ಆಗಾಗ ಕವಿಗೋಷ್ಠಿಯಲ್ಲಿ ಭಾಗವಹಿಸುವುದು ನನ್ನ ಹವ್ಯಾಸ. ನನ್ನ ಈ ಹವ್ಯಾಸವೇ ನನ್ನಾಕೆಗೆ ಚಟವಾಗಿ ಕಾಣುತ್ತದೆ ಎಂಬುವುದೇ ವಿಪರ್ಯಾಸ. ಮುಂಜಾನೆ ಅರಳಿದ ಹೂವಿನ ಮುಖದಲ್ಲಿರುವ ಉತ್ಸಾಹವೆ ಕವಿಗೋಷ್ಠಿಗೆ ಹೋಗುವ ಮುನ್ನ ನನ್ನಲ್ಲಿರುತ್ತದೆ. ಅದನ್ನು ಮುಗಿಸಿ ಬರುವಾಗ ಥೇಟ್ ಬಾಡಿದ ಹೂವು.
ನಮ್ಮಲ್ಲಿ ಮಹಾನವಮಿ ಬಂತೆಂದರೆ ಸಾಕು ಮನೆ ಸ್ವಚ್ಚತೆಯ ಕಾರ್ಯ ನಡೆಯುತ್ತದೆ. ಅದರಲ್ಲಿ ಹಾಸಿಗೆ ಒಗೆದು ಹಾಕುವ ಪರಿ ನೋಡಬೇಕು. ಥೇಟ್ ಒನಕೆ ಓಬವ್ವನಂತೆ ವೀರಗಚ್ಛೆಯನು ಹಾಕಿ ಹೆಣ್ಣು ಮಕ್ಕಳು ಹಾಸಿಗೆಯ ಒಂದು ತುದಿ ಹಿಡಿದರೆ ಅವರ ಗಂಡಂದಿರು ಇನ್ನೊಂದು ತುದಿ. ಯಾವ ಜನುಮದ ಸೇಡೋ ಎನ್ನುವಂತೆ ತಿರು ತಿರುವಿ ಕಲ್ಲಿಗೆ ಹಾಸಿಗೆ ಜಾಡಿಸುತ್ತಿದ್ದರೆ ಅದರೊಳಗಿನ ಕೊಳೆ ಸತ್ತನ್ಯೊ.. ಎಪ್ಪಾ..! ಎಂದು ಜಾಗ ಖಾಲಿ ಮಾಡುತ್ತದೆ.
ಇದೇನು ವಿಷಯಾಂತರ ಎಂದುಕೊಂಡಿರಾ? ಖಂಡಿತ ಅಲ್ಲ. ಕೆಲವು ಕವಿಗೋಷ್ಠಿಯಲ್ಲಿ ನಮ್ಮ ಮೆದುಳು ಕವಿಗಳ ಕೈಗೆ ಸಿಕ್ಕ ಮಹಾನವಮಿ ಹಾಸಿಗೆಯಂತೆ, ಜಾಡಿಸಿ ಜಾಡಿಸಿ ಬರಿ ಕೊಳೆ ತೆಗೆಯುವುದಿಲ್ಲ. ಜೀವಾನೇ ಹಿಂಡಿ ಬಿಡುತ್ತಾರೆ.
ಒಂದು ಬಾರಿ ಜಾತ್ರಾ ಕಮೀಟಿಯವರು ಕವಿಗೋಷ್ಠಿಯನ್ನು ಏರ್ಪಡಿಸಿದ್ದರು. ಕವಿಗೋಷ್ಠಿಯ ಸಮಯ ಸಾಯಂಕಾಲ ಆರು ಗಂಟೆ ಎಂದಿತ್ತು. ಕವಿ ಮಹಾಶಯರೆಲ್ಲರೂ ಸಮಯಕ್ಕೆ ಸರಿಯಾಗಿ ಬಂದಿದ್ದರೂ ಕಾರ್ಯಕ್ರಮದ ಸಿದ್ಧತೆ ಇನ್ನೂ ನಡೆದಿತ್ತು. ಅತಿಥಿ ಮಯಾಶಯರು ತಡವಾಗಿ ಬಂದಿದ್ದಕ್ಕೆ ಆರು ಗಂಟೆಗೆ ಪ್ರಾರಂಭವಾಗಬೇಕಿದ್ದ ಗೋಷ್ಠಿಯು ಎಂಟು ಗಂಟೆಗೆ ಪ್ರಾರಂಭವಾಯಿತು. ಹಾಗೋ ಹೀಗೋ ಸಾವರಿಸಿಕೊಂಡು ಈಗಲಾದರೂ ಪ್ರಾರಂಭವಾಯಿತೆಂದು ನಿಟ್ಟುಸಿರು ಬಿಡುವಾಗ ಅತಿಥಿ ಮಹೋದಯರ ಉದ್ದುದ್ದ ಭಾಷಣಕ್ಕೆ ಸಿಲುಕಿ ಕವಿಪುಂಗವರ ತಿಥಿಯಾಯಿತು. ಐವತ್ತೆಂಟು ಕವಿಗಳ ಉಪಸ್ಥಿತಿ, ನನ್ನ ಪಾಳಿ 52 ನೇ ನಂಬರ್. ಎಲ್ಲರ ಕವಿತೆಗಳನಾಲಿಸಿ ಆಲಿಸಿ ಕುರ್ಚಿಗೆ ತಲೆಯಾನಿಸಿ ಕುಳಿತವಗೆ ಹಾಳಾದ ನಿದ್ರೆ ಯಾವಾಗ ಆವರಿಸಿತ್ತೋ ಗೊತ್ತೇ ಆಗಲಿಲ್ಲ. ಅದಾಗಲೇ ನನ್ನ ಹೆಸರು ನಿರೂಪಕರ ಬಾಯಿಂದ ಕೇಳಿಬರುತ್ತಿತ್ತು. ಎಚ್ಚರಾಗಿ ನೋಡಿದರೆ ಮುಂದೆ ಪ್ರೇಕ್ಷಕರೊಬ್ಬರೂ ಉಳಿದಿಲ್ಲ. ಜಿಟಿ ಜಿಟಿ ಮಳೆಗೆ ಚದುರಿ ಹೋಗಿದ್ದರು. ಮೋಬೈಲಲ್ಲಿ ನಾ ಓದುವ ಕವನ ಇತ್ತು. ಅದಕೂ ಬೇಜಾರಾಗಿ ಚಾರ್ಜ ಖಾಲಿ ಆಗಿ ಯಾವಾಗ ಸ್ವಿಚ್ ಆಫ್ ಆಗಿತ್ತೋ ದೇವರೆ ಬಲ್ಲ. ಏನು ಹೇಳಲಿ ಎಂದುಕೊಂಡು ಆಕಳಿಸಿ ಮೈಕಗೆ ಬಾಯಿಟ್ಟು ಒಂದು ಚುಟುಕು ಹೇಳಲು ಹೊರಟೆ, ಮುಂದಿನ ಎರಡು ಸಾಲು ಮರೆತೇ ಹೋಗಿದ್ದವು. ಎಲ್ಲರೂ ಮುಂದಿನವರಿಗೆ ಅವಕಾಶ ಮಾಡಿ ಕೊಡ್ರಿ ಅಂತ ಕಿರುಚಾಡಿ ಮಾತಲ್ಲೇ ತಿವಿದು ಮತ್ತೆ ಮೂಲೆಯಲ್ಲಿ ಕುಳಿತ ಅದೇ ಖುರ್ಚಿಗೆ ದೂಡಿದ್ದರು. ಆಗ ಸಮಯ ಬರೋಬ್ಬರಿ ರಾತ್ರಿ ಹನ್ನೆರಡು ಗಂಟೆ.
ಅಂದಿನಿಂದ ಸಾಯಂಕಾಲದ ಕವಿಗೋಷ್ಠಿಗೆ ಹೋಗಬಾರದೆಂದು ತೀರ್ಮಾನಿಸಿ ಬಿಟ್ಟೆ. ಮಳೆ ನಿಂತರೂ ಮರದ ಹನಿ ನಿಲ್ಲುವುದೆ? ಒಂದೊಮ್ಮೆ ಮರದ ಹನಿ ನಿಂತರೂ ಕವಿಯಾದವನ ಕವಿತೆ ಬರೆವ ಹುಚ್ಚು ನಿಲ್ಲದು. ಬರೆದ ಕವಿತೆಯನು ಯಾರಾದರೂ ಕೇಳಲಿ ಎಂಬುವುದೊಂದು ಪುಟ್ಟ ಆಸೆ. ಆದರೆ ಕೇಳುವವರಿಲ್ಲದಾದಾಗ ಯಾರದಾದರೂ ಕಿವಿಗೆ ತುರುಕಬೇಕೆಂಬುದು ಕೆಟ್ಟ ಆಸೆ.
ಒಮ್ಮೆ ನಿಸರ್ಗದ ಮಡಿಲಿನಲಿ ಕವಿಗೋಷ್ಠಿಯೊಂದು ಏರ್ಪಾಡಾಗಿತ್ತು. ಹೆಸರು ಕಳುಹಿಸಿದೆ. ಕವಿಗಳಿಗೆ ಹೇಳಿ ಮಾಡಿಸಿದಂತಿರುವ ಉದ್ದನೆಯ ಖುರ್ತಾ, ಬಗಲಿಗೊಂದು ಅರವಿ ಚೀಲ ಏರಿಸಿ ಹೊರಟು ನಿಂತೆ ಯುದ್ದಕೆ ಹೊರಟ ಸಿಪಾಯಿಯಂತೆ. ನನ್ನವಳು ಮೋತಿ ಪ್ಯಾರಾಲಿಸಿಸ್ ಆದಂತೆ ತಿರುವಿಕೊಂಡಳು. ಅವಳೋ ಮೊಬೈಲನಲ್ಲಿ ಸೆಲ್ಪಿ ತೆಗೆದುಕೊಂಡು ತೆಗೆದುಕೊಂಡು ಈ ಕಲೆಯನ್ನು ಸಿದ್ದಿಸಿಕೊಂಡಿದ್ದಳು. ಅವಳನ್ನು ಅಲಕ್ಷಿಸಿ ಕಾರ್ಯಕ್ರಮಕ್ಕೆ ಹೋದೆ.
ಎಷ್ಟೊಂದು ಸುಂದರ ನಿಸರ್ಗದ ಮಡಿಲಿನ ಕವಿಗೋಷ್ಠಿ ಎನಿಸಿತು. ಅತಿಥಿಗಳಿಂದ ಭಾಷಣಗಳು ಪುಂಖಾನುಪುಂಖವಾಗಿ ಮೊಳಗಿದವು. ಅರ್ಥವಾಗದೆ ತಲೆಕಡಿತ ಪ್ರಾರಂಭವಾಯಿತು. ಹಾಗೆಯೇ ಕಾಲಲ್ಲೇನೋ ಸುಳು ಸುಳು ಎಂದಂತಾಗಿ ಅಲ್ಲೂ ಕೆರೆತ ಶುರುವಾಯಿತು. ಬಾಗಿ ನೋಡಿದರೆ ಭಾರತ ದೇಶದೊಳು ಕೆಂಪು ಮೋತಿಯ ಬ್ರಿಟಿಷ್ ಸೈನಿಕರು ನುಗ್ಗಿದಂತೆ ಕೆಂಪನ ಇರುವೆಗಳು ಪ್ಯಾಂಟಿನೊಳಗೆ ಒಂದ ಸವನ ಏರಿ ಹೊರಟಿದ್ದವು. ಅಕಟಕಟಾ ಘಾತವಾಯಿತೆಂದು ಮೇಲೆದ್ದು ಕುಣಿಯತೊಡಗಿದೆ.
ಕೆಲ ಕವಿಗಳು ಕವಿತೆಯನು ವಾಚಿಸಲು ಶುರು ಮಾಡಿದ್ದೇ ತಡ ಕಾಗೆಯೊಂದು ಕಾವ್ ಕಾವ್ ಅಂತ ಟೊಂಗೆಯ ಮೇಲೆ ಕುಳಿತು ಒದರತೊಡಗಿತು. ಕೆಲವರ ಕವಿತೆಗಳಿಗಿಂತ ಅದರ ನಾದದ ಪದ ಜೋಡಣೆಯೆ ಅದೇಕೋ ಆನಂದವೆನಿಸಿತು. ಆಮೇಲೆ ಕೆಲ ಪಿ.ಎಚ್.ಡಿ ಕವಿಗಳು ಸಂಶೋಧನೆ ಮಾಡಿದಾಗ ತಿಳಿದು ಬಂದಿದ್ದೇನೆಂದರೆ ಅದರ ಗೂಡಿನ ಗಿಡಕೆ ಕವಿಗೋಷ್ಠಿಯ ಬ್ಯಾನರ್ ನೇತು ಹಾಕಿದ್ದು, ಆ ಗಿಡದ ಗೂಡೊಳಗೆ ಅದರ ಮರಿಗಳಿದ್ದುದ್ದು , ಅದಕ್ಕಾಗಿಯೆ ಕಾಗೆಯು ಅರಚುತ್ತಿತ್ತೆಂಬುದು ಸ್ಪಷ್ಟವಾಯಿತು. ಅಂದಿನಿಂದ ಈ ನಿಸರ್ಗದ ಮಡಿಲ ಕವಿಗೋಷ್ಠಿಗೆ ಹೋಗಬಾರದೆಂದು ಮನಸ್ಸಿನಲ್ಲಿಯೆ ಠರಾವು ಪಾಸು ಮಾಡಿದೆನು.
ಹಾಳೆಯನ್ನು ಹಿಡಿಯಬಹುದು ಆದರೆ ಗಾಳಿಯನ್ನು ಹಿಡಿಯಲಾದೀತೆ? ಗಾಳಿಯನ್ನೂ ದ್ರವರೂಪಕ್ಕಿಳಿಸಿ ಹಿಡಿದೆವೆಂದುಕೊಳ್ಳಬಹುದು ಆದರೆ ಕವಿರೂಪಕ್ಕೆ ತಿರುಗಿದ ಮನಸ್ಸನ್ನೆಂದೂ ಹಿಡಿಯಲಾಗದು.
ಒಮ್ಮೆ ಅಡಿಟೋರಿಯಂನಲ್ಲಿ ಕವಿಗೋಷ್ಠಿ ಏರ್ಪಾಡಾಗಿತ್ತು. ರಾಜ್ಯದ ವಿವಿಧ ಮೂಲೆಗಳಿಂದ ಕವಿಗಳು ಭಾಗವಹಿಸಿದ್ದರು. ನನಗೂ ಸುವರ್ಣವಕಾಶವೆಂದು ಕವಿಗೋಷ್ಠಿಯ ಯುನಿಫಾರಂ ಮತ್ತೇ ಧರಿಸಿದೆ. ನನ್ನಾಕೆ ಅರವಿ ಚೀಲಾ ಒಂದ ಬಗಲಿಗೆ ಹಾಕೋರಿ ಎಂದು ಮೊದಲಿಸಿದಳು. ಮನಸ್ಸಿಗೆ ಇರಸುಮುರುಸಾದಂತಾಗಿ ಹುಚ್ಚೀ ಇದು ಅರವಿ ಚೀಲ ಅಲ್ಲ 'ಅರಿವಿನ ಚೀಲ' ಎಂದು ನೀತಿ ನುಡಿದು ಹೊರಗೆ ಕಾಲಿಟ್ಟೆ.
ಅಡಿಟೋರಿಯಂ ಕಿಕ್ಕಿರಿದು ತುಂಬಿತ್ತು. ಎಲ್ಲ ವಯೋಮಾನದ ಕವಿಗಳು ಮತ್ತು ಕವಯಿತ್ರಿಯರ ಸಂಗಮದ ವಿಹಂಗಮ ನೋಟಕ್ಕೆ ಬೆರಗಾದೆನು. ಕಾರ್ಯಕ್ರಮದ ಸಮಯ ಮುಂಜಾನೆ ಹತ್ತು ಗಂಟೆಗೆ. ಅದು ಪ್ರಾರಂಭವಾಗಿದ್ದು ಮಟಮಟ ಮಧ್ಯಾಹ್ನ ಹನ್ನೆರಡು ಗಂಟೆಗೆ ದೇವರ ಪ್ರಾರ್ಥನೆಯೊಂದಿಗೆ.
ಎಪ್ಪಾ ಇಲ್ಲಿಯೂ ಇದ ಹಾಡ ಅಂದಕೊಂಡೆ. ಅತಿಥಿಗಳದು ಬಾಯೋ ಏನ ಫಿರಂಗಿ ತೂತೋ...ಮಾತುಗಳು ಕುಂತವರೆದೆಗೆ ಗುಂಡುಗಳಾಗಿ ಸಿಡಿಯತೊಡಗಿದವು. ಮಧ್ಯಾಹ್ನ ಒಂದಾದರೂ ಮುಗಿಯವಾಲ್ಲತು. ಕೆಲವರು ಸಿಡಿಮಿಡಿಗೊಂಡರು ಮತ್ತೆ ಕೆಲವರು ಸಿಡಿದು ಮಿಡಿಯಾದರು. ಸಮಯ ಎರಡಾದರೂ ಎರಡ ಮಾತು ಅನಕೊಂತನ ಎರಡ ತಾಸ ಕೊರದ ಕೊರದಿದ್ದ ಅತಿಥಿ ಮಹಾಶಯನೊಬ್ಬ. ಆ ಮಹಾಶಯನ ಮಾತಿಗೆ ಮುಂದೆ ಕೂತಿದ್ದ ಹಿರಿ ಕವಿಯೊಬ್ಬ ತೂಕಡಿಸಿ ನಿದ್ದೆಗೆ ಜಾರಿದ್ದ. ಅವನ ಹಿಂದಿನವ ಕಟಿಂಗ್ ಶಾಪ ನಡೆಸುವಾತ...ನಿತ್ಯವೂ ಕೂದಲನು ಕತ್ತರಿಸಿ ಸರಿ ಮಾಡುವ ಕಾಯಕ. ಆಗಾಗ್ಗೆ ಕಂಡವರ ಕವಿತೆಗೂ ಕತ್ತರಿ ಹಾಕಿ ಕೆಲವು ಪದಗಳನು ತಂದು ತನ್ನದೇ ಕವಿತೆಯಾಗಿಸುವ ಚೋರ ಚಿತ್ತ ಚೋರ. ಅವನಿಗೋ ಮುಂದೆ ಮಲಗಿದವನ ನೆರೆತ ತಲೆ ಕಂಡು ಸಮಾಧಾನವಾಗದೆ ಹೇರ ಡೈ ಮಾಡುವ ಸಲಕರಣೆ ತೆಗೆದು ಮುಂದಿನವನ ಕೂದಲಿಗೆ ಬಣ್ಣ ಹಚ್ಚ ತೊಡಗಿದ. ಈತನ ಬಣ್ಣ ಹಚ್ಚುವ ಕಾರ್ಯ ಮುಗಿದರೂ ಮುಂದಿನವನ ನಿದ್ರೆ ಯಾರ ಹಂಗಿಲ್ಲದೆ ಮುಂದುವರೆದಿತ್ತು ವೇದಿಕೆ ಮೇಲಿನವರ ಬಣ್ಣದ ಭಾಷಣದಂತೆ. ಕೊನೆಗೂ ಮಾತುಗಳು ಮುಗಿದಾದ ಮೇಲೆ ಕೆಳಗೆ ಕುಳಿತ ನೂರೊಂದು ಕವಿಗಳ ಕವಿತೆಗಳ ಕೇಳಲು ಕಿವಿ ತೂತುಗಳನು ಸರಿ ಮಾಡಿಕೊಂಡೆ. ಒಬ್ಬೊಬ್ಬರದೆ ಹೆಸರುಗಳು ಉಲ್ಲೇಖಿತವಾದಂತೆ ಹೋಗಿ ತಮ್ಮ ಕವಿತೆಗಳನು ವಾಚಿಸಿ ಹಲ್ಕಿರಿದು ಕವಿಗಳು ಇಳಿಯತೊಡಗಿದರು. ಮಲಗಿದ ಹಿರಿಯ ಕವಿ ಜೀವ ಎಚ್ಚರವಾಯಿತು. ವೇದಿಕೆ ಏರಿ ಕವಿತೆಯನ್ನು ವಾಚಿಸತೊಡಗಿತು. ಈ ಮಧ್ಯದಲ್ಲಿ ತನ್ನ ಕವಿತಾ ವಾಚನದ ಭಾವಚಿತ್ರ ಸೆರೆಹಿಡಿಯಲು ಮಿತ್ರನೊಬ್ಬನಿಗೆ ತನ್ನ ಮೊಬೈಲ್ ನೀಡಿ ಸಂಧಾನ ಮಾಡಿಕೊಂಡಿತ್ತು. ಕೆಳಗಿಳಿದು ಬಂದು ಮಿತ್ರ ತೆಗೆದ ಭಾವಚಿತ್ರ ನೋಡಿ, ಆತನನ್ನು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಂಡ. ಎಲಾ ಹುಚ್ಚ ನನ್ನ ಮಗನೆ ನನ್ನ ಫೋಟೋ ತೆಗಿ ಅಂದರ ಬ್ಯಾರೆ ಯಾರದ್ದೋ ಹೊಡದಿಯಲ್ಲೋ ಎಂದು ಬೈಯತೊಡಗಿದ. ಆಮೇಲೆ ಬಿಳಿಕೂದಲು ಕರಿಯಾದ ಕರಾಳಕಥೆಯನು ಎಳೆ ಎಳೆಯಾಗಿ ಬಿಡಿಸಿ ತಿಳಿಸಿದ ಮೇಲೆ ತಿಳಿಹಳದಿ ಹಲ್ಲುತೆರೆದು ಹಿರಿಜೀವ ನಕ್ಕಿತು.
ಇಂತಹ ವಿಚಿತ್ರ ಘಟನೆಗಳು ನಡೆಯುವುದರಿಂದಲೆ ನಾನು ಇನ್ನು ಮೇಲೆ ಅಡಿಟೋರಿಯಂ ಕವಿಗೋಷ್ಠಿಗೆ ಹೋಗಬಾರದೆಂದು ಸಂವಿಧಾನ ರಚಿಸಿಕೊಂಡು ನನಗೆ ನಾನೇ ವಿಧಿಸಿಕೊಂಡಿದ್ದೇನೆ.
ಬೆಂಕಿಯನು ನಂದಿಸಬಹುದು..ಕಾಡ್ಗಿಚ್ಚನು ನಂದಿಸಲಾದೀತೆ? ಕಾಡ್ಗಿಚ್ಚನು ನಂದಿಸಿದಿರಿ ಎಂದುಕೊಳ್ಳೋಣಾ ಆದರೆ ಕವಿಯೊಳಗೆ ಸಮಾಜಕ್ಕಾಗಿ ಪುಟಿಯುವ ಕಾವ್ಯ ಜ್ವಾಲಾಮುಖಿಯನು ತಡೆಯಲಾದೀತೆ....ಯಾವುದಾದರೂ ಕವಿಗೋಷ್ಠಿ ಇದ್ದರೆ ಹೇಳಿ ಭಾಗವಹಿಸ್ತಿನಿ.
Super sir
ReplyDelete