ಆಗಾಗ ಕವಿಗೋಷ್ಠಿಯಲ್ಲಿ ಭಾಗವಹಿಸುವುದು ನನ್ನ ಹವ್ಯಾಸ. ನನ್ನ ಈ ಹವ್ಯಾಸವೇ ನನ್ನಾಕೆಗೆ ಚಟವಾಗಿ ಕಾಣುತ್ತದೆ ಎಂಬುವುದೇ ವಿಪರ್ಯಾಸ. ಮುಂಜಾನೆ ಅರಳಿದ ಹೂವಿನ ಮುಖದಲ್ಲಿರುವ ಉತ್ಸಾಹವೆ ಕವಿಗೋಷ್ಠಿಗೆ ಹೋಗುವ ಮುನ್ನ ನನ್ನಲ್ಲಿರುತ್ತದೆ. ಅದನ್ನು ಮುಗಿಸಿ ಬರುವಾಗ ಥೇಟ್ ಬಾಡಿದ ಹೂವು. ನಮ್ಮಲ್ಲಿ ಮಹಾನವಮಿ ಬಂತೆಂದರೆ ಸಾಕು ಮನೆ ಸ್ವಚ್ಚತೆಯ ಕಾರ್ಯ ನಡೆಯುತ್ತದೆ. ಅದರಲ್ಲಿ ಹಾಸಿಗೆ ಒಗೆದು ಹಾಕುವ ಪರಿ ನೋಡಬೇಕು. ಥೇಟ್ ಒನಕೆ ಓಬವ್ವನಂತೆ ವೀರಗಚ್ಛೆಯನು ಹಾಕಿ ಹೆಣ್ಣು ಮಕ್ಕಳು ಹಾಸಿಗೆಯ ಒಂದು ತುದಿ ಹಿಡಿದರೆ ಅವರ ಗಂಡಂದಿರು ಇನ್ನೊಂದು ತುದಿ. ಯಾವ ಜನುಮದ ಸೇಡೋ ಎನ್ನುವಂತೆ ತಿರು ತಿರುವಿ ಕಲ್ಲಿಗೆ ಹಾಸಿಗೆ ಜಾಡಿಸುತ್ತಿದ್ದರೆ ಅದರೊಳಗಿನ ಕೊಳೆ ಸತ್ತನ್ಯೊ.. ಎಪ್ಪಾ..! ಎಂದು ಜಾಗ ಖಾಲಿ ಮಾಡುತ್ತದೆ. ಇದೇನು ವಿಷಯಾಂತರ ಎಂದುಕೊಂಡಿರಾ? ಖಂಡಿತ ಅಲ್ಲ. ಕೆಲವು ಕವಿಗೋಷ್ಠಿಯಲ್ಲಿ ನಮ್ಮ ಮೆದುಳು ಕವಿಗಳ ಕೈಗೆ ಸಿಕ್ಕ ಮಹಾನವಮಿ ಹಾಸಿಗೆಯಂತೆ, ಜಾಡಿಸಿ ಜಾಡಿಸಿ ಬರಿ ಕೊಳೆ ತೆಗೆಯುವುದಿಲ್ಲ. ಜೀವಾನೇ ಹಿಂಡಿ ಬಿಡುತ್ತಾರೆ. ಒಂದು ಬಾರಿ ಜಾತ್ರಾ ಕಮೀಟಿಯವರು ಕವಿಗೋಷ್ಠಿಯನ್ನು ಏರ್ಪಡಿಸಿದ್ದರು. ಕವಿಗೋಷ್ಠಿಯ ಸಮಯ ಸಾಯಂಕಾಲ ಆರು ಗಂಟೆ ಎಂದಿತ್ತು. ಕವಿ ಮಹಾಶಯರೆಲ್ಲರೂ ಸಮಯಕ್ಕೆ ಸರಿಯಾಗಿ ಬಂದಿದ್ದರೂ ಕಾರ್ಯಕ್ರಮದ ಸಿದ್ಧತೆ ಇನ...
EDUCATION | ENTERTAINMENT | INFOTAINMENT