ಅವಳು
ಕೆನ್ನೆಯ ಪಕಳೆಗಳಿಗೆ
ನಾ
ಹಚ್ಚಿದ ಬಣ್ಣವನು
ತೊಳೆದುಕೊಂಡಳು
ಈಗ ತುಟಿಗಳನು
ನೋಡಿಕೊಳ್ಳುತ್ತಿದ್ದಾಳೆ
ತುಟಿಯಿಂದ ತುಟಿಗೆ
ತೀಡಿದ ರಂಗು
ಹೋಗುವುದಾರೂ ಹೇಗೆ?
***
ಅವಳು ತೊಟ್ಟ ಸೀರೆಯ
ಬಣ್ಣಗಳ ಎಣಿಸುತ್ತಾ
ಎಳೆಯುವಾಗ
ಸಮಯ ಸರಿದಿದ್ದೆ ತಿಳಿಯಲಿಲ್ಲ
ಅಷ್ಟರಲ್ಲಿ ಬಣ್ಣದಾಟ
ಮುಗಿದು
ಕಾಮ ದಹನವಾಗಿತ್ತು
***
ನನ್ನ ಬಿಸಿ ಉಸಿರ
ಪರಿಮಳ ತೊಟ್ಟು
ಅವಳು ಕೆಂಡ
ಸಂಪಿಗೆಯಂತಾದಳು
ಅವಳ ಕೆಂಬಣ್ಣ ಮುಗಿಲಿಗೆರಚಿ
ಬೇಗ ಸಂಜೆಯಾಗಲೆಂದು
ಕಾಯುತ್ತಿದ್ದೇನೆ
***
ನನ್ನ ನೋಡಿ
ಅವಳು ನಾಚಿ ನೀರಾದಳು
ಅವಳೊಳಗೆ
ಒಲವ ಬಣ್ಣ ಬೆರೆಸಿ
ಓಕುಳಿಯಾಡಿದೆ
***
ಬಣ್ಣ ಹಚ್ಚಬೇಡ
ಬಣ್ಣ ಹಚ್ಚಬೇಡ
ಎನುತಲೇ
ಮೈಮೇಲೆ ಬಿದ್ದಳು
ನಾನು ಬಿಳಿಯ ಬೆಳಕು
ಅವಳೊಳಗೆ ತೂರಿ
ಹೊರಬಂದೆ
ಅವಳ ಮಡಿಲಲ್ಲೀಗ
ಪುಟಾಣಿ ಕಾಮನಬಿಲ್ಲು
ಆಡುತಿದೆ
***
ನನ್ನ ಪ್ರೀತಿಯ ತಿರಸ್ಕರಿಸಿ
ನಡೆದ ಅವಳ
ಬೆನ್ನ ಮಹಡಿಯಿಂದ
ನಾ ಹಚ್ಚಿದ ಕೊನೆಯ
ಬಣ್ಣದ
ಹನಿಯೊಂದು
ವಿರಹದಿಂದ ನೆಲಕೆ ಬಿದ್ದು
ಆತ್ಮಹತ್ಯೆ
ಮಾಡಿಕೊಂಡಿದೆ
***
ಕಪ್ಪು ಬಣ್ಣವೆಂದರೆ
ಅವಳಿಗೂ ಇಷ್ಟ
ಕಣ್ಣಿಗೆ ಕಾಡಿಗೆ ಹಾಕುತ್ತಾಳೆ
ನಾನೋ
ಕಪ್ಪು ಹಲಗೆಯ ಮೇಲೆ
ಅವಳ ಕಣ್ಣುಗಳನೇ
ಬರೆಯುತ್ತೇನೆ
ಅವಳ ತಂದೆಗೂ
ಕಪ್ಪೆಂದರೆ ಇಷ್ಟ
ನಮ್ಮಿಬ್ಬರ ಒಲವ
ಸುಟ್ಟ ಬೂದಿ
ಕಪ್ಪ
ಕೇಳುತ್ತಿದ್ದಾನೆ
ಹೇಗೆ ಕೊಡಲಿ?
***
ಅವಳ ಪ್ರತಿ ಹೆಜ್ಜೆಗಳಿಗೂ
ಬಣ್ಣ ತುಂಬುತ್ತಾ ಹೋದೆ
ಅವಳದಕೆ ಕನಸುಗಳೆಂದು
ಹೆಸರಿಟ್ಟಳು
ನನಸಾದ ಮೇಲೆ
ಅವಳು ಸಿಗದಂತೆ
ದೂರ ಹೋದಳು
ನಡೆಯುತ್ತಾ ಸಾಗರದ ಮೇಲೆ
ಮೀನಿನಂತೆ
ನಾನು ಅವಳ ಹೆಜ್ಜೆಗಳನೆ
ಹುಡುಕುತಿರುವೆ
ಇನ್ನೂ ಬಣ್ಣ ತುಂಬಲು
ಸಾಗರ ಹೋಗಬೇಕೆಂದಿರುವೆ
ಒಮ್ಮೆ
ಮರಳಿ ಬಾರದಂತೆ
Comments
Post a Comment
ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ