Skip to main content

ಅಪಸ್ವರ ಕತೆ

 

       ಜಿಟಿ ಜಿಟಿ ಮಳೆಯಲ್ಲಿ ಕೊಡೆ ಹಿಡಿದು ವೀರುಪಾಕ್ಷಯ್ಯ ಗಂಭೀರವಾಗಿ ನಡೆಯುತ್ತಿದ್ದನು. ಹಠಮಾರಿ ಕೊಡೆ ಎಷ್ಟು ಹೇಳಿದರೂ ಅವನ ಮಾತೇ ಕೇಳಲೊಲ್ಲದು. ಅದಕ್ಕೆ ಗಾಳಿಯ ಸಾಥ ಬೇರೆ. ಅವನ ಮುಖದ ಮೇಲೆಲ್ಲ ಹನಿಗಳುದುರುತ್ತಿದ್ದವು, ಮೇಲೆ ನೋಡಿದರೆ ಕೊಡೆಯ ತೂತಿನಿಂದ ಸೋರುತಿರುವ ಮುಗಿಲು ಕಂಡಿತು. ಒಂದೆರಡು ಹನಿಗಳು ಕಣ್ಣೊಳೊಗೆ ಹೊಕ್ಕೆ ಬಿಟ್ಟವು. ಕಣ್ಣುಜ್ಜಿಕೊಂಡ, ಕೆಂಪಗಾದವು. ಒಂದೊಳ್ಳೆ ಕೊಡೆ ತುಗೋಬಾರದಾ? ಅಂತ ಹೋದ ವರುಷಾನೇ ಹೆಂಡತಿ ಹೇಳಿದ ಮಾತುಗಳು ನೆನಪಾದವು‌. ಆದರೆ ರಿಟೈರ್ಡ್ ಆದ ಜೀವನ, ಬರೋ ಎರಡೂವರೆ ಸಾವಿರ ಪಿಂಚಣಿಯಲ್ಲಿಯೇ ಜೀವನ ಸಾಗಿಸಬೇಕಲ್ಲ ಎಂದುಕೊಳ್ಳುತ್ತಾ ನಡೆಯುತ್ತಿರಬೇಕಾದರೆ ಕಾಲಿನ ಚಪ್ಪಲಿಯ ಉಂಗುಟ ಕಿತ್ತು, ಚಪ್ಪಲಿ ಕಾಲಿನಿಂದ ಕೊಸರಿಕೊಂಡಿತು. ಥೂ! ಇದೊಂದು ಈಗಲೇ ಕೀಳಬೇಕಾ? ಎನ್ನುತ್ತಾ ಚಪ್ಪಲಿಯನ್ನು ತಿರುಗಿಸಿ ನೋಡಿದ, ಉಂಗುಟಕ್ಕೆ ಹಾಕಿದ ಪಿನ್ನು ಬಾಯಿ ಬಿಚ್ಚಿಕೊಂಡಿತ್ತು. ಒತ್ತಿ ಸರಿಮಾಡಿ ಮತ್ತೆ ನಡೆಯತೊಡಗಿದ. 
ತೊಯ್ದು ಒದ್ದೆಯಾಗಿ ಬಂದ ಗಂಡನಿಗೆ ತಲೆ ಒರೆಸಿಕೊಳ್ಳಲು ವಸ್ತ್ರ ನೀಡಿ ಒಳಹೋದ ಶಾಂತಾ ಬಿಸಿ ಬಿಸಿ ಚಹಾ ಮಾಡಿದಳು. ಮೂಲೆಯಲ್ಲಿ ಮುದುರಿಕೊಂಡು ಕುಳಿತ ಕಬ್ಬಿಣದ ಕುರ್ಚಿಯನ್ನು ಬಿಡಿಸುವಾಗ ಚೊಂಯಕ್ ಎಂದು ಕೂಗುತ್ತಾ ಅರಳಿತು. ಅದರ ಮೇಲೆ ಉಸ್ಸೆಂದು ಕುಳಿತು ಚಹಾ ಹೀರುತ್ತಾ ಧೋ ಎಂದು ಹುಚ್ಚೆದ್ದು ಸುರಿಯುತ್ತಿದ್ದ ಮಳೆಯನ್ನು ಕಿಟಕಿಯಿಂದಲೆ ನೋಡುತೊಡಗಿದ. ರೀ ಹೋದ ಕೆಲಸ ಏನಾಯಿತೆಂದು ಹೆಂಡತಿಯಾಡಿದ ಮಾತುಗಳು ತಗಡಿನ ಮಾಳಿಗೆಯ ಮೇಲೆ ಮಳೆಹನಿಯ ತಟ್ ಪಟ್‌ ತಾಳದೊಳಗೆಯೇ ಕಳೆದುಹೋದವು. ಪುನಃ ಜೋರಾಗಿ ಕೇಳಿದಾಗ ವೀರುಪಾಕ್ಷಯ್ಯ ವಾಸ್ತವಕ್ಕೆ ಬಂದು; ಅದೇ ಹಳೆ ಹಾಡು ಶಾಂತಾ, ಹುಡುಗನಿಗೆ ಹತ್ತು ತೊಲೆ ಬಂಗಾರ ಹಾಕಬೇಕಂತೆ, ಎರಡು ಲಕ್ಷ ವರದಕ್ಷಿಣೆ ಕೊಡಬೇಕಂತೆ ಎಲ್ಲಿಂದ ತರೋದು. ಒಂದು ತೊಲೆಗೆ ಐವತ್ತು ಸಾವಿರ. ಅದೇ ಐದು ಲಕ್ಷಾ ಆಗುತ್ತೆ. ಈ ಸಂಬಂಧಾನೂ ನಮ್ಮ ಕೈ ಬಿಟ್ಟು ಹೋದಂಗೆ ಎಂದ. ಎಲ್ಲಾ ಸಂಬಂಧಗಳೂ ಹೀಗೆ ಆದರೆ ವಯಸ್ಸು ನಮ್ಮ ಮಾತು ಕೇಳುತ್ತೇನ್ರಿ? ಅಂದಳು. ಏನ್ಮಾಡಂತಿಯಾ ನನಗೆ? ಈ ಸರ್ಕಾರ ಅದ್ಯಾವುದೋ ಹೊಸ ಪಿಂಚಣಿ ಅಂತ ತಂದು ನಮ್ಮ ಜೀವನಾನೇ ಬರ್ಬಾದ ಮಾಡಿಟ್ಟಿತು. ನರೇಗಾ ಕೂಲಿಗೆ ಹೋದರೆ ಅಲ್ಲಿ ಪಗಾರೇನೊ ಪಾಸಬುಕಗೆ ಜಮಾ ಮಾಡ್ತಾರು; ಆದರೆ ಮತ್ತೆ ಕೆಲಸ ಬೇಕಾದರೆ ಅದರಲ್ಲರ್ಧ ತೆಗೆದು ಅವರಿಗೇ ಪುನಃ ಮರಳಿಸಬೇಕು. ಒಂಥರಾ ಎಲ್ಲರೂ ಹಣಕ್ಕಾಗಿ ಮೊಸಳೆ ತರಹ ಬಾಯ್ತೆರೆದು ನಿಂತುಬಿಟ್ಟಿದ್ದಾರೆ ಎನ್ನುತ್ತಾ ಚಾಪೆ ಹಾಸಿ ಅಡ್ಡಾದ. 
   ಮಗಳನ್ನು ಹೊಟ್ಟೆ ಬಟ್ಟೆ ಕಟ್ಟಿ ಓದಿಸಿದರೂ ಅವಳಿಗೆ ಒಂದು ಕೆಲಸಾ ಅಂತ ಸಿಗಲಿಲ್ಲ. ಈ ಹಾಳಾದ್ದು ಡಿ.ಎಡ್ ಓದಬ್ಯಾಡಾ ಅಂತ ಬಡಕೊಂಡೆ. ಈಗ ನೋಡು ದಿನಕ್ಕೊಂದು ರೂಲ್ಸು ತಂದು ಕೆಲಸಾ  ಸಿಗದೇ ಅವಳ ಜೀವನಾನೂ ಹಾಳಾಗಿ ಹೋಯ್ತು. ಯಾವ ಸರ್ಕಾರ ಬಂದೇನು ಮಾಡುವುದು? ವರ್ಷಕೊಮ್ಮೆ ಅದೇನೊ ಅರ್ಹತಾ ಪರೀಕ್ಷೆಯಂತೆ, ಅದಕ್ಕೆ ಸಾವಿರಾರು ರೂಪಾಯಿ ಫೀ ಬೇರೆ. ಅದನ್ನಂತೂ ಇವರು ಪಾಸ ಆಗೋದಿಲ್ಲಾ, ಪಾಸ ಆಗುವರೆಗೂ ನೌಕರಿ ಸಿಗೋದಿಲ್ಲಾ. ಒಟ್ಟಿನಲ್ಲಿ ಸರ್ಕಾರಕ್ಕೆ ಆದಾಯ ನಿರಂತರವಾಗಿರಲು ಮಾಡಿದ ಹುನ್ನಾರ. ನಮ್ಮಂತಹ ಬಡವರ ಶಾಪ ಸರ್ಕಾರ ನಡೆಸುವವರಿಗೆ ತಟ್ಟದೇ ಇರದು ಎಂದು ಶಾಂತವ್ವ ಎಂದಿನಂತೆ ಮಗಳ ಭವಿಷ್ಯ ನೆನೆದು ಕಣ್ಣೀರಾದಳು.
ಮಳೆ ನಿಂತು ಭೂಮಿಯ ಮೇಲೆ ಬಿದ್ದ ನೀರು ತನ್ನ ದಾರಿ ತಾ ಹುಡುಕಿಕೊಂಡು ಹರಿಯುತ್ತಲಿತ್ತು. ವೀರುಪಾಕ್ಷಯ್ಯ.. ವೀರುಪಾಕ್ಷಯ್ಯ..ಎಂದು ಕರೆಯುತ್ತ ಯಾರೋ ಒಳಗೆ ಬಂದರು.‌ ನೋಡಿದರೆ ಶ್ಯಾಮಯ್ಯ ಮೇಷ್ಟು. ಮೇಷ್ಟ್ರು ಮನೆಗೆ ಬಂದಿದ್ದು ನೋಡಿ ಗಡಿಬಿಡಿಯಿಂದ ಮೇಲೆದ್ದು ಸ್ವಾಗತಿಸಿದ ವೀರುಪಾಕ್ಷಯ್ಯ ಕುರ್ಚಿಯ ಧೂಳು ಒರೆಸಿದಂತೆ ಮಾಡಿ ಕುಳಿತುಕೊಳ್ಳಲು ತಿಳಿಸಿದ. ಸೀರೆಯ ಸೆರಗನ್ನು ತಲೆಮೇಲೆ ಹೊದೆದುಕೊಳ್ಳುತ್ತಾ ಒಳಗೆ ಹೋದ ಶಾಂತವ್ವ ಆರಿದ ಒಲೆಯನ್ನು ಪುನಃ ಕಿಚ್ಚಾಯಿಸಿದಳು. ಪ್ರತಿ ವರ್ಷದಂತೆ ಈ ವರ್ಷದ ಅಗಷ್ಟ ಹದಿನೈದು ಸ್ವಾತಂತ್ರ್ಯ ದಿನಾಚರಣೆಗಾಗಿ ಭಾಷಣ ಮಾಡಲಿಕ್ಕೆ ಶ್ಯಾಮಯ್ಯ ಮೇಷ್ಟ್ರು ವಿರುಪಾಕ್ಷಯ್ಯನ ಮಗಳನ್ನು ಆಹ್ವಾನಿಸಲೆಂದು ಬಂದಿದ್ದರು. ಇನ್ನೇನು ಚಹಾ ಕುಡಿದು ಹೊರಡಬೇಕೆನ್ನುವಷ್ಟರಲ್ಲಿಯೇ ವೀರುಪಾಕ್ಷಯ್ಯನವರ ಮಗಳು ಬಂದು "ಮೇಷ್ಟೇ ಚೆನ್ನಾಗಿದ್ದೀರಾ?" ಎಂದು ಕಾಲಿಗೆ ನಮಸ್ಕರಿಸಿದಳು. ಒಳ್ಳೆಯದಾಗಲೆಂದು ಹರಸಿದ ಮೇಷ್ಟ್ರು ಬಂದ ವಿಷಯ ತಿಳಿಸಿ ಅವರೆಲ್ಲರಿಂದ ಬೀಳ್ಕೊಟ್ಟರು.
ಮೇಷ್ಟ್ರು ಪ್ರತಿ ವರ್ಷವೂ ತಪ್ಪದೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣಕ್ಕೆ ವಿಮಲಾಳನ್ನು ಕರೆಯುವುದಕ್ಕೆ ಕಾರಣ ಅವಳು ಉತ್ತಮ ವಾಗ್ಮಿ ಎನ್ನುವುದು ಮೊದಲಾದರೆ ಮತ್ತೊಂದು ಅವಳಿಗೆ ಏನಾದರೂ ಕೊಂಚ ಸಹಾಯ ಮಾಡಬೇಕೆನ್ನುವ ಆಲೋಚನೆ. ವಿಮಲಾ ಮಹಾನ್ ಸ್ವಾಭಿಮಾನಿ. ಯಾರಾದರೂ ಕನಿಕರದಿಂದ ಏನಾದರೂ ನೀಡಲು ಹೋದರೆ ನಿರಾಕರಿಸಿ ಬಿಡುತ್ತಿದ್ದಳು. ಇದನ್ನರಿತ ಮೇಷ್ಟ್ರು ಅವಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಅವಳಿಂದ ಭಾಷಣ ಮಾಡಿಸಿ ಗೌರವಾರ್ಥವಾಗಿ ಧನಸಹಾಯ ಮಾಡುತ್ತಿದ್ದರು. 
  ಮೂಲತಃ ವಿಮಲಾ ಅಂದರೆ ಮೇಷ್ಟ್ರಿಗೆ ಅಚ್ಚುಮೆಚ್ಚು. ಶಾಲಾ ದಿನಗಳಲ್ಲಿ ತುಂಬಾ ಜಾಣೆಯಾಗಿದ್ದ ಅವಳ ಜಾಣತನವು ಮುಂದೆ ಜೀವನದಲ್ಲಿ ಅವಳ ಬಡತನವನ್ನು ಒರೆಸಲೇ ಇಲ್ಲ. ಇದ್ದೊಬ್ಬ ಅಣ್ಣನೂ ಅಪಘಾತದಲ್ಲಿ ತೀರಿಹೋದ ನಂತರ ಅವಳು ಮತ್ತಷ್ಟು ಅಂತರ್ಮುಖಿಯಾಗಿಬಿಟ್ಟಿದ್ದಳು.
ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ದುಡಿಯುತ್ತಿದ್ದ ವಿಮಲಾ ತನ್ನ ಖರ್ಚನ್ನು ತಾನು ನೋಡಿಕೊಳ್ಳುವಷ್ಟು ಸಂಪಾದಿಸುತ್ತಿದ್ದಳು. ಮೇಷ್ಟ್ರು ಹೋದ ನಂತರ ವೀರುಪಾಕ್ಷಯ್ಯ ತಾನು ಬಲುಜೋಪಾನದಿಂದ ತಂದಂತಹ ಪೊಟ್ಟಣದಿಂದ ಹೊಸ ಮೊಬೈಲನ್ನು ತೆಗೆದು ಮಗಳ ಕೈಗಿಟ್ಟನು. ಅವಳ ಬಹುದಿನದ ಕನಸನ್ನು ಈಡೇರಿಸಿದ ಖುಷಿ ತಂದೆಯ ಕಣ್ಣಲ್ಲಿದ್ದರೆ, ಮೊಬೈಲ್ ಇಲ್ಲದೇ ಇಷ್ಟು ದಿನ ತಾನು ಪರದಾಡಿದ ಕಷ್ಟ ಇಂದಿಗೆ ತಪ್ಪಿತೆಂಬ ಆನಂದ ಮಗಳ ಕಣ್ಣಲ್ಲಿ ಕಂಡಿತು.
  ಹೀಗೆಯೆ ಬದುಕು ಸಾಗುತ್ತಿರಬೇಕಾದರೆ, ಬಡತನಕೆ ಕಷ್ಟಗಳೇ ನೆಂಟರು ಎಂಬಂತೆ ಇವರ ಮನೆಯೂ ಸೇರಿದಂತೆ ಅಕ್ಕಪಕ್ಕದ ಕೆಲವರ ಮನೆಗಳು ಅಕ್ರಮವಾಗಿ ನಿರ್ಮಾಣವಾಗಿವೆ ಎಂತಲೂ; ಕೂಡಲೇ ಮನೆಯನ್ನು ಖಾಲಿ ಮಾಡಬೇಕು, ಇಲ್ಲವಾದರೆ ಒತ್ತಾಯಪೂರ್ವಕವಾಗಿ ಖಾಲಿ ಮಾಡಿಸಬೇಕಾಗುವುದು ಎಂಬ ನೋಟೀಸು ಬಂದಿತು. ಕಂತು ಕಂತಿನಲಿ ಅಷ್ಟೋ ಇಷ್ಟೋ ತುಂಬುತ್ತಾ ವೀರುಪಾಕ್ಷಯ್ಯ ತನ್ನ ಜೀವಮಾನದಲ್ಲಿ ಗಳಿಸಿದ ಆಸ್ತಿಯೆಂದರೆ ಅದೊಂದು ಮನೆ. ನೋಟಿಸಿನ ಕುರಿತು ಏನು? ಎತ್ತ? ಎಂದು ಮೂಲ ಮಾಲೀಕನನ್ನು ವಿಚಾರಿಸಲು ಹೋದರೆ ಆತ ನಿನ್ನ ಮಗಳನ್ನು ನನ್ನ ಮಗನಿಗೆ ಲಗ್ನ ಮಾಡಿ ಕೊಟ್ಟರೆ ಎಲ್ಲವನ್ನೂ ಸರಿ ಮಾಡಿಕೊಡುವೆ ಎಂದನು. ಆತನ ಮಗನೋ ಶುದ್ಧ ಪುಂಡ ಪೋಕರಿ. ಅಂತವನಿಗೆ ಮಗಳನ್ನು ಕೊಡುವುದೂ ಒಂದೇ ಹಾಳು ಬಾವಿಗೆ ತಳ್ಳುವುದೂ ಒಂದೇ ಎಂದುಕೊಂಡು ವೀರುಪಾಕ್ಷಯ್ಯ ನಿಟ್ಟುಸಿರು ಬಿಟ್ಟು ಮನೆಗೆ ಬಂದನು. ಇದ್ದೊಂದ ಮನೆಯೂ ಹೋಯ್ತು, ಮಗಳಿಗೆ ಕಂಕಣಭಾಗ್ಯವೂ ಬರದಾಯ್ತು ಎಂತಹ ಜೀವನ ಇದು ಎಂದು ಶಾಂತವ್ವ ತನ್ನ ದೌರ್ಭಾಗ್ಯವ ನೆನೆದು ದುಃಖಿಸಿದಳು.
      ಅದೇ ಊರಿನಲ್ಲಿ ಇಂದಿರಾ ಆವಾಸ ಮನೆಯೊಂದನ್ನು ಕಡಿಮೆ ಬಾಡಿಗೆಗೆ ಪಡೆದು, ಹುಟ್ಟಿಸಿದ ದೇವರು ಹುಲ್ಲು ಮೇಯಿಸ್ತಾನೇನು? ಎಂದು ತಮಗೆ ತಾವೇ ಆತ್ಮವಿಶ್ವಾಸ ತುಂಬಿಕೊಂಡು ಬದುಕುತ್ತಿದ್ದರು. ಒಂದು ವಾರ ಆಗಿರಬೇಕಷ್ಟೇ..ದೀಢೀರಂತ ಪೋಲಿಸ್ ಜೀಪು ಇವರ ಮನೆ ಮುಂದೆ ಬಂದು ನಿಂತಿತು. ಮತ್ತೇನು ಗ್ರಹಚಾರ ಪ್ರಾರಂಭವಾಯಿತೆನ್ನುವಷ್ಟರಲ್ಲಿಯೇ ಇನಸ್ಪೇಕ್ಟರ್ ಒಳಗೆ ಬಂದವನೆ ಮಾಮೂಲೆತ್ತು ಎಂದ. ವೀರುಪಾಕ್ಷಯ್ಯ ಹಾಗೂ ಮಗಳು ವಿಮಲಾ ಮನೆಯಲ್ಲಿರಲಿಲ್ಲ. ಶಾಂತವ್ವಳಿಗೆ ಏನೊಂದೂ ತೋಚಲಿಲ್ಲ. ಎಂತಹುದೆಂದಳು? ಆಗ ಕೋಪೋದ್ರಿಕ್ತನಾದ ಪೋಲಿಸ್ ಎಂತಹುದಾ? ನಿಮಗೆಲ್ಲಾ ದಂಧೆ ಮಾಡಲಿಕ್ಕೆ ಬಿಟ್ಟಿದ್ದೇ ತಪ್ಪಾಯ್ತು. ಪೊಲೀಸ ಸ್ಟೇಶನ್ ಗೆ ಹಾಕಿ ರುಬ್ಬಿದರೆ ಗೊತ್ತಾಗುತ್ತದೆ. ಹ್ಞುಂ! ರೊಕ್ಕಾ ಎತ್ತು ಎಂದ. ಶಾಂತವ್ವಳಿಗೆ ಸೂಕ್ಷ್ಮವಾಗಿ ಅರ್ಥವಾಯಿತು. ಸುಮ್ಮನೆ ಅಡುಗೆಮನೆಗೆ ಹೋದವಳೇ ಚಹಾಪುಡಿ ಡಬ್ಬದಲ್ಲಿ ಮಡಚಿಟ್ಟಿದ್ದ ಹತ್ತು ಹಾಗೂ ಐವತ್ತರ ನೋಟುಗಳನ್ನು ತಂದು ಕೊಟ್ಟಳು. ಎಣಿಸಲೂ ಪುರುಸೊತ್ತಿಲ್ಲದ ಇನಸ್ಪೆಕ್ಟರ್ ಅವಳು ಕೊಟ್ಟ ದುಡ್ಡನ್ನು ಕಿಸೆಕಿಳಿಸಿ ಹೋಗಿಯೇ ಬಿಟ್ಟನು. ಆಮೇಲೆ ತಾವಿರುವ ಏರಿಯಾದ ಕುರಿತು ವಿಚಾರಿಸಲಾಗಿ ಶಾಂತವ್ವಳಿಗೆ ಬೆಂಕಿಯಿಂದ ಬಾಣಲೆಗೆ ಬಿದ್ದಂಗಾಗಿತ್ತು.
ವೀರುಪಾಕ್ಷಯ್ಯನಿಗೆ ಸೂಕ್ಷ್ಮವಾಗಿ ನಡೆದುದನ್ನೆಲ್ಲ ತಿಳಿಸಿ ಮನೆಯನ್ನು ಶೀಘ್ರವಾಗಿ ಬೇರೆ ಕಡೆ ಬದಲಾಯಿಸಲು ಒಪ್ಪಿಸಿದಳು. ವೀರುಪಾಕ್ಷಯ್ಯ ಅದೆಷ್ಟು ಹುಡುಕಿದರೂ ತನ್ನ ಬಜೆಟ್ ಗೆ ಸರಿಹೊಂದುವಂತ ಮನೆ ಸಿಗದಾಯಿತು. ಅನಿವಾರ್ಯವಾಗಿ ಬ್ರೋಕರ್ ನ  ಮೊರೆ ಹೋಗಬೇಕಾಯಿತು. ಇಷ್ಟೆಲ್ಲಾ ನಡೆಯಬೇಕಾದರೆ ಎರಡು ತಿಂಗಳು ಕಳೆದುಹೋಗಿದ್ದವು. ಅದೇ ಪೋಲಿಸಪ್ಪ ಮತ್ತೊಮ್ಮೆ ಬಂದು ಮಾಮೂಲು ವಸೂಲು ಮಾಡಿಕೊಂಡು ಹೋಗಿದ್ದ. 
  ಕೊನೆಗೂ ಒಂದು ಪುಟ್ಟ ಮನೆ ಸಿಕ್ಕಿತ್ತು. ಆ ಮನೆಯ ಅದೃಷ್ಟವೇನೋ ಎಂಬಂತೆ ವಿಮಲಾಗೆ ಒಂದು ಸಂಬಂಧ ಕೂಡಿ ಬಂದಿತು. ಹುಡುಗ ನೋಡಲು ಸ್ಪುರದ್ರೂಪಿಯಾಗಿದ್ದ. ಕೈತುಂಬ ಸಂಬಳ ಅಲ್ಲದಿದ್ದರೂ ಸಂತೃಪ್ತಿಯಿಂದ ಬದುಕಲು ಎಷ್ಟು ಬೇಕೋ ಅಷ್ಟು ಸಂಪಾದಿಸುತ್ತಿದ್ದ. ಹುಡುಗನ ತಾಯಿ ತೀರಿಕೊಂಡು ಒಂದುವರೆ ವರ್ಷ ಆಗಿತ್ತಂತೆ. ಮನೆಯಲಿ ಅಡುಗೆಯ ಸಮಸ್ಯೆ. ಹೀಗಾಗಿ ಮದುವೆಗೆ ಅವರು ತುದಿಗಾಲ ಮೇಲೆ ನಿಂತಿದ್ದರು. ಮೇಲಾಗಿ ವರದಕ್ಷಿಣೆಯ ಡಿಮ್ಯಾಂಡ್ ಕೂಡ ಇರಲಿಲ್ಲ. ನಿಮ್ಮ ಪ್ರೀತಿಗೆ ಏನು ಕೊಡಬೇಕೆಂದಿರೋ ಅಷ್ಟೇ ಸಾಕು ಅಂದಿದ್ದರು. ಇನ್ನೇನು ಬೇಕು? ಮದುವೆಗೆ ತಯಾರಿ ಕೂಡ ಪ್ರಾರಂಭವಾಗಿತ್ತು. ಶಾಂತಾಳು ನೆಮ್ಮದಿಯ ಉಸಿರೆಳೆದುಕೊಂಡು ಈ ಅಲೆಮಾರಿ ಜೀವನದಿಂದ‌ ನನ್ನ ಮಗಳಿಗಾದರೂ ಮುಕ್ತಿ ಸಿಕ್ಕಿತಪ್ಪಾ, ಪುಟ್ಟ ಮನೆ, ಒಪ್ಪುವ ಗಂಡ, ಅತ್ತೆಯಿಲ್ಲದ ಮನೆ, ಇನ್ನಾದರೂ ಮಗಳು ಸುಖವಾಗಿರುತ್ತಾಳೆಂದುಕೊಂಡಳು. ಮದುವೆಗೆ ಲಗ್ನಪತ್ರಿಕೆಯೂ ಪ್ರಿಂಟ್ ಆಗಿ ನೆಂಟರಿಗಷ್ಟು ಹಂಚುವುದೂ ಮುಗಿದಿತ್ತು. ತನ್ನ ಇಷ್ಟದ ಶ್ಯಾಮಯ್ಯ ಮೇಷ್ಟ್ರಿಗೆ  ವಿಮಲಾ ತಾನೇ ಖುದ್ದಾಗಿ ಲಗ್ನಪತ್ರಿಕೆ ಹಂಚಿ ಬಂದಿದ್ದಳು. ಅಷ್ಟೇನೂ ಆಡಂಬರವಲ್ಲದಿದ್ದರೂ ಅಗತ್ಯವಾದುದೆಲ್ಲವನ್ನು ಒಳಗೊಂಡ ವಿವಾಹ ಮಂಟಪ ನೋಡುಗರ ಕಣ್ಮನ ಸೆಳೆಯುತ್ತಿತ್ತು. ಚಂದ್ರಕಾಂತದ ಶಿಲೆಯಂತೆ ವಿಮಲಾಳ ಸೌಂದರ್ಯ ಅಂದು ತುಸು ಹೆಚ್ಚಾಗಿಯೇ ಮಿಣುಗುತ್ತಿತ್ತು. ಮಂಗಳವಾದ್ಯಗಳು ಮೊಳಗುತ್ತಿರಬೇಕಾದರೆ ಎಲ್ಲಿಂದಲೋ ಒಂದು ಅಪಸ್ವರ ಆಕಾಶದ ಸಿಡಿಲಿನಂತೆ ಬಂದೆರಗಿತ್ತು. 
ಮದುವೆಗೆ ಬಂದವರಲ್ಲಿ ವಿಮಲಾಳ ತಾಯಿಯಿಂದ ಮಾಮೂಲು ಪೀಕಿದ್ದ ಇನಸ್ಪೆಕ್ಟರ್ ಕೂಡ ಇದ್ದ. ಆತ ವಿಮಲಾಳ ತಾಯಿಯನ್ನು ಗುರ್ತಿಸಿ, ಹುಡುಗನ ಕಡೆಯವರಿಗೆ ನಿಮಗೆ ಬೇರೆಲ್ಲೂ ಹೆಣ್ಣು ಸಿಗಲಿಲ್ಲವಾ? ಎಂದು ಪ್ರಶ್ನಿಸಿದ್ದ. ಅಲ್ಲಿ ಅಮಾಯಕಳೊಬ್ಬಳ ಚಾರಿತ್ರ್ಯ ವಧೆಯನ್ನು ಆತ ನಿರ್ದಾಕ್ಷಿಣ್ಯವಾಗಿ ಮಾಡಿ ನಕ್ಕಿದ್ದ. ಅಲ್ಲಿಗೆ ಬಡ ಕುಟುಂಬದ ಕನಸಿನ ಗೋಪುರವು ನುಚ್ಚುನೂರಾಗಿತ್ತು. ಬಡ ಹೆಣ್ಣು ಮಕ್ಕಳ ಶೀಲವೆಂದರೆ ಮಂದಿಗೆ ಅಗ್ಗದ ಅರಿವೆ ಇದ್ದಂತೆ ಅನಿಸುತ್ತದೆ. ತಮ್ಮ ನಾಲಿಗೆಯ ಅಲಗಿನಿಂದ ಅದನ್ನು ಸುಲಭವಾಗಿ ಕತ್ತರಿಸಿಬಿಟ್ಟಿದ್ದರು.
ವಿಮಲಾ ಹಸೆಮಣೆ ಮೇಲೆಯೆ ಕುಸಿದು ಬಿದ್ದಿದ್ದಳು. ಹಸೆಮಣೆಯವರೆಗೂ ಬಂದು ಅರ್ಧಕ್ಕೇ ಮುರಿದು ಬಿದ್ದ  ಮದುವೆ ಹೆಣ್ಣನ್ನು ಮುಂದೆ ಅದಾರು ತಾನೆ ಮದುವೆಯಾದಾರು ಎಂಬ ಚಿಂತೆಯು ಶಾಂತಾಳ ಮನಸ್ಸನ್ನು ಅಲ್ಲೋಲ ಕಲ್ಲೋಲವಾಗಿಸಿತ್ತು. ಕಷ್ಟದಲ್ಲಿದ್ದವರ ಮೊರೆತವನ್ನು ಯಾರು ಕೇಳಿಸಿಕೊಳ್ಳಬೇಕು. ಕೇಳಿಸಿಕೊಂಡರೆ ಆ ಪರಮಾತ್ಮನೇ ಕೇಳಿಸಿಕೊಳ್ಳಬೇಕು. ಅಲ್ಲಿಯೇ ನಡೆದುದನ್ನೆಲ್ಲವನ್ನು ನೋಡುತ್ತ ನಿಂತಿದ್ದ ಶಾಮಯ್ಯ ಮೇಷ್ಟ್ರು ವಿಮಲಾಳನ್ನು ಸಂತೈಸಿ, ಅವರ ತಂದೆ ತಾಯಿಗಳಿಗೂ ಸಮಾಧಾನ ಹೇಳಿದರು. ನಿಮ್ಮದೇನೂ ಅಭ್ಯಂತರವಿಲ್ಲದಿದ್ದರೆ ಬಹಳ ದಿನದಿಂದ ನನ್ನ ಮನದಲ್ಲೊಂದು ಆಸೆಯಿದೆ. ಅದೇನೆಂದರೆ ನನಗೂ ಒಬ್ಬನೇ ಮಗ, ವಿಮಲಾಳನ್ನು ಸೊಸೆಯಾಗಿ ತಂದುಕೊಳ್ಳಬೇಕೆಂದಿರುವೆ ಎಂದರು. ಆಪತ್ಭಾಂಧವರಾಗಿ ಆಗಮಿಸಿದ ಮೇಷ್ಟ್ರನ್ನು ಆ ಮುಗ್ಧ ತಂದೆತಾಯಿಗಳು ದೈವಸ್ವರೂಪವೆಂದೇ ಭಾವಿಸಿ ಕೈಮುಗಿದು ಆನಂದಭಾಷ್ಪ ಹರಿಸಿದರು.
ಮೇಷ್ಟ್ರು ಮಗ ವಿಮಲಾಳ ಕೊರಳಿಗೆ ಮೂರುಗಂಟು ಹಾಕುವುದರೊಂದಿಗೆ ಶುಭಂ ಎಂಬ ಪದದೊಂದಿಗೆ ಸಿನೇಮಾದ ಪರದೆ ಆಫ್ ಆಯ್ತು. 
ಪ್ರೀಮಿಯರ್ ಶೋ ನೋಡಲು ಬಂದವರೆಲ್ಲಾ ವೀರುಪಾಕ್ಷಯ್ಯ ಹಾಗೂ ಶಾಂತಾಳ ಪಾತ್ರದಲ್ಲಿ ಅಭಿನಯಿಸಿದವರಿಗೆ ಅಭಿನಂದನೆಗಳನ್ನು ಸಲ್ಲಿಸಿದರು. ವಿಮಲಾಳ ಪಾತ್ರ ಮಾಡಿದವಳು ಮತ್ತೆರಡು ಸಿನೇಮಾಗಳಿಗೆ ಸಹಿ ಮಾಡಿದಳು. ಅಪಸ್ವರ ಫಿಲಂ ಸೆಂಚುರಿ ಬಾರಿಸಿತು.

ಇದೇ ಲೇಖಕರ ಈ ಕತೆಗಳನ್ನೂ ಓದಿ


Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ...