ದೂರದಿಂದ ಕಾಣುವ ಕೋಟೆಯ ದೃಶ್ಯ
ವಿಜಯದಶಮಿಯ ದಿನ ವಿಜಯಯಾತ್ರೆಗೆ ಸಿದ್ದಗೊಂಡು ಹೊರಟಿದ್ದಾಯಿತು. ಮುರಗೋಡ ಮಾರ್ಗವಾಗಿ ಅದರ ಈಶಾನ್ಯಕ್ಕೆ ಹೊರಳಿದರೆ ಅಲ್ಲಿಂದ 9 ಕಿ.ಮೀ ನಲ್ಲಿ ಕಾಣಸಿಗುವುದೇ ಸುಬ್ಬಾಪೂರ.ಸುಬ್ಬಾಪೂರವು ಹಿಂದೆ ಸುಬ್ರಹ್ಮಣ್ಯಪುರವಾಗಿದ್ದು ಕಾಲಾನಂತರದಲ್ಲಿ ಸುಬ್ಬಾಪೂರಾಗಿ ಉಳಿದಿದೆ. ಸುಮಾರು 500 ಜನಸಂಖ್ಯೆಯಿರುವ ಪುಟ್ಟಗ್ರಾಮ. ಈ ಗ್ರಾಮಕ್ಕೆ ಹೋಗುವಾಗ ಮುಂಚೆಯೇ ರಾಮಾಪೂರವೆಂಬ ಇನ್ನೊಂದು ಗ್ರಾಮ ಸಿಗುವುದು. ಅಲ್ಲಿಂದಲೇ ನಮಗೆ ಸುಬ್ಬಾಪೂರದ ಗಿರಿದುರ್ಗ ಕಾಣತೊಡಗುತ್ತದೆ.
ಮದುವೆ ಗಂಡಿಗೆ ತೊಡಿಸಿದ ಭಾಷಿಂಗದಂತೆ ಗುಡ್ಡದ ಮೇಲೆ ನಿಂತ ಐತಿಹಾಸಿಕ ಗಢ ನಮ್ಮನ್ನು ಆಕರ್ಷಿಸುತ್ತದೆ.ಅದನ್ನು ನೋಡಿ ನನಗೆ ಖುಷಿಯ ಜೊತೆಗೆ ಚೂರು ಭಯವೂ ಆಗಿ ನನ್ನ ಗೆಳೆಯನಿಗೆ ಬೈಕ್ ಸ್ಟಾಪ್ ಮಾಡಲು ಹೇಳಿದೆ. "ದೋಸ್ತ ಆ ಗುಡ್ಡಾ ಹತ್ತಾಕ ಆಗತೈತಿಲೋ ನೋಡೋ?" ಎಂದೆ. ಆತನೂ ಮತ್ತೊಮ್ಮೆ ನೋಡಿ "ಲೇ ಬೈಕ ಹೋಗಾಕ ದಾರಿ ಇರತೈತಿ ನಡೀ" ಅಂದ. ನನಗ ಸ್ವಲ್ಪ ಧೈರ್ಯ ಬಂತು. "ಹೌದೋ! ಈ ವಯಸ್ಸಿನ್ಯಾಗ ಈ ಗುಡ್ಡಾ ಹತ್ತಲಿಲ್ಲ ಅಂದ್ರ ಇನ್ನ ಯಾವತ್ತೂ ಹತ್ತಲಿಕ್ಕೆ ಆಗೋದಿಲ್ಲ ನಡೆದಬಿಡು" ಎಂದು ಮತ್ತೆ ಪಯಣ ಮುಂದುವರೆಸಿದವು.
ಸುಬ್ಬಾಪೂರಕೆ ಹೋಗಿ ಸ್ಥಳೀಯರಿಗೆ "ಕೋಟೆ ನೋಡ್ಬೇಕಲ್ರಿ" ಅಂತ ಹೇಳಿದ್ವಿ. ಅವರು "ಹಿಂಗ ಹೋಗ್ರಿ ಸರ್..ಎಲ್ಲಿಂದ ಬಂದೇರಿ? ನೀರ ಬಾಟಲ್ ತುಗೊಂಡ ಹೋಗ್ರಿ" ಅಂತ ಹೇಳಿದ್ರು. ನಮ್ಮ ಹತ್ರ ಒಂದೇ ಒಂದು ನೀರಿನ ಬಾಟಲಿತ್ತು. "ದೋಸ್ತ ಇಬ್ವರೂ ಇದರಾಗ ಅಡ್ಜೆಸ್ಟ್ ಮಾಡ್ಕೊಳ್ಳೋಣು" ಅಂದೆ. ನಿಕ್ಕಂ "ಬ್ಯಾಡ ಬಿಡೋ" ಅಂತ ಒಂದ ಬಿಸಲೇರಿ ಖರೀದಿಸಿದ. ಅಲ್ಲಿದ್ದ ಕೆಲವರು ನಿಮಗೇನ ದಕ್ಕುದಿಲ್ಲ, ಹೋಗಿ ಏನ ಮಾಡ್ತೇರಿ?" ಅಂದ್ರು. ಅವರ ಮಾತಿನ ತಾತ್ಪರ್ಯ ಅರ್ಥ ಆಗಿ "ನಾವು ನಿಧಿ ಹುಡುಕಾಕ ಬಂದಿಲ್ಲ. ಪುಸ್ತಕ ಬರೆಯುವವರು" ಅಂತ ಹೇಳಿದಾಗ ಬಸವರಾಜ ಅನ್ನೋವ್ರು "ನಾನು ಬರ್ತೇನಿ ನಿಮಗ ಗಢಾ ತೋರಸ್ತೇನಿ" ಅಂತ ಹೇಳಿದ್ರು.
ಅದೇ ಊರಿನ ಮಾಜಿ ಗ್ರಾ.ಪಂ.ಸದಸ್ಯರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಕೆಲಸ ಮಾಡಿದ ಬಸವರಾಜವರ ಸಾಥ ದೊರಕಿದ್ದು ನಮ್ಮ ಉತ್ಸಾಹ ಇಮ್ಮಡಿಗೊಳಿಸಿತು. ಅವರೂ ಆ ಗಢಕ್ಕ ಹೋಗಿ ಹತ್ತು ವರ್ಷ ಆಗಿತ್ತಂತ.
ಕಿರಿದಾದ ದಾರಿ, ಗಿಡಗಂಟೆಗಳು ಹೊಸದಾಗಿ ಬಂದ ನಮ್ಮನ್ನ ಮುಟ್ಟಿ ಮುಟ್ಟಿ ಮಾತಾಡಸ್ತಾ ಇದ್ದವು. ಪೂರ ಕಲ್ಲಿನ ಗುಡ್ಡದು. ನೆಲದ ಮಟ್ಟದಿಂದ ಸುಮಾರು ಇನ್ನೂರ ಮೀಟರ ಎತ್ತರ ಇರಬಹುದು. ಹತ್ತುತ್ತಾ ಹೋದಂಗ ಕೋಟೆ ಬಂದು ಎದಿ ಮ್ಯಾಲ ಕುಂತಂಗ ಅನಿಸತೊಡಗಿತು. ಮೂರ್ನಾಲ್ಕು ಬಾರಿ ನೀರು ಕುಡಿದು, ಏದುಸಿರು ಬಿಡುತ್ತಾ ಚಾರಣ ಮಾಡತೊಡಗಿದೆವು.
ಈ ಕೋಟೆ ಕಟ್ಟಿದ ರಾಜಾ ಇಷ್ಟ ಎತ್ತರಕ ಯಾಕ ಕಟ್ಟಿರಬೇಕು ಅಂತ ವಿಚಾರ ಮಾಡುತ್ತಾ ಕೋಟೆ ಸಮೀಪಿಸಿದಾಗ ಮೈಯೆಲ್ಲಾ ಬೆವರ ಮಜ್ಜನವಾಗಿತ್ತು.
ಪ್ರವೇಶದ್ವಾರದ ಮೂಲಕ ಕೋಟೆಯನ್ನು ಒಳಪ್ರವೇಶಿಸಿ ಅಲ್ಲಿಂದ ಕೆಳಗಿನ ವಿಹಂಗಮ ನೋಟವನ್ನು ನೋಡಿದ ತಕ್ಷಣ ಆಯಾಸವೆಲ್ಲಾ ಕರಗಿಹೋಗಿ ಸಾರ್ಥಕ್ಯಭಾವ ಮೂಡಿತು. ಆ ಗುಡ್ಡದ ನೆತ್ತಿಯ ಮೇಲೆ ಬೀಸುವ ಮಂದಾನಿಲದಲ್ಲಿ ಮೀಯುತ್ತಾ ಕೋಟೆಯನ್ನು ವೀಕ್ಷಿಸಿದೆವು. ಪ್ರವೇಶದ್ವಾರದಲ್ಲಿ ಹಿಂದೆ ಬಸವಣ್ಣನ ಮೂರ್ತಿಯಿತ್ತೆಂದೂ ನಿಧಿಗಳ್ಳರು ಅದನ್ನು ಭಗ್ನಗೊಳಿಸಿ ಕೆಳಗಿನ ನಿಧಿಯನ್ನು ತೆಗೆದುಕೊಂಡು ಹೋದರೆಂಬ ಮಾಹಿತಿ ತಿಳಿದು ಮನಸ್ಸಿಗೆ ಬೇಸರವಾಯಿತು. ಬಹುತೇಕ ಐತಿಹಾಸಿಕ ಸ್ಮಾರಕಗಳು ಹಾಳಾಗಿದ್ದೇ ಇದೇ ಕಾರಣಕ್ಕಾಗಿ ಎಂದೆನಿಸಿತು.
ಕೋಟೆಯ ತುಂಬ ಗಿಡಗಂಟೆಗಳದ್ದೇ ಸಾಮ್ರಾಜ್ಯ. ಹಿಂದೆ ಮರಾಠರ ಆಳ್ವಿಕೆಯಿತ್ತಂತೆ. ಇದು ಶಿವಾಜಿ ಮಹಾರಾಜರ ಕೋಟೆಯಾಗಿತ್ತೆಂದೂ ಸ್ಥಳೀಯರ ಅಂಬೋಣ. ಕೋಟೆಯ ಶೈಲಿಯು ಮರಾಠರ ಕೋಟೆಯ ಶೈಲಿಯೊಂದಿಗೆ ಬಹುತೇಕ ಹೊಂದಿಕೆಯಾಗುವಂತಿದೆ ಅಂತೆ. ರಟ್ಟರು ಈ ಕೋಟೆಯ ನಿರ್ಮಾತೃಗಳಾಗಿರಬಹುದೆಂಬ ಊಹೆಯೂ ಇದೆ. ಕೋಟೆಯ ಪಶ್ಚಿಮದ್ವಾರದಲ್ಲಿ ಇನ್ನೂ ಮಜಭೂತಾಗಿ ನಿಂತಿರುವ ಕೋಟೆಯ ಗೋಡೆಯನ್ನು ನೋಡಿದಾಗ ನಮಗೆ ಸವದತ್ತಿಯ ರಟ್ಟರ ಕೋಟೆಯಂತೆಯೆ ಕಾಣುತ್ತದೆ.
ರಟ್ಟರು ತಮ್ಮನ್ನು ತಾವು ರಾಷ್ಟ್ರಕೂಟ ವಂಶದವರೆಂದು ಹೇಳಿಕೊಂಡಿದ್ದಾರೆ. ಕೆಲವು ಇತಿಹಾಸಕಾರರ ಪ್ರಕಾರ ರಟ್ಟರ ಮನೆತನವೇ ಬೇರಾಗಿದ್ದು ಇವರು ಚಾಲುಕ್ಯರ ಸಾಮಂತರಾಗಿ ಆಳ್ವಿಕೆ ಮಾಡಿದ್ದರೆಂಬ ಮಾಹಿತಿಯಿದೆ. ಇಂದು ನಾವು ಕಾಣುವ ರಡ್ಡರು,ರಡ್ಡೇರು ಎಂಬುವರೇ ರಟ್ಟರೆಂಬ ವಾದವೂ ಇದೆ. ಆಗಿನ ಚನ್ನಗಿರಿಯ ಪವಾರ ಮನೆತನದ ಮರಾಠ ನಾಯಕ ದುಂಡೋಜಿವಾಘ ಹಾಗೂ ತಲ್ಲೂರು ದೇಸಾಯಿಯವರನ್ನು ಬ್ರಿಟಿಷರು ಸೋಲಿಸಿ ಕೋಟೆಯನ್ನು ಸಾ.ಶ.1800ರಲ್ಲಿ ಈ ಕೋಟೆಯನ್ನು ತಮ್ಮ ಕೈವಶಮಾಡಿಕೊಂಡರಂತೆ. ಎಂತೆಂಥವರೋ ಆಳಿದ ಕೋಟೆಯಲ್ಲೀಗ ಗಿಡಗಂಟೆಗಳ ಆಳ್ವಿಕೆಯೇ ನಡೆದಿತ್ತೆನ್ನಿ.
ಅವುಗಳೂ ಕೂಡ ನಮ್ಮ ಮೇಲೆ ಆಕ್ರಮಣ ಘೋಷಿಸಿದವರಂತೆ ಮೈಮೇಲೆ ಪ್ರಹಾರ ಮಾಡಿ ತರಚಿ ಗಾಯಗೊಳಿಸಿಯೇ ಕಳುಹಿಸಿದವು.
ಕೋಟೆಯಲ್ಲಿ ನೋಡತಕ್ಕದೇನಾದರೂ ಇದ್ದರೆ ಅದು ನೀರಾವರಿ ವ್ಯವಸ್ಥೆ. ಸುಮಾರು ಇಪ್ಪತ್ತೈದು ಎಕರೆ ವಿಸ್ತಾರ ಇರುವ ಆವರಣದಲ್ಲಿ ಏಳು ಬಾವಿಗಳು ಇಂದಿಗೂ ನಿರ್ದುಂಬಿಕೊಂಡು ಜೀವಂತ ಇವೆ. ಅವುಗಳಲ್ಲಿ ಇಳಿದು ಹೋಗುವ ಮೆಟ್ಟಿಲುಗಳ ವ್ಯವಸ್ಥೆಯನ್ನೂ ಕಾಣಬಹುದು. ಕಾಳುಕಡಿಗಳನ್ನು ಸಂಗ್ರಹ ಮಾಡಲಿಕ್ಕೆ ಮೀಸಲಾದ ಅಂಬಾರಿಗಳನ್ನು ( ಹಗೇವು) ಕಾಣಬಹುದಾಗಿದೆ. ಕೋಟೆಯ ಪೂರ್ವದಲ್ಲಿಯೂ ಒಂದು ದ್ವಾರವಿದ್ದು ಅದು ತುಂಬಾ ಕಡಿದಾಗಿದ್ದು ಈಗ ಬಳಕೆಯಲ್ಲಿಲ್ಲ. ಸರಿಯಾದ ದಾರಿಯಲ್ಲಿ ಬಂದ್ರೆ ಮಾತ್ರ ಕೋಟೆಯನ್ನು ಪ್ರವೇಶಿಸಬಹುದು. ಇಲ್ಲವಾದರೆ ಇಂದಿಗೂ ಅದು ಅಬೇದ್ಯವಾಗಿದೆ. ತೋಪುಗಳಿಗಾಗಿಯೇ ಮದ್ದನ್ನು ಅರೆಯಲು ಉಪಯೋಗಿಸುತ್ತಿದ್ದರೆನ್ನಲಾದ ದೊಡ್ಡ ಬೀಸುಗಲ್ಲನ್ನು ಕಾಣಬಹುದು. ಅದನ್ನು ಪ್ರಾಣಿಗಳ ಸಹಾಯದಿಂದಲೇ ಚಲಾಯಿಸುತ್ತಿರಬೇಕು.
ಕೋಟೆಯ ವಾಯುವ್ಯ ದಿಕ್ಕಿನಲ್ಲಿ ಒಂದು ಬುರುಜು ಇದ್ದು ಅದರೊಳಗೆ ಖಡ್ಗಗಳು ಚಿನ್ನಾಭರಣಗಳಿವೆಯೆಂಬುವುದು ಸ್ಥಳೀಯರ ನಂಬಿಕೆ.
ಒಮ್ಮೆ ಕುರಿಕಾಯುವ ಅಜ್ಜನೊಬ್ಬ ಕೋಟೆಯಲ್ಲಿ ಸಮಯಗಳೆಯಲು ಕಲ್ಲಿನಿಂದ ನೆಲವಗಿಯುತ್ತಾ ಕುಳಿತಿರಬೇಕಾದರೆ ಅದೃಷ್ಟವೆಂಬಂತೆ ಕುಡಿಕೆ ಹೊನ್ನು ದೊರಕಿತಂತೆ. ಹುರುಪುಗೊಂಡ ಅಜ್ಜ ಮನೆಗೆ ತೆಗೆದುಕೊಂಡು ಹೋಗಿ ರಾತ್ರಿ ಮಲಗಿದನಂತೆ. ಆಗ ರಾಕ್ಷಿಯೊಬ್ಬಳು ಅವನ ಮನೆಯಲ್ಲಿ ಪ್ರತ್ಯಕ್ಷಳಾಗಿ ಅವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿತಂತೆ. ಆತ ಮೋಹರಂನಲ್ಲಿ ಅಲಾ ದೇವರ ಪೂಜಾರಿಯಾಗಿರುವುದರಿಂದ ಬದುಕುಳಿದನಂತೆ. ಈಗಲೂ ಸುಬ್ಬಾಪೂರದಲ್ಲಿ ಮುಸ್ಲಿಂ ಬಾಂಧವರ ಒಂದೂ ಕುಟುಂಬವಿಲ್ಲದಿದ್ದರೂ ಇವರೇ ವಿಜೃಂಭಣೆಯಿಂದ ಅಲಾಬ ಆಚರಿಸುತ್ತಾರಂತೆ. ಆದ್ದರಿಂದ ಕೋಟೆಯಿಂದ ಒಂದು ಕಲ್ಲು ತುಕುಡಿಯನ್ನೂ ಇಂದಿಗೂ ಯಾರೂ ಒಯ್ಯುವುದಿಲ್ಲವಂತೆ ಎನ್ನುವ ಪ್ರತೀತಿಯಿದೆಯಂತೆ.
ಒಳ್ಳೆಯದು, ಹೇಗಾದರಾಗಲಿ ನಮ್ಮ ಐತಿಹಾಸಿಕ ಸ್ಮಾರಕಗಳು ಮುಂದಿನ ಪೀಳಿಗೆಗೆ ನೋಡಲಿಕ್ಕೆ ಸಿಕ್ಕರೆ ಸಾಕಲ್ಲವೇ? ಮುಂದೆ ಕಾವಲುಗಾರರು ವಾಸಿಸುತ್ತಿದ್ದರೆನ್ನಲಾದ ಮುದುಕಿ ಮನಿ ಎಂದೇ ಜನಜನಿತವಾದ ಕಿಂಡಿಯನ್ನು ನೋಡಿಕೊಂಡು ಗಚ್ಚು ತಯಾರಿಸುತ್ತಿದ್ದ ಜಾಗವನ್ನು ವೀಕ್ಷಿಸಿ ಪ್ರಾಚೀನರ ಜ್ಞಾನವನ್ನು ಕೊಂಡಾಡಿದೆವು.
ಸುಬ್ಬಾಪೂರದ ಕೋಟೆ ಇಂದಿಗೂ ಬಿಸಿಲು,ಮಳೆಯ, ಸಸ್ಯಶಾಮಲೆಯ ದಾಳಿಯನ್ನು ಎದುರಿಸುತ್ತಾ ವಿಜಯಕ್ಕಾಗಿ ಶ್ರಮಿಸುತ್ತಿರುವಂತೆ ಕಂಡಿತು. ಜೀವಮಾನದಲ್ಲಿ ಒಮ್ಮೆ ಹತ್ತಿಳಿಯಬಹುದಾದಂತಹ ಕೋಟೆಯಿದು. ಇದಕ್ಕೆ ಕಠಾರಿಗಢ ಎಂಬ ಹೆಸರೂ ಉಂಟು. ಬಹುಶಃ ಇಲ್ಲಿ ತಯಾರಿಸುತ್ತಿದ್ದ ಕಠಾರಿಗಳು ಅಷ್ಟು ಪ್ರಖ್ಯಾತಿ ಪಡೆದ್ದಿದ್ದವೆನೋ ಆ ಮೂಲಕ ಕಠಾರಿಗಢ ಎಂಬ ಹೆಸರು ಬಂತೆನೋ ಗೊತ್ತಿಲ್ಲ.
ಭಗ್ನವಾಗಿರುವುದು
ಕೋಟೆಯು ಸಂಪೂರ್ಣ ನಿರ್ಲಕ್ಷ್ಯಗೊಳಪಟ್ಟಿದ್ದು ಪುನರುಜ್ಜೀವನಗೊಳಿಸಿದರೆ ಒಂದೊಳ್ಳೆ ಪ್ರವಾಸಿ ಸ್ಥಳವಾಗಬಹುದು.
ಕೋಟೆಯನ್ನು ಹತ್ತಿ ಇಳಿಯಬೇಕಾದರೆ ಕೈಯಲ್ಲಿರುವ ನೀರಿನ ಬಾಟಲಿಗಳ ಹೊಟ್ಟೆ ಬರಿದಾಗಿತ್ತು. ಒಂದು ವೇಳೆ ನೀವೇನಾದರೂ ನೀರು ಮರೆತುಹೋದರೆ ಅಷ್ಟೇ ಗತಿ. ಇದಕ್ಕೇ ಹಿಂಗಾದರೆ ಮೌಂಟ್ ಎವರೆಸ್ಟ್ ಏರಿದವರ ಶ್ರಮ ನಮ್ಮ ಅರಿವಿಗೆ ಬಂದಿತು.
ಕಠಾರಿಗಢದ ಕೋಟೆಯ ನೆನಪುಗಳು ಸದಾ ಹಸಿರಾಗಿರುತ್ತವೆ.ಜೊತೆಗಾರನಾಗಿ ಬಂದ ಸ್ನೇಹಿತ ನಿಕ್ಕಂ, ಮಾಹಿತಿಯನ್ನು ಒದಗಿಸಿದ ಬಸವರಾಜ ಹಾಗೂ ಆನಂದ ನಾಯ್ಕರ್ ಇವರಿಗೂ ಧನ್ಯವಾದಗಳನ್ನು ತಿಳಿಸಿ ಲೇಖನಕ್ಕೆ ಪೂರ್ಣವಿರಾಮವಿಡುತ್ತಿದ್ದೇನೆ..
ಜೈ ಹಿಂದ್
ಲೇಖಕರು: ಶ್ರೀ ಆನಂದ ಮಾಲಗಿತ್ತಿಮಠ
( ಇತಿಹಾಸದ ಮಾಹಿತಿಯು ಸ್ಥಳೀಯರು ವ್ಯಕ್ತಪಡಿಸಿದ ಮಾಹಿತಿಗನುಸಾರವಿರುತ್ತದೆ)
ಚಾರಣದ ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
👌 ಲೇಖನ ಚನ್ನಾಗಿದೆ
ReplyDelete