲದೆ  ಸ್ಖಲಿಸಿದಳು.
.........
 ನಗರದ ಖಾಸಗೀ ಬ್ಯಾಂಕ್ ಒಂದರಲ್ಲಿ ವಿರಾಜ ಉದ್ಯೋಗಿಯಾಗಿದ್ದ. ಕೈತುಂಬ ಸಂಬಳ. ನೋಡಲು ಸ್ಪುರದ್ರೂಪಿಯಾಗಿದ್ದ. ಮದುವೆಯಾಗಿ ಮೂರು ವರ್ಷಗಳಾಗಿದ್ದರೂ ವಿರಾಜ ತನ್ನ ಹೆಂಡತಿಯೊಂದಿಗೆ ಒಂದಿನವೂ ಅನ್ಯೂನ್ಯವಾಗಿರಲಿಲ್ಲ. ಮೂರು ವರ್ಷಕೇ ಅವರಿಬ್ಬರ ಜಗಳ ಬಗೆಹರಿಸಲು ಮೂವತ್ತು ಹಿರೇತನಗಳು ಕೂಡಿ ಹೇಳ ಹೆಸರಿಲ್ಲದಂತೆ ವಿಫಲವಾಗಿದ್ದವು. ಆದರೂ ಸಂಸಾರಬಂಡಿಗೆ ಎರಡೆತ್ತುಗಳನ್ನು ಒತ್ತಾಯವಾಗಿ ಹೂಡಲಾಗಿತ್ತು. ಮದುವೆಯ ಬಗೆಗೆ ಚೆಂದದ ಕನಸುಗಳನೆ ಹೆಣೆದುಕೊಂಡು, ಅವುಗಳಿಗೆ ಆಜೀವ ಚಂದಾದಾರಳಾಗಿ ಬಂದಂತಹ ಅವನ ಹೆಂಡತಿಯು; ಗಂಡನ ನಡೆನುಡಿ ಕಂಡು, ತಾನು ಕಂಡಂತಹ ಕನುಸುಗಳನ್ನೆಲ್ಲಾ ಚಿತೆಯೇರಿಸಿ ಸೂತಕದಲ್ಲಿ ಕುಳಿತವಳಂತೆ ಕುಳಿತುಕೊಳ್ಳುತ್ತಿದ್ದಳು. ಹೇಗಾದರೂ ಮಾಡಿ ಇವಳಿಂದ ಬಿಡುಗಡೆ ಪಡೆದರೆ ಸಾಕೆಂದುಕೊಳ್ಳುತ್ತಿದ್ದ ವಿರಾಜ. 
     ಒಂದಿನ ಗೆಳೆಯ ಮಹೇಶನೊಂದಿಗೆ ಅದಾವುದೋ ಕಾಗದಗಳನ್ನು ಜರಾಕ್ಸ ಮಾಡಿಸಲೆಂದು ಅಂಗಡಿಗೆ ಹೋಗಿದ್ದ. ಕೆಲಸ ಮುಗಿಸಿ ಹೊಟೇಲ ಅನುಪಮದಲ್ಲಿ ಗೆಳೆಯರಿಬ್ಬರೂ ಚಹಾ ಕುಡಿದು ಆಫೀಸಿನ ಕೆಲವಾರು ವಿಷಯಗಳನ್ನು ಚರ್ಚಿಸಿದರು. ಮಹೇಶ ವಿರಾಜನ ಆಫೀಸಿನಲ್ಲಿಯೇ ಕೆಲಸ ಮಾಡುತ್ತಿದ್ದವನು, ಹೀಗಾಗಿ ಇಬ್ಬರೂ ಆತ್ಮೀಯ ಸ್ನೇಹಿತರಾಗಿದ್ದರು. ಮಹೇಶ ಇನ್ನೂ ಬ್ಯಾಚುಲರ್ ಆಗಿದ್ದರಿಂದ ಬೆಳವಡಿಯಲ್ಲಿಯೇ ಒಂದು ಸಣ್ಣ ರೂಮ್ ಮಾಡಿಕೊಂಡಿದ್ದ. ಮದುವೆಗೂ ಮುನ್ನ ಆ ಪಾರ್ಟಿ ಈ ಪಾರ್ಟಿಯೆಂದು ವಿರಾಜನೂ ಆ ರೂಮಿಗೆ ಹೋಗುತ್ತಿದ್ದ. ಜಾಲಿಯಾಗಿ ಓಡಾಡಿಕೊಂಡಿದ್ದ ವಿರಾಜನಿಗೆ ಮದುವೆಯಾದ ನಂತರ ತನ್ನ ಬದುಕೇ ಸೆರೆಮನೆಯಂತಾಗಿದೆ ಎಂದೆನಿಸತೊಡಗಿತ್ತು. ಆತ ಮೊದಲೇ ತನ್ನ ಮನೆಯವರಿಗೆ ಮದುವೆಯ ಹೆಣ್ಣು ಇಷ್ಟವಿಲ್ಲವೆಂದು ತಿಳಿಸಿದ್ದರೂ, ಸಂಬಂಧದೊಳಗಿನ ಹೆಣ್ಣೆಂದು ಬಲವಂತ ಮಾಡಿ ವಿರಾಜನಿಗೆ ಗಂಟುಹಾಕಿ ಬಿಟ್ಟಿದ್ದರು.
     ಆ ದಿನವಂತೂ ಆಫಿಸಿನಿಂದ ಬಂದವನೆ ವಿರಾಜ ವಿಪರೀತವಾಗಿ ಕುಡಿಯತೊಡಗಿದ್ದನು. ಕಾರಣ ಕೇಳಿದ ಹೆಂಡತಿಯ ಕೆನ್ನೆಗೆರಡು ಬಾರಿಸಿ ತಾನು ಪೆಗ್ ಮೇಲೆ ಪೆಗ್ ಏರಿಸತೊಡಗಿದ್ದನು. ಅದಕ್ಕೆ ಕಾರಣ ಇಷ್ಟೆ, ಅಂದು ಮಹೇಶನಿಗೆ ಪ್ರಮೋಷನ್ ನೀಡಲಾಗಿತ್ತು. ತನಗಿಂತಲೂ ವಯಸ್ಸಿನಲ್ಲಿ ಮತ್ತು ಅನುಭವದಲ್ಲಿ ಚಿಕ್ಕವನಾದ ಮಹೇಶನಿಗೆ ಪ್ರಮೋಷನ್ ಸಿಕ್ಕಿದ್ದನ್ನು ವಿರಾಜನಿಗೆ ಸಹಿಸಿಕೊಳ್ಳಲಾಗಿರಲಿಲ್ಲ. ಅಂದಿನಿಂದ ಅವರಿಬ್ಬರ ಸ್ನೇಹದಲಿ ಬಿರುಕಿನ ಬಿರುಗಾಳಿಯೆದ್ದಿತು.
*****
     ವಿರಾಜ ತನ್ನ ಸಂಸಾರ ಕುರಿತು ಹಿರೇತನ ಕೂಡಿಸಿದ. ಹೆಂಡತಿಯಾದ ಮಹತಿಯ ಮೇಲೆ ಸಲ್ಲದ ಆರೋಪವನ್ನು ಹೊರಿಸಿದ. 'ಊಟ ಒಲ್ಲದ ಗಂಡನಿಗೆ ಮೊಸರಿನಲ್ಲಿಯೂ ಕಲ್ಲು' ಎಂಬಂತೆ ಅವನ ಆರೋಪಗಳಿದ್ದವು. ಮಹತಿಯು ತನ್ನದಲ್ಲದ ತಪ್ಪುಗಳನ್ನು ಸುತಾರಾಂ ಒಪ್ಪಿಕೊಳ್ಳದೇ ತಳ್ಳಿಹಾಕಿದಳು. ವಿರಾಜ‌ ಕೊನೆಗೆ ಯಾವ ನೀಚ ಮಟ್ಟಕ್ಕೆ ಇಳಿದನೆಂದರೆ, ತನ್ನ ಹೆಂಡತಿಯ ಶೀಲದ ಬಗೆಗೆ ಶಂಕೆಯನ್ನು ವ್ಯಕ್ತಪಡಿಸಿದ. ಅದಕ್ಕೆ ಸಾಕ್ಷಿಯೆಂಬಂತೆ ಅವಳ ಮೊಬೈಲ್ ಕಾಲ್ ರಿಕಾರ್ಡ್ಸ ತೆಗೆದು ಹಿರಿಯರ ಮುಂದಿಟ್ಟ. ಆ ಮೂಲಕ ಮಹತಿಯ ಬದುಕಿನ ಚದುರಂಗದಾಟದಲಿ ಆತ ಚೆಕ್ ಮೇಟ್ ಇಟ್ಟು ವಿಜಯ ಸಾಧಿಸಿದ. ಮಹತಿಗೆ ಕೊನೆಯಲ್ಲಿ ಉಳಿದಿದ್ದು ತನ್ನ ಗಂಡ ಕೊಟ್ಟ ಕಣ್ಣೀರಿನ ಬಳುವಳಿ. 
     ತವರಿಗೆ ಹೋದರೆ ತವರಿನಲ್ಲಿರುವ ಅಣ್ಣನ ಹೆಂಡತಿ 'ಇದು ಮಾನವಂತರ ಮನೆ ಇಲ್ಲಿ ದಂಧೆ ಮಾಡುವವರಿಗೆ ಅವಕಾಶವಿಲ್ಲವೆಂದು' ನುಡಿದು ಧಿಡೀರನೆ ಬಾಗಿಲು ಮುಚ್ಚಿಕೊಂಡಳು. ಪ್ರತಿ ಬಾರಿ ರಕ್ಷಾಬಂಧನದಲಿ ನಿನ್ನ ಸಂಪೂರ್ಣ ರಕ್ಷಣೆಯ ಹೊಣೆ ನನ್ನದೇ ಎಂದಿದ್ದ ಅಣ್ಣನ ತುಟಿಗಳಿಗೆ ಆತನ ಹೆಂಡತಿಯ ಹೊಲಿಗೆ ಬಿದ್ದಾಗಿತ್ತು. ಬೀದಿಯಲಿ ಅನಾಥರಂತೆ ಆಶ್ರಯಕ್ಕಾಗಿ ಅಲೆದಳು, ಹಸಿದಾಗ ಸೆರಗೊಡ್ಡಿ ಅಪರಿಚಿತ ಮನೆಗಳಲಿ ಬೇಡಿ ತಿಂದಳು. ಸ್ನೇಹಿತರು, ಸಂಬಂಧಗಳೆಲ್ಲಾ ಬದುಕಿನಲ್ಲಿ ಬರಿಯ ಸೊನ್ನೆ ಎಂದು ತೀರ್ಮಾನಕೆ ಬರುವಷ್ಟರಲ್ಲಿಯೇ  ಎದುರಿಗೆ ಮಹೇಶ ನಿಂತುಕೊಂಡಿದ್ದ. ಹೌದು, ಯಾವ ವಿರಾಜನ ಆಫೀಸಿನಲ್ಲಿ‌ ಸಹೋದ್ಯೋಗಿಯಾಗಿ ಕೆಲಸ ನಿರ್ವಹಿಸುತ್ತಿದ್ದನೋ ಅದೇ ಮಹೇಶ. ಮಹತಿಯವರೇ ಚಿಂತಿಸಬೇಡಿ ನಿಮಗಾಸರೆಯಾಗಿ ನಾನಿರುತ್ತೇನೆ, ಒಬ್ಬ ಅಣ್ಣನಾಗಿ ನಿಮ್ಮ ನೋವು ನಲಿವಿನಲ್ಲಿ ಸಹಭಾಗಿಯಾಗುತ್ತೇನೆ ಎಂದ. ನನ್ನ ಗೆಳೆಯ ವಿರಾಜ ನಿಮಗಷ್ಟೇ ಅಲ್ಲ ನನಗೂ ಮೋಸ ಮಾಡಿದ. ನಿಮ್ಮೊಂದಿಗೆ ಕಳ್ಳ ಸಂಬಂಧದ ಆರೋಪ ಹೊರಿಸಿದ. ನನ್ನ ಚಾರಿತ್ರ್ಯ ಸರಿಯಾಗಿಲ್ಲವೆಂದು ಬ್ಯಾಂಕಿನಿಂದ ನನ್ನನ್ನು ಡಿಸ್ಮಿಸ್ ಮಾಡಿಸಿದ. ಈಗ ನಿಮ್ಮಂತೆಯೇ ನಾನು ಬೀದಿಯ ಋಣದಲ್ಲಿದ್ದೇನೆ ಎಂದು ಮಹೇಶ ಕಣ್ಣೀರಾದ. 
        ಮಹತಿಯು ಕ್ಷಣಕಾಲ‌ ಯೋಚಿಸಿ..ಯಾವ ಪುರುಷನೊಂದಿಗೆ ನನ್ನ ಗಂಡ‌ ಸಂಬಂಧ ಕಟ್ಟಿಹನೋ ಆತನೊಂದಿಗೆ ಈಗ ಹೋದರೆ ನಾನು ಮಾಡದ ತಪ್ಪನ್ನು ನಾನೇ ಒಪ್ಪಿಕೊಂಡ ಹಾಗಾಗುತ್ತಲ್ಲವೇ? ಎನ್ನುತ್ತಾ ಮಹೇಶನಿಗೆ ಬರಲೊಲ್ಲೆ ಎಂದಳು. ಆಗ ಮಹೇಶ "ನೋಡಿ ಮಹತಿಯವರೇ ನೀವು ಆಲೋಚಿಸುತ್ತಿರುವ ರೀತಿ ಸರಿಯಾಗಿಯೇ ಇದೆ. ಆದರೆ ಅದರ ಪ್ರತಿಫಲ‌ ಮಾತ್ರ ಶೂನ್ಯ. ನೀವು ನಿಮ್ಮ‌ ಜೀವಮಾನದಲ್ಲಿಯೇ ಮತ್ತೆ ನಿಮ್ಮ ಗಂಡನನ್ನು ಪುನಃ ಸೇರಲಾರಿರಿ. ಆಶ್ಚರ್ಯವಾಯಿತಾ? ಇದೋ ನೋಡಿ ಎನ್ನುತ್ತಾ ವಿರಾಜ ಯಾವುದೋ ಹುಡುಗಿಯ ಜೊತೆಗಿದ್ದ ಫೋಟೋ ತೋರಿಸಿ ನಿಮ್ಮ ಗಂಡ ನಿಮ್ಮನ್ನು ದೂರಮಾಡಿದ್ದೆ ತಾನು ಇವಳೊಂದಿಗೆ ಪುನರ್ವಿವಾಹವಾಗಲು" ಎಂದ. ಮಹತಿಯಲ್ಲಿ ಆ ಭಾವಚಿತ್ರ ಯಾವುದೇ ಪರಿಣಾಮವನ್ನುಂಟು ಮಾಡಲಿಲ್ಲ. ನನ್ನ ಗಂಡ ಯಾವಾಗ ನನ್ನ ಮೇಲೆ ಕಳ್ಳಸಂಬಂಧದ ಆರೋಪ ಮಾಡಿದನೋ ಅಂದೇ ನನ್ನ ಪಾಲಿಗೆ ಆತ ಸತ್ತುಹೋದ. ಅವನ ಜೊತೆಗೆ ಪುನಃ ಬಾಳುವ ಇರಾದೆಯಾಗಲಿ, ಆಸೆಯಾಗಲಿ ನನ್ನಲ್ಲಿಲ್ಲ. ನಾನು ಹೆದರುತ್ತಿರುವುದು ಈ ಸಮಾಜಕ್ಕಾಗಿ ಎಂದಳು ಮಹತಿ. ಆಗ ಮಹೇಶ "ಮಹತಿಯವರೇ ಈ ಸಮಾಜ ಕಷ್ಟದಲ್ಲಿರುವ ನಿಮಗೇನು ಸಹಾಯ ಮಾಡೀತು, ಬಿದ್ದರೆ ನಗುವ, ಎದ್ದರೆ ಜೈ ಎನ್ನುವ ಬಲಹೀನ ಸಮಾಜವಿದು. ಅದು ಮೇಲ್ನೋಟಕ್ಕೇನು ಕಾಣುವುದೋ ಅದನ್ನೇ ಪುರಸ್ಕರಿಸುತ್ತದೆ. ಯಾಕೆ, ನಾವಿಬ್ಬರೂ ಮಾಡದ ತಪ್ಪಿಗೆ ನಮ್ಮನ್ನು ಶಿಕ್ಷಿಸಿಲ್ಲವೇನು? ನೀವೆಂದಾದರೂ ನನಗೆ ಕಾಲ್ ಮಾಡಿದ್ದೀರಾ? ಇಲ್ಲ ತಾನೆ. ಮತ್ತೆ ಆ ಸುಳ್ಳು ಕಾಲ್ ರಿಕಾರ್ಡ್ಸನ್ನೇಕೆ  ಈ ಸಮಾಜ ನಂಬಿತು. ವಿರಾಜ ನನ್ನ ಆಧಾರ ಕಾರ್ಡ ಜರಾಕ್ಸ್; ನನಗೇ ಗೊತ್ತಿಲ್ಲದಂತೆ ಯಾವಾಗಲೋ ತೆಗೆದುಕೊಂಡು ನನ್ನ ಹೆಸರಲ್ಲಿ ತಾನು ಸಿಮ್ ಖರೀದಿಸಿದ್ದ. ನೀವು ಅವನೊಂದಿಗೆಯೆ ಮಾತನಾಡಿದ್ದೀರಿ.‌ ಆದರೆ ಕಾಲ್ ರಿಕಾರ್ಡ್ಸಲ್ಲಿ ಅದು ನನ್ನೊಂದಿಗೆಯೆ ನೀವು ಮಾತಾಡಿರುವಿರೆಂದು ತೋರಿಸಿತು. ಇದು ವಿರಾಜ ರಚಿಸಿದ ವ್ಯೂಹ. ಅದನ್ನೇ ನಾವು ಹಿರಿಯರಿಗೆ ತಿಳಿಸಹೋದರೆ ತಿಳಿದುಕೊಂಡರೆ? ಇಲ್ಲವಲ್ಲಾ. ನಾವು ನಿರಪರಾಧಿಗಳೆಂದು ನಮ್ಮ ನಮ್ಮ ಆತ್ಮಸಾಕ್ಷಿಗೆ ಗೊತ್ತಿದ್ದ ಮೇಲೆ ಯಾವ ಪುರುಷಾರ್ಥಕೆ ಈ ಸಮಾಜಕ್ಕೆ ಹೆದರಬೇಕು? ಎಂದು ವಾದಿಸಿದ. ಅವನ ಮಾತುಗಳು ಅವಳ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡಿದವು. ಹೌದು ಮಹೇಶ ಹೇಳುತ್ತಿರುವುದು ಸರಿಯಾಗಿಯೇ ಇದೆ. ಒಡಹುಟ್ಟಿದವರೇ ಬೀದಿಗೆ ನೂಕಿದ ಮೇಲೆ, ಕರುಣಾಮಯಿ ಈತ ತೋರುವ ಕರುಣೆಯನ್ನು ಕಾಲಲ್ಲಿ ಒದ್ದು , ಈ ಕಲಿಗಾಲದಲ್ಲಿ ಬದುಕಲು ಸಾಧ್ಯವಾದೀತೆ? ಇಲ್ಲಿ ಆದರ್ಶಗಳಿಗೆ ಬೆಲೆಯಿಲ್ಲ. ಹೆಣ್ಣಿಗಷ್ಟೇ ಆದರ್ಶದ ಹೊರೆಯನ್ನು ಹೊರಿಸಿ ಹೇಗ ಬೇಕೋ ಹಾಗೆ ಬಳಸಿ ಒರೆಸಿ ಎಸೆಯುವ ವಿರಾಜನಂತಹ ಗಂಡುಗಳಿಗೆ ನನ್ನ ಧಿಕ್ಕಾರವಿರಲಿ ಎಂದು ಅಳುತ್ತಾ ಮಹೇಶನ ಕೈಗೆ ರಕ್ಷೆಯನ್ನು ಕಟ್ಟಿ ಆತನೊಂದಿಗೆ ಹೆಜ್ಜೆ ಹಾಕಿದಳು. ಅದೇ ಸಮಯಕ್ಕೆ ಬಾನಿನ ಕಾರ್ಮೋಡ ಕರಗಿ ಮಳೆ ಸುರಿಯತೊಡಗಿತು. ಮಳೆಯಲಿ ನೆನೆದುಕೊಂಡೆ ಹೊರಟ ಅವರ ಪಯಣ ಗಣೇಶಗಲ್ಲಿಯಲ್ಲಿ ಈಗ ಇರುವ  ಮನೆಯವರೆಗೂ ಬಂದು ತಲುಪಿತ್ತು. ಮುಂದೆ ಈ ಸಮಾಜಕ್ಕೆ ಮಹತಿಯ ಕೊರಳಲ್ಲಿ ಸತ್ತು ನೇತಾಡುತ್ತಿದ್ದ ತಾಳಿ ಕಾಣಿಸಿತೆ ವಿನಃ ಮಹೇಶನ ಕೈಯಲ್ಲಿ ಉಸಿರಾಡುವ ರಕ್ಷೆ ಎಂದೂ ಕಾಣಿಸಲೇ ಇಲ್ಲ. ಲೋಕದ ಕಣ್ಣಿಗೆ ಅವರು ಗಂಡ ಹೆಂಡತಿಯಾದರೂ..ಆತ್ಮಸಾಕ್ಷಿಯಲಿ ಅವರದು ಅಣ್ಣ- ತಂಗಿಯ ಪವಿತ್ರ ಬಂಧ.
                                  - ಆನಂದ ಮಾಲಗಿತ್ತಿಮಠ

ಇದೇ ಲೇಖಕರ ಇನ್ನೊಂದು ಕತೆ ಓದಲು ಕ್ಲಿಕ್ ಮಾಡಿ




Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ್ಲಿ