Skip to main content

ತಾಳ ತಪ್ಪಿದ ಸಾಹಿತ್ಯ ಮತ್ತು ಮಕ್ಕಳ ಮೇಲಿನ ಪ್ರಭಾವ @ ಆನಂದ ಮಾಲಗಿತ್ತಿಮಠ



ಸಾಮಾಜಿಕ ಹಿತವನ್ನು ಬಯಸುವುದೇ ಸಾಹಿತ್ಯವಾಗಬೇಕು. ಲೋಕದ ತವಕ ತಲ್ಲಣಗಳನ್ನೆಲ್ಲಾ ಹೊದ್ದು ಹರಿಯುವ ರಸಗಂಗೆಯಾಗಬೇಕು. ಪ್ರಶ್ನಿಸಬೇಕು ಮತ್ತು ಪ್ರಶ್ನೆಗಳಿಗೆ ಉತ್ತರವಾಗಿರಬೇಕು. ಬಿರಿದ ಹೃದಯಗಳನೊಂದುಗೂಡಿಸುವಂತಿರಬೇಕು. ಸೋತವರ ರೆಟ್ಟೆಗಳಿಗೆ ಬಲತುಂಬಿ ಯಶಸ್ಸಿನೆಡೆಗೆ ಕೈ ಹಿಡಿದು ಕರೆದುಕೊಂಡು ಹೋದ ಅದೆಷ್ಟೋ ಸತ್ವಯುತ ಸಾಹಿತ್ಯ ಪುಸ್ತಕದ ಉದರಗಳಲಿ ಮಿಸುಕಾಡುತ್ತಿದೆ. ಸಾಹಿತ್ಯದಲ್ಲಿ ಹಲವು ಪ್ರಕಾರಗಳಿದ್ದರೂ ಜಾನಪದ ಸಾಹಿತ್ಯದಷ್ಟು ಹೃದಯಕ್ಕೆ ಹತ್ತಿರವಾದುದು ಮತ್ತೊಂದಿಲ್ಲ. 
ಕೃತಕತೆಯ ಬಣ್ಣಗಳಿಲ್ಲದ ನಿರಾಭರಣ ಸುಂದರಿ ಎಂದರೆ ಅದು ಜನಪದ ಸಾಹಿತ್ಯ.
ಆದರೆ ಇತ್ತೀಚಿನ ದಿನಮಾನಗಳಲಿ ಹೊಸ ಸಾಹಿತ್ಯವೊಂದು ಜನ್ಮತಳೆದಿದೆ. ಅದುವೆ ಟ್ರ್ಯಾಕ್ಟರ್ ಸಾಹಿತ್ಯ. ಎತ್ತುಗಳೊಂದಿಗೆ ರೈತನ ಸಾಂಗತ್ಯವಿದ್ದಾಗ ಬೆವರಿನೊಂದಿಗೆ ಹುಟ್ಟಿದ ಪದಗಳು ಲೋಕಕೆ ನೀತಿ ಸಾರುವಂತಿದ್ದವು. ಆದರೆ ಟ್ರ್ಯಾಕ್ಟರ್ ಅರಚುವ ಇಂದಿನ ಹಾಡುಗಳಲ್ಲಿ ಅಶ್ಲೀಲತೆಯ, ಸಮಾಜದ ಸ್ವಾಸ್ಥ್ಯ ಹದಗೆಡಿಸುವ ಹಾಡುಗಳ ವಿಜೃಂಭಣೆಯು ಸಾಗಿದೆ.
ಇಂತಹ ಹಾಡುಗಳು ಬಲುಬೇಗ ಜನಪ್ರಿಯವಾಗುತ್ತಿರುವುದು ಉಳಿದವರಿಗೆ ಇಂತಹುದೇ ಹಾಡುಗಳನು ಮತ್ತೆ ಮತ್ತೆ ಬರೆದು ಹಾಡುವಂತೆ ಪ್ರೇರೆಪಿಸುತ್ತಿದೆ.
ಹದಿಹರೆಯದ ಮಕ್ಕಳಲ್ಲಿ ಇಂತಹ ಸಾಹಿತ್ಯವು ಬೀರುತ್ತಿರುವ ಪರಿಣಾಮ ಗಂಭೀರವಾಗಿದೆ. ಕೋಮಲತೆಯಿಂದ ಅರಳಿ ನಗಬೇಕಾದ ಮಲ್ಲಿಗೆ ಹೂವುಗಳಂತಿರುವ ಮಕ್ಕಳ ಮನಸ್ಸಿನಿಂದ ಮುಗ್ಧತೆಯ ಪರಿಮಳವನ್ನೇ ಕಸಿದು ಹಾಕುತ್ತಿರುವುದು ವಿಪರ್ಯಾಸವೆನಿಸಿದೆ. ಪ್ರೀತಿ ಪ್ರೇಮ ಪ್ರಣಯದತ್ತ ಅಕಾಲಿಕವಾಗಿ ಆಕರ್ಷಿತರಾಗಿ ತಮ್ಮ ಬಂಗಾರದಂತಹ ಬದುಕನ್ನು ಬೆಂಕಿಗೆ ದೂಡುತ್ತಿದ್ದಾರೆ. ಇಂತಹ ಟ್ರ್ಯಾಕ್ಟರ್ ಸಾಹಿತ್ಯಗಳಲ್ಲಿ ಕಾಲೇಜು ಹುಡುಗಿ ಹಾಗೂ ಹೈಸ್ಕೂಲ್ ಹುಡುಗಿಯರನ್ನೇ ಕೇಂದ್ರಿಕರಿಸಿದ ಹಾಡುಗಳಿದ್ದು ಶಿಕ್ಷಣಕ್ಕೆ ಮೀಸಲಾದ ವಯೋಮಾನದಲ್ಲಿ ಅವರ ಮನಸನ್ನು ಬೇರೆಯ ವಿಷಯಗಳತ್ತ ಸೆಳೆಯುತ್ತಿವೆ.
ಇತ್ತೀಚಿಗೆ ಬಿಡುಗಡೆಯಾದ ಒಂದು ಹಾಡಿನ ಸಾಲುಗಳನ್ನು ಪ್ರಾಥಮಿಕ ಶಾಲಾ ಮಕ್ಕಳು ಗುನುಗುತ್ತಿದ್ದರು. ಅದರಲ್ಲಿ ಹೀಗೆ ಹೇಳಲಾಗಿದೆ...ಮದುವೆಗೆ ಮುಂಚೆ ಮಕ್ಕಳಾಗಬೇಕು ಅಂತೆ. ಇಂತಹ ಸಾಲುಗಳ ಸಾಹಿತ್ಯಕ್ಕೆ ಹೆಸರಾಂತ ನಟನಟಿಯರ ನೃತ್ಯ ಬೇರೆ. ಇವೆಲ್ಲವುಗಳಲ್ಲಿ ಸಮಾಜದ ಸ್ವಾಸ್ಥ್ಯವನ್ನು ಸುಧಾರಿಸುವ ಒಂದಿನಿತೂ ಉದ್ದೇಶವಿದ್ದಂತಿಲ್ಲ. ಕೌಟುಂಬಿಕ ವ್ಯವಸ್ಥೆಗಳು ಈಗಾಗಲೇ ಒಡೆದು ಚೂರಾಗುತ್ತಿವೆ. ಅನೈತಿಕತೆಯು ವಿಷವಾಗಿ ಒಳನುಸುಳುತ್ತಿದೆ. ಇಂತಹ ಸಂಧರ್ಭಗಳಲ್ಲಿ ಮತ್ತಷ್ಟು ಛಿದ್ರಗೊಳಿಸುವ ವಿನಾಶಕಾರಿ ಮನಸ್ಥಿತಿಯಿಂದ ಹೊರಬರುವ ಇಂತಹ ಸಾಹಿತ್ಯಗಳನ್ನು ರಚಿಸುವುದು ಹೇಗೆ ಅಪರಾಧವೋ ಹಾಗೆ ಅವುಗಳನ್ನು ಮೆರೆಸುವುದೂ ಅಷ್ಟೇ ಅಪರಾಧವೆಂಬುವುದನ್ನು ಅರಿಯಬೇಕು. 
ಯುವಕ ಯುವತಿಯರಿಗಾಗಿ ರಚಿಸುವ ಸಾಹಿತ್ಯವು ಸದ್ದಿಲ್ಲದೇ ಮಕ್ಕಳನ್ನೂ ಅಶ್ಲೀಲತೆಯ ಲೋಕದತ್ತ ಕರೆದೊಯ್ಯುತ್ತಿರುವುದು ತುಂಬ ಕಳವಳಕಾರಿಯಾಗಿದೆ. ಮಕ್ಕಳ ನೈತಿಕ ಮಟ್ಟ ಕುಸಿತಕ್ಕೆ ಶಿಕ್ಷಣ ವ್ಯವಸ್ಥೆಯೇ ಕಾರಣವೆಂದು ಬೆರಳು ತೋರುವ ಮುನ್ನ ನಮಗೆಲ್ಲ ಸಾಮಾಜಿಕ ನೈತಿಕತೆಯನ್ನು ಪಾಲಿಸುವುದರ ಅರಿವಿರಬೇಕು. ಇನ್ನಾದರೂ ಇಂತಹ ಸಾಹಿತ್ಯಗಳನ್ನು ಟ್ರ್ಯಾಕ್ಟರ್ ನಲ್ಲಿ ಹಾಕಿ ಒದರಿಸುವ ಮುನ್ನ ಪುಟಾಣಿ ಮಕ್ಕಳಿವೆ ಎಂಬುವುದು ಗಮನವಿರಲಿ...

                                     ಆನಂದ ಮಾಲಗಿತ್ತಿಮಠ
                                   ಸಾಹಿತಿಗಳು ಬೈಲಹೊಂಗಲ

Comments

ಇವುಗಳನ್ನೂ ಓದಿ

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು

ಭಾರತದ ಮುಖ್ಯ ವಿವಿದೋದ್ದೇಶ ನದಿಕಣಿವೆ ಯೋಜನೆಗಳು 1) ದಾಮೋದರ್ ನದಿ ಕಣಿವೆ ಯೋಜನೆ:- ದಾಮೋದರ್ ಅಣೆಕಟ್ಟು ಸ್ವತಂತ್ರ್ಯ ಭಾರತದ ಮೊಟ್ಟಮೊದಲ ಬೃಹತ್ ಅಣೆಕಟ್ಟು ಆಗಿದೆ. ದಾಮೋದರ್ ಕಣಿವೆ ಕಾರ್ಪೋರೇಷನ್ ನನ್ನುಜುಲೈ 7, 1948 ರಲ್ಲಿ ಸಂವಿಧಾನ ರಚನಾ ಸಭೆಯ ಕಾಯ್ದೆ ಮೂಲಕ ಸ್ಥಾಪಿಸಲಾಯಿತು. ಇದನ್ನು ಅಮೇರಿಕಾದ ಟೆನಿಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ. ದಾಮೋದರ್ ಕಣಿವೆ ಯೋಜನೆಯನ್ನುಭಾರತದ ರೋರ್ ಎಂದು ಕರೆಯುತ್ತಾರೆ. ಏಕೆಂದರೇ ದಾಮೋದರ್ ಕಣಿವೆ ಪ್ರದೇಶದಲ್ಲಿ ಅತಿ ಹೆಚ್ಚು ಕೈಗಾರಿಕೆಗಳು ಕಂಡುಬರುತ್ತವೆ. ಆದ್ದರಿಂದ ಇದಕ್ಕೆ ಭಾರತದ ’ರೋರ್’ ಎಂದು ಕರೆಯುತ್ತಾರೆ. ದಾಮೋದರ್ ಕಣಿವೆಯು ಭಾರತದ ಪ್ರಮುಖ ಕೈಗಾರಿಕಾ ಪ್ರದೇಶಗಳಲ್ಲಿ ಒಂದು. ಈ ಪ್ರದೇಶದಲ್ಲಿ ಸ್ಟೀಲ್ ಅಥಾರಿಟಿ ಆಫ್ ಇಂಡಿಯಾದ ಕೈಗಾರಿಕೆಗಳಾದ ಬೋಕಾರೋ (ಜಾರ್ಕಂಡ್ ನಲ್ಲಿದೆ), ಬರ್ನಾಪೂರ, ದುರ್ಗಾಪುರ (ಪಶ್ಚಿಮ ಬಂಗಾಳ)ದಲ್ಲಿ ಸ್ಥಾಪನೆಯಾಗಿವೆ. ಇಲ್ಲಿ ಅಧಿಕ ಪ್ರಮಾಣಾದ ಕಲ್ಲಿದ್ದಲು ಗಣಿಗಳಿವೆ. # ದಾಮೋದರ್ ನದಿಯ ಉಪನದಿಯಾದ ಬರ್ಕರ್ ನದಿಗೆ ಅಡ್ದಲಾಗಿ 1953 ರಲ್ಲಿತಿಲಾಯ ಅಣೆಕಟ್ಟು ಕಟ್ಟಲಾಗಿದೆ. # 1995 ರಲ್ಲಿ ದಾಮೋದರ್ ನದಿಯ ಇನ್ನೊಂದು ಉಪನದಿಯಾದ ಕೋನಾರ್ನದಿಗೆ ಅಣೆಕಟ್ಟು ಕಟ್ಟಲಾಗಿದೆ. # ದಾಮೋದರ್ ನದಿಯು ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯದಲ್ಲಿ ಹರಿಯುವ ನದಿಯಾಗಿದೆ. # ದಾಮೋದರ್ ನದಿಯನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನ...