ಶಿವಾನಂದ ಉಳ್ಳಿಗೇರಿ ಅವರ ಅವ್ವ ಮತ್ತು ಆಲದ ಮರ ಕವನ ಸಂಕಲನವು ಒಂದೇ ಗುಕ್ಕಿನಲ್ಲಿ ಓದಿಸಿಕೊಂಡು ಹೋಗುತ್ತದೆ. ಅಂದದ ಮುಖಪುಟ ವಿನ್ಯಾಸ ಹಾಗೂ ಒಳಪುಟಗಳಲ್ಲಿ ಚಂದನೆಯ ಚಿತ್ರಗಳು ಓದುಗರ ಮನಸೆಳೆಯುತ್ತವೆ. ಅವ್ವನ ಮೇಲಿರುವ ಅವರ ಅತಿಯಾದ ಪ್ರೀತಿಯು ಕಾವ್ಯ ರೂಪವನ್ನು ಪಡೆದಿದೆ.
ಶಿವಾನಂದ್ ಉಳ್ಳಿಗೇರಿ ಅವರ ಬಹಳಷ್ಟು ಕವಿತೆಗಳಲ್ಲಿ ತಮ್ಮನ್ನು ತಾವೇ ಸಂತೈಸಿಕೊಂಡು ಸಾಗುವ, ಬದುಕಿಗೆ ಪ್ರೇರಣೆ ಆಗಬಲ್ಲ, ಬದುಕಿನ ಬಗ್ಗೆ ಆಶಾಕಿರಣ ಮೂಡಿಸಬಲ್ಲ ಸಾಲುಗಳನ್ನು ಬರೆದಿದ್ದಾರೆ.
ಕವಿಯ ಹೃದಯದ ತುಮುಲಗಳನ್ನು ಅವರ ಅವ್ವ ಮತ್ತು ಆಲದ ಮರ ಕಾವ್ಯ ಸಂಕಲನದಲ್ಲಿ ಕಾಣಬಹುದು. ಒಮ್ಮೆ ಬರಗಾಲಕ್ಕೆ ಕವಿಯ ಹೃದಯ ಮರುಗಿದರೆ ಮತ್ತೊಮ್ಮೆ ಬಿರುಸಾಗಿ ಸುರಿಯುವ ಮಳೆಯ ಕುರಿತು ಅವರ ಭಾವ ಕಾವ್ಯ ಝರಿಯಾಗಿ ಹರಿಯುತ್ತದೆ.
ಪ್ರೀತಿ ಇಲ್ಲದೆ ಕವಿತೆ ಸಾಧ್ಯವಿಲ್ಲ ಎನ್ನುವಂತೆ ಪ್ರಸ್ತುತ ಸಂಕಲನದಲ್ಲಿ ತಮ್ಮ ಪ್ರೇಯಸಿಯನ್ನು ನೆನಪಿಸಿಕೊಳ್ಳದೆ, ಅವಳ ಸುತ್ತ ಕವಿತೆ ಕಟ್ಟದೆ ಇರಲಾಗದೆ ಶಿವಾನಂದರವರು ಸಹಜವಾಗಿಯೇ ಪ್ರೀತಿಯ ಸಾಲುಗಳನ್ನು ಬರೆಯುತ್ತಾರೆ. ಅವ್ವನ ರೂಪವೇ ಅಕ್ಕ ಎನ್ನುವುದನ್ನು ಅವರು ಕವಿತೆಯಲ್ಲಿ ಅಕ್ಕನ ಜೊತೆ ಒಡನಾಡಿದ ಸಂದರ್ಭಗಳನ್ನು ಸೆರೆಹಿಡಿಯುತ್ತಾರೆ. ಅಪ್ಪನ ಪ್ರೀತಿಯಿಂದ ವಂಚಿತರಾದ ತಮ್ಮ ಮನದ ಆರ್ತನಾದವನ್ನು ಅಪ್ಪ ಎಂಬ ಕವಿತೆಯಲ್ಲಿ ಓದುಗರ ಎದೆಗೆ ಆಪ್ತವಾಗಿ ಇಳಿಸಿ ಬಿಡುತ್ತಾರೆ.
ಮೊದಲ ಕವನ ಸಂಕಲನದ ಕೆಲವು ಕವಿತೆಗಳು ಓದುಗರನ್ನು ಚಿಂತನೆಗೆ ಹಚ್ಚುತ್ತವೆ. ಪ್ರಸ್ತುತ ಮೊಬೈಲ್ ಬಳಕೆಯಿಂದ ಆಗುವ ದುಷ್ಪರಿಣಾಮಗಳಿಗಾಗಿ, ಜಾಗತಿಕ ತಾಪಮಾನ ಏರಿಕೆಗೆ ಕವಿ ಮರುಗುವುದುರೊಂದಿಗೆ ವೈಯಕ್ತಿಕ ಬದುಕಿನ ತುಮುಲ ತಲ್ಲಣಗಳಲ್ಲಿ ಇಲ್ಲಿ ಕಾವ್ಯವಸ್ತು ಉಸಿರಾಡುತ್ತಿದೆ. ಅವ್ವ ಮತ್ತು ಆಲದ ಮರ ಸಾಹಿತ್ಯಲೋಕದಲ್ಲಿ ಅಮರ.
ಅವರ ಮುಂದಿನ ಸಾಹಿತ್ಯ ಪಯಣಕೆ ಶುಭವಾಗಲಿ.
ಶ್ರೀ ಆನಂದ ಮಾಲಗಿತ್ತಿಮಠ
ಸಾಹಿತಿಗಳು ,ಬೈಲಹೊಂಗಲ
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ