Skip to main content

ಮಂಜು ಮುಸುಕಿದ ಹಾದಿ @ ವಿದ್ಯಾರೆಡ್ಡಿ

ಶೀಲವಿಲ್ಲದ ಶೀಲಾ, ವಿದ್ಯೆಯಿಲ್ಲದ ಮುಗ್ದೆ ಶೀಲಾ, ಬೆಳ್ಳಗಿರುವುದೆಲ್ಲ ಹಾಲು, ಹೊಳೆಯುವುದೆಲ್ಲಾ ಚಿನ್ನ ಎಂದು ನಂಬಿದ ಶೀಲಾ, ಆಧುನಿಕ ಪ್ರಪಂಚದ ಚಕ್ರವ್ಯೂಹದೊಳಗೆ ಬಂಧಿಯಾದ ಶೀಲಾ....ಶೀಲಾಳ ಕತೆ ಓದುತ್ತಾ ಹೋದಂತೆ ಕಣ್ಣೆವೆಗಳು ಆರ್ದ್ರವಾಗುತ್ತವೆ. ಪ್ರಸ್ತುತ ಲೋಕದ ಕನ್ನಡಿಯಂತೆ ಚಿತ್ರಿತವಾಗಿದೆ ಶ್ರೀಮತಿ ವಿದ್ಯಾರೆಡ್ಡಿಯವರ ಮಂಜು ಮುಸುಕಿದ ಹಾದಿ.
ಮಂಜು ಮುಸುಕಿದ ಹಾದಿ ನಮ್ಮೆಲ್ಲರನ್ನೂ ಸುಲಭವಾಗಿ ಓದಿಸಿಕೊಂಡು ಹೋಗುವುದರೊಂದಿಗೆ ಚಿಂತನೆಗೂ ಹಚ್ಚುತ್ತದೆ. ಕಾದಂಬರಿಯ ಪಾತ್ರಗಳು ನಮ್ಮ ಸುತ್ತಲಿನ ವ್ಯಕ್ತಿಗಳಲ್ಲಿಯೇ ಅಂತರ್ಗತವಾಗುತ್ತ ಹೋಗುವುದು ಇದರ ವಿಶೇಷ. ಶ್ರೀಮತಿ ವಿದ್ಯಾರೆಡ್ಡಿಯವರು ಕಾದಂಬರಿಯುದ್ದಕ್ಕೂ ಓದುಗರನ್ನು ಕರೆದುಕೊಂಡು ಹೋಗುತ್ತಾರೆ. ಇಲ್ಲಿ ಓದುಗರಿಗೂ ಹಾಗೂ ನಿರೂಪಕರಿಗೂ ಅರಿವಾಗದಂತೆಯೇ ಒಂದು ರೀತಿ ಆಪ್ತತೆ ಬೆಳೆದು ಬಿಡುತ್ತದೆ.
ಕಾದಂಬರಿಯ ಕಥಾವಸ್ತುವಿಗೆ ಬರುವುದಾದರೆ ಇಲ್ಲಿ ಶೀಲಾಳ ಜೀವನವೇ ಪ್ರಮುಖವಾಗಿದ್ದು ಕ್ರೌರ್ಯವು ಹೇಗೆ ಮುಗ್ಧತೆಯನ್ನು ಆವರಿಸಿಕೊಳ್ಳುತ್ತಾ ಹೋಗಿ ಕೊನೆಗೆ ಆಹುತಿಯನ್ನು ಪಡೆಯುತ್ತದೆ ಎಂಬುವುದನ್ನು ಕಾಣಬಹುದಾಗಿದೆ. ನರಸಾಪೂರವೆಂಬ ಹಳ್ಳಿಯ ಕುಟುಂಬವೊಂದರಿಂದ ಆರಂಭವಾಗುವ ಕತೆ ಶೀಲಾಳ ಅಪ್ಪನ ಸಾವಿನೊಂದಿಗೆ ಓಘವನ್ನು ಪಡೆದುಕೊಳ್ಳುತ್ತದೆ. ಸ್ವರ್ಗ ನರಕಗಳು ಬೇರಿಲ್ಲ, ಈಗ ಮಾಡಿರುವುದನ್ನು ಇಲ್ಲಿಯೇ ತೀರಿಸಬೇಕು ಎಂಬ ತತ್ವವನ್ನು ನಾವು ಕತೆಯಲ್ಲಿ ಗಮನಿಸಬಹುದು. ಮುಗ್ಧರ ಸುಲಿಗೆ ಮಾಡಿದ ಶೀಲಾಳ ಅಪ್ಪ ರೋಗಕ್ಕೆ ತುತ್ತಾಗಿ ಸಾವನ್ನಪ್ಪಿದ್ದು, ಅಕ್ಕ ಮಾಲಾಳ ಗಂಡ ತನ್ನ ಕುತಂತ್ರದಿಂದಾಗಿ ಬಾಯಿಬಿದ್ದು ಹೋಗಿ ನರಳಾಡಿದ್ದು, ಮಾಲಾಳ ಸವತಿ ಹರಕು ಬಾಯಿಯವಳು ಕೊನೆಗೆ ಕ್ಯಾನ್ಸರ್ ಬಂದು ಸಾವನ್ನಪ್ಪಿದ್ದು ಅದಕ್ಕೆ ಉದಾಹರಣೆಗಳಾಗಿವೆ.
ಒಂದು ಕುಟುಂಬ ಸಂಸ್ಕಾರ ಹೀನವಾಯಿತೆಂದರೆ ಅದು ಹೇಗೆ ಇಡೀ ಕುಟುಂಬಕ್ಕೆ ಶಾಪವಾಗಿ ಪರಿಣಮಿಸುತ್ತದೆ ಎಂಬುವುದನ್ನು ಕಾದಂಬರಿ ಓದಿ ತಿಳಿದುಕೊಳ್ಳಬಹುದಾಗಿದೆ. ಹೆಣ್ಣು ಮಕ್ಕಳ ಶಿಕ್ಷಣದ ಅವಶ್ಯಕತೆ ಬಗ್ಗೆ ಕತೆಯು ಆಗ್ರಹಿಸುತ್ತದೆ. ಒಂದು ಹಂತದಲ್ಲಿ ಇಂದಿನ ಸಮಾಜವು ಮುಗ್ಧರಿಗಲ್ಲ, ಮಾನವಂತರಿಗಲ್ಲ ಎಂಬುವುದು ಈ ಕತೆಯ ಮೂಲಕ ಸಾಬೀತಾಗುತ್ತದೆ.
ಅಕ್ಕ ಮಾಲಾ ಯಾರೊಂದಿಗೊ ಓಡಿ ಹೋಗಿ ವಿವಾಹವಾದರೂ ಶೀಲಾಳಿಗೆ ಒದಗಿದ ಸಂಕಷ್ಟ ಅವಳಿಗಿಲ್ಲ. ತಮ್ಮ ಉಂಡಾಡಿ ಗುಂಡನೂ ತನ್ನ ಸ್ವೇಚ್ಛೆಯ ಅನುಸಾರವಾಗಿಯೇ ಬದುಕಿ ಸಾಯುವವನು. ಆದರೆ ಏನೂ ಅರಿಯದ ಶೀಲಾ ಕುಟುಂಬವನ್ನೇ ಎತ್ತಿ ಹಿಡಿಯಲು ಹವಣಿಸಿ ಕೊನೆಗೂ ಸೋಲನ್ನೊಪ್ಪಿ ಅಸಹಾಯಕಳಾಗುತ್ತಾಳೆ.
ಶೀಲಾಳ ಬದುಕಿನಲ್ಲಿ ಮೇಷ್ಟ್ರು, ಶಿವರಾಜ ಹಾಗೂ ದುರುಳ ಮಹೇಶ ಸ್ವಲ್ಪ ಪ್ರಮಾಣದಲ್ಲಿ ಬೆಳಕು ತರುತ್ತಾರೆನೋ ಅಂದುಕೊಳ್ಳುತ್ತಲೇ ಅವರೂ ಜೀವನಪ್ರವಾಹದಲ್ಲಿ ತೇಲಿಹೋಗುವ ತರಗೆಲೆಗಳಾಗುತ್ತಾರೆಯೆ ಹೊರತು ವಿಶೇಷವಾದ ಪವಾಡವನ್ನೇನೂ ಸೃಷ್ಟಿಸುವುದಿಲ್ಲ.
ಪಾತ್ರಗಳಾಚೆ ನಿಂತು ನೋಡುವುದಾದರೇ ಹೆಣ್ಣಿಗೆ ಪ್ರಸ್ತುತ ಸಮಾಜದಲ್ಲಿ ಸ್ವಾತಂತ್ರ್ಯದ ಅಗತ್ಯತೆಯನ್ನು ಒತ್ತಿ ಹೇಳಲಾಗಿದೆ. ಮಗನಿಂದಲೂ ಶೀಲಾ ತಿರಸ್ಕಾರಕ್ಕೆ ಒಳಗಾದಾಗ ಮುಂದಿರುವ ದಾರಿ ಅದೊಂದೆ..
ಕಾದಂಬರಿಯಲ್ಲಿ ಗ್ರಾಮದ ಚಿತ್ರಣವನ್ನು ಕೊಡುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ. ಶೀಲಾ ಸೋತರೂ ಕಾದಂಬರಿ ಗೆಲ್ಲುತ್ತದೆ.
                      - ಶ್ರೀ ಆನಂದ ಮಾಲಗಿತ್ತಿಮಠ
                         ಸಾಹಿತಿಗಳು , ಬೈಲಹೊಂಗಲ
                         ಮೊ: 9964471102

Comments

  1. ಕಾದಂಬರಿಯ ಪರಿಚಯ ಓದಿದಾಗ.. ಕೃತಿಯನ್ನು ಓದುವ ಹಂಬಲ ಹುಟ್ಟು ಹಾಕಿದ ಲೇಖನ.

    ReplyDelete

Post a Comment

ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ

ಇವುಗಳನ್ನೂ ಓದಿ

ಕವಿಗಳಾಧರಿತ ಪ್ರಶ್ನೆಗಳು

1."ಆದಿಕವಿ" ಮತ್ತು "ಕನ್ನಡದ ಕಾವ್ಯ ಪಿತಾಮಹ" ಎಂದು ಯಾರನ್ನು ಕರೆಯುತ್ತಾರೆ? A). ಪಂಪ B). ರನ್ನ C). ಜನ್ನ D). ಪೊನ್ನ Correct Ans: (A) Description: ಪಂಪ ಪಂಪ ಒಬ್ಬ ಪ್ರಸಿದ್ಧ ಕನ್ನಡದ ಕವಿ. ಪಂಪನ ಪ್ರಮುಖ ಎರಡು ಕಾವ್ಯಗಳೆಂದರೆ ಒಂದು ಆದಿಪುರಾ...