ಶ್ರೀರಂಗಪುರದ ರಂಗೇಗೌಡರೆಂದರೆ ಊರವರಿಗೆಲ್ಲ ಅದೇನೋ ಭಯ ಮತ್ತು ಭಕ್ತಿ. ಊರು ಪ್ರಾರಂಭವಾಗುವುದೇ ಗೌಡರ ಮನೆಯಿಂದ. ತುಂಬ ಹಳೆ ಕಾಲದ ಮನೆಯದು. ಹೊರಗಡೆ ನಿಂತು ನೋಡಿದರೆ ಅರಮನೆಯೆನೋ ಎಂದನಿಸುವಷ್ಟು ವಿಶಾಲತೆ. ಒಳಗಡೆ ಒಳ್ಳೆ ಗಟ್ಟಿ ಸಾಗವಾನಿಯ ಗಜಗಾತ್ರದ ಕಂಬಗಳು, ಅವುಗಳ ಮೈಮೇಲೆ ಅಂದವಾದ ಎಳೆಬಳ್ಳಿಯ, ನಗೆನವಿಲುಗಳ, ಪುಷ್ಪಗುಚ್ಛದ ಕುಸುರಿ ಕೆತ್ತನೆ ಕಣ್ಮನ ಸೆಳೆಯುವಂತಿತ್ತು. ಗೋಡೆಗೆ ನೇತುಹಾಕಿದ ಬಂದೂಕುಗಳು ಗೌಡರ ಗತ್ತಿಗೆ ಸಾಕ್ಷಿಯಾಗಿದ್ದವು. ಮನೆಯ ಸುತ್ತಲೂ ತೆಂಗಿನ ಮರಗಳು ಫಲಬಿಟ್ಟು ತೂಗಾಡುತ್ತಿದ್ದವು. ಎಡಭಾಗದಲ್ಲಿ ಗೌಡ್ತಿಯು ಅಕ್ಕರೆಯಿಂದ ಬೆಳೆಸಿದ ಹೂದೋಟದ ತುಂಬ ಬಣ್ಣ ಬಣ್ಣದ ಚಿಟ್ಟೆಗಳು ಹಾರಾಡುತ್ತ ಸ್ವರ್ಗಸೌಂದರ್ಯವನ್ನು ಧರೆಗಿಳಿಸಿದ್ದವು. ಹಂಚಿನ ಮಾಳಿಗೆಯ ಅಡಿಯಲ್ಲಿ ಪಾರಿವಾಳಗಳು, ಹಸಿರು ಗಿಣಿಗಳು, ಹತ್ತಾರು ಗುಬ್ಬಚ್ಚಿಗಳು ತಮ್ಮ ತಮ್ಮ ಪುಟಾಣಿ ಸಂಸಾರವನ್ನು ಹೂಡಿಕೊಂಡು ನೆಮ್ಮದಿಯಾಗಿದ್ದವು. ಮನೆಯ ಬಲ ಭಾಗದಲ್ಲಿ ರಾಮ ಮತ್ತು ಲಕ್ಷ್ಮಣರದು ಒಂದು ಜೋಡಿ ಅವುಗಳ ಪಕ್ಕದಲ್ಲಿಯೇ ಭೀಮ ಮತ್ತು ಅರ್ಜುನರೆಂಬ ಬಲಿಷ್ಟವಾದ ಅಷ್ಟೇ ಸುಂದರವಾದ ನಾಲ್ಕೆತ್ತುಗಳಿಗಾಗಿ ನಿರ್ಮಿಸಿದ ಶೆಡ್ಡು, ಗೌರಿ, ಕಾವೇರಿ, ಲಕ್ಷ್ಮೀಯೆಂಬ ಹಸುಗಳನ್ನು ಕಟ್ಟುವ ಕೊಟ್ಟಿಗೆ, ಎಲ್ಲರ ದಾಹ ತಣಿಸಲೆಂದೇ ಗೌಡರ ತಂದೆಯವರು ಕೊರೆಸಿದ ಬಾವಿ, ಅದರ ಪಕ್ಕದಲ್ಲಿಯೇ ಬೃಹತ್ತಾಗಿ ...
EDUCATION | ENTERTAINMENT | INFOTAINMENT