Skip to main content

ಸೂಟ್ ಕೇಸ್ @ ಆನಂದ ಮಾಲಗಿತ್ತಿಮಠ ಕತೆ


   ಯಾಕೆ ರಮ್ಯಾ ಹಿಂಗ ಸಿಡಕ್ತಾಯಿದಿಯಾ? ಕುತೂಹಲದಿಂದ ಪ್ರಶ್ನಿಸಿದಳು ಕವಿತಾ.
   ನಾನೆಂದರೇನು? ನನ್ನ ಸ್ಟೇಟಸ್ ಅಂದರೇನು? ಚಿಟಿಕೆ ಹೊಡೆದ್ರೆ ಹತ್ತಾರು ಆಳುಗಳು ನಡುಬಗ್ಗಿಸಿ ನಿಲ್ತಾವೆ. ಒಂದು‌ ಸಣ್ಣ ಮುಗುಳ್ನಗೆಗೆ ನೂರಾರು ಹುಡುಗರು ಗುಲಾಮರಾಗಿ ಶರಣಾಗ್ತಾರೆ...ಅಂತಹುದರಲ್ಲಿ ಆ ಸಂಜಯ್ ನನ್ನ ನೋಡಿದ್ರೂ ನೋಡದಂತೆ ಹೋಗ್ತಾನಲ್ಲಾ ಕೊಬ್ಬು ಆತನಿಗೆ..ನಾನೂ ನೋಡ್ತೇನಿ ಎಷ್ಟ ದಿನಾ ಮುಖಾ ತಿರುಗಿಸಿ ಹೋಗ್ತಾನೋ ಎಂದು ಕೋಪದಿಂದ ಕೆಂಪೇರಿದ ಕೆನ್ನೆಯ ಹುಡುಗಿ ರಮ್ಯಾ ನುಡಿದಳು.
******
ಸಂಜಯ್ ಪಾಪ..ಮಿಡ್ಲ ಕ್ಲಾಸು ಹುಡುಗ. ವಯಸ್ಸಲ್ಲಿ ಲವ್ ಮಾಡಬೇಕು ಅಂದ್ರೆ ದುಡ್ಡಿರಲಿಲ್ಲ. ದುಡ್ಡಿದ್ದಾಗ ವಯಸ್ಸಿರಲಿಲ್ಲ. ಹಾಗೂ ಹೀಗೂ ಅವರಪ್ಪ ಕಷ್ಟಪಟ್ಟು ಡಿಗ್ರಿ ಓದಿಸಿದ್ದರು. ಯಾರೋ _"ಲೇ ಸಂಜ್ಯಾ ಕಾಂಪಿಟೇಟಿವ್ ಎಕ್ಸಾಂ ಕಟ್ಟಲಾ ಏನಾದ್ರೂ ಗೌರ್ಮೆಂಟು ಜಾಬ್ ಆದರೆ ಜೀವನಾ ಸುಧಾರಸ್ತದ" ಅಂದರು. ಈತನೋ ಕಟ್ಟಿಯೇ ಕಟ್ಟಿದ...ಒಂದರ ಮೇಲೆ ಒಂದು. ಎಲ್ಲದರಲ್ಲೂ ಗೋತ. ಈ ಕಾಂಪಿಟೇಟಿವ್ ಎಕ್ಸಾಂ ಕಟ್ಟೋ ರೊಕ್ಕದಾಗ ಎರಡ ಚುಲೋ ಮೂಡಲಗಿ ಎಮ್ಮಿ ಕಟ್ಟಬಹುದಾಗಿತ್ತು, ನಾಕ ಕಾಸ ಆದರೂ ಸಂಪಾದನೆಯಾಗ್ತಿತ್ತು ನಿನ್ನ ಹೆಣಾ ಎತ್ಲಿ ಎಂದು ಹಡದವ್ವ ಹಲಗಿ ಹೊಡದಂಗ ಬೈದಳು. ಎರಡ ದಿನದಾಗ ಆಕಿಗೆ ಈತ ಹಲಗಿ ಹಚ್ಚಿದ. ಎಲ್ಲಾ ಬಿಟ್ಟ...ಜೊತೆಗೆ ಗಡ್ಡಾನೂ. ಸಹವಾಸ ಕೆಟ್ಟಿತು. ಹಾಸಿಗೆ ಯಾವುದೋ ಹೇಸಿಗೆ ಯಾವುದೋ ಅನ್ನದ ಕುಡಕುಡದ ಸಿಕ್ಕಲ್ಲೇ ಬೀಳಾಕತ್ತ. ಅವನ ಚಟಾ ಮದುವೆಗೆ ಮುನ್ನುಡಿ ಬರೀತು. ಮದುವಿಯಂದರ ಮುದುಕರೂ ಹಿಗ್ಗತಾರ ಇನ್ನ ಸಂಜಯದೂ ಬೇರೆಯಿರಲಿಲ್ಲ. ಹಿಗ್ಗಿ ಹೀರೆಕಾಯಿಯಾದ. "ಮದುವಿಯಾಗುವರೆಗಾದರೂ ಕುಡಿಯೋದ ಬಿಡಲೇ" ಎಂದು ಹಿಂಬಾಲಿದ್ದ ಗೆಳೆಯರು ಕುಡಕೋತನ ಹೇಳಿದ್ರು. ಇಂವ ಅಲ್ಪ ತ್ಯಾಗಿಯಾದ.
ಎಲ್ಲೇಲಿ ಅಂತ ಕನ್ಯಾ ಹುಡುಕ್ಯಾಡೋದು? ತಿರುಗಿದಾ ತಿರುಗಿದಾ ಕನ್ಯಾ ಸಿಗದ ಮನದಾಗ ಮರುಗಿದಾ. ಮರುಗ ಕೊರಗಾತು. ಹೋದ ಕಡೆಯೆಲ್ಲಾ ಗೌರ್ಮೆಂಟ್ ಜಾಬ್ ಇದ್ದರ ಕನ್ಯಾ ಕೊಡ್ತೇವಿ ಅಂತ ಬಾಗಿಲು ರಪ್ಪ ಅಂತ‌ ಜಡದ್ರು. ಬುದ್ದನಿಗೆ ಜ್ಞಾನೋದಯವಾಗಲು ತಡವಾಗಿತ್ತೇನೋ ಈತನಿಗೆ ತಡವಾಗಲಿಲ್ಲ. ಮತ್ತೆ ಪುಸ್ತಕ ಹಿಡದ. ಓದಿದ. ಕ್ಲರ್ಕ ಆಗಿಯೇ ಬಿಟ್ಟ. ದುಡ್ಡಿದ್ರೆ ದುನಿಯಾ ಅಂತ ಅರ್ಥಶಾಸ್ತ್ರ ಬೋಧಿಸುವಷ್ಟು  ಅರಿತುಕೊಂಡ.
ಜಡದ ಬಾಗಲ ತಗದ ಕನ್ಯಾಗೋಳು ಇವನ ಮನೆ ಬಾಗಲತನ ಬಂದ್ವು. ಅದರಾಗ ಒಂದನ ಆರಿಸಿ ಅದ್ಧೂರಿಯಾಗಿಯೇ ಲಗ್ನ ಆದ. ಭಾಗ್ಯಕ ಬಂದವಳು ಭಾಗವ್ವ. ಭಾಗವ್ವಳ ಜೊತೆಗೆ ಭೋಗವ್ವ. ಮನೆಯೊಡೆದಳು...ಮೊದಲು ಮನ ಒಡೆದು. 
ಮೊದಲೇ ಸರ್ಕಾರಿ ಆಫೀಸಲ್ಲಿ ಆಯಕಟ್ಟಿನ ಜಾಗದಲ್ಲಿ ಕ್ಲರ್ಕ ಆಗಿದ್ದಾಂವ, ಟೇಬಲ್ ಕೆಳಗೆ ತುಗೋದಿಲ್ಲಾ ಅಂತ ತೀರ್ಮಾನಿಸಿ ಬಿಟ್ಟ. ಟೇಬಲ್ ಮ್ಯಾಲೆಯೇ ವ್ಯವಹಾರ ನಡೆಸಿದ. ಮನದಾಗಿನ ಮನುಷ್ಯತ್ವ ಸಂಹಾರವಾಯಿತು. ಬಡವರ ಕಿಸೆಕತ್ತಿದ ಜಿಗಣಿಯಾದ. ಹೀರಿದ ಹೀರಿದ ಚಟವಾಯಿತು.ಹೀರಣ್ಯಾಕ್ಷನಾದ. 
ಯಾವುದೋ ಗಳಿಗೆಯಲಿ ರಮ್ಯಳ ಸೌಂದರ್ಯದೊಳಗೆ ಸೆರೆಯಾದ. ಲಾಭವಿಲ್ಲದೇ...ಶೌಚಕ್ಕೂ ಹೋಗದ ವ್ಯವಹಾರ ಬುದ್ದಿಯಂವ ಸುಲಭವಾಗಿ ಪ್ರೀತಿ ಮಾಡ್ಯಾನೆ? ರಮ್ಯಾಳನ್ನು ತಿರಸ್ಕರಿಸುವಂತೆ ನಟಿಸಿದ. ಸೂಟಕೇಸಲ್ಲಿ ಅವಳು ತುಂಬಿ ಪ್ರೀತಿ ಕಳುಹಿಸಿದಳು. ಈತ ಸ್ವೀಕರಿಸಿ ಗುಲಾಮನಾದ.
*****
"ಏನ್ರೀ ನಿಮಗೇನು ಕಡಿಮೆ ಮಾಡೇನಿ?" ಅಂತ ಹೆಂಡ್ತಿ ಕಣ್ಣೀರಾದಳು. ಅವನೂ ಕಡಿಮೆಯೇವನಲ್ಲ, ಹೆಂಡ್ತಿಯ ಕೊರಳಲ್ಲಿ ತೂಗಾಡುವ ಚಿನ್ನದ ದಾಸ್ತಾನು ತೋರಿಸಿ ನಿನಗೂ ನಾನು ಕಡಿಮೆ ಮಾಡಿಲ್ಲವೆಂದನು. ರಮ್ಯಾ ಕೊಟ್ಟ ಸೂಟಕೇಸ್ ಅವಳೆಡೆಗೆ ಸರಿಸಿ ರಮ್ಯಾಳೊಂದಿಗೆ ಸರಸದಾಟವನ್ನು ಸಾನಂದವಾಗಿ ಮುಂದುವರೆಸಿದ. ದಿನದ ಇಪ್ಪತ್ನಾಲ್ಕು ತಾಸುಗಳೂ ಅವರಿಬ್ಬರ ಪ್ರೇಮದಾಟಗಳಿಗೆ ಸುಸ್ತಾಗಿ ಹೋದವು.
ಇತ್ತ ಲಕ್ಷಗಟ್ಟಲೇ ದುಡ್ಡು ಕಂಡ ಅವನ ಹೆಂಡತಿ ಲಕ್ಷ್ಯಗೊಟ್ಟು ಮೊಬೈಲ್ ನಲ್ಲಿ ಅದೇನೋ ಹುಡುಕಾಡುತ್ತಿದ್ದಳು. ಪಾಸವರ್ಡ ಅಂತ ಸೇವ ಆದ ನಂಬರೊಂದಕ್ಕೆ ರಿಂಗಾಯಿಸಿದಳು. ಆ ಕಡೆಯಿಂದ ಅವಳ ಹಳೆಯ ಗೆಳೆಯ ದಂಗಾಗಿ ಹಲೋ ಎಂದನಷ್ಟೇ...ವರುಷಗಟ್ಟಲೇ ತಂಗಳಾಗಿದ್ದ ಪ್ರೀತಿಯನ್ನೇ ಪುನಃ ಬೇಯಿಸಿಕೊಂಡರು. 
   ಕೆಲವು ದಿನಗಳ ನಂತರ ಚಳಿಗಾಲ ಒತ್ತರಿಸಿ ಬಂದಿತು. ಅವಳು ಸೋಗೆ ನವಿಲಾದಳು. ಅವನು ಗರಿಗಳಲಿ ಸುಳಿದಾಡುವ ಗಾಳಿಯಾದ. ಅವರು ಕಾಲ್ಕಿತ್ತರು. ಸೂಟಕೇಸಿನ ಹೊಟ್ಟೆ ಖಾಲಿಯಾಗುವರೆಗೂ ಜಾಲಿಯಾಗಿ ಸುತ್ತಾಡಿದರು. ಮುಂದೇನು? ಹಳೆ ಪ್ರಿಯಕರ ಕರ ವಸೂಲಿ ಮಾಡುವಂತೆ ಅವಳನ್ನು ಪುಸಲಾಯಿಸಿದ. ಗಂಡನ ಮೇಲೆ ಜೀವನಾಂಶದ ಕೇಸ್ ಬಿತ್ತು. ಲಾಯರ್ ಅವಳಿಗೆ ಗಂಡನಿಂದ ಕನಿಷ್ಠ ಇಂತಿಷ್ಟು ಕಂತೆ ಹಣ ನೀಡಿಸಿಯೇ ತೀರುವೆನೆಂದು ಬಾಯ್ತೆಗೆದ..ಜೊಲ್ಲು ಸುರಿಯಿತು. ಅವಳು ಕಂತೆ ನೋಟು ತೆಗೆದು ಬಾಯಿಗೆ ತುರುಕಿದಳು ನಿಂತಿತು. ಕೋರ್ಟನಲ್ಲಿ ಕೇಸು ನಿಂತಿತು.
ವಾದಗಳು ಪ್ರತಿವಾದಗಳು ಸುಳ್ಳಿನ ಚಕ್ರವ್ಯೂಹಗಳು...ಯಾರೂ ಅಭಿಮನ್ಯುವಾಗಲೊಲ್ಲರು. ತೀರ್ಪಿನ ದಿನ ನ್ಯಾಯಾಧೀಶನ ಮನೆ ಮುಂದೆ ಅನ್ಯಾಯವಾಗಿ ಅನಾಮಿಕನೊಬ್ಬ ಹಲ್ಗಿಂಜಿ ನಿಂತಿದ್ದ. ಅವನ ಕೈಯಲ್ಲೊಂದು ಸೂಟಕೇಸಿತ್ತು.
*****
ಸಂಜಯ್ ತೋಟದಲ್ಲಿ ಹೂವಿನಿಂದ ಹೂವಿಗೆ ಹಾರುವ ಚಿಟ್ಟೆಗಳ ನೋಡಿ ಮತ್ಸರಪಟ್ಟ. ರಮ್ಯಾಳ ಬಿಟ್ಟ. ಸೂಟಕೇಸ್ ಕೊಟ್ಟ. ಅದು ಅವಳು ಕೊಟ್ಟಿದ್ದಕಿಂತಲೂ ಎರಡುಪಟ್ಟು ದೊಡ್ಡದಾಗಿತ್ತು ಗಾತ್ರದೊಂದಿಗೆ ಭಾರದಲ್ಲಿಯೂ..
ಯಾರೋ ಅಮಾಯಕ, ರೈತರಿಂದ ಸಾವಿರ ರೂಪಾಯಿ ಲಂಚ ತೆಗೆದುಕೊಳ್ಳುವಾಗ ಸಿಕ್ಕಿಬಿದ್ದು ಆರು ತಿಂಗಳ ಸೆರೆವಾಸವಾಯಿತು ಎಂಬ ಸುದ್ದಿ ಓದಕೊಂತ ಸಂಜಯ್ ಸೆರೆಯ ಗ್ಲಾಸಿಗೆ ಸಂಜಿಮುಂದ ಸೆರೆಯಾಳಾಗಿ ಕುಳಿತಿದ್ದ. ಮುಂದೆ ತನಗೂ ಇಂತಹ ಪರಿಸ್ಥಿತಿ ಬರಬಾರದಂತೆ ಎಚ್ಚರಿಕೆ ವಹಿಸಬೇಕು ಎಂದುಕೊಳ್ಳುವಷ್ಟರಲ್ಲಿಯೇ ಮತ್ತಿನಿಂದ ಎಚ್ಚರತಪ್ಪಿ ಕೆಳಗೆ ಬಿದ್ದಿದ್ದ.
ನಿನ್ನ ಹೆಂಡತಿ ಯಾವುದೋ ಪರಪುರುಷನೊಂದಿಗೆ ಇದ್ದಳೆಂದು ಪರಿಚಯಸ್ಥ ಸಮಾಜ ಸುಧಾರಕರೊಬ್ಬರು ಸಂಜಯನ ಕಿವಿಕಚ್ಚಿದರು. ಆ ಸುದ್ದಿ ಕೇಳಿ ಇವನ ಗಂಡಸ್ತುತನವೇ ಅಪ್ಪಚ್ಚಿಯಾದಂತೆನಿಸಿತು. ಕೊಚ್ಚಿ ಹಾಕಿಬಿಡಬೇಕಿವಳ ಎಂದು ಕೊಂಡವನಿಗೆ ಕಂಡಿದ್ದು ತಿಜೋರಿಯಲ್ಲಿ ತುಂಬಿದ್ದ ಸೂಟಕೇಸು. ಫೋನಾಯಿಸಿ ಹೆಂಡ್ತಿಯ ಕೊಲೆಗೆ ಸುಫಾರಿಕೊಟ್ಟ....ಅವಳ ಸಮಾಧಿ ಮುಂದೆ ಎರಡೇ ಎರಡು ಹನಿ ಕಣ್ಣೀರುಬಿಟ್ಟ.
ಮತ್ತೆ ಮದುವೆಯಾಗುವುದಾಗಿ ಮಧ್ಯರಾತ್ರಿಯಲ್ಲಿ ವಿರಹ ತಾಳದೇ ಘೋಷಿಸಿಬಿಟ್ಟ. ಹಣದಾಸೆಗಾಗಿ ಹೆಣ್ತನವನು ಮಾರಿಕೊಳ್ಳುವವರಿಗೆ ಜೀವನದ ಮಾರುಕಟ್ಟೆಯಲ್ಲಿ ಕೊರತೆ ಏನೂ ಇರಲಿಲ್ಲ. ಸೌಂದರ್ಯದಲ್ಲಿ ರತಿಯಾದವಳ ವರಿಸಿದ. ಈಗ ಅವನಿಗೆ ಗುಣವರಸುವ ಹುಚ್ಚು ಇರಲಿಲ್ಲ. ಹೊಸದಾಗಿ ಮದುವೆಯಾದವಳಿಗೂ ಇವನ ಗುಣದ ಅವಶ್ಯಕತೆಯಿರಲಿಲ್ಲ. ಮದುವೆಯಾಯಿತು...ವಿರಹ ತಪ್ಪಿತು. ರಸದುಂಬಿದ ಕಬ್ಬು ಅವಳಾದಳು..ಈತ ಬರಿ ಹಿಂಡುವ ಗಾಣವಾದ. ಕೆಲವೇ ವಾರಗಳಲ್ಲಿ ಅವಳು ಸಿಪ್ಪೆಯಾದಳು...ಸಂಸಾರ ಸಪ್ಪೆಯಾಯಿತು. ಈತನದೋ ಕಪ್ಪೆಯ ಬಾಳು. ಜಿಗಿಯುವ ಚಾಳಿ. ಈ ಭಾರಿ ಸಂಸಾರವೆಂಬ ಕೊಳದಿಂದ ರಾಜಕೀಯದ ಕೆಸರಿಗೆ ಜಿಗಿದ. ಜನ ಜೈಕಾರ ಹಾಕಿದರು, ಹೊಸ ಮಡದಿ ಶಾಪ ಹಾಕಿದಳು.
****
ಚುನಾವಣೆಯ ಗಿಮಿಕ್ಕುಗಳನ್ನು ಕಲಿತುಕೊಂಡ. ಮೊಸಳೆ ಕಣ್ಣೀರೇ ಬಂಡವಾಳವಾಯಿತು. ಕುಣಿದ...ಕುಣಿಸಿದ. ಬಟ್ಟೆ ತೊಟ್ಟು ತಿರುಗಿದ..ಕತ್ತಲಲಿ ಬೆತ್ತಲಾದ. ಕಾಲು ಮುಗಿದ, ಕೆಲವು ಕಾಲು ತೆಗೆದ, ಕೈ ಮುಗಿದ, ಕತ್ತಲಲ್ಲಿ ಕೈ ಮುರಿಸಿದ, ಗೆದ್ದು ಶಾಸಕನಾದ. ಹಗಲಿನಲ್ಲಿ ಶಾಸಕ ರಾತ್ರಿಯಲ್ಲಿ ಸ್ತ್ರೀ ಸಖ. ರಾಜಕಾರಣವನ್ನು ಪ್ರೇಮಕಾರಣವಾಗಿಸಿದ. ನ್ಯೂಸ್ ನಲ್ಲಿ  ಸ್ತ್ರೀಲೋಲನ ರಾಸಲೀಲೆ ಲೀಲಾಜಾಲವಾಗಿ ಹರಿದಾಡಿತು. ಚಾನಲ್ ಮುಖ್ಯಸ್ಥನ ಮುಂದೆ ಸೂಟಕೇಸ್ ಚೆಲ್ಲಿದ. ಎರಡು ದಿನ ಚಾನೆಲ್ಲೇ ಬಂದ್ ಆಯಿತು. ಇವನ ಕರಾಮತ್ತುಗಳು ಪುನಃ ಚಾಲನೆಯಾದವು.
ಖಾದಿ ತೊಟ್ಟು ಕಣಕ್ಕಿಳಿದಾಗ ಮುಂದೆ ಗಾಂಧಿಯಿರುತ್ತಿದ್ದ‌ ಮುಖದಲ್ಲಿ ಶಾಂತಿ ಮನಸ್ಸಿನಲ್ಲಿಯೂ ತಾ.ಪಂ.ಸದಸ್ಯೆ ಶಾಂತಿ.
 ಧರ್ಮ ಧರ್ಮಗಳ ನಡುವೆ ತನಗಿರುವ ದ್ವೇಷಗಳನು ಜನರೆದರು ವಾಂತಿ ಮಾಡುತ್ತಿದ್ದ. ಅದೇ ವಾಂತಿಯನೇ ತೀರ್ಥವೆಂದು ಪಾನ ಮಾಡುವ ಜನರಿದ್ದರೂ ಅವರ ನಡುವೆ ವಿರೋಧಿಗಳ ವೋಟು ಪಡೆಯುವುದೂ ತನ್ನ ಜನ್ಮಸಿದ್ದ ಹಕ್ಕು ಎಂದು ಭಾವಿಸಿಕೊಂಡ. ವೋಟು ಕೇಳಲು ಹೋದಾಗ ಬಹುತೇಕರು ಹೊಸರಾಜಕಾರಣಿಯ ಕಿಸೆ ನೋಡತೊಡಗಿದರು. ನೋಟೆಸೆದ... ಅವರ ನೋಟಗಳು ಇವನ ಮುಖ ನೋಡಿದವು. ಚುನಾವಣೆಗಳಲ್ಲಿ ಅವು ವೋಟಾಗಿ ಪರಿಣಮಿಸುತ್ತಿದ್ದವು. ಐದು ವರುಷಕ್ಕೊಮ್ಮೆ ಯಜ್ಞ ನಡೆಯುವುದೇ....ಅಂದು ಸಾಮಾನ್ಯರು ಇವನನ್ನು ಸುಲಿಗೆ ಮಾಡಿದರೆ, ಐದೂ ವರುಷವೂ ಈತ ಅವರನ್ನು ಸುಲಿಗೆ ಮಾಡುತ್ತಿದ್ದ. ಕೆಲವು ಊರುಗಳಲ್ಲಿಯ ಬೋರವೆಲ್ ಗಳನ್ನು ಬಂದು ಮಾಡಿಸಿ ಕೃತಕ ಬರಗಾಲ ತಂದ. ಕೆರೆ ತೋಡಿಸಿ ಸರ್ಕಾರದ ಖಜಾನೆಗೆ ಕನ್ನ ಹಾಕಿದ...ಜನರ ಕಣ್ಣಿಗೆ ನೀರು ತಂದ ಭಗೀರಥನಾದ. ಹೂಗಳನ್ನು ತೂರಿ ಹಾರ ಹಾಕಿ ಜೈಕಾರ ಕೂಗಿದರು.
ಹಣದಾಸೆಯೂ ಬಳ್ಳಿಯಂತೆ ಬೆಳೆಯತೊಡಗಿತು. ಆಸರೆಗಾಗಿ ಪರದೇಸಿಗಳ ಸಹವಾಸ ಬೆಳೆಸಿದ..ಕಬ್ಬಿನ ತೋಟದ ನಡುವೆ ಗಾಂಜಾ ಬೆಳೆಸಿದ. ರಫ್ತು ಮಾಡಿದ. ಮತ್ತಿನ ಸಾಮಗ್ರಿಗಳನ್ನು ಮುತ್ತಿನ ಗೊಂಬೆಗಳಲ್ಲಡಗಿಸಿ ಆಮದು ಮಾಡಿಕೊಂಡ. ಗೊಂಬೆಯ ವ್ಯಾಪಾರಿಯಾದ...ಸರ್ಕಾರವನ್ನೂ ಗೊಂಬೆಯಾಗಿಸಿದ. ಕುಳಿತೆಂದರೆ ಕುಳಿತುಕೊಳ್ಳಬೇಕು, ಮಲಗೆಂದರೆ ಮಲಗಬೇಕು ಇಂವ ಸೂತ್ರಧಾರ ಸರ್ಕಾರ ಗೊಂಬೆ. ಗೋಮಾಳಗಳನ್ನು ತನ್ನ ಹೆಸರಿಗೆ ವರ್ಗಾಯಿಸಿಕೊಂಡು ಭೂ ಒಡೆಯನಾದ. ಪರದೇಸಿಗಳಿಗೆ ಮಾರಿದ. ಅದೇ ಹಣ ತಂದು ದೇಸಿಗಳಿಗೆ ಬಿಸ್ಕತ್ ರೀತಿ ಎಸೆದ. ಅಗಷ್ಟ ಹದಿನೈದಕ್ಕೆ ಮೇರಾ ಭಾರತ ಮಹಾನ್ ಎಂದು ಬೊಬ್ಬಿರಿದ.
******
       ಸಂಜಯನ ಮದನನಾಗುವ ಆಸೆ ಇನ್ನೂ ದಮನವಾಗಿರಲಿಲ್ಲ. ಹೌದು ಮನದೊಳಗಿನ ಶಾಂತಿ ಕಾಡುತ್ತಿದ್ದಳು. ಅವಳೂ ರಾಜಕಾರಣದಲಿ ಪಳಗಿದವಳೇ...ಪ್ರಾರಂಭದಲ್ಲಿ ನಕ್ಷತ್ರವಾಗಿ ಇವನ ಕಣ್ಣಿಗೆ ಬಿದ್ದು...ಬರುಬರುತಾ ಹತ್ರವಾಗಿದ್ದಳು. ತಾಲ್ಲೂಕಾ ಪಂಚಾಯತ್ ಅಧ್ಯಕ್ಷಳಾಗಲು ಇವನ ಹತ್ತಿರ ಸೂಟಕೇಸು ಪಡೆದು ಅವನ ಮುಂದೆ ಹುಟ್ಟುಡುಗೆಯಲಿ ಕುಣಿದಿದ್ದಳು. 
   ಮನುಷ್ಯನ ದುರಾಸೆಗೆ ಸೀಮೆ ಎಲ್ಲಿಯದು..ಮುಂದೆ ಜಿ.ಪಂಚಾಯತ್ ಅಧ್ಯಕ್ಷಳಾದಳು. ಸಂಜಯನ ಕ್ಷೇತ್ರದಲ್ಲಿಯೇ ಶಾಸಕಿಯಾಗಬೇಕೆಂದು ಬಯಸಿದಳು. ಅವನ ಸಹಾಯ ಯಾಚಿಸಿದಳು. ಆತ ಕೈ ಎತ್ತಿದ. ಅವಳು ಆತ ಕೊಟ್ಟ ಸೂಟಕೇಸನ್ನೇ ಸುಫಾರಿ ಕಿಲ್ಲರ್ ನತ್ತ ಸರಿಸಿದಳು. ಅವರು ಸಂಜಯನನ್ನು ಸುಮಹೂರ್ತ ನೋಡಿ ಆ್ಯಕ್ಸಿಡೆಂಟ ನಲ್ಲಿ ಎತ್ತಿ ಬಿಟ್ಟರು. ಸಾಯುವ ವೇಳೆಗೆ ಆತನ ಮನಸ್ಸು ತನ್ನ ತಾಯಿಯನ್ನು ನೆನೆಯಿತು. ಸುತ್ತಲೂ‌ ಗಳಿಸಿದ ಸೂಟಕೇಸುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಶಾಂತಿಯು ಅವನ ಕ್ಷೇತ್ರದ ಜನತೆಗೆ ಸಮಾಧಾನ ಮಾಡಿಕೊಳ್ಳಿ ಎಂದು ಕೈಮುಗಿದು ಕಣ್ಣೀರಿಟ್ಟಳು. ಅವರು ಅವಳಿಗೆ ವೋಟನಿತ್ತರು. ಮತ್ತವಳಾಟ ಶುರು...ಸೂಟ..ಕೇಸ್.

Comments

ಇವುಗಳನ್ನೂ ಓದಿ

ವರ್ಧನ ಸಾಮ್ರಾಜ್ಯದ ಇತಿಹಾಸ

ವರ್ಧನ ಸಾಮ್ರಾಜ್ಯದ ಇತಿಹಾಸ ಗುಪ್ತ ಸಾಮ್ರಾಜ್ಯದ ಅವನತಿಯ ನಂತರ ಉತ್ತರ ಭಾರತದಲ್ಲಿ ಅನೇಕ ಚಿಕ್ಕ ಚಿಕ್ಕ ಸಂಸ್ಥಾನಗಳು ಸ್ಥಾಪಿಸಲ್ಪಟ್ಟವು. ಅವುಗಳಲ್ಲಿ ವರ್ಧನ ಸಾಮ್ರಾಜ್ಯವೂ ಒಂದು. ಈ ಸಾಮ್ರಾಜ್ಯದ ಸ್ಥಾಪಕ ಪ್ರಭಾಕರ ವರ್ಧನ. ಅವನ ರಾಜಧಾನಿ ಥಾನೇಶ್ವರ. ಹೀಗಾಗಿ ಇವರನ್ನು ಥಾನೇಶ್ವರದ ವರ್ಧನರೆಂದೂ ಕರೆಯುತ್ತಿದ್ದರು. ಪ್ರಭಾಕರ ವರ್ಧನ ಶಕ್ತಿಶಾಲಿಯೂ ಶೂರನೂ ಆಗಿದ್ದನು. ಆತನಿಗೆ ರಾಜವರ್ಧನ, ಹರ್ಷವರ್ಧನ ಹಾಗೂ ರಾಜಶ್ರೀಯೆಂಬ ಮೂವರು ಮಕ್ಕಳಿದ್ದರು. ಪ್ರಭಾಕರ ವರ್ಧನನ ಮರಣದ ನಂತರ ರಾಜವರ್ಧನನು ಪಟ್ಟಕ್ಕೆ ಬಂದನು. ಆದರೆ ಧುರ್ಧೈವದಿಂದ ಆತನ ಕೊಲೆಯಾಗುತ್ತದೆ. ಹೀಗಾಗಿ ಹರ್ಷವರ್ಧನನು ಕ್ತಿ.ಶ.606 ರಿಂದ ಕ್ರಿ.ಶ 647 ರವರೆಗೆ ರಾಜ್ಯಭಾರ ಮಾಡುತ್ತಾನೆ.  ಹರ್ಷವರ್ಧನನು ಮಾಳ್ವ ಹಾಗೂ ಕನೋಜದ ಮೇಲೆ ದಂಡೆತ್ತಿ ಹೋಗಿ ಸದೆಬಡಿಯುತ್ತಾನೆ.ಹರ್ಷವರ್ಧನನ ತಂಗಿ ರಾಜಶ್ರೀಯನ್ನು ಮೌಖೇರಿಯ ಗೃಹವರ್ಮನಿಗೆ ವಿವಾಹ ಮಾಡಿ ಕೊಡಲಾಗಿರುತ್ತದೆ. ಮಾಳ್ವದ ದೇವಗುಪ್ತನು ಗೃಹವರ್ಮನನ್ನು ಕೊಲೆಗೈದು, ರಾಜಶ್ರಿಯನ್ನು ಬಂಧನದಲ್ಲಿಟ್ಟಿರುತ್ತಾನೆ. ಇದನ್ನು ಸಹಿಸದ ಅಂದಿನ ರಾಜ ರಾಜವರ್ಧನನು ಆತನ ಮೇಲೆ ದಂಡೆತ್ತಿಹೋಗಿ ಸೋಲಿಸಿರುತ್ತಾನೆ. ಮುಂದೆ ಗೌಡ ದೇಶದ ಶಶಾಂಕನು ಮಿತ್ರನ ವೇಷ ಧರಿಸಿ ಬಂದು ರಾಜವರ್ಧನನ ಕೊಲೆ ಮಾಡುತ್ತಾನೆ. ಹರ್ಷವರ್ಧನ ಹರ್ಷವರ್ಧನನು ಬಲುಶಕ್ತಿಶಾಲಿ ಸಾಮ್ರಾಟನಾಗಿದ್ದು ಸುಮಾರು 40 ವರ್ಷಗಳ ಕಾಲ ಆಳ್ವಿಕೆ ನಡೆಸಿದ. ಆತನ ಸಾಮ್ರಾಜ್ಯವು ಉತ್ತರದಲ...